Advertisement

ಅಸಭ್ಯತೆ: 24 ಎಐಎಡಿಎಂಕೆ ಸಂಸದರ ಅಮಾನತು

12:30 AM Jan 03, 2019 | |

ನವದೆಹಲಿ: ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ಸಂಸತ್‌ನಲ್ಲಿ ಗಲಭೆ ನಡೆಸಿದ ಎಐಎಡಿಎಂಕೆ 24 ಸಂಸದರನ್ನು ಲೋಕಸಭೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅಮಾನತು ಮಾಡಿದ್ದಾರೆ. ಮುಂದಿನ ಐದು ದಿನಗಳವರೆಗೆ ಈ ಸಂಸದರು ಸದನಕ್ಕೆ ಆಗಮಿಸುವಂತಿಲ್ಲ. ಚಳಿಗಾಲದ ಅಧಿವೇಶನ ಆರಂಭವಾದ ದಿನದಿಂದಲೂ ಈ ಸಂಸದರು ನಿರಂತರವಾಗಿ ಗದ್ದಲ ನಡೆಸಿದ್ದು, ಸದನಕ್ಕೆ ಅಡ್ಡಿಪಡಿಸುತ್ತಿದ್ದರು. ಲೋಕಸಭೆಯಲ್ಲಿ ಎಐಎಡಿಎಂಕೆಯ 37 ಸಂಸದರಿದ್ದಾರೆ. ಇದಕ್ಕೂ ಮುನ್ನ ಡಿಎಂಕೆ ಮತ್ತು ಎಐಎಡಿಎಂಕೆ ಸದಸ್ಯರು ರಾಜ್ಯಸಭೆಯಲ್ಲೂ ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿದಾಗ, ಅವರನ್ನು ಸದನದಿಂದ ಹೊರನಡೆಯಿರಿ ಎಂದು ಸಭಾಪತಿ ವೆಂಕಯ್ಯ ನಾಯ್ಡು ಆದೇಶಿಸಿದ್ದರು.

Advertisement

ಮೇಕೆದಾಟು ವಿಚಾರಕ್ಕೆ ಸಭೆ: ಅಧಿವೇಶನ ಆರಂಭವಾದಾಗಿನಿಂದಲೂ ಮೇಕೆದಾಟು ವಿಚಾರಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ ಹಾಗೂ ಡಿಎಂಕೆ ಸಂಸದರು ಪ್ರತಿಭಟನೆ ನಡೆಸುತ್ತಿರುವುದರಿಂದ ಬುಧವಾರ ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ವಿವಿಧ ಪಕ್ಷಗಳ ನಾಯಕರ ಸಭೆ ನಡೆಸಿದ್ದಾರೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ಎಐಎಡಿಎಂಕೆ ಮತ್ತು ಡಿಎಂಕೆ ಸಂಸದರೊಂದಿಗೆ ಸರ್ಕಾರ ಮಾತುಕತೆ ನಡೆಸುತ್ತಿದೆ. ಕೇಂದ್ರ ಸಚಿವ ನಿತಿನ್‌ ಗಡ್ಕರಿ ವಿಷಯವನ್ನು ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎಂಬುದಾಗಿ ಸಂಸದೀಯ ವ್ಯವಹಾರಗಳ ಸಚಿವ ವಿಜಯ್‌ ಗೋಯಲ್‌ ಹೇಳಿದ್ದಾರೆ. ರಾಜನಾಥ್‌ ಸಿಂಗ್‌ ಕೂಡ ಸಭೆಯಲ್ಲಿ ಹಾಜರಿರಲಿದ್ದು, ವಿವಿಧ ಪಕ್ಷಗಳ ಬೇಡಿಕೆ ಆಲಿಸಿ, ಪರಿಹಾರ ಕಂಡುಕೊಳ್ಳಲಿದ್ದಾರೆ.

ಆರಂಭದಲ್ಲಿ ಸಂಸತ್‌ ಕಲಾಪ ಸುಗಮವಾಗಿ ಸಾಗಲು ಅನುವು ಮಾಡುತ್ತೇವೆ ಎಂದು ಎಐಎಡಿಎಂಕೆ ಸದಸ್ಯರು ಒಪ್ಪಿದರಾದರೂ, ನಂತರ ತಮ್ಮ ಪಕ್ಷದ ಮುಖ್ಯಸ್ಥರು ಈ ಆಶ್ವಾಸನೆಗಳಿಗೆ ಒಪ್ಪಿಲ್ಲ ಎಂದು ತಗಾದೆ ತೆಗೆದಿದ್ದಾರೆ. ಆ ನಂತರದಲ್ಲಿ ಯಾವುದೇ ಶಿಸ್ತುಕ್ರಮಕ್ಕೂ ನಾವು ಸಿದ್ಧ ಎಂದು ಎಐಎಡಿಎಂಕೆ ಸಂಸದರು ನಾಯ್ಡುಗೆ ಹೇಳಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next