ಪಿರಿಯಾಪಟ್ಟಣ: ಬಹುಕಾಲದ ಸಮಸ್ಯೆಗಳಿಗೆ ತಾಲೂಕಿಗೆ ಪ್ರಥಮ ಬಾರಿಗೆ ಆಗಮಿಸುತ್ತಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಂದ ಸ್ಥಳದಲ್ಲೇ ಪರಿಹಾರ ಸಿಗುತ್ತದೆ ಎಂಬ ಮಹತ್ವಾಕಾಂಕ್ಷೆಯಿಂದ ದೂರದ ಊರುಗಳಿಂದ ಬಂದಿದ್ದ ಸಾರ್ವಜನಿಕರಿಗೆ ಸಿಕ್ಕಿದ್ದು ಕೇವಲ ಭರವಸೆ ಹಾಗೂ ನಿರಾಸೆ ಮಾತ್ರ.
ತಾಲೂಕುಪಂಚಾಯಿತಿಸುವರ್ಣಸೌಧದಸಭಾಂಗಣದಲ್ಲಿ ಸೋಮವಾರ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧ್ಯಕ್ಷತೆಯಲ್ಲಿ ನಡೆದ ಸ್ಪಂದನ ಸಭೆಗೆ ಆಗಮಿಸಿದ್ದ ರೈತರು, ವಯೋ ವೃದ್ಧರು, ಅಂಗವಿಕಲರು, ಮಹಿಳೆಯರು ತಮ್ಮ ಸಮಸ್ಯೆಗಳಿಗೆ ಪರಿಹಾರಕಾಣದೇ ನಿರಾಸೆಗೊಂಡರು.
ದೂರುಗಳು: ಜಮೀನಿನ ರಸ್ತೆ ಸಮಸ್ಯೆ, ಜಮೀನಿನ ಪೋಡಿ ವಿಳಂಬ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿನ ಅಕ್ರಮ, ಮಠದ ಹಣ ದುರ್ಬಳಕೆ, ಜಮೀನು ಒತ್ತುವರಿ, ಸ್ಮಶಾನದ ಸಮಸ್ಯೆ, ಕೆರೆ ಒತ್ತುವರಿ, ಮುಖ್ಯಮಂತ್ರಿಗಳ ಪರಿ ಹಾರ ನಿಧಿ, ರೈತ ಆತ್ಮಹತ್ಯೆಯ ಪರಿಹಾರ, ಆಗ್ರಹ, ಪಂಚಾಯಿತಿಗಳಲ್ಲಿ ಹಣ ದುರುಪಯೋಗ, ಅಧಿಕಾರಿಗಳಿಂದ ಕಿರು ಕುಳ, ನಿವೇಶನದ ಸಮಸ್ಯೆ ಕುರಿತು ಸಾರ್ವಜನಿಕರು ಅರ್ಜಿ ಸಲ್ಲಿಸಿದರು.
124 ಅರ್ಜಿ ಸಲ್ಲಿಕೆ: ಸಭೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಮಾತನಾಡಿ, ಜನರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ತಾಲೂಕಿನಿಂದ ಸಮಸ್ಯೆಗಳ ಪರಿಹಾರಕ್ಕಾಗಿ 124 ಅರ್ಜಿಗಳು ಬಂದಿದ್ದು, ಇದರಲ್ಲಿ ಬಹುತೇಕ ಅರ್ಜಿಗಳು ಸರ್ವೆ ಹಾಗೂ ಕಂದಾಯ ಇಲಾಖೆಗೆ ಸೇರಿದ್ದಾಗಿವೆ. ಭೂ ವಿವಾದ ಕುರಿತು ಮೈಸೂರಿನಲ್ಲಿಯೂ ಇಷ್ಟು ಸಮಸ್ಯೆಗಳಿಲ್ಲ, ಮೈಸೂರಿನಲ್ಲಿ ಪರಿಹಾರಕ್ಕಾಗಿ ಬೇಡಿಕೆ ಇಟ್ಟರೆ ಇಲ್ಲಿ ಸರ್ವೆ, ಪೋಡಿ, ಹಾಗೂ ಜಮೀನಿಗೆ ತೆರಳಲು ರಸ್ತೆಯನ್ನು ಬಿಡಿಸಿಕೊಡುವಂತೆ ದೂರುಗಳು ಬಂದಿವೆ. ಆದ್ದರಿಂದ ಸರ್ವೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಕಾರ್ಯೋನ್ಮುಖರಾಗಿ ಜನರ ಸಮಸ್ಯೆಗಳನ್ನುಕೂಡಲೇ ಬಗೆಹರಿಸುವಂತೆ ಸೂಚಿಸಿದರು.
ಆಸ್ಪತ್ರೆ ಸಮಸ್ಯೆ: ಕೋವಿಡ್ ಕೇರ್ ಸೆಂಟರ್ ಅನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತೆರೆದಿರುವ ಕಾರಣ ಸಾರ್ವ ಜನಿಕರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ಭಯ ಪಡುತ್ತಿದ್ದಾರೆ. ಆಸ್ಪತ್ರೆಗೆ ಸಾಮಾನ್ಯ ಚಿಕಿತ್ಸೆಗಾಗಿ ಬರುವ ರೋಗಿಗಳಿಗೂ ಹಾಗೂ ಕೋವಿಡ್ ಚಿಕಿತ್ಸೆಗಾಗಿ ಬರುವ ರೋಗಿಗಳಿಗೂ ಒಂದೇ ದ್ವಾರರದಲ್ಲಿ ಪ್ರವೇಶ ನಿಗದಿ ಮಾಡಿರುವುದರಿಂದ ಜನರು ಆಸ್ಪತ್ರೆಗೆ ಬರಲು ಭಯಪಡುತ್ತಿದ್ದಾರೆ. ಇದಕ್ಕೆ ಪರಿ ಹಾರ ನೀಡಬೇಕು ಎಂದು ಪತ್ರಕರ್ತರು ಕೋರಿಕೆಗೆ ಪ್ರತಿಕ್ರಿಯಿ ಸಿದ ಜಿಲ್ಲಾಧಿಕಾರಿ, ಈ ವಿಚಾರವಾಗಿ ಎರಡು ಬಾರಿ ದೂರುಗಳು ಬಂದಿವೆ.ಕೂಡಲೇ ಆಸ್ಪತ್ರೆಯ ಆಡಳಿತಾಧಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ನೀಡಿ, ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಶರತ್‌ಕುಮಾರ್‌ಗೆ ಎಚ್ಚರಿಕೆ ನೀಡಿದರು.
ಇದಕ್ಕೂ ಮೊದಲು ತಾಲೂಕು ಪಂಚಾಯಿತಿ ಸಭಾಂಗಣದ ಮುಂಭಾಗ ಸಮಸ್ಯೆಗಳನ್ನು ನೋಂದಣಿ ಮಾಡಿಕೊಳ್ಳಲು ಬರುವ ಸಾರ್ವಜನಿಕರಿಗೆ ಇಲಾಖಾವಾರು ಪ್ರತ್ಯೇಕ ಕೌಂಟರ್ ತೆರೆದು ಅವುಗಳಿಗೆ ನಂಬರ್ ನೀಡಲಾಗಿತ್ತು. ಸಭೆಯಲ್ಲಿ ಜಿಪಂ ಸಿಇಒ ಭಾರತಿ, ಹುಣಸೂರು ಉಪ ವಿಭಾಗಾಧಿಕಾರಿ ಬಿ.ಎನ್.ವೀಣಾ, ತಹಶೀಲ್ದಾರ್ ಶ್ವೇತಾ ಎನ್. ರವೀಂದ್ರ, ಉಪ ತಹಶೀಲ್ದಾರ್ ನಿಜಾಮುದ್ದೀನ್, ಶಿರಸ್ತೇದಾರ್ ಶಕೀಲಾ ಬಾನು, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.