Advertisement

ಚರಿತ್ರಾರ್ಹ ತೀರ್ಮಾನ ಕೈಗೊಳ್ಳಲು ಸ್ಪೀಕರ್‌ ಚಿಂತನೆ

11:41 PM Jul 09, 2019 | Lakshmi GovindaRaj |

ಬೆಂಗಳೂರು: ಪಕ್ಷದ ಚಿನ್ಹೆ ಅಡಿಯಲ್ಲಿ ಜಯಗಳಿಸಿ ರಾಜೀನಾಮೆ ಸಲ್ಲಿಸಿರುವ ಶಾಸಕರಿಗೆ ತಕ್ಕ ಪಾಠ ಕಲಿಸಲು ಮುಂದಿನ ದಿನಗಳಲ್ಲಿ ಇಂತಹ ಪ್ರವೃತ್ತಿಗೆ ತಡೆಯೊಡ್ಡಲು ಚರಿತ್ರಾರ್ಹ ತೀರ್ಮಾನ ಕೈಗೊಳ್ಳಲು ವಿಧಾನಸಭಾಧ್ಯಕ್ಷ ರಮೇಶ್‌ ಕುಮಾರ್‌ ಚಿಂತನೆ ನಡೆಸಿದ್ದಾರೆ.

Advertisement

ಈ ಬಗ್ಗೆ ರಾಜ್ಯ ಸರ್ಕಾರದ ಮಾಜಿ ಅಡ್ವೊಕೇಟ್‌ ಜನರಲ್‌ ಅಶೋಕ್‌ ಹಾರ್ನಳ್ಳಿ ಹಾಗೂ ರವಿವರ್ಮಕುಮಾರ್‌ ಅವರನ್ನು ಭೇಟಿ ಮಾಡಿ, ಪ್ರಜಾಪ್ರತಿನಿಧಿ ಕಾಯ್ದೆ ಅಡಿಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸುವ ಶಾಸಕರನ್ನು ಕನಿಷ್ಠ 2 ಅವಧಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿಷೇಧ ಹೇರಲು ಅವಕಾಶ ಇರುವ ಬಗ್ಗೆ ಚರ್ಚೆ ನಡೆಸಿದ್ದಾರೆಂದು ತಿಳಿದು ಬಂದಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಅವರು, “ಈಗಿರುವ ಪ್ರಜಾಪ್ರತಿನಿಧಿ ಕಾಯ್ದೆ ಅಡಿಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಶಾಸಕರ ಚುನಾವಣೆ ಸ್ಪರ್ಧೆಗೆ ನಿಷೇಧ ಹೇರಲು ಅವಕಾಶವಿದೆ. ಯಾವುದೇ ವ್ಯಕ್ತಿ ಒಂದು ಪಕ್ಷದ ಚಿನ್ಹೆ ಅಡಿ ಸ್ಪರ್ಧಿಸಿ ಜಯಗಳಿಸಿ, ಅವರು ರಾಜೀನಾಮೆ ಸಲ್ಲಿಸಿದರೆ, ಅವರ ವಿರುದ್ಧ ಸಾರ್ವಜನಿಕರು ದೂರು ಸಲ್ಲಿಸಿದರೆ, ಎರಡು ಚುನಾವಣೆಗೆ ಸ್ಪರ್ಧಿಸಲು ನಿಷೇಧ ಹೇರಲು ಅವಕಾಶವಿದೆ’ ಎಂದರು.

ಆದರೆ ದುರ್ದೈವದಿಂದ ಸಂವಿಧಾನದ 10ನೇ ಪರಿಚ್ಚೇದ ಜಾರಿಗೆ ಬಂದ ಮೇಲೆ 1967-1971 ವರೆಗೆ 50 ಸಾವಿರ ಪಕ್ಷಾಂತರ ಕಾಯ್ದೆಯಡಿ ಪ್ರಕರಣಗಳು ದಾಖಲಾದವು. ಇದರಿಂದ ಸಂಸತ್ತು ದಂಗಾಗಿ ಹೋಯಿತು. ಇದರ ವಿರುದ್ಧ ಏನಾದರೂ ಮಾಡಬೇಕೆಂದು ಸಂಸತ್ತು ತೀರ್ಮಾನ ಮಾಡಿ, ಪ್ರಜಾಪ್ರಭುತ್ವದಡಿ ಅಸ್ತಿತ್ವಕ್ಕೆ ಬಂದ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು ಸಂಸತ್ತಿನಲ್ಲಿ ನಿರ್ಧರಿಸಲಾಯಿತು.

ಆದರೆ, ಆ ಪ್ರಯತ್ನ ಇದುವರೆಗೂ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಸಂವಿಧಾನದ ಹತ್ತನೇ ಪರಿಚ್ಚೇದ ಅಪೂರ್ಣಗೊಂಡಿದೆ. ಹೀಗಾಗಿ ರಾಜ್ಯದ ಶಾಸಕರ ರಾಜೀನಾಮೆ ಪ್ರಕರಣದಲ್ಲಿ ಸಂವಿಧಾನದ ಆಶಯಗಳಿಗೆ ಧಕ್ಕೆಯಾಗದಂತೆ ಚರಿತ್ರಾರ್ಹ ತೀರ್ಮಾನ ಕೈಗೊಳ್ಳುವುದಾಗಿ ರಮೇಶ್‌ ಕುಮಾರ್‌ ಹೇಳಿದರು.

Advertisement

ಶಾಸ ಕರ ರಾಜೀ ನಾಮೆ ಬಗ್ಗೆ ಸಾರ್ವಜನಿಕರಿಂದ ಆರು ದೂರುಗಳು ಬಂದಿವೆ. ಕೆಲವರು ತಾವು ಬಡವರು, ದುಡಿದು ಬದುಕು ಸಾಗಿಸುತ್ತೇವೆ. ನಾವು ಜಿಎಸ್‌ಟಿ ಸಲ್ಲಿಸುತ್ತೇವೆ. ಇವರು ರಾಜೀನಾಮೆ ಸಲ್ಲಿಸಿ ಮತ್ತೆ ಚುನಾವಣೆ ನಡೆದರೆ, ನಮ್ಮ ಹಣ ಖರ್ಚಾಗುತ್ತದೆ ಎಂದು ಆರೋಪಿಸಿದ್ದಾರೆ. ಕೆಲವರು ಬರಗಾಲದ ಕಾರಣ ನೀಡಿದರೆ, ಮತ್ತೆ ಕೆಲವರು ಸಂವಿಧಾನದ ಬಗ್ಗೆ ದೂರು ನೀಡಿದ್ದಾರೆ. ಹೀಗಾಗಿ ಅವರ ಅಹವಾಲು ಸಲ್ಲಿಸಲು ಸಮಯ ನೀಡುವುದಾಗಿ ತಿಳಿಸಿದರು.

ಸಚಿವರ ರಾಜೀನಾಮೆ ನನ್ನ ವ್ಯಾಪ್ತಿಗೆ ಬರಲ್ಲ: ರಾಜೀನಾಮೆ ಸಲ್ಲಿಸಿರುವ ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿ, ಸ್ವಯಂಪ್ರೇರಿತರಾಗಿ ರಾಜೀನಾಮೆ ಸಲ್ಲಿಸಿದ್ದೇವೆ ಎಂದು ತಮ್ಮ ರಾಜೀನಾಮೆ ಸಲ್ಲಿಸಲು ಸ್ಪೀಕರ್‌ಗೆ ಸೂಚಿಸುವಂತೆ ಮನವಿ ಮಾಡಿದ್ದಾರೆ. ಅವರ ಪತ್ರಕ್ಕೆ ಪ್ರತಿಯಾಗಿ, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವುದೇ ನನ್ನ ಕರ್ತವ್ಯ, ಅದರ ಜೊತೆಗೆ ಯಾರು ನೋವಿನಲ್ಲಿದ್ದಾರೆ, ಅಸಹಾಯಕರಾಗಿರುವ ಜನರ ಪರಿಸ್ಥಿತಿಯನ್ನೂ ಗಮನದಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದೇನೆ ಎಂದರು.

ಎಚ್‌. ನಾಗೇಶ್‌ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದನ್ನು ರಾಜ್ಯಪಾಲರು ನನ್ನ ಗಮನಕ್ಕೆ ತಂದಿದ್ದಾರೆ. ಆದರೆ, ಸಚಿವರ ರಾಜೀನಾಮೆ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಅವರು ಬಿಜೆಪಿ ಸೇರುವುದಾಗಿಯೂ ಹೇಳಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ. ಆರ್‌. ಶಂಕರ್‌ ಕೂಡ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅವರು ಕಾಂಗ್ರೆಸ್‌ ಸಹ ಸದಸ್ಯತ್ವ ಪಡೆದುಕೊಂಡಿದ್ದಾರೆಂದು ಕಾಂಗ್ರೆಸ್‌ನವರು ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next