Advertisement

Tamil Nadu ದ್ರಾವಿಡ ನಾಡಿನಲ್ಲಿ ನೆಲೆ ಊರಲು ಬಿಜೆಪಿ ಕಸರತ್ತು

12:24 AM Apr 08, 2024 | Team Udayavani |

ತಮಿಳುನಾಡು ಕಳೆದ 5 ದಶಕಗಳಿಂದ ಡಿಎಂಕೆ ಮತ್ತು ಎಐಎಡಿಎಂಕೆ ಎಂಬ ಎರಡು ದ್ರಾವಿಡ ಪಕ್ಷಗಳ ಮುಷ್ಟಿಯಲ್ಲಿರುವ ರಾಜ್ಯ. ಇಲ್ಲಿ ಲೋಕಸಭೆ ಚುನಾವಣೆ ಇದೇ 19ರಂದು ಒಂದೇ ಹಂತದಲ್ಲಿ ಮುಗಿಯಲಿದೆ.

Advertisement

ಒಂದು ಕಡೆ ಡಿಎಂಕೆ ನೇತೃತ್ವದ ಇಂಡಿಯಾ ಒಕ್ಕೂಟವು ಈ ಚುನಾವಣೆಯನ್ನು “ಹಿಂದುತ್ವ ಮತ್ತು ದ್ರಾವಿಡ ರಾಜಕಾರಣದ ನಡುವಿನ ಸೈದ್ಧಾಂತಿಕ “ಯುದ್ಧ’ವಾಗಿ ಪರಿಗಣಿಸಿ, ದ್ರಾವಿಡ ಭದ್ರಕೋಟೆಯನ್ನು ಕಾಯಲು ಹೊರಟಿದ್ದರೆ, ರಾಜ್ಯದ ಮತ್ತೂಂದು ಪ್ರಬಲ ಪಕ್ಷ ಎಐಎಡಿಎಂಕೆ ಬಿಜೆಪಿಯ ಸಖ್ಯ ಕಡಿದುಕೊಂಡು ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದೆ. ಮತ್ತೊಂದೆಡೆ ತಮಿಳುನಾಡನ್ನು ನಿಧಾನವಾಗಿ ಆವರಿಸುತ್ತಾ ನೆಲೆ ಕಂಡುಕೊಳ್ಳಲು ಹವಣಿಸುತ್ತಿರುವ ಬಿಜೆಪಿ, ಸಣ್ಣಪುಟ್ಟ ಪಕ್ಷ (ಪಿಎಂಕೆ, ಎಎಂಎಂಕೆ, ಟಿಎಂಸಿ(ಎಂ) ಇತ್ಯಾದಿ)ಗಳೊಂದಿಗೆ ಸಜ್ಜಾಗಿ ನಿಂತಿದೆ. ತಮಿಳುನಾಡಿನಲ್ಲಿ ಈಚೆಗೆ ಯಾವುದೇ ರಾಷ್ಟ್ರೀಯ ಪಕ್ಷ ನೆಲೆ ನಿಂತಿದ್ದಿಲ್ಲ. ಆದರೆ ಈ ಬಾರಿ ಏಕಾಂಗಿಯಾಗಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಬಿಜೆಪಿ, ತಮಿಳುನಾಡಿನ ರಾಜಕೀಯ ಚಿತ್ರಣವನ್ನು ಬದಲಾಯಿಸಲು ಹೊರಟಿದೆ.

ಸ್ಟಾಲಿನ್‌ ನೇತೃತ್ವದ ಡಿಎಂಕೆ ಸರಕಾರವು, ಈ ಲೋಕಸಭೆ ಚುನಾವಣೆಯನ್ನು ಕೇಂದ್ರ ಸರಕಾರದ ವಿರುದ್ಧದ ಸೈದ್ಧಾಂತಿಕ ಸಮರವಾಗಿ ಪರಿಗಣಿಸಿದೆ. ತಮಿಳು ಅಸ್ಮಿತೆ, ದ್ರಾವಿಡ ಅಸ್ಮಿತೆಯ ವಿಚಾರ ಬಂದಾಗ ರಾಜಿ ಮಾಡಿಕೊಳ್ಳದೇ, ಗುಡುಗುವ ಮೂಲಕ ಡಿಎಂಕೆ ತಮಿಳರ ಮನದಲ್ಲಿ ಗಟ್ಟಿಯಾಗಿ ನೆಲೆ ಯೂರಿದೆ. ಸ್ಟಾಲಿನ್‌ರ ಪ್ರಬಲ ನಾಯಕತ್ವ ಪಕ್ಷಕ್ಕೆ ಶಕ್ತಿ ನೀಡಿದೆ. ಬಣ ರಾಜಕಾರಣ, ಆಂತರಿಕ ಬೇಗುದಿ ಸ್ಟಾಲಿನ್‌ ಸರಕಾರದತ್ತ ಸುಳಿದಿಲ್ಲ. ಇವೆಲ್ಲವೂ ಡಿಎಂಕೆಗೆ ಪ್ಲಸ್‌ ಪಾಯಿಂಟ್‌.

ರಾಜ್ಯದ ಮತ್ತೂಂದು ಪ್ರಬಲ ದ್ರಾವಿಡ ಪಕ್ಷ ವಾದ ಎಐಎಡಿಎಂಕೆ, ಜಯಲಲಿತಾ ನಿಧನದ ಬಳಿಕ ಆಂತರಿಕ ಕಚ್ಚಾಟಕ್ಕೆ ಬಲಿಯಾಯಿತು. ಪ್ರಬಲ ನಾಯಕತ್ವದ ಕೊರತೆ ಪಕ್ಷವನ್ನು ದುರ್ಬಲಗೊಳಿಸಿದೆ. ತನ್ನ ನೆಲೆ ಉಳಿಸಿಕೊಳ್ಳುವ ಪ್ರಯತ್ನವೆಂಬಂತೆ, ಈ ಬಾರಿ ಎಐಎಡಿಎಂಕೆ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದೆ. ಆದರೆ ದುರ್ಬಲಗೊಂಡಿರುವ ಎಐಎಡಿಎಂಕೆ ಪಕ್ಷದ ಓಟ್‌ ಬ್ಯಾಂಕ್‌ ಅನ್ನು ತನ್ನತ್ತ ಸೆಳೆಯಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ.

ಒಟ್ಟಿನಲ್ಲಿ ತಮಿಳುನಾಡನ್ನು ಒಂದು ಐತಿಹಾಸಿಕ ರಾಜಕೀಯ ಬದಲಾವಣೆಯತ್ತ ಹೊರಳಿಸಲು ಬಿಜೆಪಿ ಪಣತೊಟ್ಟಿದೆ. ಪ್ರಧಾನಿ ಮೋದಿಯವರ ಸತತ ಭೇಟಿಗಳು, ಭಾಷಣದಲ್ಲಿ ಎಂಜಿ ಆರ್‌- ಜಯಲಲಿತಾ ಉಲ್ಲೇಖ, “ಎನ್‌ ಮಣ್‌¡, ಎನ್‌ ಮಕ್ಕಳ್‌ ಪಾದಯಾತ್ರೆ’, ಕಾಶಿ-ಮಧುರೆ ಸಂಗಮ ಕಾರ್ಯಕ್ರಮ, ನೂತನ ಸಂಸತ್‌ ಭವನದಲ್ಲಿ ರಾರಾಜಿಸಿದ ಸೆಂಗೋಲ್‌ ಇವೆಲ್ಲವೂ ದ್ರಾವಿಡ ರಾಜ್ಯದಲ್ಲಿ ಛಾಪು ಮೂಡಿಸಲು ಕಮಲಪಕ್ಷ ನಡೆಸುತ್ತಿರುವ ಯತ್ನಗಳಿಗೆ ಸಾಕ್ಷಿ ಹೇಳುತ್ತಿವೆ. ಇನ್ನು ಜಾತಿ ಲೆಕ್ಕಾಚಾರ ನೋಡಿದರೆ, ರಾಜ್ಯದ ಒಟ್ಟು ಜನಸಂಖ್ಯೆಯ ಶೇ.16.9ರಷ್ಟಿರುವ ವಣ್ಣಿಯಾರ್‌ ಸಮುದಾಯವು ಉತ್ತರ ಭಾಗದಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿದೆ. ಈ ಸಮುದಾಯ ಪಿಎಂಕೆ ಗೆ ನಿಷ್ಠೆ ತೋರುತ್ತಾ ಬಂದಿದೆ.

Advertisement

ಶೇ.11.7ರಷ್ಟಿರುವ ಮುಕ್ಕಲ ಥೋರ್‌ ಸಮು ದಾಯವು ದಕ್ಷಿಣ ಮತ್ತು ಕೇಂದ್ರ ಜಿಲ್ಲೆಗಳಲ್ಲಿ ಪ್ರಾಬಲ್ಯ ಹೊಂದಿದೆ. ಇತ್ತೀಚಿನ ಟ್ರೆಂಡ್‌ ಗಮನಿ ಸಿದರೆ, ಥೇವಾರ್‌, ಗೌಂಡರ್‌, ಎಸ್‌ಸಿ, ಮೇಲ್ವರ್ಗ, ಎಸ್‌ಟಿಗಳು ಬಿಜೆಪಿ ಕಡೆಗೆ ವಾಲುತ್ತಿದ್ದಾರೆ. ಇದರ ಜತೆಗೆ ವಿಪಕ್ಷಗಳು ಎಡವುದನ್ನೇ ಕಾಯುತ್ತಿರುವ ಬಿಜೆಪಿ, ಸಣ್ಣ ಅಸ್ತ್ರ ಸಿಕ್ಕಿದರೂ ಸಾಕು ಅದನ್ನೇ ಬ್ರಹ್ಮಾಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಸ್ಟಾಲಿನ್‌ ಪುತ್ರ, ಸಚಿವ ಉದಯ ನಿಧಿ ನೀಡಿದ್ದ “ಸನಾತನ ಧರ್ಮ ನಿರ್ಮೂಲನೆ’ ಹೇಳಿಕೆ ಹಾಗೂ ಕಚ್ಚಥೀವು ದ್ವೀಪದ ವಿವಾದ ಬಿಜೆೆಪಿಗೆ ಅತಿದೊಡ್ಡ ಅಸ್ತ್ರ. ಕಚ್ಚಥೀವು ಈ ಹಿಂದೆಯೇ ಕರುಣಾನಿಧಿ- ಜಯಲಲಿತಾ ನಡುವೆ ಹಗ್ಗ ಜಗ್ಗಾಟದ ವಸ್ತುವಾಗಿತ್ತು. ಮೀನುಗಾರರ ವಿಚಾರ ಬಂದಾಗೆಲ್ಲ ಜಯಲಲಿತಾ, ಕಚ್ಚಥೀವು ದ್ವೀಪವನ್ನು ಮರುವಶಪಡಿಸಿಕೊಳ್ಳುವ ಬಗ್ಗೆ ಮಾತಾಡುತ್ತಿದ್ದರು.

ಭಾಷಾ ತೊಡಕು, ನಾಯಕತ್ವದ ಕೊರತೆಯಿಂದಾಗಿ ಅಂದುಕೊಂಡಿದ್ದನ್ನು ಸಾಧಿಸಲಾಗದೇ ನಿರಾಸೆ ಗೊಂಡ ಬಿಜೆಪಿಗೆ ಆಸರೆಯಾಗಿದ್ದೇ ಅಣ್ಣಾ ಮಲೈ. ಕಳೆದ ಒಂದೆರಡು ವರ್ಷಗಳಲ್ಲಿ ತ.ನಾಡು ರಾಜಕೀಯದಲ್ಲಿ ಅಣ್ಣಾಮಲೈ ಪ್ರವರ್ಧಮಾನಕ್ಕೆ ಬಂದಿದ್ದಾರೆ. ತಳಮಟ್ಟದಲ್ಲಿ ಅವರು ಕೈಗೊಂಡ ಸಂಘಟನ ಕಾರ್ಯ, ಜನಸಂಪರ್ಕ, ಪಾದಯಾತ್ರೆಯು ತಕ್ಕಮಟ್ಟಿಗೆ ರಾಜ್ಯದಲ್ಲಿ ಕೇಸರಿ ಅಲೆ ಮೂಡಿಸಿದೆ. ಈ ಚುನಾವಣೆ ಅಣ್ಣಾಮಲೈ ನೇತೃತ್ವದಲ್ಲಿ ಪಕ್ಷ ಗಳಿಸಿರುವ ಜನಮನ್ನಣೆಯ ಪರೀ ಕ್ಷೆಯೂ ಹೌದು. ಗ್ರೌಂಡ್‌ ರಿಯಾಲಿಟಿ ಏನೆಂದರೆ, ತಮಿಳು ನಾಡಿ ನಲ್ಲಿ ಬಿಜೆಪಿ ಶೇ.3ರಷ್ಟು ವೋಟ್‌ ಶೇರ್‌ ಹೊಂದಿದೆ.ಇದನ್ನು ಹೆಚ್ಚಿಸಿ ರಾಜ್ಯದಲ್ಲಿ ತನ್ನ ನೆಲೆ ವಿಸ್ತರಿಸಿಕೊಳ್ಳಬೇಕೆಂಬ ಮಹದಾಸೆಯಿಂದ ಬಿಜೆಪಿ ಪ್ರಯತ್ನಿಸುತ್ತಿದೆ. ಅಭ್ಯರ್ಥಿಗಳ ಆಯ್ಕೆ ಯಲ್ಲೂ ಜಾಣ್ಮೆ ಪ್ರದರ್ಶಿದ್ದು, ಈ ಬಾರಿ ಕೊಯ ಮತ್ತೂರು, ವೆಲ್ಲೂರು, ತಿರುವಣ್ಣಾಮಲೈ, ಚೆನ್ನೈ ಉತ್ತರ, ಚೆನ್ನೈ ದಕ್ಷಿಣ ಸೇರಿ 10 ಕ್ಷೇತ್ರಗಳಲ್ಲಿ ಡಿಎಂಕೆ, ಎಐಎಡಿಎಂಕೆ, ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್‌, ಡಿಎಂಕೆ, ಒಗ್ಗಟ್ಟಾಗಿರುವ ಕಾರಣ “ಇಂಡಿಯಾ’ ಒಕ್ಕೂಟಕ್ಕೂ ಶಕ್ತಿ ಬಂದಿದೆ.

ಚುನಾವಣಾ ವಿಷಯಗಳು
1ಸೈದ್ಧಾಂತಿಕ ವಿಷಯಗಳೇ ಇಲ್ಲಿ ಪ್ರಾಮುಖ್ಯ. ದ್ರಾವಿಡ ಪಕ್ಷಗಳಿಗೆ ತಮಿಳು ಅಸ್ಮಿತೆ, ದ್ರಾವಿಡ ಅಸ್ಮಿತೆಯ ವಿಚಾರ. ಬಿಜೆಪಿಗೆ ರಾಷ್ಟ್ರೀಯತೆಯ ಅಸ್ತ್ರ
2 “ಸನಾತನ ಧರ್ಮ ನಿರ್ಮೂಲನೆ’ ಹೇಳಿಕೆ ಯಿಂದ ಧಾರ್ಮಿಕ ವಿಚಾರ ಮುನ್ನೆಲೆಗೆ
3 ತಮಿಳುನಾಡಿಗೆ ಕೇಂದ್ರ ಸರಕಾರ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿದೆ ಎಂಬ ಆರೋಪ
4 ಕಚ್ಚಥೀವು ದ್ವೀಪದ ಅಸ್ತ್ರ ಪ್ರಯೋಗದ ಮೂಲಕ ಡಿಎಂಕೆ, ಕಾಂಗ್ರೆಸ್‌ ವಿರುದ್ಧ ಬಿಜೆಪಿ ವಾಗ್ಧಾಳಿ
5 ಡಿಎಂಕೆ ಮತ್ತು ಕಾಂಗ್ರೆಸ್‌ ಭ್ರಷ್ಟಾಚಾರ ಎಸಗುತ್ತಿದೆ ಎಂಬ ಬಿಜೆಪಿಯ ಆರೋಪ

-ಹಲೀಮತ್‌ ಸ ಅದಿಯಾ

Advertisement

Udayavani is now on Telegram. Click here to join our channel and stay updated with the latest news.

Next