Advertisement

ಕಬ್ಬನ್‌ಪಾರ್ಕಲ್ಲಿ ಮಾತಾಡಿ..!

01:15 PM Jan 30, 2018 | |

ಬೆಂಗಳೂರು: “ನನ್ನ ಹೆಂಡತಿ ಕಂಡ್ರೆ ಭಯ.. ನನಗೆ ವಿಚ್ಚೇದನ ಕೊಟ್ಟುಬಿಡಿ ಎಂಬುದು ಪತಿಯ ಮೊರೆಯಾದರೆ.. ನಾನು ಗಂಡನೊಟ್ಟಿಗೆ ಬಾಳುವೆ ಅವರೊಟ್ಟಿಗೆ ವಿದೇಶಕ್ಕೆ ಹೋಗಲು ಅವಕಾಶ ನೀಡಿ ಆದೇಶಿಸಿ ಎಂದು ಪತ್ನಿಯ ಅಳಲು.. ಈ ರೀತಿಯ ಅಪರೂಪದ ಅರ್ಜಿ ವಿಚಾರಣೆ ಸೋಮವಾರ ಹೈಕೋರ್ಟ್‌ನಲ್ಲಿ  ನಡೆಯಿತು.

Advertisement

ವೃತ್ತಿಯಲ್ಲಿ ಸಾಫ್ಟ್ವೇರ್‌ ಇಂಜಿನಿಯರ್‌ಗಳಾಗಿರುವ ಹಲಸೂರಿನ ನಿವಾಸಿಗಳಾದ ಪ್ರಣೀತ್‌ ಹಾಗೂ ಕಾವ್ಯ ( ಇಬ್ಬರ ಹೆಸರೂ ಬದಲಾಯಿಸಲಾಗಿದೆ) ಅವರ ವಿಚ್ಛೇದನಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ವೇಳೆ, ದಂಪತಿಯ ತದ್ವಿರುದ್ಧ ವಾದ ಇದಾಗಿತ್ತು.

ಈ ಅರ್ಜಿ ವಿಚಾರಣೆಯನ್ನು ಸೋಮವಾರ ಬೆಳಿಗ್ಗೆ ನಡೆಸಿದ  ನ್ಯಾಯಮೂರ್ತಿ ಕೆ.ಎನ್‌ ಫ‌ಣೀಂದ್ರ ಅವರಿದ್ದ ಏಕಸದಸ್ಯ ಪೀಠ, ಇಬ್ಬರ  ಪರ ವಾದವನ್ನು ಆಲಿಸಿದ ಬಳಿಕ, ಗಂಡ -ಹೆಂಡತಿ ಇಬ್ಬರೂ ಕೆಲಕಾಲ ಹೊರಗಡೆ ಹೋಗಿ (ಕಬ್ಬನ್‌ ಪಾರ್ಕ್‌ಗೆ) ಮಾತನಾಡಿಕೊಂಡು ಬನ್ನಿ, ಚರ್ಚೆ ನಡೆಸಿ. ಅನಂತರ ವಿಚಾರಣೆ ನಡೆಸೋಣ ಎಂದು ಸಲಹೆ ನೀಡಿತು.

ಇದಕ್ಕೆ ಸುತಾರಂ ಒಪ್ಪದ ಮಹಿಳೆಯ ಗಂಡ  ಪ್ರಣೀತ್‌,  ಸ್ವಾಮಿ ನನಗೆ ಹೆಂಡತಿ ಕಂಡ್ರೆ ಭಯ, ನಾನು ಆಕೆಯ ಜೊತೆ ಹೋಗಲ್ಲ.. ವಿಚ್ಚೇದನ ನೀಡಲು ಆದೇಶಿಸಿ ಎಂದರು. ಇದಕ್ಕೆ ಪ್ರತಿಯಾಗಿ ಪತ್ನಿ ಗಂಡನ ಜೊತೆ ಚರ್ಚೆ ನಡೆಸಲು ಯಾವುದೇ ಅಭ್ಯಂತವರವಿಲ್ಲ ಎಂದರು.ಈ ವಾದ ಕೇಳಿ ಅಚ್ಚರಿಪಟ್ಟ ನ್ಯಾಯಮೂರ್ತಿಗಳು, ಹೊರಗಡೆ ಹೋಗಲು ಭಯವಾದರೆ ನ್ಯಾಯಾಲಯದ ಕಾರಿಡಾರ್‌ನಲ್ಲಿಯೇ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಯಬಹುದು.

ಬಳಿಕ  ಸಂಜೆ ನಿಮ್ಮ ನಿರ್ಧಾರ ತಿಳಿಸಿ ಎಂದು ಸಲಹೆ ನೀಡಿ ವಿಚಾರಣೆ ಮುಂದೂಡಿತು. ಆದರೆ ಮತ್ತೆ ಮುಂದುವರಿದ ಅರ್ಜಿ ವಿಚಾರಣೆ ವೇಳೆಯೂ ದಂಪತಿಗಳಿಬ್ಬರು ತಮ್ಮ ಪಟ್ಟು ಸಡಿಲಿಸದ ರೀತಿಗೆ ಬೇಸರ ವ್ಯಕ್ತಪಡಿಸಿದ ನ್ಯಾಯಪೀಠ, ಪತಿ-ಪತ್ನಿಯ ನಡುವಣ ಸಣ್ಣಮನಸ್ತಾಪವೇ ದಾಂಪತ್ಯ ಬಿರುಕಿಗೆ ಕಾರಣ.

Advertisement

ದಂಪತಿಯ ಪರಸ್ಪರ ಭಾವನೆಗಳು ಬೆರೆತಾಗ ಜೀವನ ಸುಂದರವಾಗಿರಲು ಸಾಧ್ಯವಿದೆ. ಇಡೀ  ಪ್ರಕರಣವನ್ನು ಗಮನಿಸಿದರೆ ಸಣ್ಣಪುಟ್ಟ  ವೈಮನಸ್ಸು ಮಾತ್ರ ನಿಮ್ಮಲ್ಲಿದೆ. ಆದರೆ, ಇಬ್ಬರಲ್ಲೂ ಪ್ರೀತಿ  ಇದೆ .ಹೀಗಾಗಿ ಒಮ್ಮೆ ಮನ:ಶಾಸ್ತ್ರಜ್ಞರ ಬಳಿ ಕೌನ್ಸಿಲಿಂಗ್‌ಗೆ ಒಳಗಾಗಿ. ಸಮಸ್ಯೆ ಬಗೆಹರಿಯಬಹುದು ಎಂದು ತಾಕೀತು ಮಾಡಿತು.

ಈ ಪ್ರಕರಣದಲ್ಲಿ  ಆತನಿಗೆ ಒಟ್ಟಿಗೆ ವಾಸಿಸಲು ಇಷ್ಟ ಇಲ್ಲ ಎಂದರೂ ಒತ್ತಾಯಪೂರ್ವಕವಾಗಿ ಸಹಭಾಳ್ವೆ ನಡೆಸಿ ಎಂದು ಹೇಳುವುದು ಹೇಳಲಾಗುವುದಿಲ್ಲ. ಹೀಗಾಗಿ ಮತ್ತೂಮ್ಮೆ  ಮಧ್ಯವರ್ತಿ ಕೇಂದ್ರದಲ್ಲಿ ಈ ಪ್ರಕರಣ ವಿಚಾರಣೆ ನಡೆಯಲಿ. ಮದ್ಯವರ್ತಿ ಕೇಂದ್ರ ಇಬ್ಬರನ್ನೂ ಒಂದು ಮಾಡಲು ಸಾಧ್ಯವಾದಷ್ಟು  ಪ್ರಯತ್ನಿಸಬೇಕು ಎಂದು ಸೂಚನೆ ನೀಡಿ ಅರ್ಜಿಯನ್ನು ವರ್ಗಾಯಿಸಿತು.

ಪ್ರಕರಣವೇನು?: ಪ್ರಣೀತ್‌ ಹಾಗೂ ಕಾವ್ಯ 2011ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಅಮೆರಿಕಾದ ಟೆಕ್ಸಾಸ್‌ ನಗರದ ಪ್ರತಿಷ್ಠಿತ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಪ್ರಣೀತ್‌ ಹಾಗೂ ಪತ್ನಿ ಅಲ್ಲಿಯೇ ನೆಲೆಸಿದ್ದರು. 2013ರಲ್ಲಿ ಕೆಲ ಸಣ್ಣಪುಟ್ಟ ಭಿನ್ನಾಭಿಪ್ರಾಗಳಿಂದ ದಂಪತಿ ನಡುವೆ ವೈಮನಸ್ಸು ಮೂಡಿ, ಪತಿ ಪ್ರಣೀತ್‌ ಅಲ್ಲಿನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನ ಅರ್ಜಿ ಸಲ್ಲಿಸಿ, ಈ ಅರ್ಜಿ ಮಾನ್ಯಗೊಂಡಿತ್ತು.

ಆದರೆ, ಪತ್ನಿ ಕಾವ್ಯ ವಿದೇಶಿ ನ್ಯಾಯಾಲಯದ ತೀರ್ಪು ಹಿಂದೂ ವಿವಾಹ ಕಾಯಿದೆ ಅನ್ವಯ  ಊರ್ಜಿತವಾಗುವುದಿಲ್ಲ ಎಂದು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ  ಅರ್ಜಿ ಸಲ್ಲಿಸಿದ್ದು ವಿಚಾರಣೆ ಇನ್ನೂ ಬಾಕಿಯಿದೆ. ಈ ಮಧ್ಯೆ ಗಂಡ,ಆತನ ಸಹೋದರಿ ಹಾಗೂ ಸಹೋದರ ವಿರುದ್ಧ ಹಲಸೂರು  ಪೊಲೀಸ್‌ ಠಾಣೆಯಲ್ಲಿ ವರದಕ್ಷಿಣಿ ಕಿರುಕುಳ ದೂರು ನೀಡಿದ್ದರು. ಹೀಗಾಗಿ ಪ್ರಣೀತ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next