Advertisement

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

01:06 AM Jun 16, 2024 | Team Udayavani |

ಬೆಂಗಳೂರು: ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ತಮ್ಮ ಕೊಠಡಿಗೆ ಆಗಮಿಸಿದ ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವರನ್ನು ಬರಮಾಡಿಕೊಂಡ ಸ್ಪೀಕರ್‌ ಖಾದರ್‌, ರಾಜೀನಾಮೆ ಪಡೆದ ಬಳಿಕ ಕೇಂದ್ರದಿಂದ ರಾಜ್ಯಕ್ಕೆ ಆಗಬೇಕಿರುವ ಕೆಲವು ನೆರವಿನ ಕುರಿತು ಪ್ರಸ್ತಾವಿಸಿದರು.

Advertisement

ರಾಜೀನಾಮೆ ಪತ್ರಕ್ಕೆ ನನ್ನ ಸಮ್ಮುಖದಲ್ಲೇ ಸ್ವಹಸ್ತಾಕ್ಷರದಲ್ಲೇ ಸಹಿ ಮಾಡಬೇಕು ನೀವು, ಯಾವುದೇ ಒತ್ತಡದಿಂದ ರಾಜೀನಾಮೆ ಕೊಡುತ್ತಿಲ್ಲ ಎಂದು ಇದನ್ನು ಸ್ವೀಕರಿಸುತ್ತೇನೆ ಎಂದು ತಮಾಷೆ ಮಾಡಿದ ಸ್ಪೀಕರ್‌, ಕುಶಲೋಪರಿ ವಿಚಾರಿಸಿದರು.

ಕೇಂದ್ರ ಸಚಿವರಾದ ಬಳಿಕ ಕರ್ನಾಟಕದ ಕುದುರೆಮುಖ ಕಬ್ಬಿಣ ಅದಿರು ಕಂಪೆನಿಗೆ ಸಂಬಂಧಿಸಿದ ಕಡತಕ್ಕೆ ಸಹಿ ಹಾಕಿದ್ದಕ್ಕೆ ಅಭಿನಂದನೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮೊದಲ ದಿನ ಆರಂಭಿಕ ಸಭೆ ನಡೆಸಿದೆ. ಕುದುರೆಮುಖ ಕಂಪೆನಿಗೆ ನೀಡುವ ಸಂಬಂಧ ವಿರೋಧ ಇದೆ ಎಂಬುದನ್ನು ಕೆಲವು ಅಧಿಕಾರಿಗಳು ನನ್ನ ಗಮನಕ್ಕೆ ತಂದರು. ಕಡತ ತರಿಸಿಕೊಂಡು ಪರಿಶೀಲಿಸಿದೆ. 2005ರಲ್ಲೇ ಗುತ್ತಿಗೆ ಮುಕ್ತಾಯವಾಗಿತ್ತು. 2016ರಲ್ಲಿ
ಹೊಸದಾಗಿ ಅರ್ಜಿ ಸಲ್ಲಿಕೆಯಾಗಿತ್ತು. ಇದರಲ್ಲಿ ನನ್ನದೇನೂ ಪಾತ್ರ ಇಲ್ಲ. ಎಲ್ಲವನ್ನೂ ಪರಿಶೀಲಿಸಿದ ಬಳಿಕ ಸಹಿ ಮಾಡಿದೆ ಎಂದರು.

ಅಷ್ಟರಲ್ಲೇ ಮತ್ತೊಂದು ಬೇಡಿಕೆ ಇಟ್ಟ ಸ್ಪೀಕರ್‌, ಮಂಗಳೂರು ವಿಮಾನ ನಿಲ್ದಾಣ ಹಾಗೂ ನವ ಮಂಗಳೂರು ಬಂದರು ಅಭಿವೃದ್ಧಿ, ಮೀನುಗಾರಿಕೆಗೆ ಸಂಬಂಧಿಸಿದ ಒಂದಿಷ್ಟು ನೆರವು ಕೇಂದ್ರದಿಂದ ಬರಬೇಕಾಗುತ್ತದೆ ಎಂದು ಪ್ರಸ್ತಾವಿಸಿದರು. ಪ್ರಧಾನಮಂತ್ರಿಗಳು ಗೌರವ ಇಟ್ಟುಕೊಂಡಿದ್ದಾರೆ. ರಾಜ್ಯಕ್ಕೆ ಏನೇನು ಒಳ್ಳೆಯದು ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡುತ್ತೇನೆ ಎಂದು ಸಚಿವ ಕುಮಾರಸ್ವಾಮಿ ಉತ್ತರಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next