Advertisement
ಇಂಗ್ಲೀಷಿನಲ್ಲಿ a (=ಒಂದು) ಮತ್ತು i (=ನಾನು) ಎನ್ನುವುದು ಬಿಟ್ಟರೆ ಬೇರೆ ಒಂದಕ್ಷರದ ಶಬ್ದವಿಲ್ಲ. ಇಂಗ್ಲಿಷಿನಲ್ಲಿ ಚ ಮೊದಲಕ್ಷರ ಎನ್ನುವುದು ನಮಗೆಲ್ಲ ಗೊತ್ತು. ಹಾಗೆಯೇ ಐ (=ನಾನು) ಎನ್ನುವುದನ್ನು ಮೊದಲ ಅಂಕೆಗೂ ಸಂಕೇತವಾಗಿ ಉಪಯೋಗಿಸುತ್ತಾರೆ. ಸ್ವಾಭಿಮಾನದಿಂದ ಬೀಗುವ ಇಂಗ್ಲಿಷರು ಮೊದಲ ಸ್ಥಾನ ಪಡೆಯಲು ಹೇಗೆ ಭಾಷೆಯನ್ನೂ ಬಳಸುತ್ತಾರೆನ್ನುವುದು ಕುತೂಹಲದ ವಿಚಾರವಲ್ಲವೇ?
Related Articles
Advertisement
ಜ್ಞಾನದಿಂದ ತತ್ವ ಹುಟ್ಟುತ್ತದೆ. ತತ್ವದಿಂದ ಬಯಸುವ ಮುಕ್ತಿ ದೊರೆಯುತ್ತದೆ’. ಮನುಷ್ಯನ ಒಳಗೆ ಹುಟ್ಟುವ ಆಸೆಯು ನಾಭಿಯಿಂದ ಹೊರಡುವ ಸೂಕ್ತ ವಾಯುವಿನಿಂದ ಶಬ್ದದ ರೂಪದಲ್ಲಿ ಹೊರಹೊಮ್ಮಿದಾಗ ಅದು (ಧವಳವರ್ಣ) ಬೆಳ್ಳಗೆ ಹೊಳೆಯುತ್ತದೆ. ಇದನ್ನೇ ಕುವೆಂಪು ಅವರು, “ಶಬ್ದಗಳಿಗೆಮ್ಮುಸಿರೆ ಹರಿವಜ್ರ ಸಾಣೆ, ನಮ್ಮ ಲೇಖನಿಗಿಂತ ಬರಸಿಡಿಲ ಕಾಣೆ’ ಎಂದದ್ದು. ನಾವು ಶಾಲೆಯಲ್ಲಿ ಓದುತ್ತಿದ್ದಾಗ ವಾರಕ್ಕೊಂದು ವ್ಯಾಕರಣದ ಪಾಠವಿತ್ತು. ಅದು ನಾನು ದ್ವೇಷಿಸುತ್ತಿದ್ದ ಕ್ಲಾಸು. ವ್ಯಾಕರಣದ ಪಾಠವೆಂದರೆ ನನಗೆ ನಿದ್ರೆ. ನನಗೆ ಯಾವಾಗ ವ್ಯಾಕರಣದಲ್ಲಿ ಆಸಕ್ತಿ ಮೂಡಿತೋ ತಿಳಿಯದು.
ಆದರೆ, ಮಂಗಳೂರು ಸರಕಾರೀ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಜಿ.ಕೆ. ಚೆಟ್ಟೂರ್ ಎಂಬವರು ಬರೆದ ಕಾಲೇಜ್ ಕಾಂಪೊಸಿಶನ್ಸ್ ಎಂಬ ಒಂದು ಪುಸ್ತಕ ಓದುವ ಅವಕಾಶ ಒಮ್ಮೆ ಸಿಕ್ಕಿತು. ಅದೊಂದು ಅದ್ಭುತ ಕೃತಿ. ಚೆಟ್ಟೂರ್‌ರ ಕೃತಿಯ ಮೂರು-ನಾಲ್ಕು ಪ್ರತಿಗಳನ್ನು ಖರೀದಿಸಿ ನನ್ನ ಕೆಲವು ಗೆಳೆಯರಿಗೆ ಕೊಟ್ಟಿದ್ದೂ ಇದೆ. ಈಗ ಅದರ ಪ್ರತಿಗಳು ಲಭ್ಯವಿಲ್ಲವೆಂದು ಕಾಣುತ್ತದೆ. ಆ ಕಾಲೇಜಿನ ಈಗಿನ ಪ್ರಿನ್ಸಿಪಾಲರಾಗಿರುವ ಉದಯಕುಮಾರ್ ಇರ್ವತ್ತೂರು ಅವರನ್ನು ವಿಚಾರಿಸಿದಾಗ ಅವರ ಗ್ರಂಥಾಲಯದಲ್ಲಿ ಮೂರು ಪ್ರತಿಗಳಿದ್ದಾವೆಂದು ಹೇಳಿದರು. ಚೆಟ್ಟೂರರ ಪುಸ್ತಕ ಓದಿದ ಮೇಲೆ ನನಗೆ ವ್ಯಾಕರಣ ಗ್ರಂಥಗಳನ್ನೂ ಓದುವ ಆಸಕ್ತಿ ಬೆಳೆಯಿತು. 1985ರಲ್ಲಿ ನಾನು ಬರೆದ ಅರ್ಜಿ ಎಂಬ ಕತೆಯಲ್ಲಿ ಮಾಬೆನ್ ಎಂಬವರು ಬರೆದ ವ್ಯಾಕರಣ ಬೋಧಿನಿ ಎಂಬ ಪುಸ್ತಕದ ಬಗ್ಗೆ ವಿವರವಾಗಿ ಪ್ರಸ್ತಾಪಿಸಿದ್ದೆ.
ಹಲವು ಶಬ್ದಗಳ ಸಮೂಹ ವಾಕ್ಯವಾಗುತ್ತದೆ. ಅದು ಪ್ರಶ್ನಾರ್ಥಕವಾಗಿಯೂ ಇರಬಹುದು. ಆ ವಾಕ್ಯ ನಮ್ಮ ಬಾಯಿಯಿಂದ ಹೊರಗೆ ಬಿಟ್ಟಾಗ ಮಾತಾಗುತ್ತದೆ. ಮಾತಾಗುವಾಗ ಅದರಲ್ಲಿ ಶಬ್ದ (= ಸೌಂಡ್) ಹುಟ್ಟುತ್ತದೆ. ಮಾತಾಡದಿದ್ದರೆ ಅದು ಮೌನವಾಗುತ್ತದೆ. ಮಾತು ಬೆಳ್ಳಿ ಮೌನ ಬಂಗಾರ ಎಂದು ನಮ್ಮ ಹಿರಿಯರು ಹೇಳಿದರು. ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆಯನ್ನೂ ಕೊಟ್ಟರು. ನಮ್ಮ ಹಿರಿಯರು ಹೇಳಿದ ಮಾತನ್ನು ನಾವು ಎಲ್ಲಿ ಕೇಳುತ್ತೇವೆ? ನಮಗೆ ಮಾತೇ ಮಂತ್ರ ಎಂದು ಅನಂತಮೂರ್ತಿಯವರು ಹೇಳಿದರು. ಬೇಂದ್ರೆಯವರು ಹೇಳಿದ್ದಾರಲ್ಲ ಮಾತು ಮಾತು ಮಥಿಸಿ ಬಂದ ನಾದದ ನವನೀತ ಎಂದು!
ಮಾತಾಡುವಾಗ ನಮಗೆ ಲೌಡ್‌ಸ್ಪೀಕರ್ಸ್ ಇದ್ದರೆ ಒಳ್ಳೆಯದೆಂದು ಕಂಡಿತು. ಯಾಕೆಂದರೆ, ನಮ್ಮ ಮಾತನ್ನು ಎಲ್ಲರೂ ಕೇಳಬೇಕೆಂಬ ವಾಂಛೆ ನಮ್ಮಲ್ಲಿದೆ. ನಮ್ಮ ದೇವಸ್ಥಾನಗಳಲ್ಲಿ ಮಂತ್ರ ಹೇಳುವಾಗ ಊರಿಗೆಲ್ಲ ಕೇಳಿಸುವಂತೆ ಮೈಕನ್ನು ಇಡುತ್ತಾರೆ. ಮಸೀದಿಗಳಲ್ಲಿ ಆಜಾನ್ ಕೊಡುವಾಗಲೂ ಮೈಕುಗಳನ್ನು ಹಾಕುತ್ತಾರೆ. ಚರ್ಚುಗಳಲ್ಲಿ ಮೌನಕ್ಕೆ ಹೆಚ್ಚು ಪ್ರಾಶಸ್ತ್ಯ. ಅಲ್ಲಿ ಹೆಚ್ಚಾಗಿ ಪ್ರಾರ್ಥನೆ ಮಾಡುವಾಗ ಮೌನವಾಗಿರುತ್ತಾರೆ. ಮೈಕು ಹಾಕಿದರೂ ಅದು ಹಾಲ್‌ನಲ್ಲಿ ಇದ್ದವರಿಗೆ ಮಾತ್ರ ಕೇಳಲಿ ಎಂಬುದಕ್ಕೆ ಹಾಕುವುದುಂಟು.
ಭಕ್ತರು ಹೆಚ್ಚಾಗಿ ಹಾಲ್‌ನ ಹೊರಗೂ ಇದ್ದರೆ ಅಲ್ಲಿಯೂ ಮೈಕಿನ ವ್ಯವಸ್ಥೆಯನ್ನು ಮಾಡುತ್ತಾರೇನೋ? ಮಾತು ಸಾಲದೆಂಬಂತೆ ಗಂಟೆಜಾಗಟೆ ಡೋಲು ಮೃದಂಗಗಳ ಸದ್ದೂ ಬೇಕು. ನಮ್ಮ ಈ ಶಬ್ದದ (= ಸೌಂಡ್) ಮೇಲಿನ ವ್ಯಾಮೋಹ ಎಷ್ಟಿದೆಯೆಂದರೆ ಸಿನೆಮಾ ಹಾಡುಗಳ ಸಂಗೀತ ನಮ್ಮ ಸರ್ವಾಂಗವನ್ನೂ ವ್ಯಾಪಿಸಿಬಿಟ್ಟಿದೆ. ಬರೇ ಹಾಡುಗಳಲ್ಲ, ಯಾವುದೇ ಸಿನೆಮಾ ನೋಡಿ, ಉದ್ದಕ್ಕೂ ಸಂಗೀತದ ಹೆಸರಿನಲ್ಲಿ ಕರ್ಣಕಠೊರ ಸದ್ದು ಕೇಳಿಸುತ್ತದೆ, ಹಾಗೂ ಅವು ನಮ್ಮನ್ನು ಮೈಮರೆಯಿಸುತ್ತವೆ. ಅದಕ್ಕೆ ಎಷ್ಟು ಒಗ್ಗಿ ಹೋಗಿವೆಯೆಂದರೆ ಎಲ್ಲ ಸಂಗೀತದ ಉಪಕರಣಗಳನ್ನು ಒಟ್ಟಿಗೆ ಉಪಯೋಗಿಸಿ ಕೇಳಿಸುವ ಸಂಗೀತವೇ, ನಿಜವಾದ ಸಂಗೀತ ಎನ್ನುವುದು ನಮ್ಮ
ಸಂವೇದನೆಯನ್ನು ಆವರಿಸಿಕೊಂಡುಬಿಟ್ಟಿದೆ. ಯಾವುದಾದರೂ ಸಿನೆಮಾದಲ್ಲಿ ಈ ರೀತಿಯ ಸಂಗೀತವನ್ನು ಅಳವಡಿಸಿಕೊಳ್ಳದೇ ಇದ್ದರೆ ಜನರಿಗೆ ಇಷ್ಟವೇ ಆಗುವುದಿಲ್ಲ. ಸಿನೆಮಾಗಳಲ್ಲಿ ಸಂಗೀತವೆನ್ನುವುದು, ಅಥವಾ ಸದ್ದು ಎನ್ನುವುದು, ಒಂದು ನಿಶ್ಚಿತ ದೃಶ್ಯದ value addition ಗಾಗಿ ಬಳಸುವ ಸಾಧನ ಎನ್ನುವುದನ್ನು ನಾವು ಮರೆತೇ ಬಿಟ್ಟಿದ್ದೇವೆ.
ಈ ಸದ್ದನ್ನು ಕೇಳುವ, ಶಬ್ದ (word)ಗಳಿಗೆ ಕಿವಿ ತೆರೆದಿರುವುದಷ್ಟೇ ನಮಗೆ ಅಭ್ಯಾಸವಾಗಿದೆಯೇ? ಇಲ್ಲ. ನಾವು ಮಾತಾಡುವುದು ಹೆಚ್ಚು. ಮೊಬೈಲ್ ಬಂದ ಮೇಲಂತೂ ನಮ್ಮಲ್ಲಿ ಮಾತು ಇನ್ನೂ ಹೆಚ್ಚಾಗಿದೆ ಅನ್ನಿಸುತ್ತದೆ. ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯಸೇನ್ ಅವರ the argumentative Indian ಎಂಬ ಒಂದು ಒಳ್ಳೆಯ ಪುಸ್ತಕವಿದೆ. ಇಬ್ಬರು ಅಪರಿಚಿತ ಭಾರತೀಯರು ಬಸ್‌ಸ್ಟಾಪಿನಲ್ಲಿ, ಮಾರ್ಕೆಟಿನಲ್ಲಿ, ಎಲ್ಲಿಯೇ ಭೇಟಿಯಾಗಲಿ, ಮಾತಾಡಲು ಆರಂಭಿಸುತ್ತಾರೆ, ಮತ್ತು ಅವರು ಒಂದೇ ಸಹಮತದಲ್ಲಿರಲಿ, ಚರ್ಚೆ ಮಾಡುತ್ತಲೇ ಇರುತ್ತಾರೆ ಎನ್ನುತ್ತಾರವರು. ಮಾತು ಇಲ್ಲದೆಯೇ ನಮಗೆ ಬದುಕಲು ಸಾಧ್ಯವೇ? ಜಪಾನೀಯರು ಮಾತಾಡುವುದು ಬಹಳ ಕಮ್ಮಿ. ಅಲ್ಲಿಯ ಮೆಟ್ರೋದಲ್ಲಿ ಪ್ರಯಾಣಿಸುವಾಗ ಮಾನವಧ್ವನಿಗಳೇ ಕೇಳಿಸುವುದಿಲ್ಲ. ಎಲ್ಲರೂ ಮೊಬೈಲ್‌ನಲ್ಲಿ ಚಾಟ್ ಮಾಡುತ್ತಿರುತ್ತಾರೆ. ಅಲ್ಲಿ ಬಹುಶಃ ಮೆಟ್ರೋದಲ್ಲಿ ಮಾತಾಡಬಾರದೆಂದು ಕಾಯಿದೆ ಇದೆಯೇ ಎಂಬ ಅನುಮಾನ ಹುಟ್ಟುತ್ತದೆ. ನಮ್ಮಲ್ಲಿ ಹಾಗಲ್ಲ. ಮೊಬೈಲ್ ನಲ್ಲಿ ತಾವು ಮಾತನಾಡುತ್ತಿರುವ ವ್ಯಕ್ತಿ ಯಾವ ಊರಿನಲ್ಲಿ ಇದ್ದಾನೊ ಆ ಊರಿಗೇ ಕೇಳಿಸುವಷ್ಟು ದೊಡ್ಡ ಧ್ವನಿಯಲ್ಲಿ ಮಾತನಾಡುತ್ತೇವೆ !
ಮೌನ ಬಂಗಾರ ಎನ್ನಲಿ, ಮಾತು ಬಲ್ಲವನಿಗೆ ಜಗಳವಿಲ್ಲ ಅನ್ನುವುದೂ ಸರಿಯೇ. ಜಗಳ ಮಾಡಬೇಕಿದ್ದರೂ ಮಾತು ಬೇಕೇ ಬೇಕಲ್ಲ? ಮಾತು ಬಲ್ಲವನು ಮಾತ್ರ ಬದುಕಿನಲ್ಲಿ ಗೆಲ್ಲುತ್ತಾನೆ ಅನ್ನುವುದು ಶತಃಸಿದ್ಧ. ಮಾತಿನಿಂದಲೇ ಚುನಾವಣೆಗಳನ್ನು ಗೆಲ್ಲಬಹುದು, ಸಭಿಕರ ಮನಸ್ಸನ್ನು ಆಕರ್ಷಿಸಬಹುದು. ಸಂಭಾಷಣೆಗಳನ್ನು ಮುಂದುವರಿಸಬಹುದು. ನಮ್ಮ ಅಸ್ತಿತ್ವವನ್ನು ಪ್ರತಿಷ್ಠಾಪಿಸಬಹುದು. ಗೆಳೆತನವನ್ನು ಒದಗಿಸಬಹುದು. ಸಿಟ್ಟಾಗಿರುವ ಹೆಂಡತಿಯನ್ನು ಖುಷಿಪಡಿಸಬಹುದು. ಪ್ರೇಯಸಿಯನ್ನೂ ಪಡೆಯಬಹುದು.
-ಗೋಪಾಲಕೃಷ್ಣ ಪೈ