Advertisement

ಸ್ಪೀಕರ್‌ ನಡೆ ಸೋಜಿಗ: ಕಾನೂನು ತಜ್ಞರು

03:11 AM Jul 10, 2019 | sudhir |

ಬೆಂಗಳೂರು: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಕೂಟದ 14 ಮಂದಿ ಅತೃಪ್ತ ಶಾಸಕರು ರಾಜೀನಾಮೆ ಸಲ್ಲಿಸಿದ ವಿಚಾರದಲ್ಲಿ ‘ಸ್ಪೀಕರ್‌ ಅವರ ನಡೆ ಸೋಜಿಗ’ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Advertisement

ಶಾಸಕರ ರಾಜೀನಾಮೆಗೆ ಸಂಬಂಧಿಸಿದಂತೆ ಮಂಗಳವಾರ ಸ್ಪೀಕರ್‌ ಅವರು ಆಡಿದ ಮಾತುಗಳು ಹಾಗೂ ನಡೆದುಕೊಂಡ ರೀತಿ ‘ಅನಗತ್ಯ, ಅನಾವಶ್ಯಕ ಮತ್ತು ಅವರ ಅಧಿಕಾರ ಪರಿಧಿಗೆ’ ಮೀರಿದ್ದು ಎಂದು ಮಾಜಿ ಅಡ್ವೋಕೇಟ್ ಜನರಲ್ ಅಶೋಕ್‌ ಹಾರನಹಳ್ಳಿ ವಿಶ್ಲೇಷಿಸಿದ್ದಾರೆ.

ಎಂಟು ಮಂದಿಯ ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲ ಎಂದು ಹೇಳಿರುವ ಸ್ಪೀಕರ್‌ ಅವರು, ಯಾವ ರೀತಿ ಮತ್ತು ಹೇಗೆ ಕ್ರಮಬದ್ಧವಾಗಿಲ್ಲ ಎಂದು ಹೇಳಿಲ್ಲ. ಅಲ್ಲದೆ ಕ್ರಮಬದ್ಧವಾಗಿರುವ 5 ಮಂದಿ ಶಾಸಕರಿಗೆ ಒಂದೊಂದು ದಿನ ಪ್ರತ್ಯೇಕವಾಗಿ ವಿಚಾರಣೆಗೆ ಕರೆದಿರುವ ಮರ್ಮವೇನು ಅನ್ನುವುದು ಅರ್ಥವಾಗಿಲ್ಲ. ನಾನು ತುಂಬಾ ಪಾರದರ್ಶಕ, ಶಾಸಕರು ಕೊಟ್ಟಿರುವ ದಾಖಲೆಗಳು ಮತ್ತು ಅದಕ್ಕೆ ಸಂಬಂಧಿಸಿದಂತೆ ಬಂದಿರುವ ಪೂರಕ ದೂರು, ಮನವಿಗಳು ಸಾರ್ವಜನಿಕ ದಾಖಲೆ ಎಂದು ಹೇಳಿರುವ ಸ್ಪೀಕರ್‌ ಅವುಗಳನ್ನು ಬಹಿರಂಗಪಡಿಸಬಹುದಿತ್ತು ಎಂದು ಮತ್ತೂಬ್ಬ ಮಾಜಿ ಅಡ್ವೋಕೇಟ್ ಜನರಲ್ ಬಿ.ವಿ.ಆಚಾರ್ಯ ತಿಳಿಸಿದ್ದಾರೆ.

ಯಾವುದೇ ಒಬ್ಬ ಶಾಸಕ ತನ್ನ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದಾಗ ಕಾನೂನು ಮತ್ತು ಸಂವಿಧಾನ ರೀತಿ ಆ ರಾಜೀನಾಮೆ ಸ್ವಇಚ್ಛೆಯಿಂದ ಕೊಡಲಾಗಿದೆಯೇ ಅಥವಾ ಯಾರದಾದರೂ ಬಲವಂತ, ಒತ್ತಡ ಅಥವಾ ಆಮಿಷ ಇದೆಯೇ, ಇಲ್ಲವೇ ರಾಜೀನಾಮೆ ಪತ್ರ ಖೊಟ್ಟಿಯಾಗಿದೆಯೇ ಎಂದಷ್ಟೇ ಪರಿಶೀಲಿಸಿ ಅದನ್ನು ಅಂಗೀಕರಿಸುವುದು ಸ್ಪೀಕರ್‌ ಕೆಲಸ. ಅದು ಬಿಟ್ಟು, ವಿಚಾರಣೆ ನಡೆಸುವುದು, ಸಾರ್ವಜನಿಕರ ಅಹವಾಲುಗಳನ್ನು ಆಲಿಸುವುದು ಕಾನೂನು ರೀತಿ ಸಮಂಜಸವಲ್ಲ ಅನ್ನುವುದು ಕಾನೂನು ತಜ್ಞರ ವಾದ.

ಮುಂದಿರುವ ಸಾಧ್ಯತೆಗಳು

Advertisement

ಮೇಲ್ನೋಟಕ್ಕೆ ಪಕ್ಷಪಾತಿಯಾಗಿ ಕಂಡು ಬರುತ್ತಿರುವ ಸ್ಪೀಕರ್‌ ಅವರ ನಡೆ ಗಮನಿಸಿ ವಿಪಕ್ಷದವರು ಸ್ಪೀಕರ್‌, ಡೆಪ್ಯೂಟಿ ಸ್ಪೀಕರ್‌ ವಿರುದ್ಧವೇ ಅವಿಶ್ವಾಸ ನಿರ್ಣಯ ಮಂಡಿಸಬಹುದು. ಸರಕಾರ ಅಲ್ಪಮತಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸಿಎಂಗೆ ಹೇಳಬಹುದು. ನಾಮಪತ್ರಗಳು ಕ್ರಮಬದ್ಧವಲ್ಲದವರು ಸ್ಪೀಕರ್‌ ವಿಚಾರಣೆಗೆ ಬರದೇ ಹೋದರೆ ವಿಪಕ್ಷದವರು ರಾಜ್ಯಪಾಲರಿಗೆ ದೂರು ಕೊಟ್ಟು ಸರಕಾರ ವಜಾಗೊಳಿಸುವಂತೆ ಕೋರಬಹುದು. ಈ ಹಂತದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಹೇಳಿ ರಾಜ್ಯಪಾಲರು ಸರಕಾರ ವಜಾಗೊಳಿಸಲು ಕೇಂದ್ರಕ್ಕೆ ಶಿಫಾರಸು ಮಾಡಬಹುದು ಎಂದು ತಿಳಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next