ಮೈಸೂರು: ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿ ಷ್ಠಾಪನೆಯಾಗುತ್ತಿರುವ ರಾಮಲಲ್ಲಾನಿಗೂ ಮತ್ತು ಮೈಸೂರಿಗೂ ಅವಿನಾಭಾವ ಸಂಬಂಧವಿದೆ. ಒಂದೆಡೆ ರಾಮಲಲ್ಲಾ ಮೂರ್ತಿಗೆ ಬಳಸಿದ ಕಲ್ಲು ಮೈಸೂರಿನದ್ದಾರೆ, ಮೂರ್ತಿಯನ್ನು ಕೆತ್ತಿದ ಶಿಲ್ಪಿಯೂ ಮೈಸೂರಿನವರೆ ಆಗಿದ್ದಾರೆ.
ಮತ್ತೂಂದೆಡೆ ರಾಮ ವನವಾಸಕ್ಕೆ ಬಂದಾಗ ಮೈಸೂರು ಜಿಲ್ಲೆ ಸಾಲಿಗ್ರಾಮ ಬಳಿಯ ಚುಂಚನಕಟ್ಟೆ ಯಲ್ಲಿ ಚುಂಚ ಮತ್ತು ಚುಂಚಿ ಎಂಬ ಆದಿವಾಸಿಗಳಿಂದ ಆತಿಥ್ಯ ಸ್ವೀಕರಿಸಿ ಕೆಲ ದಿನಗಳ ಕಾಲ ತಂಗಿದ್ದ ಎಂಬ ಐತಿಹ್ಯವಿದೆ. ಇದಕ್ಕೆ ಪೂರಕವಾಗಿ ಇದೇ ಸ್ಥಳದಲ್ಲಿ ಕೋದಂಡರಾಮ ಹೆಸರಿನ ಶ್ರೀರಾಮ ದೇಗುಲ ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ರೂಪುಗೊಂಡಿದೆ.
ದೇಗುಲದಲ್ಲಿ ಕೆಲ ವರ್ಷಗಳ ಹಿಂದೆ 30 ಅಡಿ ಎತ್ತರದ ಬೃಹತ್ ಆಂಜನೇಯಸ್ವಾಮಿ ಮೂರ್ತಿ ಯನ್ನು ಪ್ರತಿಷ್ಠಾಪಿಸಲಾಗಿದ್ದು, ಈ ಮೂರ್ತಿಯನ್ನು ಕೆತ್ತಿದ್ದೂ ಇದೇ ಶಿಲ್ಪಿ ಅರುಣ್ ಯೋಗಿರಾಜ್ ಆಗಿದ್ದಾರೆ. ಪಕ್ಕದಲ್ಲಿ ಕಾವೇರಿ ಆರ್ಭಟಿಸುತ್ತ ಹರಿಯುತ್ತಿದ್ದರೆ, ನದಿಯ ಮೊರೆತ ಇಡೀ ಪ್ರದೇಶವನ್ನಾವರಿಸಿದ್ದರೂ, ದೇಗುಲದ ಗರ್ಭಗುಡಿಯಲ್ಲಿ ಶಾಂತ ಸ್ಥಿತಿ ಇದ್ದು, ನದಿಯ ಆರ್ಭಟದ ಒಂದಿಷ್ಟೂ ಶಬ್ದವೂ ಕೇಳ ಬರದಿರುವುದು ಈ ದೇಗುಲದ ವಿಶೇಷ. ಇದಕ್ಕೂ ಒಂದು ಪ್ರತೀತಿ ಇದ್ದು, ಸೀತಾದೇವಿಯ ನಿರಂತರ ದೂರಿನಿಂದ ರಾಮನು ಬೇಸತ್ತಿದ್ದಾನೆಂದು ತೋರುತ್ತದೆ, ಆದ್ದರಿಂದ ಅವನು ಮಹಿಳೆಯರು ಅನಗತ್ಯವಾಗಿ ಮಾತನಾಡಬಾರದು ಮತ್ತು ಶಬ್ಧ ಮಾಲಿನ್ಯವನ್ನು ಹೆಚ್ಚಿಸಬಾರದು ಎಂದು ಶಾಪ ನೀಡಿದನು. ಇಲ್ಲಿಯವರೆಗೂ ಮಹಿಳೆಯರಿಗೆ ಶಾಪ ತಟ್ಟಿಲ್ಲವೆನಿಸಿದರೂ, ದೇವಸ್ಥಾನದ ಗರ್ಭಗುಡಿಯಲ್ಲಿ ಕಾವೇರಿ ನದಿ (ಮಹಿಳೆ ಎಂದು ಪರಿಗಣಿಸಿ)ಯ ಮೊರೆತ ಕೇಳಿಸುವುದಿಲ್ಲ ಎಂಬ ಮಾತಿದೆ.
ಶ್ರೀರಾಮನ ಬಲಭಾಗದಲ್ಲಿ ಸೀತೆ: ಚುಂಚನಕಟ್ಟೆಯ ಕೋದಂಡರಾಮ ದೇವಸ್ಥಾನದ ಮತ್ತೂಂದು ವಿಶೇಷತೆ ಎಂದರೆ ದೇವಸ್ಥಾನದ ಗರ್ಭ ಗುಡಿಯಲ್ಲಿರುವ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣ ವಿಗ್ರಹ. ಸಾಮಾನ್ಯವಾಗಿ ವಿಶ್ವದ ಎಲ್ಲಾ ಭಾಗದ ರಾಮನ ದೇವಸ್ಥಾನದಲ್ಲಿ ರಾಮನ ಎಡಭಾಗದಲ್ಲಿ ಸೀತೆಯಿರುತ್ತಾಳೆ. ಆದರೆ ಇಲ್ಲಿ ರಾಮನ ಬಲಭಾಗದಲ್ಲಿ ಸೀತೆ ಇರುವುದು ವಿಶೇಷ. ಇದಕ್ಕೆ ಕಾರಣ ತೃಣಬಿಂದು ಮಹರ್ಷಿಗಳು. ರಾಮನ ವಿವಾಹ ಕಾಲದಲ್ಲಿ ಸೀತಾಮಾತೆಯನ್ನು ನಾನು ನಿನ್ನ ಎಡಭಾಗದಲ್ಲಿ ನೋಡಿದ್ದೇನೆ. ಈಗ ನಿನ್ನ ಬಲ ಭಾಗದಲ್ಲಿ ಸೀತೆಯನ್ನು ನಾನು ನೋಡಬೇಕು ಎಂದು ಅಪೇಕ್ಷೆಪಟ್ಟರಂತೆ. ಮಹಾಮುನಿಗಳ ಅಪೇಕ್ಷೆ ನೆರವೇರಿಸಲು ರಾಮನು ಸೀತೆಯನ್ನು ಬಲಭಾಗದಲ್ಲಿ ಲಕ್ಷ್ಮಣನನ್ನು ಎಡಭಾಗದಲ್ಲಿ ನಿಲ್ಲಿಸಿಕೊಂಡು ದರ್ಶನ ನೀಡಿದನಂತೆ. ಹೀಗಾಗಿ ಇಲ್ಲಿನ ರಾಮ, ಸೀತೆ ಮತ್ತು ಲಕ್ಷ್ಮಣರ ವಿಗ್ರಹ ವಿಶೇಷತೆಯಿಂದ ಮೂಡಿಬಂದಿದೆ.
ಇನ್ನು ರಾಮನ ಎಲ್ಲಾ ದೇಗುಲದಲ್ಲೂ ರಾಮನ ನೆಚ್ಚಿನ ಬಂಟ ಹನುಮಂತನನ್ನು ಕಾಣುತ್ತೇವೆ. ಆದರೆ ಕೋದಂಡರಾಮನ ದೇಗುಲದ ಗರ್ಭಗುಡಿಯಲ್ಲಿ ಹನುಮಂತನಿಲ್ಲ. ಇದಕ್ಕೆ ಕಾರಣ ಶ್ರೀರಾಮ ಇಲ್ಲಿಗೆ ಬಂದಾಗ ಇನ್ನು ಕಿಷ್ಕಿಂಧಾ ಪರ್ವತಕ್ಕೆ ಭೇಟಿ ನೀಡಿರಲಿಲ್ಲವಂತೆ. ಹೀಗಾಗಿ ಹನುಮನ ಪರಿಚಯವೂ ಆಗಿರಲಿಲ್ಲವಂತೆ. ವಾಸ್ತವತೆ ಆಧಾರದಲ್ಲಿ ತೃಣಬಿಂದು ಮಹರ್ಷಿಗಳು ಖುದ್ದಾಗಿ ಇಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣರನ್ನು ಪ್ರತಿಷ್ಠಾಪಿಸಿರುವ ಕಾರಣ ಗರ್ಭಗುಡಿಯಲ್ಲಿ ಹನುಮನಿಗೆ ಅವಕಾಶ ನೀಡಿರಲಿಲ್ಲ. ಆದರೆ ಕೋದಂಡರಾಮ ದೇಗುಲದ ಹೊರಗೆ ಹನುಮನ ಗುಡಿಯಿದೆ. ಎಲ್ಲಾ ಕಡೆ ವಿಘ್ನನಿವಾರಕ ಗಣಪನಿಗೆ ಅಗ್ರಪೂಜೆಯಾದರೆ ಇಲ್ಲಿ ಮೊದಲು ಹನುಮನ ದರ್ಶನ ಹಾಗೂ ಪೂಜೆ ಮಾಡಲಾಗುತ್ತದೆ.
ಈ ಪ್ರದೇಶದಲ್ಲಿ ರಾಮನದ್ದೇ ಜಪ : ಶ್ರೀರಾಮ, ಸೀತೆ ಮತ್ತು ಲಕ್ಷ್ಮಣ ಈ ಪ್ರದೇಶಕ್ಕೆ ಭೇಟಿ ನೀಡಿದ್ದ ಎಂದು ಇಂದಿಗೂ ನಂಬಿಕೆ ಇಟ್ಟಿರುವ ಈ ಭಾಗದ ಜನರು ಶ್ರೀರಾಮನ ಹೆಸರುಗಳನ್ನು ಇರಿಸಿಕೊಂಡಿದ್ದಾರೆ. ಕೆ.ಆರ್.ನಗರದಿಂದ ಚುಂಚನಕಟ್ಟೆಗೆ ತೆರಳುವಾಗ ಸಿಗುವ ಶ್ರೀರಾಂಪುರ ಎಂಬ ಗ್ರಾಮವಿದೆ. ಜತೆಗೆ ಈ ತಾಲೂಕಿನ ಹತ್ತಾರು ಅಕ್ಕಿ ಗಿರಣಿಗಳಿಗೆ, ಅಂಗಡಿಗಳಿಗೆ, ಮನೆಗಳಿಗೆ, ಮಕ್ಕಳಿಗೆ ಶ್ರೀರಾಮನ ಹೆಸರಿಟ್ಟಿರುವುದು ವಾಡಿಕೆ. ಉದಾಹರಣೆಗೆ ಶ್ರೀರಾಮ ಅಕ್ಕಿ ಗಿರಣಿ, ಶ್ರೀರಾಮ ನಿವಾಸ, ರಾಮೇಗೌಡ, ರಾಮಶೆಟ್ಟಿ, ರಾಮನಾಯಕ, ರಾಮಯ್ಯ, ಹೆಂಗಸರಿಗೆ ಸೀತಮ್ಮ, ಸೀತೆ ಎಂಬ ಹೆಸರಿಟ್ಟಿರುವುದು ಕಾಣಬಹುದಾಗಿದೆ. ವಿಶೇಷ ಎಂದರೆ ಇದೇ ಊರಿನಲ್ಲಿರುವ ಸಕ್ಕರೆ ಕಾರ್ಖಾನೆಗೆ ಶ್ರೀರಾಮನ ಹೆಸರಿಟ್ಟಿರುವುದು ವಿಶೇಷ.
ಆಕರ್ಷಕ ಕೋಂದಂಡ ರಾಮ ದೇವಸ್ಥಾನ : ದೇವಸ್ಥಾನದ ಮುಂಭಾಗದಲ್ಲಿ ಆಕರ್ಷಕ ವಿಶಾಲ ಗೋಪುರವನ್ನು ಹೊಂದಿದೆ. ವಿಶಾಲ ಪ್ರಾಕಾರದಲ್ಲಿ ಗುಡಿಯನ್ನು ನಿರ್ಮಿಸಲಾಗಿದ್ದು, ದೇವಸ್ಥಾನದ ಒಳಗೆ ಗಣಪತಿ, ಗರುಡ ಸ್ತಂಭ, ವಿಷ್ಣುವಿನ ದಶಾವತಾರ, ರಾಮಾನುಜಾಚಾರ್ಯರು ಹಾಗೂ ವಿಷ್ಣುವಿನ ದ್ವಾರಪಾಲಕರಾದ ಜಯ ವಿಜಯರ ವಿಗ್ರಹಗಳಿವೆ. ಈ ಪ್ರದೇಶದಿಂದ ಹತ್ತು ಕಿ.ಮೀ. ದೂರದಲ್ಲಿ ಮಿರ್ಲೆ ಎಂಬ ಗ್ರಾಮವಿದ್ದು, ಇಲ್ಲಿಯೂ ಶ್ರೀರಾಮನ ದೇಗುಲವಿದೆ. ಹಾಗೆಯೇ ಚುಂಚನಕ್ಕೆಯಿಂದ ಸಾಲಿಗ್ರಾಮ ಮಾರ್ಗವಾಗಿ ಕೊಣನೂರಿಗೆ ತೆರಳವಾಗ ರಾಮನಾಥಪುರ ಎಂಬ ಊರು ಸಿಗಲಿದ್ದು, ಪ್ರಮುಖ ಧಾರ್ಮಿಕ ಪುಣ್ಯ ಸ್ಥಳವಾಗಿ ಮಾರ್ಪಟ್ಟಿದೆ. ಹೀಗೆ ಮುಂದುವರೆದು ಕೊಡಗಿನ ಕುಶಾಲನಗರ ಮಾರ್ಗವಾಗಿ ತೆರಳಿದರೆ ಅಲ್ಲಿ ಸಿಗುವ ಕಣಿವೆ ಎಂಬ ಗ್ರಾಮದಲ್ಲಿಯೂ ರಾಮ ಭೇಟಿ ನೀಡಿದ್ದ ಎಂಬ ನೆನಪಿಗಾಗಿ ಶ್ರೀರಾಮನ ದೇಗುಲ ನಿರ್ಮಿಸಿರುವುದನ್ನು ನೋಡಬಹುದಾಗಿದೆ.
– ಸತೀಶ್ ದೇಪುರ