Advertisement

ಸ್ಥಳದಲ್ಲಿಯೇ ದಂಡ ವಸೂಲಿ ಪಾವತಿ ರಶೀದಿಗೆ ವಿಶೇಷ ಆ್ಯಪ್‌

09:57 PM Aug 28, 2019 | Lakshmi GovindaRaj |

ಚಿಕ್ಕಬಳ್ಳಾಪುರ: ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಮಾದರಿಯಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ನಗರಸಭೆ ಸ್ಥಳದಲ್ಲಿ ಸಾರ್ವಜನಿಕರಿಗೆ ವಿಧಿಸುವ ಹಲವು ರೀತಿಯ ದಂಡಗಳಿಗೆ ಕೈ ಬರಹದ ರಶೀದಿ ಬದಲಾಗಿ ಇನ್ಮುಂದೆ ಸ್ಥಳದಲ್ಲಿಯೇ ಬಿಲ್‌ ಪಾವತಿ ರಶೀದಿಗೆ ಅನುಕೂಲವಾಗುವಂತೆ ವಿಶೇಷ ಆ್ಯಪ್‌ ಅಭಿವೃದ್ಧಿ ಪಡಿಸುವ ಮೂಲಕ ಗಮನ ಸೆಳೆದಿದ್ದು, ಇದು ರಾಜ್ಯದಲ್ಲಿ ಪ್ರಥಮ ಪ್ರಯತ್ನವಾಗಿರುವುದು ಮತ್ತೂಂದು ವಿಶೇಷ.

Advertisement

ದಂಡದ ಹಣದ ಲೆಕ್ಕ ಸಿಗುತ್ತಿರಲ್ಲಿಲ: ನಗರಸಭೆ ಅಂದರೆ ಸಾಮಾನ್ಯವಾಗಿ ಸಾರ್ವಜನಿಕರಿಗೆ ನಿಷೇಧಿತ ವಸ್ತುಗಳ ಬಳಕೆ ಮಾಡಿದಾಗ ದಂಡ ವಸೂಲಿ ಮಾಡುವುದು ಸಾಮಾನ್ಯ. ಆದರೆ ದಂಡ ವಸೂಲಿ ಮಾಡಿದಾಗೆಲ್ಲಾ ನಗರಸಭೆ ಸಿಬ್ಬಂದಿ ದಂಡ ಕಟ್ಟುತ್ತಿದ್ದವರಿಗೆ ಕೈ ಬರಹದ ರಶೀದಿ ಕೊಡಬೇಕಿತ್ತು. ಆದರೆ ರಶೀದಿ ಬರೆದ ಮೇಲೆಯು ಹಣ ನೇರವಾಗಿ ಸ್ವೀಕರಿಸದೇ ದಂಡ ತೆತ್ತವರೇ ಬ್ಯಾಂಕ್‌ಗೆ ಹೋಗಿ ಪಾವತಿ ಮಾಡಬೇಕಿತ್ತು. ಇದರಿಂದ ನಗರಸಭೆಗೆ ನಿರೀಕ್ಷಿತ ಮಟ್ಟದಲ್ಲಿ ದಂಡದ ಹಣ ಸಮರ್ಪಕವಾಗಿ ಪಾವತಿ ಆಗುತ್ತಿರಲಿಲ್ಲ. ಇನ್ನೂ ಕೈ ರಶೀದಿ ಬಳಕೆಯಿಂದ ದಂಡದ ಹಣದ ಲೆಕ್ಕಾಚಾರವು ನಗರಸಭೆಗೆ ಸಮರ್ಪಕವಾಗಿ ಸಿಗುತ್ತಿರಲಿಲ್ಲ.

ರಾಜ್ಯದಲ್ಲೇ ಮೊದಲು: ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ರವರ ವಿಶೇಷ ಆಸಕ್ತಿಯಿಂದಾಗಿ ಇದೀಗ ಚಿಕ್ಕಬಳ್ಳಾಪುರ ನಗರಸಭೆಗೆ ರಾಜ್ಯದಲ್ಲಿಯೆ ಮೊದಲ ಬಾರಿಗೆ ಸ್ಥಳದಲ್ಲಿ ಸಾರ್ವಜನಿಕರಿಗೆ ವಿಧಿಸುವ ಹಲವು ರೀತಿಯ ದಂಡಗಳಿಗೆ ಸ್ಥಳದಲ್ಲಿಯೇ ಎಲೆಕ್ಟ್ರಾನಿಕ್‌ ಮುದ್ರಿತ ಪಾವತಿ ರಶೀದಿ ಕೊಡಲು ಆ್ಯಪ್‌ ಅಭಿವೃದ್ಧಿಪಡಿಸುವ ಮೂಲಕ ಚಿಕ್ಕಬಳ್ಳಾಪುರ ನಗರಸಭೆ ಹೈಟೆಕ್‌ ಸ್ಪರ್ಶ ಪಡೆದುಕೊಂಡಿದೆ.

ಸ್ಥಳದಲ್ಲಿಯೇ ರಶೀದಿ: ನಗರಸಭೆಯ ಸಿಬ್ಬಂದಿ ಇನ್ಮೆಲೆ ನಗರಸಭೆ ವ್ಯಾಪ್ತಿಯಲ್ಲಿ ಎಲ್ಲಿಯೇ ನಿಷೇಧಿತ ಪ್ಲಾಸ್ಟಿಕ್‌ ಸೇರಿದಂತೆ ನಿರ್ಜನ ಪ್ರದೇಶದಲ್ಲಿ ಕಸ ಹಾಕುವವರ ವಿರುದ್ಧ ಕಾರ್ಯಾಚರಣೆ ನಡೆಸಿ ಸಾರ್ವಜನಿಕರಿಗೆ ದಂಡ ಹಾಕಿದರೂ ತಕ್ಷಣ ದಂಡದ ಹಣ ಪಡೆದು ಈ ಆ್ಯಪ್‌ ಮೂಲಕ ಸ್ಥಳದಲ್ಲಿಯೇ ಸಾರ್ವಜನಿಕರಿಗೆ ರಶೀದಿ ಕೊಡಬಹುದಾಗಿದೆ. ಇದರಿಂದ ನಗರಸಭೆ ಸಿಬ್ಬಂದಿ ದಿನವೆಲ್ಲಾ ಎಷ್ಟು ಪ್ರಮಾಣದಲ್ಲಿ ದಂಡ ವಸೂಲಿ ಮಾಡಿದ್ದಾರೆಂಬ ಲೆಕ್ಕಾಚಾರ ಸುಲಭವಾಗಿ ಸಿಗಲಿದೆ. ಈ ಹಿಂದೆ ನಗರಸಭೆ ವ್ಯಾಪ್ತಿಯಲ್ಲಿ ದಂಡ ವಸೂಲಿ ಹಣ ಸಮರ್ಪಕವಾಗಿ ಲೆಕ್ಕ ಸಿಗುತ್ತಿರಲಿಲ್ಲ.

ಕೆಲವರು ಅಕ್ರಮವಾಗಿ ನಗರಸಭೆಯ ಸಿಬ್ಬಂದಿಯೇ ನಕಲಿ ರಶೀದಿಗಳನ್ನು ಬಳಸಿ ದಂಡ ವಸೂಲಿ ಮಾಡಿಕೊಳ್ಳುತ್ತಿದ್ದರು. ಕೆಲವೊಮ್ಮೆ ದಂಡ ಹಾಕಿ ರಶೀದಿ ಕೊಟ್ಟು ದಂಡದ ಹಣವನ್ನು ಬ್ಯಾಂಕ್‌ನಲ್ಲಿ ಪಾವತಿಸುವಂತೆ ಹೇಳಿದರೂ ಸಮರ್ಪಕವಾಗಿ ದಂಡ ಪಾವತಿ ಆಗುತ್ತಿರಲಿಲ್ಲ. ಇದರಿಂದ ಸಾಕಷ್ಟು ಕಾರ್ಯಾಚರಣೆ ನಡೆಸಿ ದಂಡ ವಸೂಲಿ ಮಾಡಿದರೂ ನಗರಸಭೆ ಖಾತೆಗೆ ಜಮೆ ಆಗುತ್ತಿದ್ದ ದಂಡದ ಹಣ ಅಷ್ಟಕಷ್ಟೇ ಇತ್ತು.

Advertisement

ಸೋರಿಕೆ ತಡೆಯಲು ಆ್ಯಪ್‌ ಸಹಕಾರಿ: ಇದೀಗ ನಗರಸಭೆ ಅಭಿವೃದ್ಧಿಪಡಿಸಿರುವ ವಿಶೇಷ ಆ್ಯಪ್‌ ದಂಡ ಹಾಕಿ ಸಾರ್ವಜನಿಕರಿಂದ ವಸೂಲಿ ಮಾಡುವ ಹಣದ ಬಗ್ಗೆ ಸಮರ್ಪಕ ಮಾಹಿತಿ ಸಿಗಲಿದ್ದು, ದಂಡ ಕಟ್ಟಿದ ಸಾರ್ವಜನಿಕರಿಗೂ ದಂಡ ಕಟ್ಟಿದ್ದಕ್ಕೆ ಸ್ಥಳದಲ್ಲಿಯೇ ಮುದ್ರಿತ ರಶೀದಿ ಸಿಗಲಿದೆ. ಆ ಮೂಲಕ ಚಿಕ್ಕಬಳ್ಳಾಪುರ ನಗರಸಭೆ ದಂಡ ವಸೂಲಿಯಲ್ಲಿ ಆಗುತ್ತಿದ್ದ ಸೋರಿಕೆಯನ್ನು ತಡೆಯಲು ಈ ಆ್ಯಪ್‌ ಸಹಕಾರಿಯಾಗಲಿದೆ. ಒಟ್ಟಿನಲ್ಲಿ ಚಿಕ್ಕಬಳ್ಳಾಪುರ ನಗರಸಭೆ ಪಾರದರ್ಶಕ ಆಡಳಿತಕ್ಕೆ ಒತ್ತು ಕೊಡುವ ಮೊದಲ ಯತ್ನವಾಗಿ ಇದೀಗ ಎಲೆಕ್ಟ್ರಾನಿಕ್‌ ಹ್ಯಾಂಡ್‌ ಮಾಡೆಲ್‌ ಡಿವೈಸ್‌ನ ಆ್ಯಪ್‌ ಅಭಿವೃದ್ಧಿಪಡಿಸುವ ಮೂಲಕ ಗಮನ ಸೆಳೆದಿದೆ.

ಜಿಲ್ಲಾಧಿಕಾರಿ ಅನಿರುದ್ಧ್ ಕಾಳಜಿ: ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ರವರ ವಿಶೇಷ ಆಸಕ್ತಿಯಿಂದ ದಂಡ ವಸೂಲಿ ಸಂದರ್ಭದಲ್ಲಿ ಕೈ ಬರಹದ ರಶೀದಿ ಕೊಡದೇ ಸ್ಥಳದಲ್ಲಿಯೆ ಬಿಲ್‌ ಪಾವತಿಗೆ ಆ್ಯಪ್‌ ಮೂಲಕ ಮುದ್ರಿತ ರಶೀದಿ ಕೊಡಬಹುದು. ಮೊಬೈಲ್‌ ಮಾದರಿಯಲ್ಲಿ ಆ್ಯಪ್‌ ಇದ್ದು ಸದ್ಯಕ್ಕೆ ಚಿಕ್ಕಬಳ್ಳಾಪುರ ನಗರಸಭೆಗೆ ಮೂರು ಮಿಷನ್‌ಗಳನ್ನು ಖರೀದಿಸಿದ್ದೇವೆ ಎಂದು ಚಿಕ್ಕಬಳ್ಳಾಪುರ ನಗರಸಭೆ ಆಯುಕ್ತ ಉಮಾಂಕತ್‌ ತಿಳಿಸಿದರು. ಆ್ಯಪ್‌ ಬಳಕೆ ಬಗ್ಗೆ ನಗರಸಭೆ ಸಿಬ್ಬಂದಿಗೆ ತರಬೇತಿ ನೀಡಿದ್ದೇವೆ. ಸ್ಥಳದಲ್ಲಿಯೇ ದಂಡ ವಿಧಿಸುವ ಸಾರ್ವಜನಿಕರಿಗೆ ಸ್ಥಳದಲ್ಲಿ ಮುದ್ರಿತ ಬಿಲ್‌ ನೀಡುವ ವ್ಯವಸ್ಥೆ ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಇದೇ ಮೊದಲ ಪ್ರಯತ್ನವಾಗಿದೆ ಎಂದರು.

ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ವಿಲೇವಾರಿ, ನಿಷೇಧಿತ ಪ್ಲಾಸಿಕ್‌ ಬಳಕೆ ಮಾಡುವವರಿಗೆ, ಸಾರ್ವಜನಿಕರಿಗೆ ದಂಡಗಳನ್ನು ವಿಧಿಸುತ್ತಿದ್ದು, ದಂಡ ಪಾವತಿಸುವವರಿಗೆ ಸ್ಥಳದಲ್ಲಿಯೇ ಪಾವತಿಸುವ ಹಣಕ್ಕೆ ಮುದ್ರಿತ ರಿಶೀದಿ ನೀಡುವ ಸಲುವಾಗಿ ವಿಶೇಷ ಆ್ಯಪ್‌ ಸಿದ್ಧಪಡಿಸಲಾಗಿದೆ. ನಗರಸಭೆಗೆ ದಂಡದಿಂದ ಬರುವ ಹಣದ ಲೆಕ್ಕಾಚಾರ ಸಿಗಲಿದೆ.
-ಉಮಾಕಾಂತ್‌, ಆಯುಕ್ತರು, ನಗರಸಭೆ ಚಿಕ್ಕಬಳ್ಳಾಪುರ

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next