Advertisement

ಉಷ್ಣಹವೆ ಅವಘಡಕ್ಕೆ ಸ್ಪೇನ್‌ನಲ್ಲಿ 500ಕ್ಕೂ ಹೆಚ್ಚು ಬಲಿ

09:26 PM Jul 20, 2022 | Team Udayavani |

ಮ್ಯಾಡ್ರಿಡ್‌/ಲಂಡನ್‌: ಸ್ಪೇನ್‌ನಲ್ಲಿ ಕಳೆದ 10 ದಿನಗಳಿಂದ ಆವರಿಸಿದ್ದ ಉಷ್ಣ ಹವೆಯಿಂದಾಗಿ ದೇಶದಲ್ಲಿ 500ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂದು ಅಲ್ಲಿನ ಪ್ರಧಾನಿ ಪೆಡ್ರೊ ಸ್ಯಾಂಚೆಜ್‌ ತಿಳಿಸಿದ್ದಾರೆ.

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತಾಡಿದ ಅವರು, “ಆರೋಗ್ಯ ಇಲಾಖೆ ದಾಖಲೆಗಳ ಪ್ರಕಾರ, ಕಳೆದ 10 ದಿನದಲ್ಲಿ ಉಷ್ಣ ಹವೆಗೆ ಸಂಬಂಧಿಸಿದ ದುರ್ಘ‌ಟನೆಗಳಲ್ಲಿ 500ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಹಾಗಾಗಿ, ನಾಗರಿಕರು ತಮ್ಮ ಸುರಕ್ಷತೆ ಬಗ್ಗೆ ಹೆಚ್ಚು ಜಾಗರೂಕತೆಯಿಂದ ಇರಬೇಕು” ಎಂದಿದ್ದಾರೆ.
ತಜ್ಞರ ಪ್ರಕಾರ, ಸ್ಪೇನ್‌ನ ಕೆಲವು ಭಾಗಗಳಲ್ಲಿ ತಾಪಮಾನ 45 ಡಿ.ಸೆ.ನಷ್ಟು ಹೆಚ್ಚಾಗಿದ್ದು ಕಾಡ್ಗಿಚ್ಚು, ಅಗ್ನಿ ಅವಘಡದಂಥ ದುರ್ಘ‌ಟನೆಗಳು ಸಂಭವಿಸಿವೆ.

ಗ್ರೀಕ್‌ನಲ್ಲಿ ಕಾಡ್ಗಿಚ್ಚು
ಸ್ಪೇನ್‌ ಮಾತ್ರವಲ್ಲದೆ, ಇಡೀ ಯೂರೋಪ್‌ನಲ್ಲಿ ಉಷ್ಣ ಹವೆ ಮುಂದುವರಿದಿದೆ. ಗ್ರೀಕ್‌ನ ರಾಜಧಾನಿ ಅಥೆನ್ಸ್‌ನ ಹೊರವಲಯದಲ್ಲಿ ಉಷ್ಣ ಹವೆಯಿಂದ ಸೃಷ್ಟಿಯಾದ ಕಾಡ್ಗಿಚ್ಚು ಆ ಭಾಗದ ಮನೆಗಳನ್ನು ಆಹುತಿ ಪಡೆದಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಆರಿಸಲು ಹರಸಾಹಸ ಮಾಡುತ್ತಿದ್ದಾರೆ. ಆ ಪ್ರಾಂತ್ಯದಲ್ಲಿದ್ದ ಹಲವಾರು ಜನರನ್ನು ತೆರವುಗೊಳಿಸಲಾಗಿದೆ.

ಲಂಡನ್‌ನಲ್ಲಿ 41 ಮನೆ ಭಸ್ಮ
ಲಂಡನ್‌ನ ಕಾನ್ಸಿಂಗ್ಸ್‌ ಬೈನಲ್ಲಿ ಬುಧವಾರ ದಾಖಲಾದ 40.3 ಡಿ.ಸೆ. ಉಷ್ಣಾಂಶದಿಂದ 41 ಮನೆಗಳು ಸುಟ್ಟು ಭಸ್ಮವಾಗಿವೆ. ಪೂರ್ವ ಲಂಡನ್‌ನಲ್ಲಿ ಒಣ ಹುಲ್ಲುಗಾವಲಿಗೆ ತಗುಲಿದ ಬೆಂಕಿಯಿಂದಾಗಿ ವೆನ್ನಿಗ್ಟನ್‌ ಎಂಬ ಹಳ್ಳಿಯ ಎಲ್ಲಾ ಮನೆಗಳು ನಿರ್ನಾಮವಾಗಿವೆ. ಗಾಸಿಲಿಯಾ ಪ್ರಾಂತ್ಯದಲ್ಲಿ 85 ಮನೆಗಳು ಸುಟ್ಟುಹೋಗಿ, 1,400 ಜನರನ್ನು ಸ್ಥಳಾಂತರಿಸಲಾಗಿದೆ.

ಫ್ರಾನ್ಸ್‌ನಲ್ಲಿ ಅರಣ್ಯ ಭಾಗಶಃ ನಾಶ
ಫ್ರಾನ್ಸ್‌ನ ನೈರುತ್ಯ ಭಾಗದಲ್ಲಿರುವ ಗಿರೊಂಡೆ ಅರಣ್ಯ ಪ್ರದೇಶದಲ್ಲಿ ಉಷ್ಣಹವೆಯಿಂದ ಕಾಣಿಸಿಕೊಂಡಿರುವ ಕಾಡ್ಗಿಚ್ಚನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಬೆಂಕಿಯ ದೈತ್ಯ ಕೆನ್ನಾಲಿಗೆಗಳು ದಶದಿಕ್ಕುಗಳಿಗೂ ಹರಡುತ್ತಾ ಇಡೀ ಅರಣ್ಯವನ್ನು ಆಪೋಶನ ತೆಗೆದುಕೊಳ್ಳಲಾರಂಭಿಸಿದೆ.

Advertisement

ಮುಗಿಲೆತ್ತರದವರೆಗೂ ಧೂಮ ಆವರಿಸಿದ್ದು, ಅದರ ನಡುವೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next