Advertisement

ಪದುಮಳು ಒಳಗಿದ್ದಾಳೆ!

06:00 AM Oct 31, 2018 | |

ಖಳ ನಟ, ಹಾಸ್ಯ ನಟ, ಪೋಷಕ ಪಾತ್ರ, ಯಾವುದೇ ಪಾತ್ರವಾದರೂ ಚೆನ್ನಾಗಿ ನಿರ್ವಹಿಸಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು “ಸಾರ್ವಕಾಲಿಕ ಮುಖ್ಯಮಂತ್ರಿ’ ಚಂದ್ರು. ಕನ್ನಡ ಹೋರಾಟಗಾರರಾಗಿ, ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿ, ಶಾಸಕರಾಗಿ ರಾಜಕಾರಣದಲ್ಲೂ ಸೇವೆ ಸಲ್ಲಿಸಿದವರು. ಇವರ ಪತ್ನಿ ಪದ್ಮಾ ಚಂದ್ರು. ನಟನೆ, ಧಾರಾವಾಹಿ ನಿರ್ಮಾಣ, ರಾಜಕೀಯ, ಸಮಾಜ ಸೇವೆ ಎಂದು ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿರುವವರು. “ಮನೆಯೊಂದು ಮೂರು ಬಾಗಿಲು’, “ಮನೆಮನೆ ಕಥೆ’ ಮುಂತಾದ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. “ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೇ ಕೋಟಿ ರುಪಾಯಿ’ ಎಂದು ಸಿನಿಮಾದಲ್ಲಿ ಹಾಡಿದ ಚಂದ್ರು ಅವರಿಗೆ ನಿಜಜೀವನದಲ್ಲಿ ಪದ್ಮಾ ಅವರು ಕೋಟಿ ರುಪಾಯಿಗೂ ಮೀರಿದ ಆಸ್ತಿ. ಪದ್ಮಾ ಚಂದ್ರು ಅವರು ತಮ್ಮ ಬಾಲ್ಯ, ಬದುಕು, ನಟನೆ ಕುರಿತು ಮಾತಾಡಿದ್ದಾರೆ.

Advertisement

ಕಲಾವಿದೆಯಂತೂ ಆಗಲಾಗಲಿಲ್ಲ. ಕಲಾವಿದನನ್ನು ಮದುವೆಯಾದೆ!
ಟೈಮ್‌ ಟೇಬಲ್‌ ಇಟ್ಟುಕೊಂಡರೆ ಏಷ್ಟೇ ಕೆಲಸವಿದ್ದರೂ ಮಾಡಬಹುದು
ವಯಸ್ಸಿದ್ದಾಗ ಕರೆದೊಯ್ಯಲಿಲ್ಲ. ಈಗ, ಸಾಕೆನಿಸುಷ್ಟು ಫಾರಿನ್‌ ಟೂರ್‌ ಮಾಡಿಸುತ್ತಿದ್ದಾರೆ!
ಹಳ್ಳಿಯ ನೆನಪುಗಳೇ ಇಂದಿಗೂ ಪರಮಾಪ್ತ

-ನಿಮ್ಮ ಬಾಲ್ಯದ ಬಗ್ಗೆ ಹೇಳ್ತೀರಾ? 
ನಾನು ಹುಟ್ಟಿದ್ದು ಬೆಳೆದಿದ್ದು ಎಲ್ಲಾ ತುಮಕೂರಿನ ಪುಟ್ಟ ಹಳ್ಳಿ ಕಡುಗೆರೆ ಎಂಬಲ್ಲಿ. ಬಹಳ ಸಂಪ್ರದಾಯಸ್ಥ ಕುಟುಂಬ ನಮ್ಮದು. ಹೆಣ್ಣು ಮಕ್ಕಳನ್ನು ಬಹಳ ಕಟ್ಟುನಿಟ್ಟಾಗಿ ಬೆಳೆಸುತ್ತಿದ್ದರು. ಎಸ್‌ಎಸ್‌ಎಲ್‌ಸಿ.ಗಿಂತ ಹೆಚ್ಚು ಓದಿದರೆ ಮದುವೆ ಗಂಡು ಸಿಗುವುದಿಲ್ಲ ಎಂದು ನನ್ನನ್ನು ಕಾಲೇಜಿಗೇ ಕಳಿಸಲಿಲ್ಲ. ನನಗೆ ನಾಟಕಗಳಲ್ಲಿ ಅಭಿನಯಿಸುವ ಆಸಕ್ತಿ ಇತ್ತು. ಹೈಸ್ಕೂಲ್‌ ಓದುತ್ತಿದ್ದಾಗ ಪಿಯುಸಿ ಹುಡುಗಿಯರ ಜೊತೆ ಸೇರಿ ನಾಟಕ ಮಾಡುವ ಅವಕಾಶ ದೊರೆತಿತ್ತು. ನಾಟಕದಲ್ಲಿ ಪಾರ್ಟು ಮಾಡಲು ಮನೆಯವರನ್ನು ಕಾಡಿ ಬೇಡಿ ಒಪ್ಪಿಸಿದ್ದೆ. ತಾಲೀಮಿಗೂ ಹೋಗಿ ಬರುತ್ತಿದ್ದೆ. ಒಂದು ದಿನ ತಾಲೀಮು ಮಾಡ್ತಾ ಮಾಡ್ತಾ ಕತ್ತಲಾಗಿದ್ದೇ ತಿಳಿಯಲಿಲ್ಲ. ಆವತ್ತೇ ನನ್ನ ಜೊತೆಗಾರ ಹುಡುಗಿಯರು ತಾಲೀಮಿಗೆ ಚಕ್ಕರ್‌ ಹಾಕಿದ್ದರು. ನಾನು ಒಬ್ಬಳೇ ನಡೆದು ಮನೆ ಸೇರಿದೆ. ಮನೆಯಲ್ಲಿ ಎಲ್ಲರೂ ಕಂಗಾಲಾಗಿದ್ದರು. ಅದೇ ಕೊನೆ. ನಾನು ನಾಟಕದಲ್ಲಿ ಪಾರ್ಟು ಮಾಡುವ ಆಸೆಯನ್ನೇ ಬಿಡಬೇಕಾಯಿತು. ಆದರೂ ಹಳ್ಳಿಯಲ್ಲಿ ಕಳೆದ ಬಾಲ್ಯದ ದಿನಗಳೇ ಇಂದಿಗೂ ಪರಮಾಪ್ತ.

-ಹಳ್ಳಿಯಲ್ಲಿ ಬೆಳೆದ ನೀವು ನಗರ ಜೀವನಕ್ಕೆ ಹೇಗೆ ಹೊಂದಿಕೊಂಡಿರಿ?
ಮದುವೆಯಾದ ಮೇಲೆಯೇ ನಾನು ಸಿಟಿ ನೋಡಿದ್ದು. ಬೆಂಗಳೂರು ನನಗೆ ಹೊಸ ಪ್ರಪಂಚ. ಅದೇ ಸಮಯದಲ್ಲಿ ಇವರು ಸಿನಿಮಾ, ನಾಟಕಗಳಲ್ಲಿ ಬಹಳ ಬ್ಯುಸಿ ಆಗಿರುತ್ತಿದ್ದರು. ದಿನ 3 ಚಿತ್ರಗಳಿಗೆ ಕೆಲಸ ಮಾಡುತ್ತಿದ್ದರು. ಅವರ ಜೊತೆ ಅರೆ ಘಳಿಗೆ ಕುಳಿತು ಮಾತನಾಡುವುದೇ ನನಗೆ ಕಷ್ಟವಿತ್ತು. ಸಿಟಿ ಜೀವನ ಇರುವುದೇ ಹೀಗೆ ಎಂದು ಆರ್ಥವಾಯ್ತು. 

-ನಟನೆ, ನಿರ್ಮಾಣದಲ್ಲಿ ತೊಡಗಿಕೊಂಡಿದ್ದು ಹೇಗೆ?
ಮದುವೆಯಾಗಿ 7-8 ವರ್ಷಗಳವರೆಗೂ ನಾನು ಹಳ್ಳಿ ಹುಡುಗಿ, ನನಗೇನೂ ಗೊತ್ತಿಲ್ಲ ಎಂಬ ಕೀಳರಿಮೆಯಲ್ಲೇ ಕಾಲಕಳೆದೆ. ಆಮೇಲೆ ಚಂದ್ರು ಅವರು ನನಗೆ ಹೊಸದೇನಾದರೂ ಕಲಿಯಲು, ಹೊರಗಡೆ ಸಮಾಜದಲ್ಲಿ ಬೆರೆಯಲು ಪ್ರೇರೇಪಿಸಿದರು. ಮೊದಲೇ ನಟನೆಯಲ್ಲಿ ಆಸಕ್ತಿ ಇದ್ದಿದ್ದರಿಂದ ನಾನು ನಟನೆ ಆಯ್ದುಕೊಂಡೆ. ಟಿ.ಎನ್‌. ಸೀತರಾಮ್‌ “ಆಸ್ಫೋಟ’ ಎಂಬ ಧಾರಾವಾಹಿ ನಿರ್ದೇಶಿಸುತ್ತಿದ್ದರು. ಅದರಲ್ಲಿ ನಾನು ಒಂದು ಪಾತ್ರ ನಿರ್ವಹಿಸಿದೆ. ಅದಾದ ಬಳಿಕ “ಕಪಿನಿಪತಿ’, “ಆದರದಿರಲಿ ಬೆಳಕು’, “ಮನೆಮನೆ ಕಥೆ’, “ಸತ್ಯವಂತರಿಗಿದು ಕಾಲವಲ್ಲ’, “ಮನೆಯೊಂದು ಮೂರು ಬಾಗಿಲು’ ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದೆ. ಹೀಗೆ ಮುಂದುವರಿಯಿತು…

Advertisement

-ರಾಜಕಾರಣದಲ್ಲಿ ಆಸಕ್ತಿ ಬಂದಿದ್ದು ಹೇಗೆ?
ನನಗೆ ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ಆಸಕ್ತಿ ಇದ್ದೇ ಇತ್ತು. ನಮ್ಮನೆಯವರೂ ಸಮಾಜ ಸೇವೆ, ಕನ್ನಡಪರ ಹೊರಾಟಗಳನ್ನು ಮಾಡುತ್ತಿದ್ದರು. ಅಲ್ಲದೆ 1985ರಲ್ಲಿ ಚುನಾವಣೆಗೆ ನಿಂತು ಶಾಸಕಾಗಿದ್ದರು. ಹೀಗಾಗಿ ನನಗೂ ರಾಜಕೀಯದ ಸಂಪರ್ಕ ಸಿಕ್ಕಿತು. 1994ರಲ್ಲಿ ಬಿಜೆಪಿ ಸೇರಿದೆ. ನನ್ನ ಕೈಲಾದಷ್ಟು ಕೆಲಸಗಳನ್ನು ಮಾಡಿದ್ದೇನೆ ಎಂಬ ತೃಪ್ತಿಯಂತೂ ಇದೆ. ಈಗ ರಾಜಕೀಯದಿಂದ ವಿರಾಮ ಪಡೆದು 3 ವರ್ಷಗಳಾಯಿತು.

-ಇಷ್ಟೆಲ್ಲಾ ಕೆಲಸ ಮಾಡಲು ಸಮಯ ನಿರ್ವಹಣೆ ಹೇಗೆ ಮಾಡುತ್ತೀರ?
ತುಂಬಾ ಹೆಂಗಸರು ನಮಗೆ ಸಮಯವೇ ಸಿಗುವುದಿಲ್ಲ ಎಂದು ಹೇಳುವಾಗ ನನಗೆ ಆಶ್ಚರ್ಯವಾಗುತ್ತದೆ. ನಾವು, ಕುಟುಂಬಕ್ಕಾಗಿ ಎಷ್ಟೇ ದುಡಿಯುತ್ತಿದ್ದರೂ, ಹೊರಗಡೆ ಬೇರೆ ಬೇರೆ ಹುದ್ದೆಯಲ್ಲಿ ಎಷ್ಟೇ ಸಕ್ರಿಯರಾಗಿದ್ದರೂ ನಮಗೇ ಅಂತ ಸಮಯ ಮಾಡಿಕೊಳ್ಳಲು ಎಲ್ಲಾ ಮಹಿಳೆಯರಿಗೆ ಸಾಧ್ಯವಿದೆ. ಟೈಮ್‌ ಟೇಬಲ್‌ ಇಟ್ಟುಕೊಂಡರೆ ಎಷ್ಟೇ ಒತ್ತಡವಿದ್ದರೂ ಕೆಲಸಗಳಿಗೆ ಸಮಯ ಹೊಂದಿಸುವುದು ಕಷ್ಟವಲ್ಲ. 

-ನಿಮ್ಮ ಅಡುಗೆ ಮನೆ ವಹಿವಾಟು ಹೇಗಿರುತ್ತದೆ? 
ನಮ್ಮ ಮನೆಯಲ್ಲಿ ನಂದೇ ಅಡುಗೆ ಕಾರುಬಾರು. ಮಾಡುವ ಎಲ್ಲಾ ಅಡುಗೆಯನ್ನು ರುಚಿಕಟ್ಟಾಗಿ ಮಾಡುತ್ತೇನೆ. ಮನಸ್ಸಿದ್ದರೆ ಬಗೆಬಗೆಯ ಅಡುಗೆಗಳನ್ನು ಪಟಪಟಾ ಅಂತ ಮಾಡಿ ಮುಗಿಸುತ್ತೇನೆ. ತಾಳª, ಅವರೆ ಕಾಳು ಉಸ್ಲಿ, ಅಕ್ಕಿ ರೊಟ್ಟಿ ಚಟ್ನಿ, ಖಾರದ ಕಡುಬು ನಮ್ಮ ಮನೆಯಲ್ಲಿ ಎಲ್ಲರಿಗೂ ಇಷ್ಟ. 

-ತುಂಬಾ ಪ್ರವಾಸ ಮಾಡುತ್ತೀರಂತೆ? 
ಮದುವೆಯಾದ ಶುರುವಿನಲ್ಲಿ ಚಂದ್ರು ನನ್ನನ್ನು ಎಲ್ಲಿಗೂ ಕರೆದುಕೊಂಡು ಹೋಗಲಿಲ್ಲ. ಆದರೀಗ ನನಗೆ ವಯಸ್ಸಾದ ಕಾಲದಲ್ಲಿ ಸಾಕಪ್ಪ ಎನಿಸುವಷ್ಟು ವಿದೇಶ ಪ್ರವಾಸಗಳನ್ನು ಮಾಡಿಸುತ್ತಿದ್ದಾರೆ. ಅವರು ಹೊರದೇಶಗಳಿಗೆ ಕಾರ್ಯಕ್ರಮಗಳಿಗೆ ಹೋದಾಗ ನನ್ನನ್ನೂ ಕರೆದುಕೊಂಡು ಹೋಗುತ್ತಾರೆ. 

-ಮುಖ್ಯಮಂತ್ರಿ ಚಂದ್ರು ಅವರನ್ನು ಎಂಥ ಪಾತ್ರದಲ್ಲಿ ನೋಡಲು ನಿಮಗೆ ಇಷ್ಟ?
ನಾನು ಚಂದ್ರು ಅವರ ಸಿನಿಮಾ ನೋಡಲು ಉಮಾ ಥಿಯೇಟರ್‌ಗೆ ಹೋಗಿದ್ದೆ. ಅದರಲ್ಲಿ ಅವರು ವಿಲನ್‌ ಆಗಿದ್ದರು. ಅವರ ಅಭಿನಯದ ದೃಶ್ಯಗಳು ಬಂದಾಗ ನನ್ನ ಹಿಂದೆ ಕುಳಿತಿದ್ದ ಪ್ರೇಕ್ಷಕರು ಇವರನ್ನು ಕೆಟ್ಟ ಪದಗಳಿಂದ ಬೈಯುತ್ತಿದ್ದರು. ನನಗೆ ತುಂಬಾ ನೋವಾಯಿತು. ಮನೆಗೆ ಬಂದು ಹೇಳಿದೆ. ಕೆಟ್ಟ ಪಾತ್ರಗಳನ್ನು ಒಪ್ಪಿಕೊಳ್ಳಬೇಡಿ. ಜನರು ನಿಮ್ಮನ್ನು ಬೈಯುವುದನ್ನು ನನ್ನಿಂದ ಕೇಳಲು ಆಗುವುದಿಲ್ಲ ಅಂತ. ನಂತರ ಚಂದ್ರು ಕಾಮಿಡಿ ಪಾತ್ರಗಳಿಗೆ ಹೊರಳಿದರು. ಅದರಲ್ಲೂ ತಮ್ಮದೇ ಛಾಪು ಮೂಡಿಸಿದರು. ಆದರೆ ಇತ್ತೀಚೆಗೆ ಅಮೆರಿಕ ಹೋದಾಗ. ಅಲ್ಲಿಯ ಜನರು “ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ಚಂದ್ರು ಅವರ ನಟನೆ ಬಗ್ಗೆ ಮಾತನಾಡುತ್ತಿದ್ದರು. ಧಾರಾವಾಹಿಗಳಿಂದಲೂ ಅವರು ಜನರಿಗೆ ಹತ್ತಿರವಾಗಿರುವುದೂ ನನಗೆ ಖುಷಿ.

-ಮಕ್ಕಳು ಏನು ಮಾಡುತ್ತಿದ್ದಾರೆ. ಮನೆಗೆ ಪುಟ್ಟ ಅತಿಥಿ ಆಗಮನ ಆಗಿದೆಯಂತೆ? 
ನಮಗೆ ಇಬ್ಬರು ಗಂಡು ಮಕ್ಕಳು. ಭರತ್‌, ಶರತ್‌. ದೊಡ್ಡ ಮಗನಿಗೆ ಮದುವೆಯಾಗಿದೆ. ಸೊಸೆ ಹೆಸರು ನಿಶಿತಾ. ಅವನದ್ದು ಅರೇಂಜ್ಡ್ ಇಂಟರ್‌ಕ್ಯಾಸ್ಟ್‌ ಮ್ಯಾರೇಜ್‌. ನಮ್ಮ ಮನೆಯಲ್ಲಿ ಸೊಸೆಯದ್ದು ದ್ವಿಪಾತ್ರ. ಆಕೆ ನಮಗೆ ಸೊಸೆಯೂ ಹೌದು, ಮಗಳೂ ಹೌದು. ದೊಡ್ಡವನು ಲಂಡನ್‌ನಲ್ಲೇ ಇಂಜಿನಿಯರಿಂಗ್‌ ಮತ್ತು ಎಂಎಸ್‌ ಮಾಡಿದ. ಸಾಫ್ಟ್ವೇರ್‌ ಕಂಪನಿಯಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದಾನೆ. ಚಿಕ್ಕವನು ಇಂಜಿನಿಯರಿಂಗ್‌ ಮಾಡಿ ಸ್ವಂತ ಈವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿ ನಡೆಸುತ್ತಿದ್ದಾನೆ. ಈಗೀಗ ಅವನಿಗೂ ನಟನೆಯಲ್ಲಿ ಆಸಕ್ತಿ ಬರುತ್ತಿದೆ. “ರನ್ನ’ ಮತ್ತು “ದ ವಿಲನ್‌’ ಚಿತ್ರಗಳಲ್ಲಿ ಅಭಿನಯಿಸಿದ್ದಾನೆ. ನಾವೆಲ್ಲರೂ ಮನೆಯಲ್ಲಿ ಶುದ್ಧ ತಲೆಹರಟೆಗಳು. ತಮಾಷೆ ಮಾಡಿಕೊಂಡು ನಗುನಗುತ್ತಾ ಇರುತ್ತೇವೆ. 

ಚಂದ್ರು ಪ್ರಪೋಸಲ್‌
ಅವರು ಅಭಿನಯದ “ಬೆಂಕಿ’ ಸಿನಿಮಾದ ಚಿತ್ರೀಕರಣ ನಮ್ಮ ಪಕ್ಕದ ಹಳ್ಳಿಯಲ್ಲಿ ನಡೆಯುತ್ತಿತ್ತು. ಊರಿನ ಗಂಡು ಮಕ್ಕಳು, ದೊಡ್ಡವರೆಲ್ಲಾ ಹೋಗಿ ಶೂಟಿಂಗ್‌ ನೋಡಿಕೊಂಡು ಬಂದಿದ್ದರು. ನನಗೂ ಶೂಟಿಂಗ್‌ ನೋಡಬೇಕೆಂಬ ಆಸೆ. ಆದರೆ ಮನೆಯಲ್ಲಿ ಕಳಿಸಲಿಲ್ಲ. ಅದಾಗಿ ಕೆಲವೇ ದಿನಕ್ಕೆ ನನಗೆ ಚಂದ್ರು ಅವರ ಮದುವೆ ಪ್ರಪೋಸಲ್‌ ಬಂತು! ನನಗೆ ಕಲಾವಿದೆಯಾಗುವ ಆಸೆ ಇತ್ತು ಆದರೆ ಅದು ನೆರವೇರಲಿಲ್ಲ. ಕಲಾವಿದನನ್ನಾದರೂ ಮದುವೆ ಆಗ್ತಿನಿ ಎಂದು ನಿರ್ಧರಿಸಿದೆ. ನಮ್ಮಿಬ್ಬರ ಜಾತಕವೂ ಕೂಡಿ ಬಂದು ಮನೆಯವರೂ ಒಪ್ಪಿದರು. 

ಆ್ಯಕ್ಟರ್‌ ಮತ್ತು ಡಾಕ್ಟರ್‌ಗಳ ಕಥೆನೇ ಇಷ್ಟು!
ಗೆಳತಿಯರು, ಪರಿಚಯದವರು, ಮದುವೆ ಸಮಾರಂಭಗಳಿಗೆ ಗಂಡಂದಿರ ಜೊತೆ ಹೋಗುವಾಗ ನನಗೆ ಈ ಅದೃಷ್ಟ ಇಲ್ಲವಲ್ಲ ಎಂದು ನೊಂದುಕೊಳ್ಳುತ್ತಿದ್ದೆ. ನಮ್ಮ ಮನೆಯವರೋ ತುಂಬಾ ಬ್ಯುಸಿ ಇರುತ್ತಿದ್ದರು. ನಮ್ಮ ಇಬ್ಬರು ಮಕ್ಕಳು ಹುಟ್ಟಿದಾಗಲೂ ಅವರು ಊರಲ್ಲಿ ಇರಲಿಲ್ಲ. ಮೊದಲ ಮಗ ಹುಟ್ಟಿ 3 ದಿನಗಳಿಗೆ ಅವರಿಗೆ ವಿಷಯ ತಿಳಿದಿತ್ತು. ಆ್ಯಕ್ಟರ್‌ ಮತ್ತು ಡಾಕ್ಟರ್‌ ಗಂಡಂದಿರ ಕತೆಯೇ ಇಷ್ಟು ಅಂತ ಅನ್ನಿಸುತ್ತೆ.

ಬೆನ್ನ ಹಿಂದೆ ಮಾತಾಡಿದರು
ಮೊದಲ ಬಾರಿ ಧಾರಾವಾಹಿಗಾಗಿ ಕ್ಯಾಮೆರಾ ಫೇಸ್‌ ಮಾಡಿದಾಗ ಹಲವರು ಕುಹಕವಾಡಿದರು. ನಟನ ಪತ್ನಿಯಾದರೂ ಕ್ಯಾಮರಾ ಹೇಗೆ ಎದುರಿಸಬೇಕು ಅನ್ನೋದು ಗೊತ್ತಿಲ್ಲ, ಹೇಗೆ ಎಕ್ಸ್‌ಪ್ರೆಷನ್‌ ಕೊಡಬೇಕು ಅನ್ನೋದು ಕೂಡಾ ತಿಳಿದಿಲ್ಲ ಅಂತೆಲ್ಲಾ ಬೆನ್ನ ಹಿಂದೆ ಮಾತಾಡಿದರು. ಇವೆಲ್ಲಾ ಟೆನನ್‌ನಲ್ಲಿ ಮೊದಲೆರಡು ದಿನ ನನಗೆ ನಟಿಸಲು ಆಗಲೇ ಇಲ್ಲ. ಅದನ್ನೇ ನಾನು ಚಾಲೆಂಜ್‌ ಆಗಿ ಸ್ವೀಕರಿಸಿದೆ. ಆಮೇಲೆ ಜೊತೆಗೆ ಚಂದ್ರು ಕೂಡ, ಹೇಗೆ ಕ್ಯಾಮರಾ ಎದುರಿಸಬೇಕು. ನಿರ್ದೇಶಕರು, ಸಹಕಲಾವಿದರ ಜೊತೆ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನೆಲ್ಲಾ ಮನೆಯಲ್ಲಿ ಹೇಳಿಕೊಡುತ್ತಿದ್ದರು. ಕೆಲವೇ ದಿನಗಳಲ್ಲಿ ಸರಾಗವಾಗಿ ಅಭಿನಯಿಸಲು ಕಲಿತೆ. ಆಮೇಲೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಲ್ಲದೆ 3 ಧಾರಾವಾಹಿಗಳನ್ನು ನಾನೇ ನಿರ್ಮಿಸಿದೆ. ಕೆಲ ಸಿನಿಮಾಗಳಲ್ಲೂ ನಟಿಸಿ ಬಂದೆ. 

ಮೊಮ್ಮಗಳನ್ನು ತಾವೊಬ್ಬರೇ ಎತ್ತಿ ಆಡಿಸುತ್ತಾರೆ
ಈಗ ಮೊಮ್ಮಗಳು ಅಹನಾ ಬಂದಿದ್ದಾಳೆ. 1 ವರ್ಷದ ಕೂಸು ಆಕೆ. ನಮ್ಮೆಲ್ಲರ ಪ್ರಪಂಚವೇ ಅವಳಾಗಿದ್ದಾಳೆ. ನಮ್ಮ ನಗು, ಖುಷಿ, ಮನರಂಜನೆ ಎಲ್ಲಾ ಅವಳೇ. ಅವಳಿಗೆ ತಾತನ ಕಂಡರೆ ತುಂಬಾ ಇಷ್ಟ. ಅವರಿದ್ದರೆ ಯಾರೂ ಬೇಡ. ನಿದ್ದೆ ಬಂದರೂ ನಿದ್ದೆ ಮಾಡಲ್ಲ. ನಮ್ಮ ಮನೆಯವರಿಗಂತೂ ಮೊಮ್ಮಗಳೆಂದರೆ ಪ್ರಾಣ. ಅವರು ಮನೆಯಲ್ಲಿರುವಷ್ಟು ಹೊತ್ತು ಅಹನಾ ನಮ್ಮ ಕೈಗೆ ಸಿಗುವುದೇ ಇಲ್ಲ. ಅವರೇ ಎತ್ತಿಕೊಂಡಿರುತ್ತಾರೆ.

-ಚೇತನ ಜೆ.ಕೆ. 

Advertisement

Udayavani is now on Telegram. Click here to join our channel and stay updated with the latest news.

Next