ಸಿದ್ದಾಪುರ: ಆರ್ಥಿಕ ವೆಚ್ಚವನ್ನು ಕಡಿಮೆ ಮಾಡಿಕೊಂಡು ಮಿತವ್ಯಯ, ಶುಚಿತ್ವ ಕಾಪಾಡಿಕೊಂಡು ಜೀವನ ನಿರ್ವಹಣೆ ಉತ್ತಮವಾಗಿ ಉಟ್ಟುಕೊಳ್ಳುವುದು ಕೃಷಿಕರ ಅಗತ್ಯವಾಗಿದೆ. ಆರ್ಥಿಕ ಶಿಸ್ತು ಪಾವಿತ್ರ್ಯತೆ ಕಾಪಾಡಿಕೊಳ್ಳುವುದರಿಂದ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಇಟಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ಸಂಘಗಳಿಂದ ಭಾವನಾತ್ಮಕ ಸಂಬಂಧ ಬೆಳೆಯುತ್ತದೆ. ಜೀವನದ ಭದ್ರತೆ ಆಗುತ್ತದೆ. ಸರ್ಕಾರದಿಂದ ಸಿಗಬಹುದಾದ ಸೌಲಭ್ಯದೊಂದಿಗೆ ಹಾಗೂ ಪ್ರೋತ್ಸಾಹದೊಂದಿಗೆ ಸಹಕಾರಿ ಸಂಘವೂ ಉತ್ತಮ ಕಾರ್ಯ ನಿರ್ವಹಿಸುವುದರಿಂದ ರೈತರು ಉತ್ತಮ ಜೀವನ ನಡೆಸುವಂತಾಗಿದೆ ಎಂದರು.
ಜನರ ಜೀವನಾಡಿಯಾಗಿರುವ ಸಹಕಾರಿ ಸಂಘಗಳು ತಾನು ಎಷ್ಟೇ ಸಂಕಷ್ಟದಲ್ಲಿದ್ದರೂ ಸದಸ್ಯರ ಕಷ್ಟಗಳಿಗೆ ಯಾವಾಗಲೂ ಸ್ಪಂದಿಸುತ್ತಲೇ ಬರುತ್ತಿದೆ. ಯುವಕರು ಸಹಕಾರಿ ಕ್ಷೇತ್ರಕ್ಕೆ ಬರಬೇಕು. ಸಹಕಾರಿ ತತ್ವಗಳನ್ನು ತಿಳಿದುಕೊಳ್ಳಬೇಕು ಎಂದರು.
ಶಿರಸಿ ಉಪವಿಭಾಗದ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಟಿ.ವಿ. ಶ್ರೀನಿವಾಸ, ನ್ಯಾಯವಾದಿ ಜಿ.ಎಸ್. ಹೆಗಡೆ ಬೆಳ್ಳೆಮಡಿಕೆ, ಇಟಗಿ ಗ್ರಾಪಂ ಅಧ್ಯಕ್ಷ ಸುರೇಂದ್ರ ಮಡಿವಾಳ, ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.
ಸಂಘದ ಮಾಜಿ ಅಧ್ಯಕ್ಷ ಸೀತಾರಾಮ ಭಟ್ಟ ಇಟಗಿ, ಶ್ರೀಧರ ಹೆಗಡೆ ಬೈಲಳ್ಳಿ, ಕಮಲಾಕರ ಭಂಡಾರಿ ಇಟಗಿ, ಚಂದ್ರಶೇಖರ ಹೆಗಡೆ ಕೊಡ್ತಗಣಿ, ಆರ್.ಎನ್. ಹೆಗಡೆ ಮುಸೇಗಾರ, ಜಿ.ಟಿ.ನಾಯ್ಕ ಕಾನಳ್ಳಿ, ಗಂಗಾಧರ ತಿಮ್ಮ ಗೌಡ ಕಶಿಗೆ ಹಾಗೂ ಸಹಕಾರಿ ರತ್ನ ಪುರಸ್ಕೃತ ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ ಬಿಳಗಿ, ಅಭಿಯಂತರ ಸಚೇತನ ಭಟ್ಟ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ರಮೇಶ ಹೆಗಡೆ ಕೊಡ್ತಗಣಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ನಿರ್ದೇಶಕ ಮಂಜುನಾಥ ಹೆಗಡೆ ಹೊನ್ನೆಮಡ್ಕೆ ವಂದಿಸಿದರು. ಜಿ.ಜಿ. ಹೆಗಡೆ ಬಾಳಗೋಡ ನಿರ್ವಹಿಸಿದರು. ಮುಖ್ಯಕಾರ್ಯನಿರ್ವಾಹಕ ಎಂ.ಜಿ. ಹೆಗಡೆ ಇದ್ದರು.
ಕೃಷಿಕರ ನೆರವಿಗೆ ಸದಾ ಬದ್ಧ
ಸರಕಾರ ರೈತರ ಸಾಲಮನ್ನಾ ಮಾಡಿ ನೆರವಾಗುತ್ತಿದೆ. ಈ ಹಿಂದೆ ತಾಂತ್ರಿಕ ಕಾರಣಗಳಿಂದ ಸಾಲಮನ್ನಾ ಆಗದೇ ಇರುವ ಸದಸ್ಯರ ಹೆಸರು ಗ್ರೀನ್ ಲೀಸ್ಟ್‌ನಲ್ಲಿದ್ದು ಸಧ್ಯದಲ್ಲಿಯೇ ಅವರ ಖಾತೆಗೆ ಸರ್ಕಾರ ಹಣವನ್ನು ಭರಣಮಾಡಲಿದ್ದು ಈ ಕುರಿತು ಆತಂಕ ಬೇಡ. ಶೂನ್ಯ ಬಡ್ಡಿದರದಲ್ಲಿ ಸರಕಾರ ರೈತರಿಗೆ ನೆರವು ನೀಡುತ್ತಿದೆ.