Advertisement
ಇವುಗಳಲ್ಲಿ ಕೆಲವೆಂದರೆ, ಶ್ರವಣ ಸಾಮರ್ಥ್ಯ ಕಡಿಮೆ ಇರುವುದು, ಶ್ರವಣ ಶಕ್ತಿ ದೋಷ, ಬಾಲ್ಯದ ಸಂವಹನ ವೈಕಲ್ಯಗಳು, ನರಶಾಸ್ತ್ರೀಯ ತೊಂದರೆಗಳು, ವರ್ತನಾತ್ಮಕ ಸಮಸ್ಯೆಗಳು, ಮಾತಿಗೆ ಕಡಿಮೆ ಪ್ರಚೋದನೆ ಇತ್ಯಾದಿ. ಭಾರತದಲ್ಲಿ ಹೆಚ್ಚಿನ ಹೆತ್ತವರು ಅಥವಾ ಅಜ್ಜ-ಅಜ್ಜಿಯಂದಿರು, “ನಾನು ಮಾತು ಕಲಿತುದು ತಡವಾಗಿ; ಹಾಗಾಗಿ ನಮ್ಮ ಮಕ್ಕಳು ಕೂಡ ಮಾತು ಕಲಿಯುವಲ್ಲಿ ವಿಳಂಬವಾಗುತ್ತಿದೆ’, ಅಥವಾ “ಕೆಲವು ಮಕ್ಕಳು ತಡವಾಗಿ ಮಾತನಾಡಲು ಕಲಿಯುತ್ತಾರೆ, ಅದರಲ್ಲಿ ತೊಂದರೆಯೇನೂ ಇಲ್ಲ, ಕಾಯೋಣ’ ಎಂಬುದಾಗಿ ಆಲೋಚಿಸುತ್ತಾರೆ. ಬಹು ಸಾಮಾನ್ಯವಾಗಿರುವ ಇನ್ನೊಂದು ತಪ್ಪು ಕಲ್ಪನೆ ಎಂದರೆ, “ಗಂಡುಮಕ್ಕಳು ಮಾತು ಆರಂಭಿಸುವುದು ನಿಧಾನ, ಇನ್ನಷ್ಟು ದಿನ ಕಾಯೋಣ’ ಎಂಬುದು. “ದೈವ ದೇವರಿಗೆ ಮೊರೆ ಹೋಗೋಣ’, “ಯಾವುದಾದರೂ ಆರೋಗ್ಯ ಪಾನೀಯ ಅಥವಾ ಟಾನಿಕ್ ಕೊಟ್ಟು ನೋಡೋಣ’ ಎಂಬಿತ್ಯಾದಿಯಾಗಿ ಆಲೋಚಿಸುವವರೂ ಇದ್ದಾರೆ. ಇವೆಲ್ಲವೂ ತಪ್ಪು ಕಲ್ಪನೆಗಳಾಗಿದ್ದು, ವಿಳಂಬವಾಗಿ ಮಾತು ಕಲಿಯುತ್ತಿರುವ ಮಗುವಿನ ವಿಚಾರವಾಗಿ ನೀವು ಚೆನ್ನಾಗಿ ಆಲೋಚಿಸಿ ಇದಕ್ಕಿಂತ ಭಿನ್ನವಾಗಿ ಕ್ರಿಯಾಶೀಲರಾಗಬೇಕಾಗುತ್ತದೆ.
Related Articles
Advertisement
ನೀವು ಮಾತನಾಡುತ್ತಿರುವಾಗ ನಿಮ್ಮ ಮುಖದಲ್ಲಿ ಆಗುವ ಭಾವನಾತ್ಮಕ ಬದಲಾವಣೆಗಳು, ಸ್ವರದ ಏರಿಳಿತ ಇತ್ಯಾದಿಗಳನ್ನು ಮಗು ಗುರುತಿಸುತ್ತದೆ. ಇದು ಮಗುವಿನ ಭಾಷಿಕ ಬೆಳವಣಿಗೆಯ ದೃಷ್ಟಿಯಿಂದ ಮಾತ್ರ ಮಹತ್ವ ಹೊಂದಿರುವುದಲ್ಲ; ನಿಮ್ಮ ಮತ್ತು ಮಗುವಿನ ನಡುವೆ ಬಲವಾದ ಬಾಂಧವ್ಯದ ಬೆಸುಗೆಯೊಂದನ್ನು ಬಿಗಿಯುತ್ತದೆ. ಆದ್ದರಿಂದ ಮಗುವಿಗೆ ಅರ್ಥವಾಗುತ್ತದೆಯೇ ಎಂಬ ಗೊಂದಲವನ್ನು ಮನಸ್ಸಿನಿಂದ ತೆಗೆದುಹಾಕಿ ಮಗುವಿನ ಪರಿಸರಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಗುವಿನ ಜತೆಗೆ ಪ್ರೀತಿಯಿಂದ ಮಾತನಾಡಿ. ಈ ಪರಿಣಾಮಕಾರಿ ಸಂವಹನವು ಹುಟ್ಟಿದಂದಿನಿಂದ ಒಂದು ವರ್ಷ ವಯಸ್ಸಿನ ವರೆಗೆ ನಡೆಯುವುದು ಬಹಳ ಮುಖ್ಯವಾಗಿದೆ ಮತ್ತು ಇದು ಮಗು ಮೊದಲ ಪದವನ್ನು ಉಚ್ಚರಿಸುವುದಕ್ಕೆ ಗಣನೀಯ ಕೊಡುಗೆಯನ್ನು ನೀಡುತ್ತದೆ. ನೀವು ಮಗುವಿನ ಜತೆಗೆ ಈ ರೀತಿಯಾಗಿ ಮಾತನಾಡುತ್ತ ಸಮಯ ಕಳೆದಿಲ್ಲ ಎಂದರೆ ಅದರ ಭಾಷಿಕ ಬೆಳವಣಿಗೆಗೆ ನೀವು ಸರಿಯಾದ, ಪರಿಣಾಮಕಾರಿಯಾದ ಪ್ರಚೋದನೆಯನ್ನು ನೀಡಿಲ್ಲ ಎಂದರ್ಥ.
ಎರಡನೆಯ ಪ್ರಾಮುಖ್ಯವಾದ ಪ್ರಶ್ನೆ ಎಂದರೆ, “ನೀವು ಮಾತನಾಡುವುದಕ್ಕೆ, ನೀವು ಉಂಟು ಮಾಡುವ ಸದ್ದುಗಳಿಗೆ ಮಗು ಪ್ರತಿಕ್ರಿಯಿಸುತ್ತಿದೆಯೇ?’ ಎಂಬುದನ್ನು ನೀವು ಸರಿಯಾಗಿ ಗಮನಿಸಬೇಕು. ಪರಿಸರದಲ್ಲಿ ಉಂಟಾಗುವ ದೊಡ್ಡ ಅಥವಾ ಸಣ್ಣ ಮಟ್ಟದ ಸದ್ದುಗಳಿಗೆ ಪ್ರತಿಕ್ರಿಯೆಯಾಗಿ ಮಗುವಿನ ಕಣ್ಣುಗುಡ್ಡೆಗಳ ಚಲನೆ ಮತ್ತು ದೈಹಿಕ ಚಲನೆಗಳನ್ನು ನೀವು ಸೂಕ್ಷ್ಮವಾಗಿ ಗಮನಿಸಬೇಕು. ತನಗೆ ಕೇಳಿಸುವ ಸದ್ದುಗಳಿಗೆ ಪ್ರತಿಕ್ರಿಯೆಯಾಗಿ ಮಗು ಬೆಚ್ಚಿ ಬೀಳಬಹುದು, ಅದರ ಮುಖಭಾವದಲ್ಲಿ ಬದಲಾವಣೆಗಳಾಗಬಹುದು ಅಥವಾ ಪ್ರತಿಯಾಗಿ ತಾನೂ ಏನಾದರೊಂದು ಸದ್ದು ಹೊರಡಿಸಬಹುದು. ತನ್ನ ಪರಿಸರದಲ್ಲಿ ಉಂಟಾದ ಸದ್ದುಗಳಿಗೆ ಮಗು ಪ್ರತಿಕ್ರಿಯೆ ತೋರಿಸುತ್ತಿಲ್ಲ ಅಥವಾ ಪ್ರತಿಕ್ರಿಯೆ ಕಡಿಮೆ ಇದೆ ಎಂದಾದರೆ ಅದು ಮಗುವಿಗೆ ಶ್ರವಣ ದೋಷ ಇದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಭಾಷಿಕ ಬೆಳವಣಿಗೆ ವಿಳಂಬವಾಗಿರುವ ಮಗುವಿನಲ್ಲಿ
ಹೆತ್ತವರು ಈ ಅಂಶವನ್ನೂ ಪರಿಗಣಿಸಿ ಸೂಕ್ಷ್ಮವಾಗಿ ಗಮನಿಸಬೇಕು. ಮಗು ಮಾತು ಕಲಿಯುವುದು ವಿಳಂಬವಾಗಿದ್ದರೆ ಮತ್ತು ತನ್ನ ಪರಿಸರದ ಸದ್ದುಗಳಿಗೆ ಪ್ರತಿಕ್ರಿಯೆಯ ಕೊರತೆಯನ್ನು ಹೊಂದಿದ್ದರೆ ಮುಂದಿನ ಹೆಜ್ಜೆಯನ್ನು ತೆಗೆದುಕೊಳ್ಳಲು ವಿಳಂಬಿಸಬಾರದು. ಹೆತ್ತವರ ಕಡೆಯಿಂದ ಈ ಬಗ್ಗೆ ನಿರ್ಲಕ್ಷ್ಯವು ಮಗುವಿನ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಬಹುದಾಗಿದೆ. ಉತ್ತಮ ಫಲಿತಾಂಶವನ್ನು ಪಡೆಯುವುದಕ್ಕೆ ಮಗುವಿನ ಸಂವಹನ ಸಮಸ್ಯೆಯನ್ನು ಶೀಘ್ರವಾಗಿ ಗುರುತಿಸುವುದು ಬಹಳ ಮುಖ್ಯವಾಗಿದೆ.
ಮಗುವಿನ ಭಾಷಿಕ ಕಲಿಕೆ ವಿಳಂಬವಾಗಿದೆ ಎಂದಾದರೆ ಯಾರನ್ನು ಸಂಪರ್ಕಿಸಬೇಕು? : ನಿಮ್ಮ ಮಗು ವಿಳಂಬ ಮಾತುಗಾರ ಎಂಬುದು ನಿಮ್ಮ ಗಮನಕ್ಕೆ ಬಂದ ಕೂಡಲೇ ಹತ್ತಿರದಲ್ಲಿ ಲಭ್ಯವಿರುವ ಆಸ್ಪತ್ರೆಯಲ್ಲಿ ಇರುವ ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿಸ್ಟ್ (ಎಸ್‌ಎಲ್‌ಪಿ) ಮತ್ತು ಆಡಿಯಾಲಜಿಸ್ಟ್ ಅವರನ್ನು ಸಂಪರ್ಕಿಸಿ. ಆಡಿಯಾಲಜಿಸ್ಟ್ ಶ್ರವಣ ಸಾಮರ್ಥ್ಯ ಪರೀಕ್ಷೆಯನ್ನು ನಡೆಸಿ ಮಗುವಿಗೆ ಶ್ರವಣ ಸಾಮರ್ಥ್ಯ ದೋಷ ಇದೆಯೇ ಇಲ್ಲವೇ ಎಂಬುದನ್ನು ಪತ್ತೆಹಚ್ಚುತ್ತಾರೆ. ನಿಮ್ಮ ಮಗು ಭಾಷಿಕ ಕಲಿಕೆಯ ಮೈಲುಗಲ್ಲುಗಳನ್ನು ಸಾಧಿಸಿದೆಯೇ, ಭಾಷಿಕ ಕಲಿಕೆ ವಿಳಂಬವಾಗಿರುವುದಕ್ಕೆ ಕಾರಣಗಳೇನು ಎಂಬುದನ್ನು ಪತ್ತೆ ಮಾಡುತ್ತಾರೆ, ಮಾತ್ರವಲ್ಲದೆ, ಮಗುವಿಗಿರುವ ಭಾಷಿಕ ಸಮಸ್ಯೆಗಳೇನು ಎಂಬುದನ್ನು ಕಂಡುಹುಡುಕಿ ಅದನ್ನು ಸರಿಪಡಿಸಲು ಏನು ಮಾಡಬಹುದು ಎಂಬುದನ್ನು ಗುರುತಿಸುತ್ತಾರೆ. ಮಗುವಿಗಿರುವ ಭಾಷಿಕ ಸಮಸ್ಯೆಯು ಪತ್ತೆಯಾದ ಬಳಿಕ ಎಸ್‌ಎಲ್‌ಪಿ, ಆಡಿಯಾಲಜಿಸ್ಟ್ ಮತ್ತು ಮಗುವಿನ ಹೆತ್ತವರು ಜತೆಯಾಗಿ ಮಗುವಿನ ಭಾಷಿಕ ಕಲಿಕೆಯನ್ನು ಸರಿಪಡಿಸುವತ್ತ ಕೆಲಸ ಮಾಡಬೇಕಾಗುತ್ತದೆ.
ಸಮಸ್ಯೆಯು ಪತ್ತೆಯಾದ ಕೂಡಲೇ ಭಾಷಿಕ ಚಿಕಿತ್ಸೆಯನ್ನು ಆರಂಭಿಸಬೇಕಾಗುತ್ತದೆ. ಭಾಷಿಕ ಚಿಕಿತ್ಸೆಯು ಔಷಧ ಚಿಕಿತ್ಸೆಯಂತಲ್ಲ; ಅದು ನಿರಂತರ ಪ್ರಕ್ರಿಯೆಯಾಗಿದೆ. ಉತ್ತಮ ಫಲಿತಾಂಶವನ್ನು ಪಡೆಯಬೇಕಾದರೆ ಸ್ಪೀಚ್ ಥೆರಪಿಯು ನಿರಂತರವಾಗಿರಬೇಕು, ನಿಯಮಿತವಾಗಿರಬೇಕು ಮತ್ತು ಎಸ್‌ಎಲ್‌ಪಿಯು ಮಾಡಿರುವ ಶಿಫಾರಸುಗಳನ್ನು ಮನೆಯಲ್ಲಿ ಯಥಾವತ್ ಪಾಲಿಸಬೇಕು. ಮಗುವಿನ ಭಾಷಿಕ ಕಲಿಕೆಯು ವಿಳಂಬವಾಗಿದ್ದರೆ ಅಂಜಬೇಡಿ; ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿಸ್ಟ್ ಉತ್ತಮ ಆಪ್ತಸಮಾಲೋಚನೆ ಮತ್ತು ಚಿಕಿತ್ಸೆಯನ್ನು ಒದಗಿಸುವ ಮೂಲಕ ನಿಮ್ಮ ಮಗುವಿನ ಸಂವಹನ ಸಮಸ್ಯೆಗಳನ್ನು ಪರಿಹರಿಸಬಲ್ಲರು.
ಮಾಯಾ ವರ್ಮಾ
ಕ್ಲಿನಿಕಲ್ ಸೂಪರ್‌ವೈಸರ್,
ಸ್ಪೀಚ್ ಆ್ಯಂಡ್ ಹಿಯರಿಂಗ್ ವಿಭಾಗ,
ಎಂಸಿಎಚ್‌ಪಿ, ಮಾಹೆ, ಮಣಿಪಾಲ