ಹಟ್ಟಿಚಿನ್ನದಗಣಿ: ಗ್ರಾಮಕ್ಕೆ ನೀರು ಪೂರೈಸುವ ಓವರ್ ಹೆಡ್ ಟ್ಯಾಂಕ್ ನೀರಿಗೆ ಕಿಡಿಗೇಡಿಗಳು ವಿಷ ಬೆರೆಸಿರುವುದನ್ನು ಪತ್ತೆ ಹಚ್ಚಿದ ನೀರಘಂಟಿ (ವಾಟರ್‌ಮನ್) ಒಬ್ಬರು ತತ್‌ಕ್ಷಣವೇ ಗ್ರಾಮಕ್ಕೆ ನೀರು ಸರಬರಾಜು ತಡೆದು ಸಾವಿರಾರು ಜನರ ಜೀವ ಉಳಿಸಿದ ಘಟನೆ ಸಮೀಪದ ರೋಡಲಬಂಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ತವಗ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ 600ಕ್ಕೂ ಹೆಚ್ಚು ಮನೆಗಳಿದ್ದು, ಸಾವಿರಾರು ಜನ ಇದ್ದಾರೆ.700ಕ್ಕೂ ಹೆಚ್ಚು ಜಾನುವಾರುಗಳಿವೆ. 50 ಸಾವಿರ ಲೀಟರ್‌ನ ಓವರ್ ಹೆಡ್ ನೀರಿನ ಟ್ಯಾಂಕ್ ನಿರ್ಮಿಸಿದ್ದು, ಅಲ್ಲಿಂದಲೇ ಇಡೀ ಗ್ರಾಮಕ್ಕೆ ನೀರು ಪೂರೈಸಲಾಗುತ್ತದೆ.
ಎಂದಿನಂತೆ ಶನಿವಾರ ಸಂಜೆ ನೀರುಘಂಟಿ ಆದಪ್ಪ ಅವರು ಟ್ಯಾಂಕ್‌ನಿಂದ ನೀರು ಬಿಟ್ಟರು. ಆಗ ನೀರಿನಲ್ಲಿ ಕ್ರಿಮಿನಾಶಕದ ವಾಸನೆ ಮೂಗಿಗೆ ಬಡಿದಿದ್ದು, ತತ್‌ಕ್ಷಣ ಜಾಗೃತರಾದರು. ಮನೆಗಳ ನಲ್ಲಿಗಳಲ್ಲಿ ಬರುವ ನೀರನ್ನು ಪರೀಕ್ಷಿಸಿದ್ದು, ನೀರಲ್ಲಿ ಕ್ರಿಮಿನಾಶಕ ಸೇರಿರುವುದು ದೃಢಪಟ್ಟಿತು. ಕೂಡಲೇ ನೀರು ಪೂರೈಕೆ ಬಂದ್ ಮಾಡಿದ್ದಲ್ಲದೇ ಗ್ರಾಮಸ್ಥರಿಗೆ ನೀರು ಬಳಸದಂತೆ ಸೂಚಿಸಿದರು. ರವಿವಾರ ಬೆಳಗ್ಗೆ ಆಗಮಿಸಿದ ಪೊಲೀಸರು ಹಾಗೂ ತಾ.ಪಂ. ಅಧಿಕಾರಿಗಳು ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ರವಾನಿಸಿದ್ದಾರೆ.
ಟ್ಯಾಂಕನ್ನು ಸ್ವಚ್ಛಗೊಳಿಸಿದ್ದು, ಗ್ರಾಮಸ್ಥರಿಗೆ ಸದ್ಯ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕ್ ಬಳಿ ಕಳೆನಾಶಕ್ಕೆ ಬಳಸುವ ಕ್ರಿಮಿನಾಶಕದ ಬಾಟಲಿಗಳು ಪತ್ತೆಯಾಗಿವೆ. ಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದಪ್ಪ ಅವರ ಸಕಾಲಿಕ ಕಾರ್ಯಾಚರಣೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.