ಬೆಂಗಳೂರು: ಮುಂಬರುವ ದಿನಗಳಲ್ಲಿ ಅಮೆರಿಕ ಮತ್ತು ಭಾರತ ಬಾಹ್ಯಾಕಾಶ ಪರಿಶೋಧನೆಯಲ್ಲಿ ಪಾಲುದಾರರಾಗಿ ಒಟ್ಟಿಗೆ ಸಾಗುತ್ತವೆಂಬ ವಿಶ್ವಾಸ ನನಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್‌ಎಸ್)ದಲ್ಲಿರುವ ರಾಷ್ಟ್ರೀಯ ಪ್ರಯೋಗಾಲಯದಲ್ಲಿ ಸಂಶೋಧನೆಗೆ ಇಸ್ರೋ ಮನವಿ ಮಾಡಿದರೆ ಭಾರತೀಯ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವ ವಿಫುಲ ಅವಕಾಶಗಳಿವೆ ಎಂದು ಯುಎಸ್ ಬಾಹ್ಯಾಕಾಶ ಪ್ರತಿನಿಧಿ ಮತ್ತು ನಾಸಾ ಮಾಜಿ ಆಡಳಿತಾಧಿಕಾರಿ ಮೆ. ಜನರಲ್ ಚಾರ್ಲ್ಸ್ ಫ್ರಾಂಕ್ ಬೊಲ್ಡನ್ ತಿಳಿಸಿದರು.
ರಾಮಯ್ಯ ತಾಂತ್ರಿಕ ಮಹಾ ವಿದ್ಯಾಲಯ (ಆರ್‌ಐಟಿ) ಮತ್ತು ಚೆನ್ನೈ ಅಮೆರಿಕ ಕಾನ್ಸುಲೆಟ್ ಜನರಲ್ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗಾಗಿ ಆರ್‌ಐಟಿ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ “ಎಂಜಿನಿಯರಿಂಗ್ ಚಾಲೆಂಜಸ್ ಲುಕಿಂಗ್ ಟು ಫ್ಯೂಚರ್ ಸ್ಪೇಸ್‌ಎಕ್ಸ್‌ಪ್ಲೊರೇಷನ್ ಮತ್ತು ಟ್ರಾವೆಲ್’ ಕುರಿತು ಮಾತನಾಡಿದರು.
ಬಾಹ್ಯಾಕಾಶ ಕ್ಷೇತ್ರದಲ್ಲಿ ಗಗನಯಾತ್ರಿಯಾಗಲು ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿದ್ದು, ಇದನ್ನು ಉಪಯೋಗಿಸಿಕೊಳ್ಳಬೇಕಾಗಿದೆ. ಇಂದು ಸಾಮಾನ್ಯ ಪ್ರಜೆಯೂ ಗಗನಯಾತ್ರಿಯಾಗಬಹುದು. ಪ್ರಸ್ತುತ ಇಸ್ರೋ ಗಗನಯಾತ್ರಿಗಳ ಆಯ್ಕೆಗೆ ಮುಂದಾಗಿದ್ದು, ನಾಸಾದಲ್ಲೂ ಈ ಪ್ರಕ್ರಿಯೆ ನಡೆಯಲಿದೆ ಎಂದರು. ನಂತರ ಆರ್‌ಐಟಿ, ಆರ್‌ವಿಸಿಇ, ಬಿಎಂಎಸ್‌ಸಿಇ, ಬಿಎನ್‌ಎಂಐಟಿ, ಎನ್‌ಎಂಐಟಿ, ಪಿಇಎಸ್ ವಿವಿ, ರಾಮಯ್ಯ ವಿಶ್ವವಿದ್ಯಾಲಯ ಹಾಗೂ ವಿಟಿಯು ಅಧೀನದ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳೊಡನೆ ನೇರ, ವಿಡಿಯೋ ಸಂವಾದ ನಡೆಸಿದರು.
ಗೋಕುಲ ಎಜುಕೇಷನ್ ಫೌಂಡೇಷನ್‌ನ ಗೌ.ಅಧ್ಯಕ್ಷ ಡಾ.ಎಂ.ಆರ್.ಜಯರಾಂ, ಆರ್‌ಐಟಿ ಗೌ.ಉಪಾಧ್ಯಕ್ಷ ಎಂ.ಆರ್.ಸೀತಾರಾಮ್, ಜಿಇಎಫ್ ಗೌ.ಕಾರ್ಯದರ್ಶಿ ಮತ್ತು ಆರ್‌ಐಟಿ ನಿರ್ದೇಶಕ ಎಂ.ಆರ್. ರಾಮಯ್ಯ, ರಾಮಯ್ಯ ಸಮೂಹದ ನಿರ್ದೇಶಕ ಆನಂದ ರಾಮ್, ಜಿಇಫ್ ಮುಖ್ಯ ಕಾರ್ಯನಿರ್ವಾಹಕ ಬಿ.ಎಸ್.ರಾಮಪ್ರಸಾದ್, ಆರ್‌ಐಟಿ ಪ್ರಿನ್ಸಿಪಾಲ್ ಡಾ. ಎನ್.ವಿ.ಆರ್. ನಾಯ್ಡು,
ಅಮೆರಿಕ ಕಾನ್ಸುಲೆಟ್ ಜನರಲ್‌ನ ಸಾರಾ ಗೀನ್‌ಗಾಸ್, ಸಿಟ ಫ್ಯಾರ್ರೆಲ್, ಚೆನ್ನೈ ಯುಎಸ್ ಕಾನ್ಸುಲೆಟ್ ಜನರಲ್ ಜಾರ್ಜ್ ಮ್ಯಾಥ್ಯೂ ಇತರರು ಭಾಗವಹಿಸಿದ್ದರು. ಈ ವೇಳೆ ಮೆ. ಜನರಲ್ ಚಾರ್ಲ್ಸ್ ಫ್ರಾಂಕ್ ಬೊಲ್ಡನ್ ಅವರಿಗೆ ಹಾಗೂ ಚೆನ್ನೈ ಯುಎಸ್ ಕಾನ್ಸುಲೆಟ್ ಜನರಲ್ ಅವರಿಗೆ ರಾಜ್ಯದ ಪರವಾಗಿ ಎಂ.ಆರ್.ಸೀತಾರಾಮ್ ಅವರು ಧನ್ಯವಾದ ತಿಳಿಸಿದರು.