“ಬಿಗ್ ಬಾಸ್’ ಮನೆಯಿಂದ ಹೊರ ಬಂದ ನಟಿ “ಸ್ಪರ್ಶ’ ರೇಖಾ, ಏಕಾಏಕಿ ನಿರ್ಮಾಣಕ್ಕಿಳಿದರು. ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದ ರೇಖಾ ಅವರಿಗೆ, ಎಲ್ಲೋ ಒಂದು ಕಡೆ ಸಿನಿಮಾದ ಸೆಳೆತವಿತ್ತು. ಒಂದೊಳ್ಳೆಯ ಕಥೆ ಸಿಕ್ಕರೆ ನಿರ್ಮಾಣ ಮಾಡಬೇಕು ಎಂಬ ಆಸೆಯೂ ಅವರೊಳಗಿತ್ತು. ಅದಕ್ಕೆ ತಕ್ಕಂತೆ ಹೊಸಬರ ತಂಡ ಅವರ ಬಳಿ ಒಂದು ಕಥೆ ಹೇಳಿಕೊಂಡಿತು. ಆ ಕಥೆ ಕೇಳಿದ ಸ್ಪರ್ಶ ಅವರು ಗ್ರೀನ್‌ಸಿಗ್ನಲ್ ಕೊಟ್ಟರು.
ಚಿತ್ರಕ್ಕೆ “ಡೆಮೋ ಪೀಸ್’ ಎಂದು ನಾಮಕರಣ ಮಾಡಿ, ಮುಹೂರ್ತವನ್ನೂ ನಡೆಸಿಬಿಟ್ಟರು. ಹೊಸಬರ ಪ್ರಯತ್ನಕ್ಕೆ ಸಾಥ್ ಕೊಟ್ಟ “ಸ್ಪರ್ಶ’ ರೇಖಾ ಅವರು ಸಿನಿಮಾಗಳಲ್ಲಿ ನಟಿಸೋಕೆ ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ದಾರೆ. ಈಗಾಗಲೇ ಅವರು ಸದ್ದಿಲ್ಲದೆಯೇ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಅದು “ಎಂಎಲ್‌ಎ’. ಈ ಚಿತ್ರದಲ್ಲಿ “ಸ್ಪರ್ಶ’ ರೇಖಾ ಅವರ ಪಾತ್ರವೇನು? ಅದಕ್ಕೆ ಉತ್ತರ “ವಿಲನ್’.
ಹೌದು, ರೇಖಾ ಅವರು ಈ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದಾರಂತೆ. ಇದುವರೆಗೆ ರೇಖಾ ಸಾಫ್ಟ್ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದರು. ಆದರೆ, “ಎಂಎಲ್‌ಎ’ ಚಿತ್ರದಲ್ಲಿ ಮಾತ್ರ ವಿಲನ್ ಆಗಿ ನಟಿಸಿದ್ದಾರೆ. ರೇಖಾ ಅವರು ಮೊದಲ ಸಲ ಇಡೀ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಚಿತ್ರದ ನಿರ್ದೇಶಕರು ಹೇಳಿಕೊಂಡರೆ, ರೇಖಾ ಅವರು, “ನಾನು ಇಲ್ಲಿ “ವಿಲನ್’ ಅಲ್ಲ.
ಆದರೆ, ಒಂದು ಸ್ಟ್ರಾಂಗ್ ಪೊಲಿಟಿಕಲ್ ಪಾತ್ರ ನಿರ್ವಹಿಸಿದ್ದೇನೆ. ಅದೊಂದು ರೀತಿ ನೆಗೆಟಿವ್ ಶೇಡ್ ಎನ್ನಬಹುದು ಎಂದು ಹೇಳುವ ಮೂಲಕ ವಿಲನ್ ಪಾತ್ರ ಅಂತ ಒಪ್ಪಿಕೊಳ್ಳುತ್ತಾರೆ. ಅದೇನೆ ಇರಲಿ, ರೇಖಾ ಅವರು “ಎಂಎಲ್‌ಎ’ ಚಿತ್ರದಲ್ಲಿ ಫುಲ್‌ಫ್ಲೆಡ್ಜ್ “ವಿಲನ್’ ಅಂತೂ ಹೌದು. ಅವರನ್ನು ಆ ಪಾತ್ರದಲ್ಲಿ ಕಲ್ಪನೆ ಮಾಡಿಕೊಳ್ಳಲಾಗದಿದ್ದರೂ, ಸಿನಿಮಾ ನೋಡಿದ ಮೇಲೆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ ಅಂದುಕೊಳ್ಳುವುದಂತೂ ಗ್ಯಾರಂಟಿ.
ಅಷ್ಟರಮಟ್ಟಿಗೆ ರೇಖಾ ಕಾಣಿಸಿಕೊಂಡಿದ್ದಾರೆ. ರೇಖಾ ಆ ಚಿತ್ರದ ಪೊಲಿಟಿಕಲ್ ಪಾತ್ರವನ್ನು ಎಂಜಾಯ್ ಮಾಡಿಕೊಂಡು ನಟಿಸಿದ್ದಾರಂತೆ. ನಿಜವಾಗಿಯೂ ಆ ಚಿತ್ರದ ಕೆಲಸ ಖುಷಿಕೊಟ್ಟಿದೆಯಂತೆ. ಒಂದು ಮನರಂಜನೆ ಜೊತೆಗೆ ಕೆಲ ಸಂದೇಶ ಇರುವ ಚಿತ್ರವಿದು ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ ಅವರು.