Advertisement
60-70 ರ ದಶಕದ ಸೌಂದರ್ಯದ ಖನಿ, ಆ ದಶಕಗಳ ಹುಡುಗರ ನಿದ್ದೆ ಕೆಡಿಸಿದ್ದ ವಹೀದಾ ರೆಹಮಾನ್, ತಮ್ಮ 85 ರ ಇಳಿಸಂಜೆಯ ದಿನಗಳಲ್ಲಿ ಪ್ರತಿಷ್ಠಿತ “ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಗೆ ಭಾಜನರಾಗಿದ್ದಾರೆ, ಅವರಿಗೆ ಹೃತೂ³ರ್ವಕ ಅಭಿನಂದನೆಗಳು. ನಮ್ಮಲ್ಲಿ ಬಹಳಮಂದಿಗೆ ಗೊತ್ತಿರಲಿಕ್ಕಿಲ್ಲ; ವಹೀದಾ ಅಪ್ಪಟ ದಕ್ಷಿಣ ಭಾರತೀಯ ನಾರಿ. ತಮಿಳುನಾಡಿನ ಚಂಗಲ್‌ಪಟ್ಟುವಿನಲ್ಲಿ 1938ರಲ್ಲಿ, ಸಂಪ್ರದಾಯಸ್ಥ ಮುಸ್ಲಿಂ ಕುಟುಂಬದಲ್ಲಿ ನಾಲ್ಕನೆಯ ಹೆಣ್ಣುಮಗುವಾಗಿ ಜನಿಸಿದ ವಹೀದಾ, ತಂದೆ-ತಾಯಿಯರ ಮುದ್ದಿನ ಮಗಳು. ಸರ್ಕಾರದ ಉನ್ನತ ಹುದ್ದೆಯಲ್ಲಿದ್ದ ತಂದೆ, ಮಕ್ಕಳಿಗೆ ಎಲ್ಲಾ ಪ್ರೋತ್ಸಾಹವನ್ನೂ ನೀಡಿದರು. ವಹೀದಾ ಎಂಟರ ವಯಸ್ಸಿನಲ್ಲಿಯೇ ಭರತನಾಟ್ಯ ಕಲಿತರು. ಪ್ರತಿಷ್ಠಿತ ಕಾನ್ವೆಂಟ್‌ಗಳಲ್ಲಿ ವಿದ್ಯಾಭ್ಯಾಸ ಮಾಡಿದರು.
Related Articles
Advertisement
ವಹೀದಾರ ಪ್ರತಿಭೆ, ಜನಪ್ರಿಯತೆಗಳು ಅಂದಿನ ಚಿತ್ರ ಮಾಂತ್ರಿಕ, ಕನ್ನಡದವರೇ ಆದ ಗುರುದತ್‌ರ ಗಮನ ಸೆಳೆಯಿತು. ಮುಂಬೈ (ಅಂದಿನ ಬಾಂಬೆ) ಗೆ ಆಕೆಯನ್ನು ಕರೆತಂದ ಗುರು, ಆಕೆಯ ಅಭಿನಯದ ಪಟ್ಟುಗಳನ್ನು ತಿದ್ದಿದರು. 1956ರಲ್ಲಿ ದೇವಾನಂದ್ ನಾಯಕರಾಗಿದ್ದ “ಸಿಐಡಿ’ ಚಿತ್ರದಲ್ಲಿ ವಹೀದಾ ಮಿಂಚಿದರು. ದೇವಾನಂದ್-ವಹೀದಾ, ಗುರುದತ್-ವಹೀದಾ ಜೋಡಿ ದೇಶದಾದ್ಯಂತ ಮನೆಮಾತಾಯಿತು.
ನಂತರ ಗುರುದತ್ ನಿರ್ದೇಶಿಸಿದ “ಪ್ಯಾಸಾ’ ದಲ್ಲಿ ವಹೀದಾರಿಗೆ ವೇಶ್ಯೆಯ ಪಾತ್ರ. ಭಾರತೀಯ ಸಿನಿಮಾದ ಮೇರು ಚಿತ್ರಗಳಲ್ಲಿ “ಪ್ಯಾಸಾ’ ಸೇರ್ಪಡೆಯಾಯಿತು. ಭಾರತೀಯ ಸಿನಿಮಾ ಇತಿಹಾಸದ ಮೈಲಿಗಲ್ಲಾಯಿತು. ಗುರುದತ್-ವಹೀದಾ ಜೋಡಿ ಉತ್ತುಂಗ ತಲುಪಿತು. “ಸಾಹೀಬ್ ಬೀಬಿ ಔರ್ ಗುಲಾಮ್’, “ಕಾಗಜ್ ಕೆ ಫೂಲ್’, “ಚೌದ್ವೀನ್ ಕಾ ಚಾಂದ್’ ಚಿತ್ರಗಳು ಗುರುದತ್-ವಹೀದಾ ಜೋಡಿಯನ್ನು ಜನಪ್ರಿಯತೆಯ ಶಿಖರಕ್ಕೇರಿಸಿತು. ವಹೀದಾರಿಗೆ ಗುರುದತ್, ಅಕ್ಷರಶಃ ಗುರುವಾದರು. 1962 ರ “ಬೀಸ್ ಸಾಲ್ ಬಾದ್’ ಚಿತ್ರ ಗಳಿಕೆಯಲ್ಲಿ ದಾಖಲೆಯನ್ನೇ ಸೃಷ್ಟಿಸಿತು. 1965ರ “ಗೈಡ್’, ದೇವಾನಂದ್-ವಹೀದಾ ಇಬ್ಬರ ವೃತ್ತಿ ಜೀವನದ ಮಹತ್ವದ ಚಿತ್ರ. ಕ್ರಮೇಣ ಹಿಂದೆ ಸರಿಯಲಾರಂಭಿಸಿದ ವಹೀದಾ, 80-90 ರ ದಶಕಗಳಲ್ಲಿ ಪೋಷಕ ಪಾತ್ರಗಳ ಕಡೆ ಹೆಚ್ಚು ಗಮನವಹಿಸಿದರು. 1974 ರಲ್ಲಿ ಕಮಲ್‌ಜಿತ್‌ರೊಡನೆ ವಿವಾಹವಾದ ವಹೀದಾ, ಬೆಂಗಳೂರಿನ ತಮ್ಮ ಫಾರ್ಮ್ ಹೌಸ್‌ನಲ್ಲಿಯೇ ಜೀವಿಸಿದರು. “ಬೆಂಗಳೂರು ಬಿಡಲಾರೆ’ ಎಂದು ಹೇಳುತ್ತಿದ್ದ ಅವರು, 2000ರಲ್ಲಿ ಪತಿ ನಿಧನರಾದಾಗ, ಮುಂಬೈಗೆ ವಾಪಸಾದರು.
ತಮ್ಮ ಜೀವನದ ಇಳಿಸಂಜೆಯನ್ನು ಬಾಂದ್ರಾದ ಮನೆಯಲ್ಲಿ ನೆಮ್ಮದಿಯಾಗಿ ಕಳೆಯುತ್ತಿರುವ ವಹೀದಾ, ಈಗಾಗಲೇ ಪದ್ಮಶ್ರೀ, ಪದ್ಮ ಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಈಗ “ದಾದಾ ಸಾಹೇಬ್ ಫಾಲ್ಕೆ’ಯ ಗರಿ ಕೂಡಾ… ಆಕೆಗೆ ಒಳಿತಾಗಲಿ.
-ರಾಘವನ್ ಚಕ್ರವರ್ತಿ