Advertisement
ವೆಂಕಣ್ಣಯ್ಯನವರು ಎಷ್ಟೋ ವಿದ್ಯಾರ್ಥಿಗಳಿಗೆ ಆಶ್ರಯವಿತ್ತು ಜೀವನಕ್ಕೆ ದಾರಿ ಮಾಡಿಕೊಟ್ಟವರು. ಮೈಸೂರು ವಿ.ವಿ.ಗೆ ಸೇರುವ ಮುನ್ನ ಕೆಲವು ಕಾಲ ದೊಡ್ಡಬಳ್ಳಾಪುರ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದರು. ಇವರ ಎರಡನೆಯ ಮಗ ಟಿ.ವಿ.ರಾಘವ ಎಸೆಸೆಲ್ಸಿ ಓದುತ್ತಿದ್ದರು. ಸ್ವತಃ ವೆಂಕಣ್ಣಯ್ಯ ಕನ್ನಡ ಪ್ರಶ್ನೆ ಪತ್ರಿಕೆಗಳನ್ನು ಕೊಟ್ಟಿದ್ದರು. ಅವರೇ ಮುಖ್ಯ ಮೌಲ್ಯ ಮಾಪಕರು. ಪರೀಕ್ಷೆಯಲ್ಲಿ ರಾಘವನಿಗೆ 31 ಅಂಕಗಳು ಬಂದವು. ಉತ್ತೀರ್ಣನಾಗಲು ಇನ್ನೂ ನಾಲ್ಕು ಅಂಕಗಳು ಬೇಕಾಗಿ ದ್ದವು. ಆಗಿನ ಕಾನೂನು ಪ್ರಕಾರ ಮುಖ್ಯ ಪರೀಕ್ಷಕರಿಗೆ ಐದು ಅಂಕಗಳನ್ನು ಕೊಡುವ ಅಧಿಕಾರವೂ ಇತ್ತು.
Related Articles
Advertisement
ರಾಘವ ಅವರು ಎಂಜಿನಿಯರ್ ಆಗಿದ್ದರು, ಅವರ ಮಗ ನಾಗರಾಜ್ (ತಿಪ್ಪಣ್ಣ ) ಪುರಾತಣ್ತೀ ಇಲಾಖೆಯಲ್ಲಿದ್ದರು. ಮೊಮ್ಮಗ ಟಿ.ಎನ್.ಗಣೇಶ ಈಗ ಮೈಸೂರಿನಲ್ಲಿ ಅಮೆರಿಕದ ಒಂದು ಕಂಪೆನಿಯಲ್ಲಿ ಹಣಕಾಸು ನಿಯಂತ್ರಣಾಧಿಕಾರಿಯಾಗಿದ್ದಾರೆ.
ತ.ಸು.ಶಾಮರಾಯರ ಮಗ ಟಿ.ಎಸ್.ಛಾಯಾಪತಿ ಅವರು ಮೈಸೂರಿನಲ್ಲಿ “ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ’ ಎಂಬ ಪ್ರಕಾಶನ ಸಂಸ್ಥೆಯನ್ನು ಕಳೆದ 53 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಇನ್ನೊಬ್ಬ ಮಗ ಟಿ.ಎಸ್.ಸೂರ್ಯನಾರಾಯಣ ಬ್ಯಾಂಕ್‌ನ ನಿವೃತ್ತ ಉದ್ಯೋಗಿ. “ನಮ್ಮ ತಂದೆಯ ಶಕ್ತಿ ಎಲ್ಲ ಕ್ವಿಟ್ ಇಂಡಿಯ ಚಳವಳಿಗೆ ಹೋಯಿತು. ಓದಿಗೆ ಗಮನ ಕೊಡಲಿಲ್ಲ. ಸ್ವಂತಕ್ಕಿಂತ ದೇಶಪ್ರೇಮ ಅವರಿಗೆ ಮುಖ್ಯವಾಗಿತ್ತು. ವೆಂಕಣ್ಣಯ್ಯನವರನ್ನು ನಾನು ನೋಡಲಿಲ್ಲ. ನನ್ನ ತಂದೆ ಮೂಲಕ ಅವರ ವಿಷಯ ಕೇಳಿದ್ದೇನೆ ಅಷ್ಟೆ. ವೆಂಕಣ್ಣಯ್ಯ, ಶಾಮರಾಯರ ಆದರ್ಶದ ಕುರಿತು ಕೇಳುತ್ತಿದ್ದೀರಲ್ಲ, ಇದು ನನಗೆ ಖುಷಿ ಕೊಡುತ್ತಿದೆ’ ಎನ್ನುತ್ತಾರೆ ಛಾಯಾಪತಿ. “ರಾಘವ ಅವರ ಹೆಸರು ರಾಘವನ್ ಎಂದು ಇತ್ತು. ಇದು ಏಕಾಯಿತೋ ಗೊತ್ತಿಲ್ಲ. ಅವರು ಎಸೆಸೆಲ್ಸಿ ಅಂಕದ ಕತೆ ಹೇಳುತ್ತಿದ್ದರು. ಈಗ ತಳುಕಿನಲ್ಲಿ ಸಾರ್ವಜನಿಕ ಗ್ರಂಥಾಲಯದಿಂದ ನಿವೃತ್ತರಾದ ನಮ್ಮ ಕುಟುಂಬದ ಮಧುರಾನಾಥ್ ಇದ್ದಾರೆ’ ಎಂಬುದನ್ನು ಟಿ.ಎನ್.ಗಣೇಶ ಸ್ಮರಿಸಿಕೊಳ್ಳುತ್ತಾರೆ.
ಗ್ರಂಥಮಾಲೆ ಮೂಲಕ ವೆಂಕಣ್ಣಯ್ಯ ಮತ್ತು ಶಾಮರಾಯರ ಕುರಿತಾದ ಪುಸ್ತಕಗಳನ್ನೂ ಛಾಯಾಪತಿ ಪ್ರಕಾಶನಗೊಳಿಸಿದ್ದಾರೆ. ಮೈಸೂರಿನಲ್ಲಿ ಇದೇ ಎಪ್ರಿಲ್ 15ರಂದು ನಡೆದ ಪ್ರಕಾಶಕರ ಸಮ್ಮೇಳನದ ಅಧ್ಯಕ್ಷತೆಯ ಗೌರವವೂ ಅವರಿಗೆ ಸಿಕ್ಕಿತ್ತು. ಸುಮಾರು 2,000 ಪುಸ್ತಕಗಳನ್ನು ಹೊರತಂದ ಕೀರ್ತಿ ಈ ಸಂಸ್ಥೆಗೆ ಇದೆ. ಛಾಯಾಪತಿಯವರಿಗೆ ಈಗ ಅನಾರೋಗ್ಯ ಕಾಡುತ್ತಿದೆ. ಇವರ ಪುತ್ರಿ ಪ್ರತಿಭಾ ಇವರಿಗೆ ಸಹಾಯಕರಾಗಿ ಸಂಸ್ಥೆಯನ್ನು ಮುನ್ನಡೆಸುವ ಇರಾದೆ ಹೊಂದಿದ್ದಾರೆ.
ಅನುತ್ತೀರ್ಣ ಸಾಧಕರು
ಎರಡು ದಿನಗಳ ಹಿಂದಷ್ಟೇ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಬಂದಿದೆ. ಪೂರ್ಣಾಂಕ ಪಡೆದವರ ದೊಡ್ಡ ಪಡೆಯೇ ಇದೆ. ಅನುತ್ತೀರ್ಣರ ಪಡೆಯೂ ಇರುತ್ತದೆ. ಫಲಿತಾಂಶದ ಧಾವಂತಕ್ಕಾಗಿ ಸಾಮೂಹಿಕ ನಕಲು ಸಂಸ್ಕೃತಿ ರಾರಾಜಿಸುತ್ತಿರುವುದು ಉತ್ಪ್ರೇಕ್ಷೆಯಲ್ಲ. ನಮ್ಮ ನಾಡಿನಲ್ಲಿ ಹೆಸರುವಾಸಿಯಾದವರಲ್ಲಿ ಫೇಲ್ ಆದವರೂ ಇದ್ದಾರೆ. ಉದಾಹರಣೆಗೆ ಹೆಸರಾಂತ ಸಾಹಿತಿಗಳಾದ ತ.ರಾ.ಸು., ಆರ್.ಕೆ.ನಾರಾಯಣ್ ಎಸೆಸೆಲ್ಸಿಯಲ್ಲಿ, ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಪಿಯುಸಿ ಪ್ರವೇಶ ಪರೀಕ್ಷೆಯಲ್ಲಿ, ಉದ್ಯಮಿ ಧೀರೂಬಾಯಿ ಅಂಬಾನಿ 9ನೆಯ ತರಗತಿಯಲ್ಲಿ, ರಾಜೀವ್ ಗಾಂಧಿ, ಅಮಿತಾಭ್ ಬಚ್ಚನ್ ಬಿಎಸ್ಸಿಯಲ್ಲಿ ಫೇಲ್ ಆದವರು. ಅಟಲ್ ಬಿಹಾರಿ ವಾಜಪೇಯಿ ಗಣಿತದಲ್ಲಿ ಪಾಸಾಗುತ್ತಿರಲಿಲ್ಲವೆಂದು ಅವರೇ ಹೇಳುತ್ತಿದ್ದರು. ವೈಣಿಕ ವಿದ್ವಾನ್ ದೊರೆಸ್ವಾಮಿ ಅಯ್ಯಂಗಾರ್ ಲೋವರ್ ಸೆಕೆಂಡರಿ, ಎಸೆಸೆಲ್ಸಿ, ಇಂಟರ್‌ಮೀಡಿಯಟ್, ಬಿಎಯಲ್ಲಿ ಮೊದಲ ಬಾರಿ ಪಾಸಾದವರೇ ಅಲ್ಲ.
“ಎಲ್ಲೋ ಒಬ್ಬ ಅತೀ ಹೆಚ್ಚು ಅಂಕ ಬಂದವನಿಗೆ ಕೋಟಿ ರೂ.ಗೆ ಆಫರ್ ಬಂದಿದೆ ಎಂದು ಬಣ್ಣಿಸುತ್ತೇವೆ. ಶೇ.85ರಷ್ಟು ಎಂಜಿನಿಯರ್‌ಗಳು ಅನ್‌ಎಂಪ್ಲಾಯೇಬಲ್ ಆಗಿರುತ್ತಾರೆ. ಇವರ ಬಗೆಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ’ ಎಂದು ಪ್ರತಿಷ್ಠಿತ ಸುರತ್ಕಲ್ ಎನ್‌ಐಟಿಕೆ ನಿರ್ದೇಶಕರಾಗಿದ್ದ ಪ್ರೊ|ಉಮಾಮಹೇಶ್ವರ ರಾವ್ ಹೇಳುತ್ತಿದ್ದರು.
ಸಾಧಕರನ್ನು ಕಂಡಾಗ ಎಲ್ಲರೂ ಅತ್ಯುತ್ತಮ ಅಂಕಗಳನ್ನೇ ಪಡೆದವರಾಗಿರುವುದಿಲ್ಲ, ಕೆಲವು ಬಾರಿ ಅನುತ್ತೀರ್ಣರೂ ಆಗಿರುತ್ತಾರೆ. ಅತೀ ಹೆಚ್ಚು ಅಂಕ ಪಡೆದವರು ಭವಿಷ್ಯದಲ್ಲಿ ನಿರೀಕ್ಷಿತ ಮಟ್ಟಕ್ಕೆ ಏರದಿರುವುದೂ, ಕೆಲವು ಬಾರಿ ನೆಗೆಟಿವ್ ಆಗಿ ಬೆಳೆದಿರುವುದೂ ಕಂಡುಬರುತ್ತದೆ. ಒಟ್ಟಾರೆ ಯಶಸ್ವೀ ಕಥಾನಕಗಳಿಗೆ ಅಂಕವೂ ಒಂದು ಮಾನದಂಡವಾಗಲೂಬಹುದೇ ವಿನಾ ಸಾಧನೆಗೆ ಇದು ಮಾತ್ರ ಮಾನದಂಡವಾಗದಿರುವುದು ಕಂಡು ಬರುತ್ತದೆ. ಆದರ್ಶ ಜೀವನದ ಮೂಲಕ ಸಮಾಜಕ್ಕೆ ಏನಾದರೂ ಒಳಿತು ಮಾಡಬೇಕೆಂಬ ಇರಾದೆ ಇರದ ಹೊರತು ಉತ್ತಮ ಅಂಕ ಹೊಂದಿದ್ದರೂ ಅದು ನಿಷ್ಪ್ರಯೋಜಕವಾಗುತ್ತದೆ.
– ಮಟಪಾಡಿ ಕುಮಾರಸ್ವಾಮಿ