ಮುಜಾಫರ್ ನಗರ್(ಉತ್ತರಪ್ರದೇಶ): ಬಾಲಿವುಡ್ ನ ಅಕ್ಷಯ್ ಕುಮಾರ್ ನಟನೆಯ “ಸ್ಪೆಷಲ್ 26” ಸಿನಿಮಾದ ರೀತಿಯಲ್ಲೇ ಘಟನೆಯೊಂದು ನಡೆದಿದೆ! ತಾನು ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ಉತ್ತರಪ್ರದೇಶದ ಇಬ್ಬರು ಪೊಲೀಸ್ ಕಾನ್ಸ್ ಟೇಬಲ್ ಜೊತೆ ತೆರಳಿ ಮುಜಾಫರ್ ನಗರದಲ್ಲಿರುವ ಉದ್ಯಮಿಯೊಬ್ಬರ ಮನೆ ಮೇಲೆ ದಾಳಿ ನಡೆಸಿ ಕೊನೆಗೆ ಪೊಲೀಸರ ಅತಿಥಿಯಾಗಿದ್ದಾನೆ!
ಏನಿದು ಘಟನೆ:
ತಾನು ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ಬಂದ ವ್ಯಕ್ತಿಯೊಬ್ಬ ಶನಿವಾರ ಬೆಳಗ್ಗೆ ನ್ಯೂ ಮಂಡಿ ಪೊಲೀಸ್ ಠಾಣೆಗೆ ಆಗಮಿಸಿದ್ದ. ತಾನು ಸಿಬಿಐ ಅಧಿಕಾರಿ ಎಂದು ನಕಲಿ ಗುರುತು ಪತ್ರ ತೋರಿಸಿ, ಉದ್ಯಮಿಯೊಬ್ಬರ ಮನೆ ಮೇಲೆ ದಾಳಿ ನಡೆಸಲು ಸರ್ಜ್ ವಾರಂಟ್ ತಂದಿರುವುದಾಗಿ ಹೇಳಿ, ತನಗೆ ಇಬ್ಬರು ಪೊಲೀಸ್ ಕಾನ್ಸಟೇಬಲ್ ಗಳ ನೆರವು ಬೇಕು ಎಂದು ಹೇಳಿದ್ದ.
ಯೆಸ್ ಸರ್ ಎಂದ ಠಾಣಾಧಿಕಾರಿ ಇಬ್ಬರು ಪೊಲೀಸರನ್ನು ಈ ನಕಲಿ ಸಿಬಿಐ ಅಧಿಕಾರಿ ಜೊತೆ ಕಳುಹಿಸಿಕೊಟ್ಟಿದ್ದರು! ಬಳಿಕ ಮುಜಾಫರ್ ನಗರ್ದ ವೃಂದಾವನ್ ನಗರದಲ್ಲಿರುವ ಆದೇಶ್ ಗೋಯಲ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದ!
ನಕಲಿ ಗಡ್ಡ ಧರಿಸಿ ಸಿಖ್ ವ್ಯಕ್ತಿಯಂತೆ ಕಾಣಿಸುತ್ತಿದ್ದ ಈ ಸಿಬಿಐ ಅಧಿಕಾರಿಯನ್ನು ಕಂಡ ಉದ್ಯಮಿಗೆ ಈತ ತನ್ನ ಬಳಿ ಹಿಂದೆ ಕೆಲಸ ಮಾಡಿರುವ ವ್ಯಕ್ತಿ ಎಂಬ ಅನುಮಾನ ಬಂದಿತ್ತು. ಗೋಯಲ್ ಮನೆ ಮೇಲೆ ದಾಳಿ ನಡೆಸಿದಾಗ ಅಕ್ಕ, ಪಕ್ಕದ ಮನೆಯವರು ಗುಂಪುಗೂಡಿ, ಈತನ ನಡವಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
ಅಷ್ಟರಲ್ಲಿ ಈತನ ಧ್ವನಿಯನ್ನು ಪತ್ತೆಹಚ್ಚಿದ ವ್ಯಕ್ತಿಯೊಬ್ಬರು ಆತನನ್ನು ಹಿಡಿದಾಗ ಅಂಟಿಸಿಕೊಂಡಿದ್ದ ಗಡ್ಡ ಕಳಚಿಬಂದಿತ್ತು. ಆಗ ಈ ನಕಲಿ ಸಿಬಿಐ ಅಧಿಕಾರಿಯ ಮುಖವಾಡ ಬಯಲಾಗಿತ್ತು. ಕೂಡಲೇ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
ನಕಲಿ ಸಿಬಿಐ ಅಧಿಕಾರಿಯನ್ನು ತ್ರಿವೀಂದರ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತ ಮುಜಾಫರ್ ನಗರದ ನಿವಾಸಿಯಾಗಿದ್ದು, ಕೆಲ ಸಮಯದ ಹಿಂದೆ ಗೋಯಲ್ ಜೊತೆ ಕೆಲಸ ಮಾಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಅತಿಥಿಯಾಗಿರುವ ತ್ರಿವೀಂದರ್ ನ ಬಳಿ ಇದ್ದ ನಕಲಿ ಸಿಬಿಐ ಗುರುತಿನ ಕಾರ್ಡ್, ನಕಲಿ ಸರ್ಜ್ ವಾರಂಟ್ ಅನ್ನು ವಶಪಡಿಸಿಕೊಂಡಿದ್ದು, ನಕಲಿ ಸಿಬಿಐ ಅಧಿಕಾರಿ ವಿರುದ್ಧ ಐಪಿಸಿ ಸೆಕ್ಷನ್ 420ರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವುದಾಗಿ ವರದಿ ತಿಳಿಸಿದೆ