Advertisement

Deepavali: ಕಣ್ಣೀರ ಹಿಂದೊಂದು ಬೆಳಕಿನ ಕಿರಣ…

02:15 PM Nov 12, 2023 | Team Udayavani |

ಆಕಾಶದಲ್ಲಿ ಬೆಳಗು ಮೂಡಿದೆ. ಆಗ ತಾನೇ ಅರಳಿದ ಪುಷ್ಪದಂತೆ ಕಾಣಿಸ್ತಾ ಇರೋ ಇಪ್ಪತ್ತು ಇಪ್ಪತ್ತೂಂದು ವಯಸ್ಸಿನ ಸರಸು ಮನೆ ಮುಂದೆ ರಂಗೋಲಿ ಹಾಕ್ತಿದ್ದಾಳೆ. ಟಿಪ್‌ ಟಾಪಾಗಿ ರೆಡಿಯಾಗಿ ಬರೋ ಅಪ್ಪ ರಂಗೋಲಿ ದಾಟಿ ಮುಂದೆ ಹೋಗ್ತಾ, “ನಾನು ಇವತ್ತು ಮದುವೆ ಆಗಿ ನಿಂಗೆ ಹೊಸ ಅಮ್ಮನ್ನ ಕರ್ಕೊಂಡು ಬರ್ತಾ ಇದ್ದೀನಿ, ಮನೆ ತುಂಬಿಸ್ಕೊಳ್ಳೋಕೆ ರೆಡಿ ಮಾಡಿಡು’ ಅಂತೇಳಿ ಹೊರಡ್ತಾನೆ. ಸರಸುಗೆ ಪಿಚ್ಚೆನಿಸುತ್ತೆ. ನನ್ನ ಮದ್ವೆ ಮಾಡ್ಬೇಕಿದ್ದ ಅಪ್ಪ, ಅವ್ನೆ ಮದುವೆ ಆಗ್ತಾ ಇದ್ದಾನೆ. ಅಮ್ಮ ಸತ್ತು ಇನ್ನೂ ಒಂದು ವರ್ಷ ಆಗ್ಲಿಲ್ಲ ಅಂತ ನೊಂದುಕೊಳ್ತಾಳೆ.

Advertisement

ಮನೆಯ ಒಳಗಡೆ ಬಂದು ಅಮ್ಮನ ಫೋಟೋದ ಮುಂದೆ ನಿಂತು, ನಿನಗೆ ಮರ್ಯಾದೆ ಇರದ ಜಾಗದಲ್ಲಿ ನಾನಿರೋದಿಲ್ಲ ಅಂತ ಫೋಟೋನ ಗೋಡೆಯಿಂದ ತಗೋತಾಳೆ. ಅಮ್ಮ ಸಾಯುವಾಗ, “ಹಣತೆ ಮಾಡಿಟ್ಟಿದ್ದೀನಿ ಪುಟ್ಟಾ, ದೀಪಾವಳಿ ಸಮಯದಲ್ಲಿ ಅದನ್ನ ಮಾರು ಮಗಳೇ. ನಿನ್ನ ಬಾಳು ಬೆಳಕಾಗುತ್ತೆ..’ ಅಂತ ಹೇಳಿದ್ದು ನೆನಪಾಗುತ್ತೆ. ಹೋಗಿ ಸ್ಟೋರ್‌ ರೂಮಲ್ಲಿದ್ದ ಹಣತೆ ತುಂಬಿದ ಚೀಲಾನ ನೋಡ್ತಾಳೆ. ಅಮ್ಮ ಮಾಡಿದ ಹಣತೆಗಳಲ್ಲಿ ಒಂದೆರಡನ್ನು ತಗೊಂಡು ಎದೆಗಪ್ಪಿಕೊಂಡು ಕಣ್ಣೀರು ಹಾಕ್ತಾಳೆ. “ಈ ಮನೇಲಿ ನನ್ನ ಋಣವೂ ಇವತ್ತಿಗೆ ಮುಗೀತು ಅಮ್ಮಾ’ ಅಂತ ಹಣತೆ ತುಂಬಿದ ಚೀಲ ಮತ್ತು ಅಮ್ಮನ ಫೋಟೋದೊಂದಿಗೆ ಮನೆಯಿಂದ ಹೊರಗೆ ಹೋಗ್ತಾಳೆ.

ಸರಸು ರಸ್ತೆ ಬದಿ ಬಂದು ಒಂದು ಬಟ್ಟೆ ಹಾಕಿ ಅದರ ಮೇಲೆ  ಹಣತೆಗಳನ್ನೆಲ್ಲಾ ಹರಡಿಕೊಂಡು ವ್ಯಾಪಾರಕ್ಕೆ ಕುಳಿತುಕೊಳ್ಳುತ್ತಾಳೆ. ಒಂದಿಬ್ಬರು ಬಂದು ಹಣತೆ ತಗೊಂಡು ಹೋಗ್ತಾರೆ. ಆದರೆ ಅಷ್ಟರಲ್ಲಿ ಒಂದು  ಗಾಡಿ ಬಂದು ಮೈಕಲ್ಲಿ, ಬಣ್ಣ ಬಣ್ಣದ ಹಣತೆಗಳು.. ಡಿಸೈನ್‌ ಡಿಸೈನ್‌ ಹಣತೆಗಳು ಕಡಿಮೆ ದರದಲ್ಲಿ ಸಿಗುತ್ತೆ ಅಂತ ಅನೌನ್ಸ್‌ ಮಾಡ್ತಾರೆ. ಸರಸು ಕಡೆಗೆ ಬಂದ ಜನರೆಲ್ಲಾ ಆ ಗಾಡಿ ಕಡೆ ಅಟ್ರ್ಯಾಕ್ಷನ್‌ ಆಗ್ತಾರೆ. ಸರಸು ಹಣತೆಗಳು ವ್ಯಾಪಾರ ಆಗದೆ ಹಾಗೇ ಉಳಿಯುತ್ತೆ. ಮಧ್ಯಾಹ್ನ ಕಳೆದು ಸಂಜೆ ಆಗಿ ಕತ್ತಲು ಆವರಿಸಿ ಬೀದಿ ದೀಪಗಳು ಉರಿಯ ತೊಡಗಿದರೂ ಅವ್ನ ಹಣತೆ ಮಾರಾಟ ಆಗಲ್ಲ. ಬೇಜಾರಾಗುವ ಸರಸು ಎಲ್ಲಿಗೆ ಹೋಗ್ಬೇಕು ಅಂತ ಗೊತ್ತಾಗದೆ ಈಗ ಬೀದಿಯೇ ತನ್ನ ಮನೆ ಅಂತ ಅಮ್ಮನನ್ನ ನೆನೆದು, ಅಲ್ಲೇ ಒಂದು ಹಣತೆಯನ್ನು ಹಚ್ಚಿ ತನ್ನ ದೀಪಾವಳಿಯನ್ನ ಆಚರಿಸುತ್ತಾಳೆ. ದುಃಖಕ್ಕೆ ಕಣ್ಣೀರು ಹಾಕ್ತಾಳೆ. ಅಲ್ಲೇ ಹೋಗುತ್ತಿದ್ದ ಒಬ್ಬ ಫೋಟೋಗ್ರಾಫ‌ರ್‌ ಸರಸು ಕಣ್ಣಿರನ್ನ ಗಮನಿಸಿ ಆ ಕಣ್ಣಿರಲ್ಲಿ ದೀಪದ ಪ್ರತಿಬಿಂಬ ಕಾಣಿಸುತ್ತಿರುವಂತೆ ಫೋಟೋ ಕ್ಲಿಕ್ಕಿಸುತ್ತಾನೆ.

ಮಾರನೇ ದಿನ ತನ್ನ ದೀಪಗಳೊಂದಿಗೆ ಇನ್ನೂ ಅಲ್ಲೇ ಕುಳಿತಿರುವ ಸರಸು ಕಣ್ಣು ಬಿಟ್ಟಾಗ ಅವ್ನ ಮುಂದೆ ಜನಸಾಗರವೇ ನಿಂತಿದ್ದು ಫೋಟೋ ಕಾಂಪಿಟೀಷನ್ನಲ್ಲಿ ಫ‌ಸ್ಟ್‌ ಪ್ರೈಸ್‌ ಬಂದಿದ್ದು ಇವ್ನ ಫೋಟೋಗೇ  ಅಂತ ಮಾತಾಡಿಕೊಳ್ಳುತ್ತಿದ್ದಾರೆ. ಸರಸುಗೆ ಏನೂ ಅರ್ಥ ಆಗ್ತಿಲ್ಲ. ಆಗ ಯಾರೋ ಒಬ್ಬರು ಅವ್ನ ಕಡೆ ನ್ಯೂಸ್‌ ಪೇಪರನ್ನ ಕೊಡ್ತಾರೆ. ನ್ಯೂಸ್‌ ಪೇಪರ್‌ ಮುಖಪುಟದಲ್ಲಿ ಸರಸು ದೀಪದ ಮುಂದೆ ಕಣ್ಣುತುಂಬಿಕೊಂಡಿರುವ ಫೋಟೋ ಇದೆ. ಕೆಳಗಡೆ “ಬೆಳಕಿಗೇ ಕಣ್ಣೀರು !!’ ಅಂತ ಬರೆದಿರುತ್ತೆ. ಸರಸು ಆಶ್ಚರ್ಯದಿಂದ ಅದ್ನ ನೋಡ್ತಾ ಇರಲು ನಿನ್ನೆ ಫೋಟೋ ತೆಗೆದಿದ್ದ ಹುಡುಗ ಬಂದು, “ನಿನ್ನ ಈ ಫೋಟೋದಿಂದ ನಾನು ಗೆದ್ದೆ. ನಿನ್ನನ್ನ ನಾನು ಗೆಲ್ಲಿಸ್ತೀನಿ ಬಾ..’ ಅಂತ ಭರವಸೆ ತುಂಬಿ ಕರೆದಾಗ ಸರಸು ತನ್ನ ಅಮ್ಮ ಮಾಡಿದ ಹಣತೆಯನ್ನೆಲ್ಲಾ ಚೀಲದಲ್ಲಿ ತುಂಬಿಕೊಂಡು ಅವನ ಹಿಂದೆ ಹೋಗ್ತಾಳೆ. ಈಗ ಸರಸು ಕಣ್ಣಲ್ಲಿ ಬೆಳಕಿದೆ.

-ಎಂ. ವಿದ್ಯಾಲಕ್ಷ್ಮೀ ಪ್ರಹ್ಲಾದ್‌, ಬೆಂಗಳೂರು  

Advertisement
Advertisement

Udayavani is now on Telegram. Click here to join our channel and stay updated with the latest news.

Next