Advertisement
ಮಾಲಿನ್ಯವು ಬೆಳಕಿನ ಹಬ್ಬದ ಅವಿಭಾಜ್ಯ ಅಂಗವೇ ಆಗಿಹೋಗಿರುವುದು ದೌರ್ಭಾಗ್ಯ. ವರ್ಷದಲ್ಲೊಮ್ಮೆ ಪಟಾಕಿ ಸಿಡಿಸಿ ಸಂಭ್ರಮಿಸುವ ಹಕ್ಕೂ ನಮಗಿಲ್ಲವೆ ಎಂದು ವಾದಿಸುವವರು ಒಂದುಕಡೆಯಾದರೆ, ಮಾಲಿನ್ಯವು ಕೇವಲ ಪಟಾಕಿಗಳಿಂದಷ್ಟೇ ಉಂಟಾಗುವುದೇ ಎಂದು ಪ್ರಶ್ನಿಸಿ, ಅನ್ಯ ಮಾಲಿನ್ಯಕಾರಕಗಳ ಪಟ್ಟಿ ಮಾಡುವವರು ಇನ್ನೊಂದು ಕಡೆ. ಹೀಗಿರುವಾಗ ತಯಾರಕರಿಂದ ಗ್ರಾಹಕರವರೆಗೆ ಅಪಾಯದ ಸರಪಳಿಯಂತೆ ಸುತ್ತಿಕೊಳ್ಳುವ ಈ ಪಟಾಕಿಗಳಿಂದಾಗುವ ಲಾಭ-ನಷ್ಟಗಳ ಕಡೆ ಕಣ್ಣುಹಾಯಿಸಿದರೆ ಕಾಣುವುದು ಕರಾಳ ಕಥೆ.
Related Articles
Advertisement
ಬೆಳಕು ಶಬ್ದಗಳೊಂದಿಗೆ ಏಳುವ ಹೊಗೆಯನ್ನು ಜನ ಕಡೆಗಣಿಸಿಬಿಡುತ್ತಾರೆ. ಪಟಾಕಿ ಸುಟ್ಟ ಪರಿಣಾಮವಾಗಿ ಸೃಷ್ಟಿಯಾಗುವ ಧೂಮದಿಂದ ಮನುಷ್ಯರಿಗಷ್ಟೇ ಅಲ್ಲ, ಪರಿಸರಕ್ಕೂ ತೊಂದರೆ. ಸುತ್ತಮುತ್ತಲಿನ ವಾತಾವರಣ ಹೊಗೆಯಿಂದ ತುಂಬಿದರೆ, ಮರ-ಗಿಡಗಳು, ಅಮಾಯಕ ಪ್ರಾಣಿ-ಪಕ್ಷಿಗಳು, ಅನೇಕ ಜೀವ-ಜಂತುಗಳು ಉಸಿರಾಡಲು ಕಷ್ಟಪಡುವಂತಾಗುತ್ತದೆ.
ಪಟಾಕಿ ಸಿಡಿದ ಶಬ್ದಕ್ಕೆ, ಬೀರಿದ ಬೆಳಕಿಗೆ ಭಯಪಟ್ಟ ಸಾಕುಪ್ರಾಣಿಗಳು ಅಡಗಲು ಜಾಗ ಹುಡುಕುತ್ತ ಓಡುವುದನ್ನು ಕಾಣಬಹುದು. ಇದು ಮನೆಯವರ ಗಮನಕ್ಕೆ ಬಂದು ಅವರು ಸೂಕ್ತ ಕ್ರಮ ಕೈಗೊಂಡರೆ ತೊಂದರೆಯಿಲ್ಲ. ಆದರೆ ಅವರೂ ಅವುಗಳನ್ನು ಕಡೆಗಣಿಸುವುದು ದುರದೃಷ್ಟಕರ.
ಇಂತಿರುವ ಬೆಳಕಿನ ಹಬ್ಬವು ಅದೆಷ್ಟೋ ಜನರನ್ನು ಅಂಗವಿಕಲಗೊಳಿಸಿ ಆಹುತಿ ಪಡೆದ ಅಸಂಖ್ಯ ಘಟನೆಗಳು ವರ್ಷವರ್ಷವೂ ವರದಿಯಾಗುತ್ತಿವೆಯಾದರೂ ಅದರ ಬಗ್ಗೆ ಎಚ್ಚರಿಕೆ ವಹಿಸುವವರು ಬಹು ವಿರಳ. ಎಲ್ಲರಿಗಿಂತ ಮುಂದೆ ನಿಂತು ಪಟಾಕಿಯ ಬಾಲಕ್ಕೆ ಬೆಂಕಿ ಕೊಡುವುದು ಧೈರ್ಯ-ಶೌರ್ಯಗಳ ಪ್ರಶ್ನೆಯಾದ್ದರಿಂದ ಯಾರೂ ಹಿಂದೆಬೀಳಲು ಬಯಸರು. ತಾವು ಬೆಂಕಿಯೊಂದಿಗೆ ಆಟವಾಡುತ್ತಿದ್ದೇವೆಂದು ತಿಳಿದಿದ್ದರೂ ಕೂಡ ಅಜಾಗರೂಕರಾಗಿ ವರ್ತಿಸಿ ಅದಕ್ಕೆ ತಕ್ಕ ದಂಡ ತೆತ್ತವರೂ ಮರುವರ್ಷ ಅದೇ ತಪ್ಪನ್ನು ಪುನರಾವರ್ತಿಸುತ್ತಾರೆ. ಅದರ ಅಪಾಯವನ್ನು ಅರಿತಿದ್ದರೂ ಕೂಡ ಮಕ್ಕಳನ್ನು ಧೈರ್ಯಶಾಲಿಗಳಾಗಬೇಕೆಂದು ಹುರಿದುಂಬಿಸಿ ಆ ಕಾರ್ಯಕ್ಕೆ ಎಳೆತರುವವರೂ ಇದ್ದಾರೆ. ಸಾಲದ್ದಕ್ಕೆ, ಬೆಕ್ಕು ಶ್ವಾನಗಳಂತಹ ಪ್ರಾಣಿಗಳ ಬಾಲಕ್ಕೆ ಪಟಾಕಿ ಕಟ್ಟಿಯೋ, ಅವುಗಳು ಮಲಗಿದ್ದಲ್ಲಿ ಸಿಡಿಮದ್ದು ಸಿಡಿಸಿಯೋ ವಿಧವಿಧವಾಗಿ ಚಿತ್ರಹಿಂಸೆ ಕೊಟ್ಟು ಶೌರ್ಯದ ಹೆಸರಿನಲ್ಲಿ ಕೌರ್ಯ ಮೆರೆಯುತ್ತಾರೆ. ಅದನ್ನೂ ಸಹ ಆಚರಣೆಯ ಭಾಗವೆಂದು ಪರಿಗಣಿಸಿ ಸಂಭ್ರಮಿಸುವುದು ದುರದೃಷ್ಟಕರ ಸಂಗತಿ.
ಕಲ್ಲುಗಳ ನಡುವಿನ ಹರಳಿನಂತೆ, ತಮ್ಮಿಂದ ಯಾರಿಗೂ ಹಾನಿಯಾಗದಿರಲೆಂದು ಬಯಸುವವರನ್ನು ಕೂಡ ನಾವು ಕಾಣಬಹುದು. ಅಂತಹವರು ಅತಿ ವಿರಳವೆಂದೇ ಹೇಳಬಹುದು. ಕೆಲವೊಂಮೆ ಅಂತಹವರೂ ಕೂಡ ತಿಳಿದೂ ತಪ್ಪು ಮಾಡಿಬಿಡುತ್ತಾರೆ. ಗುಂಪಿನಿಂದ ಭಿನ್ನವಾಗಿ ನಿಲ್ಲುವವರಿಗೆ ಟೀಕೆಗಳು ಕಟ್ಟಿಟ್ಟ ಬುತ್ತಿ ಎನ್ನುವಂತೆ, ಪಟಾಕಿಗೆ ಕಿಚ್ಚನ್ನು ಹಚ್ಚುವವರ ನಡುವೆ ಹಣತೆಯಲ್ಲಿ ಜ್ಯೋತಿ ಬೆಳಗುವವರು ಹಾಸ್ಯದ ವಸ್ತುಗಳಾಗುತ್ತಾರೆ. ಪರಿಸರ ಕಾಳಜಿಯ ಕಾರಣ ಕೊಟ್ಟು ಸಿಡಿಮದ್ದಿನಿಂದ ದೂರ ಸರಿದು, ಅದಕ್ಕೆ ಬೆಂಕಿ ಹಚ್ಚುಲು ಹಿಂಜರಿದರೆ ಹೆದರಿದ ಹೇಡಿಗಳೆಂದು ಅನ್ಯರು ಹಂಗಿಸುವಾಗ ಶೌರ್ಯ ಪ್ರದರ್ಶನಕ್ಕೋಸ್ಕರವಾದರೂ ಒಂದೆರಡು ಸಿಡಿಮದ್ದುಗಳಿಗೆ ಬೆಂಕಿ ಹಚ್ಚುವ ಹುಮ್ಮಸ್ಸು ಬರುವುದು ಸಹಜ. ಹೀಗೆ ಒಲ್ಲದ ಮನಸ್ಸಿನಿಂದಲೇ ಹಾನಿಕಾರಕ ಆಚರಣೆಗಳಿಗೆ ತಮ್ಮ ಕೊಡುಗೆಯನ್ನೂ ಸೇರಿಸಿಬಿಡುತ್ತಾರೆ.
ಇವೆಲ್ಲ ಬಾಯಲ್ಲಿ ಹೇಳಲು ಅಥವ ಪುಸ್ತಕದಲ್ಲಿ ಓದಲಷ್ಟೇ ಚಂದವೆನ್ನುವ ಮನಸ್ಥಿತಿಯ ನಡುವೆ, ಭಿನ್ನವಾಗಿ ನಿಲ್ಲಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಆಗಲೇ ಏನಾದರೂ ಬದಲಾವಣೆ ತರಲು ಸಾಧ್ಯ. ಈ ನಿಟ್ಟಿನಲ್ಲಿ ಇಡಬಹುದಾದ ಮೊದಲ ಹೆಜ್ಜೆಯೆಂದರೆ, ಹಸಿರು ಪಟಾಕಿಯ ಬಳಕೆ. ಅನ್ಯ ಪಟಾಕಿಗಳಿಗಿಂತ ಕಡಿಮೆ ರಾಸಾಯನಿಕಗಳಿಂದ ತಯಾರಿಸಲ್ಪಡುವ ಇವು ಹೊರಸೂಸುವ ಹೊಗೆಯಲ್ಲಿನ ವಿಷಕಾರಿ ಅಂಶದ ಪ್ರಮಾಣ ಕೊಂಚ ಕಡಿಮೆ. ಪಟಾಕಿಗಳೇ ಇಲ್ಲದೆ ಹಬ್ಬವನ್ನಾಚರಿಸುತ್ತೇವೆ ಅಂದರೆ ಅದು ಅತ್ಯುತ್ತಮ. ಇದರಿಂದ ಸಾಂಪ್ರದಾಯಿಕ ರೀತಿಯ ಆಚರಣೆಯ ಅಪೂರ್ವ ಅನುಭವ ಸಿಗುವುದಷ್ಟೇ ಅಲ್ಲದೆ, ಇನ್ನೊಬ್ಬರಿಗೆ ಹಾನಿ ಮಾಡಿ ನಾವು ಖುಷಿಪಡಲಿಲ್ಲವೆಂಬ ಸಂತೃಪ್ತಿಯೂ ಇರುತ್ತದೆ.
ಒಂದೇ ಮಾತಿನಲ್ಲಿ ಹೇಳುವುದಾದರೆ, ತಯಾರಿಸುವ ಕಾರ್ಖಾನೆಗಳಲ್ಲಿ, ಕೂಡಿಡುವ ಅಂಗಡಿಗಳಿಗೆ ಇಲ್ಲವೆ ಕೊಂಡು ತಂದ ಗ್ರಾಹಕರ ಅಂಗಳದಲ್ಲಿ ಅವಾಂತರ ಸೃಷ್ಟಿಸುವ ಪಟಾಕಿಯೆಂಬ ಪಿಶಾಚಿಯನ್ನು ದೂರವಿರಿಸಿ ಹಬ್ಬ-ಹರಿದಿನಗಳನ್ನು ಆಚರಿಸೋಣ.
ಸುಡುವುದಿದ್ದರೆ ದುರ್ಗುಣಗಳನ್ನು ಸುಡೋಣ. ಸಂಭ್ರಮಿಸುವುದಿದ್ದರೆ ಸದ್ಗುಣಗಳನ್ನು ಸಂಭ್ರಮಿಸೋಣ.
-ಮೈತ್ರಿ ಎಸ್. ಅಶ್ವತ್ಥಪುರ
ಸಂತ ಅಲೋಶಿಯಸ್ ಕಾಲೇಜು