Advertisement

ಇನ್ನೂ ಪೂರ್ಣ ಪ್ರಮಾಣದಲ್ಲಿ ಓಡಾಡದ ಬಸ್‌

10:30 PM Oct 05, 2020 | mahesh |

ಉಡುಪಿ: ಜನಜೀವನ ಸಹಜ ಸ್ಥಿತಿಯತ್ತ ಬರುತ್ತಿದ್ದರೂ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳಿಗೆ ಆದಾಯದಲ್ಲಿ ಹೊಡೆತ ಬಿದ್ದಿದ್ದು, ಪ್ರಯಾಣಿಕರ ಕೊರತೆ ಎದುರಿಸುತ್ತಿವೆ. ಕಳೆದ ತಿಂಗಳು ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಓಡಾಟ ಆರಂಭಿಸಿದ್ದು, ಈ ನಡುವೆ ಡೀಸೆಲ್‌ ದರದಲ್ಲಿ ಏರಿಕೆಯಾದ ಕಾರಣದಿಂದಲೂ ಬಸ್‌ಗಳನ್ನು ಓಡಾಟ ನಡೆಸಲು ಮಾಲಕರು ಮುಂದಾಗುತ್ತಿಲ್ಲ. ಈಗಾಗಲೇ ಓಡಾಡುತ್ತಿರುವ ಬಸ್‌ಗಳಲ್ಲಿಯೂ ಆದಾಯ ಬಹುತೇಕ ಕ್ಷೀಣವಾಗಿದೆ.

Advertisement

ಕೆಎಸ್‌ಆರ್‌ಟಿಸಿ ಉಡುಪಿ ಘಟಕದ ಆದಾಯಕ್ಕೆ ನಿತ್ಯವೂ ಶೇ. 50ರಿಂದ 60ರಷ್ಟು ಹೊಡೆತ ಬೀಳುತ್ತಿದೆ. ಘಟಕದಲ್ಲಿ ಮಾರ್ಗಸೂಚಿ ಕೆಎಸ್‌ಆರ್‌ಟಿಸಿ ಹಾಗೂ ನರ್ಮ್ ಬಸ್‌ಗಳು ಸೇರಿ 70 ಬಸ್‌ಗಳು ಓಡಾಟ ನಡೆಸುತ್ತಿವೆ. ಬಹುತೇಕ ರೂಟ್‌ಗಳಲ್ಲಿ ಬಸ್‌ಗಳು ಸಂಚರಿಸಿ ದರೂ ಪ್ರಯಾಣಿಕರಿಲ್ಲದೆ ಆದಾಯವೂ ಇಲ್ಲ.

ಖಾಸಗಿ ವಾಹನ ಅವಲಂಬನೆ
ಖಾಸಗಿ ಬಸ್‌ಗಳು ಕೂಡ ಬೆಂಗಳೂರಿನಂತಹ ದೂರ ಪ್ರಯಾಣಕ್ಕೆ ಎಲ್ಲವೂ ತೆರೆದುಕೊಳ್ಳಲಿಲ್ಲ. ಶೇ.40ರಷ್ಟು ದೂರ ಪ್ರಯಾಣದ ಬಸ್‌ಗಳು ನಿಲ್ಲಿಸಿದಲ್ಲೇ ಬಾಕಿ ಯಾಗಿವೆ. ಈಗ ಓಡಾಡುತ್ತಿರುವ ಬಸ್‌ಗಳಲ್ಲೂ ಸರಣಿ ರಜೆಯ ಹೊರತಾಗಿ ಇತರ ದಿನಗಳಲ್ಲಿ ಪ್ರಯಾಣಿಕರ ಕೊರತೆಯಿದೆ. ಅನೇಕರು ಕೊರೊನಾ ಕಾರಣದಿಂದ ಸಾರ್ವತ್ರಿಕ ಸಾರಿಗೆಯನ್ನು ಬಳಸದೆ ತಮ್ಮ ಖಾಸಗಿ ವಾಹನಗಳನ್ನೇ ಬಳಕೆ ಮಾಡುತ್ತಿದ್ದಾರೆ.

ಶಾಲೆ, ಕಾಲೇಜಿಗೆ ಕಾಯುವಿಕೆ
ನವರಾತ್ರಿ ಹಬ್ಬದ ಸಂದರ್ಭ ಜನರ ಓಡಾಟ ಸಹಜ ಸ್ಥಿತಿಗೆ ಬರಬಹುದು, ವ್ಯಾಪಾರ ವಹಿವಾಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಸಾಮಾನ್ಯವಾಗಿ ಸೆಪ್ಟಂಬರ್‌ ಕೊನೆಯ ವಾರ, ಅಕ್ಟೋಬರ್‌ ಮೊದಲ ವಾರ ನವರಾತ್ರಿ ಇರುವ ಕಾರಣ ಆ ದಿನಗಳಲ್ಲಿ ಪ್ರಯಾಣಿಕರ ಓಡಾಟ ಕೂಡ ಹೆಚ್ಚಿರುತ್ತದೆ. ಆದರೆ ಈ ಬಾರಿ ಅಧಿಕ ಮಾಸ ಬಂದ ಕಾರಣ ನವರಾತ್ರಿ ಕೂಡ ಭರ್ತಿ ಒಂದು ತಿಂಗಳು ಮುಂದೆ ಹೋಗಿದೆ. ಕಾಲೇಜುಗಳ ಆರಂಭ ನವೆಂಬರ್‌ನಿಂದಲೇ ಎನ್ನಲಾಗಿದೆ. ವಿದ್ಯಾರ್ಥಿಗಳ ಓಡಾಟ ಆರಂಭವಾದಾಗ ಜನರ ಓಡಾಟ ಕೂಡ ಹೆಚ್ಚಬಹುದು ಎಂದು ಭಾವಿಸಲಾಗಿದೆ.

ನಿಯಮ ಪಾಲನೆ ಅಗತ್ಯ
ಗ್ರಾಮಾಂತರದಿಂದ ನಗರಕ್ಕೆ ಜನ ಬಾರದ ಹೊರತು ನಗರದ ವ್ಯಾಪಾರ, ವಹಿವಾಟಿನಲ್ಲಿ ಏರಿಕೆ ಆಗುವುದಿಲ್ಲ. ಬಸ್‌ಗಳಿಗೂ ಪ್ರಯಾಣಿಕರ ಕೊರತೆ ಕಾಡುತ್ತದೆ. ನಗರದಲ್ಲಿ ಜನ ಕೊರೊನಾ ತಡೆಗಾಗಿ ಕೈಗೊಂಡ ಕ್ರಮಗಳಿಗೆ ಎಲ್ಲ ಸಹಕಾರ ನೀಡಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಸ್ಯಾನಿಟೈಸರ್‌ ಬಳಸಿದರೆ ಇತರೆಡೆಯಿಂದ ಬಂದವರಿಗೂ ವಿಶ್ವಾಸ ಮೂಡಲು ಸಾಧ್ಯವಿದೆ.

Advertisement

ಸೀಮಿತ ಓಡಾಟ
ಬೆಂಗಳೂರಿಗೆ ನಿತ್ಯ ಹೋಗುವ ಎಸಿ ಬಸ್‌ಗಳ ಸಹಿತ ಇತರ ಬಸ್‌ಗಳು ಕೂಡಾ ಪೂರ್ಣ ಪ್ರಮಾಣದಲ್ಲಿ ಓಡಾಟ ನಡೆಸುತ್ತಿಲ್ಲ. ಬೆಂಗಳೂರು, ಮಂಡ್ಯ, ಭಟ್ಕಳ, ಸಿದ್ದಾಪುರ, ಮೊದಲಾದ ಕಡೆಗಳಿಗೆ ಬಸ್‌ಗಳನ್ನು ಸೀಮಿತ ಸಂಖ್ಯೆಯಲ್ಲಿ ಓಡಿಸಲಾಗುತ್ತಿದೆ. ಇನ್ನೂ ಒಂದು ತಿಂಗಳು ಇನ್ನಷ್ಟು ಬಸ್‌ಗಳು ಸಂಚಾರ ಆರಂಭಿಸುವ ನಿರೀಕ್ಷೆ ಇಲ್ಲ. ಈಗಾಗಲೇ ಇರುವ ಬಸ್‌ಗಳ ಆದಾಯ ಸರಿದೂಗದ ಹೊರತು ಇನ್ನಷ್ಟು ನಷ್ಟ ಮಾಡಿಕೊಳ್ಳಲು ನಿಗಮ ಸಿದ್ಧವಿಲ್ಲ.

35 ಖಾಸಗಿ ಸಿಟಿ ಬಸ್‌ಗಳು ಸ್ಥಗಿತ
ಉಡುಪಿ, ಮಣಿಪಾಲ, ಮಲ್ಪೆ, ಕೆಮ್ಮಣ್ಣು ಸಹಿತ ನಗರಾದ್ಯಂತ ಒಟ್ಟು 50 ಖಾಸಗಿ ಸಿಟಿ ಬಸ್‌ಗಳು ಓಡಾಟ ಮಾಡುತ್ತಿವೆ. ಜನಸಂಚಾರ ವಿರಳವಾದ ಕಾರಣ ಇನ್ನೂ 35 ಬಸ್‌ಗಳು ಓಡಾಟ ಮಾಡುತ್ತಿಲ್ಲ.
– ಸುರೇಶ ನಾಯಕ್‌, ಅಧ್ಯಕ್ಷರು, ಸಿಟಿ ಬಸ್‌ ಮಾಲಕರ ಸಂಘ, ಉಡುಪಿ

ಜನವಿರಳ ಕಾರಣ
ಜನಸಂಖ್ಯೆ ವಿರಳವಿರುವ ಕಾರಣದಿಂದಾಗಿ ಎಲ್ಲ ಸರಕಾರಿ ಬಸ್‌ಗಳನ್ನು ಓಡಿಸುವುದು ಅಸಾಧ್ಯವಾಗಿದೆ. ಜನಜೀವನ ಸಹಜ ಸ್ಥಿತಿಗೆ ಬಂದ ಅನಂತರ ಉಳಿದ ಬಸ್‌ಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು.
-ಉದಯ ಕುಮಾರ್‌ ಶೆಟ್ಟಿ, ಡಿಪೋ ಮ್ಯಾನೇಜರ್‌, ಕೆಎಸ್‌ಆರ್‌ಟಿಸಿ, ಉಡುಪಿ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next