Advertisement

ಕರೆಕಿರಿ ಆಗ್ತಿದ್ಯಾ?

10:13 AM Jan 07, 2020 | mahesh |

“ವೈಯಕ್ತಿಕ ಸಾಲ ಬೇಕಾ?’, “ಹೊಸ ವಿಮಾ ಪಾಲಿಸಿ ತಗೆದುಕೊಳ್ಳಿ’, “ಸಿಮ್‌ಕಾರ್ಡ್‌ ಹೊಸ ಆಫ‌ರ್‌ ಇದೆ’ ಇಂಥಾ ಕರೆಗಳನ್ನು ಸ್ಪ್ಯಾಮ್‌ ಕಾಲ್‌ ಎನ್ನುತ್ತಾರೆ. ಇಂಥಾ ಕಿರಿಕಿರಿ ಕರೆಗಳ ಹಾವಳಿ ಹೆಚ್ಚಿರುವ ರಾಷ್ಟ್ರಗಳಲ್ಲಿ ಭಾರತ 5 ಸ್ಥಾನ ಪಡೆದಿದೆ ಎಂದು ಇತ್ತೀಚಿಗೆ ಬಿಡುಗಡೆಯಾದ ಟ್ರೂಕಾಲರ್‌ ಸಮೀಕ್ಷೆಯಿಂದ ತಿಳಿದುಬಂದಿದೆ.

Advertisement

ಇಂಥ ಕರೆಗಳ ಕಿರಿಕಿರಿ ಒಂದು ರೀತಿಯಾದರೆ, “ನಾನು ನಿಮ್ಮ ಬ್ಯಾಂಕಿನ ಅಧಿಕಾರಿ ಮಾತನಾಡುತ್ತಿರುವುದು. ನಿಮ್ಮ ಡೆಬಿಟ್‌/ ಕ್ರೆಡಿಟ್‌ ಕಾರ್ಡ್‌ ಬದಲು ಹೊಸ ಕಾರ್ಡ ಕಳಿಸುತ್ತಿದ್ದೇವೆ. ನಿಮ್ಮ ಹಳೆಯ ಕಾರ್ಡಿನ ಸಂಖ್ಯೆ, ಸಿವಿವಿ ಸಂಖ್ಯೆ, ಎಕ್ಸ್‌ಪೈರಿ ಡೇಟ್‌ ಮೊದಲಾದ ಮಾಹಿತಿ ನೀಡಿ’, “ನೀವು ಪಾಲಿಸಿ ಮಾಡಿಸಿರುವ ವಿಮಾ ಸಂಸ್ಥೆಯ ಕೇಂದ್ರ ಕಚೇರಿಯ ಅಧಿಕಾರಿ ಮಾತನಾಡುತ್ತಿದ್ದೇನೆ. ನಿಮ್ಮ ವಿಮಾ ಪಾಲಿಸಿಗೆ ವಿಶೇಷ ಯೋಜನೆಯಲ್ಲಿ ಇಷ್ಟು ಲಕ್ಷ ರೂಪಾಯಿ ಬೋನಸ್‌ ಬಂದಿದೆ. ನಿಮ್ಮ ಬ್ಯಾಂಕ್‌ ಖಾತೆಯ ವಿವರಗಳನ್ನು ಕೊಡಿ. ನಿಮ್ಮ ಖಾತೆಗೆ ಇವತ್ತೇ ಹಣ ವರ್ಗಾಯಿಸಬೇಕಾಗಿದೆ’- ಈ ರೀತಿ ಗ್ರಾಹಕರನ್ನು ವಂಚಿಸುವ ಕರೆಗಳು ಮತ್ತೂಂದು ರೀತಿಯವು. ಇಂಥ ಕರೆಗಳನ್ನು ನಂಬಿ, ತಮ್ಮ ಬ್ಯಾಂಕ್‌ ಖಾತೆಯಿಂದ ಲಕ್ಷಾಂತರ ರೂಪಾಯಿ ಕಳೆದುಕೊಂಡವರಿದ್ದಾರೆ.

ವಿದೇಶಿ ಕರೆಗಳು
ಇದಲ್ಲದೆ, ಇದರಲ್ಲಿ ಇನ್ನೊಂದು ರೀತಿಯದ್ದಿದೆ. ಸ್ನೇಹಿತರು ಅಥವಾ ಸಹೋದ್ಯೋಗಿಗಳ ದೂರವಾಣಿ ಸಂಖ್ಯೆಯಿಂದ ಕರೆ ಬರುತ್ತದೆ, ಗ್ರಾಹಕ ಆ ಕರೆ ಸ್ವೀಕರಿಸುತ್ತಿದ್ದಂತೆ, ಕಟ್‌ ಆಗುತ್ತದೆ. ನೆಟ್‌ವರ್ಕ್‌ ಸಮಸ್ಯೆ ಇರಬಹುದು ಎಂದು ಆ ಸಂಖ್ಯೆಗೆ ಕರೆ ಮಾಡಿದರೆ “ಈ ದೂರವಾಣಿ ಸಂಖ್ಯೆ ಚಾಲನೆಯಲ್ಲಿ ಇಲ್ಲ’ ಎನ್ನುವ ಸಂದೇಶ ಕೇಳಿಬರುತ್ತದೆ. ಇಂತಹ ದೂರವಾಣಿ ಕರೆಗಳಿಂದಲೇ, ಮಹಿಳೆಯರಿಗೆ ಅಪರಿಚಿತರು ಕರೆ ಮಾಡಿ ಅಸಭ್ಯವಾಗಿ ಮಾತನಾಡುವುದು, ಲೈಂಗಿಕ ಕಿರುಕುಳ ನೀಡುವುದು.

2019ರಲ್ಲಿ 10,000 ಕೋಟಿಗೂ ಹೆಚ್ಚು ಇಂತಹ ದೂರವಾಣಿ ಕರೆಗಳು, ವಿಶ್ವಾದಂತ್ಯ ಗ್ರಾಹಕರನ್ನು ಕಾಡಿವೆ. ಈ ಕರೆಗಳಿಂದ ಕಿರಿಕಿರಿಗೆ ಒಳಗಾದವರು, ಅವರು ಹೇಳಿದ್ದನ್ನು ನಂಬಿ ಮೋಸ ಹೋದವರು ಸಾವಿರಾರು ಜನರು. 2020ರಲ್ಲಿ ಈ ರೀತಿಯ ಕರೆಗಳ ಸಂಖ್ಯೆ ಮತ್ತು ವಂಚನೆಯಿಂದ ಕಳೆದುಕೊಳ್ಳುವ ಹಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅದ್ದರಿಂದ ವಿದೇಶಿ ನಂಬರ್‌ಗಳಿಂದ ಕರೆ ಬಂದಾಗ ತುಂಬಾ ಜಾಗೃತರಾಗಿರಬೇಕು. ಭಾರತದ ಫೋನ್‌ ನಂಬರ್‌ಗಳು “+91′ ನಿಂದ ಶುರುವಾಗುತ್ತವೆ. ಪ್ರತಿಯೊಂದು ದೇಶಗಳೂ ಒಂದೊಂದು ಸಂಖ್ಯೆಯನ್ನು ಹೊಂದಿವೆ. ನಂಬರ್‌ ನೋಡಿ ವಿದೇಶಿ ಕರೆಗಳನ್ನು ಸುಲಭವಾಗಿ ಪತ್ತೆಹಚ್ಚಬಹುದು.

ದೂರು ನೀಡಬಹುದು
ಇನ್ನು ಟೆಲಿ ಮಾರ್ಕೆಟಿಂಗ್‌ ಅಂದರೆ ದೂರವಾಣಿ ಕರೆ ಮಾಡಿ ವಿವಿಧ ಉತ್ಪನ್ನ, ಸೇವೆಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ಸಿಬ್ಬಂದಿಗೆ, ದಿನಕ್ಕೆ ಇಷ್ಟು ಕರೆ ಮಾಡಬೇಕು, ಇಷ್ಟು ವ್ಯವಹಾರ ಮಾಡಬೇಕು ಎಂದು ಟಾರ್ಗೆಟ್‌ ನೀಡುವ ಸಂಸ್ಥೆಗಳು, ಯಾವ ರೀತಿಯ ಟೆಲಿ ಮಾರ್ಕೆಟಿಂಗ್‌ ಕರೆಗಳನ್ನು ಸರ್ಕಾರ ನಿಷೇಧಿಸಿದೆ ಎಂದು ತಿಳಿಸಿ ಹೇಳುವುದಿಲ್ಲ. ನಿಮಗೆ ಟೆಲಿ ಮಾರ್ಕೆಟಿಂಗ್‌ ಕರೆಗಳಿಂದ ಕಿರಿಕಿರಿಯಾದರೆ, ಮೊಬೈಲ್‌ ದೂರವಾಣಿ ಸೇವೆ ನೀಡುವ ಸಂಸ್ಥೆಗೆ ಮತ್ತು ಟ್ರಾಯ್‌ (ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ)ಗೆ ದೂರು ನೀಡಬಹುದು.

Advertisement

ಎಚ್ಚರ ಕಟ್ಟೆಚ್ಚರ!
ಅನಧಿಕೃತ ಜಾಲತಾಣಗಳಿಂದ ನಿಮ್ಮ ಮೊಬೈಲ್‌ ಫೋನ್‌ಗೆ ತಂತ್ರಾಂಶಗಳು, ಆ್ಯಪ್‌ಗ್ಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಡಿ. ಉಚಿತವಾಗಿ ದೊರೆಯುತ್ತಿದೆ ಎಂದು ಪೈರೆಸಿ ತಾಣಗಳಲ್ಲಿ ಪುಸ್ತಕಗಳು, ಚಲನಚಿತ್ರಗಳು, ಹಾಡುಗಳು, ವಿಡಿಯೋ, ಇತ್ಯಾದಿಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದಾಗಲಿ, ಆನ್‌ಲೈನ್‌ನಲ್ಲಿ ನೋಡುವುದಾಗಲಿ ಮಾಡಬೇಡಿ. ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕವಾಗಿ ಕಾಣುವಂತೆ ನಿಮ್ಮ ದೂರವಾಣಿ ಸಂಖ್ಯೆಯನ್ನು ಹಂಚಿಕೊಳ್ಳಬೇಡಿ. ಅನುಮಾನಾಸ್ಪದವಾದ ಕರೆಗಳು, ಅಸಭ್ಯ ಮತ್ತು ಲೈಂಗಿಕ ಕಿರುಕಳ ನೀಡುವ ಕರೆಗಳು ಬಂದಾಗ ತಡಮಾಡದೆ ಸೈಬರ್‌ ಪೊಲೀಸರಿಗೆ ವಿವರಗಳೊಂದಿಗೆ ದೂರು ಸಲ್ಲಿಸಿ. ಇಂತಹ ಅಪರಾಧಿಗಳನ್ನು ಪತ್ತೆ ಮಾಡಿ, ಶಿಕ್ಷೆ ವಿಧಿಸಲು ಅಗತ್ಯವಾದ ತಂತ್ರಜ್ಞಾನವನ್ನು ಸೈಬರ್‌ ಪೋಲಿಸರು ಬಳಸುತ್ತಿದ್ದಾರೆ. ನಮ್ಮನ್ನು ರಕ್ಷಿಸಲು, ಅವರೊಡನೆ ಸಹಕರಿಸಿ. ಅಮೇರಿಕಾದಲ್ಲಿ ರೋಬೋ ಕಾಲ್‌ಗ‌ಳನ್ನು ತಡೆಯಲು ಕಠಿಣವಾದ ಕಾನೂನು ಚಾಲ್ತಿಗೆ ಬಂದಿದೆ. ನಮ್ಮ ದೇಶದಲ್ಲಿ ಕೂಡಾ ಇಂತಹ ಕಠಿಣ ಕಾನೂನುಗಳ ಅಗತ್ಯವಿದೆ.

ಫೋನ್‌ನಲ್ಲಿ ಬ್ಯಾಂಕ್‌ ಡೀಟೇಲ್ಸ್‌ ಕೇಳುವುದಿಲ್ಲ
ಗ್ರಾಹಕರ ದೂರವಾಣಿ ಸಂಖ್ಯೆಯನ್ನು ಸಂಗ್ರಹಿಸಿ, ಸ್ವಯಂಚಾಲಿತ ಫೋನ್‌ ಡಯಲರ್‌ಗೆ ನೀಡಿ, ಅದರ ಮೂಲಕ ಇಂತಹ ಕರೆಗಳನ್ನು ಮಾಡಿಸವುದು ಒಂದು ವಿಧಾನವಾಗಿದೆ. ರೋಬೋ ಕಾಲ್‌ಗ‌ಳೆಂದು ಕರೆಯಲಾಗುವ ಈ ದೂರವಾಣಿ ಕರೆಗಳಲ್ಲಿ, ಬ್ಯಾಂಕು, ವಿಮಾ ಸಂಸ್ಥೆ, ಸರ್ಕಾರದ ಇಲಾಖೆ, ರೆಸಾರ್ಟ್‌, ಹೀಗೆ ವಿವಿಧ ಕಡೆಯಿಂದ ಕರೆ ಮಾಡಿಕೊಳ್ಳುತ್ತಿರುವ ಅಧಿಕಾರಿ ಎಂದು ಹೇಳಿಕೊಂಡು ಗ್ರಾಹಕರ ಜೊತೆ ಮಾತನಾಡುವವರು, ನಕಲಿ ಸಿಬ್ಬಂದಿಯಾಗಿರುತ್ತಾರೆ ಮತ್ತು ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿ ವಂಚಿಸುವುದು ಇವರ ಉದ್ದೇಶವಾಗಿರುತ್ತದೆ. ಯಾವ ಅಧಿಕಾರಿ ಕೂಡಾ ಗ್ರಾಹಕರ ದೂರವಾಣಿ ಕರೆ ಮಾಡಿ ಅವರ ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ ಮಾಹಿತಿ, ಆಧಾರ್‌/ ಪ್ಯಾನ್‌ ಕಾರ್ಡ್‌ ಮಾಹಿತಿ, ಇತ್ಯಾದಿಗಳನ್ನು ಕೇಳಿ ಪಡೆಯುವ ಕೆಲಸ ಮಾಡುವುದಿಲ್ಲ ಎನ್ನುವುದನ್ನು ಸದಾ ನೆನಪಿಡಿ.

Advertisement

Udayavani is now on Telegram. Click here to join our channel and stay updated with the latest news.

Next