Advertisement

ಎದುರು ಹಲ್ಲಿನ ಮಧ್ಯೆ ಅಂತರ ಅಥವಾ ಜಾಗ

06:00 AM Jul 15, 2018 | |

ಎದುರು ಹಲ್ಲಿನ ಮಧ್ಯೆ “ಅಂತರ’’ ಅಥವಾ “ಜಾಗ’’ವಿರುವುದು ಕೆಲವರಿಗೆ ಮುಖಲಕ್ಷಣವಿರಬಹುದು. ಕೆಲವರಿಗೆ ಅದೃಷ್ಟದ ಸಂಕೇತ ಎನ್ನುವವರೂ ಇದ್ದಾರೆ. ಆದರೆ ಬಹುತೇಕ ಮಂದಿಗೆ ಇದು ನೋಡಲು ಚೆಂದ ಕಾಣದೇ ಅಂದದ ನಗುವಿಗೆ, ತೊಂದರೆಯೂ ಕೂಡ. ತಮಾಷೆಗಾಗಿ ಪ್ರಾಯದ ಹೆಣ್ಣುಮಕ್ಕಳಿಗೆ ಏನೂ ಗಂಡನಿಗೆ ಹಲ್ಲಿನ ಮಧ್ಯ ಜಾಗ ಬಿಟ್ಟಿದ್ದೀಯಾ? ಎನ್ನುವಾಗ ಹೆಚ್ಚಿನವರಿಗೆ ಮುಜುಗರ, ನಾಚಿಕೆ ಮತ್ತು ಇಂತಹ ಹೇಳಿಕೆಗಳಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂದು ತಿಳಿಯುತ್ತಾರೆ.  ಇದಕ್ಕೆ ಚಿಕಿತ್ಸೆಯಿದೆ. ಮತ್ತು ಸೂಕ್ತ ಚಿಕಿತ್ಸೆಯಿಂದ ಈ ಜಾಗವನ್ನು ಮುಚ್ಚಬಹುದು. ಆದರೆ ಈ ಹಲ್ಲಿನ ಮಧ್ಯೆ ಇರುವ / ಉದ್ಭವಿಸಿದ ಜಾಗಕ್ಕೆ ಕಾರಣಗಳೇನು ? ಮತ್ತೆ ಇದಕ್ಕೆ ಸರಿಯಾಗಿ ಚಿಕಿತ್ಸೆ ಕೂಡ ಮಾಡಬಹುದೇ? ಎದುರು ಹಲ್ಲಿನ ಮಧ್ಯೆ ಇರುವ ಜಾಗಕ್ಕೆ ದಂತ ವಿಜ್ಞಾನದಲ್ಲಿ   ‘‘Midline Diastema’’(ಮಿಡ್‌ಲೈನ್‌ ಡೈಯಾಸ್ಟಿಮಾ). ಅಂದರೆ, ಮುಖದ ಮಧ್ಯಭಾಗದಲ್ಲಿ ಒಂದು ಗೆರೆ ಎಳೆದರೆ ಅದರ ಆಚೆ, ಈಚೆ ಇರುವ ಬಾಚಿಹಲ್ಲುಗಳ ಮಧ್ಯೆ ಕಾಣಸಿಗುವ ಅಂತರ.

Advertisement

ಈ ಎದುರು ಹಲ್ಲಿನ ಮಧ್ಯ ಕಾಣುವ ಜಾಗ ಹಲ್ಲು ಬರುವ/ಬೆಳೆಯುವ ಸಮಯದಲ್ಲಿ ಎಲ್ಲಾ ಶಾಶ್ವತ ಹಲ್ಲುಗಳು ಸಂಪೂರ್ಣವಾಗಿ ಸಹಜಸ್ಥಿತಿಗೆ (Occlusion)  ಬರುವ ಮುಂಚೆ, ಅಂದರೆ ಸಾಧಾರಣ 9ರಿಂದ 12ನೇ ಪ್ರಾಯದ ಮಕ್ಕಳಲ್ಲಿ ಕಾಣುವುದು ಸಹಜ. ಈ ಹಲ್ಲಿನ ಮಧ್ಯ ಜಾಗ ಇರುವ ಸ್ಥಿತಿಯನ್ನು ““Ugly Duckling” ಹಂತವೆಂದು ಹೇಳುತ್ತಾರೆ. ಶಾಶ್ವತ ಕೋರೆಹಲ್ಲುಗಳು, ವಸಡಿನಿಂದ ಹೊರ ಬರುವಾಗ ಉಂಟಾಗುವ, ಒತ್ತಡದಿಂದ, ಬಾಚಿಹಲ್ಲುಗಳ ಬೇರಿನ ಮೇಲೆ ಪರಿಣಾಮ ಬೀರಿ, ಹಲ್ಲುಗಳು ದೂರ ಸರಿಯುತ್ತವೆ ಮತ್ತು ಕ್ರಮೇಣ ಕೋರೆಹಲ್ಲುಗಳು, ಸಹಜಸ್ಥಿತಿಗೆ ಬಂದ ನಂತರ ಈ ಹಂತದ ಅಥವಾ ಜಾಗ ಕಡಿಮೆಯಾಗುವುದು.

ಆದರೆ ಕೆಲವೊಮ್ಮೆ, ಈ ಹಂತ ಕಳೆದರೂ ಹಲ್ಲಿನ ಮಧ್ಯ ಜಾಗ ಉಳಿಯುವುದು. ಇದಕ್ಕೆ ಬೇರೆ ಬೇರೆ ಕಾರಣಗಳಿರುತ್ತವೆ ಮತ್ತು ಅದಕ್ಕೆ ಸರಿಯಾಗಿ ಬೇರೆ ಬೇರೆ ಹಂತದ ಚಿಕಿತ್ಸೆಯೂ ಇರುವುದು.

ಮೇಲಿನ ತುಟಿಯಿಂದ ವಸಡಿಗೆ ಅಂಟಿಕೊಂಡಿರುವ ಬಾಚಿ ಹಲ್ಲುಗಳ ಮಧ್ಯ ಇರುವ “ಮಾಂಸದ ಪದರ’’ (Labial Frenum) ನಿಮ್ಮ ತುಟಿಯ ಚಲನೆಗೆ ಸಹಾಯ ಮಾಡುವುದು, ಈ ಮಾಂಸದ ಪದರವು ಬಹುತೇಕ ಜನರಲ್ಲಿ ತುಟಿಯಿಂದ, ವಸಡಿನ ಮೇಲೆ ಸಾಧಾರಣ ವಸಡು ಮತ್ತು ಬಾಯಿಯ ಒಣಚರ್ಮದ (Mucosa)  ಸೇರುವಿಕೆಯ ಭಾಗ (ಜಂಕ್ಷನ್‌)ದಲ್ಲಿ ಇರುತ್ತದೆ. ಕೆಲವರಲ್ಲಿ ಇದು ತೆಳುವಾಗಿಯೂ, ಇನ್ನು ಕೆಲವರಲ್ಲಿ ಇದು ದಪ್ಪವಾಗಿಯೂ ಇದ್ದು, ಎರಡು ಹಲ್ಲಿನ ಮಧ್ಯೆ ಇರುವ ವಸಡಿನ ಭಾಗಕ್ಕೆ ಅಂಟಿಕೊಂಡಿರುವುದಲ್ಲದೇ, ಒಳಭಾಗಕ್ಕೂ ತಾಗಿರುತ್ತದೆ. ಈ ದಪ್ಪ ಮಾಂಸದ ಪದರದ, ಒತ್ತಡದಿಂದ ಹಲ್ಲಿನ ಮಧ್ಯೆ ಕ್ರಮೇಣ ಜಾಗವಾಗಿ ಹಲ್ಲು ದೂರವಾಗುತ್ತದೆ. ಇಂತಹ ಸನ್ನಿವೇಶದಲ್ಲಿ, ಮೊದಲನೆಯದಾಗಿ ಇದನ್ನು ವಕ್ರತುಂಡ ತಜ್ಞರ (Orthodontist) ಸಲಹೆಯ ಮೇರೆಗೆ, ಈ ದಪ್ಪ  ಮಾಂಸದ ಪದರವನ್ನು ಸಣ್ಣ ಶಸ್ತ್ರಚಿಕಿತ್ಸೆಯಿಂದ ತೆಗೆಯಬಹುದು. ಅಥವಾ, ಹಲ್ಲಿಗೆ ಸರಿಗೆ ಹಾಕಿ, ಈ ಹಲ್ಲುಗಳನ್ನು ಒಟ್ಟುಗೂಡಿಸಿ, ನಂತರ ಬೇಕಾದಲ್ಲಿ ದಪ್ಪ ಮಾಂಸದ ಪದರವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಸಬಹುದು. ಮತ್ತು ಈ ಜಾಗ ಮರುಕಳಿಸದ ಹಾಗೆ ವಕ್ರದಂತ ತಜ್ಞರು, ಹಲ್ಲಿನ ಒಳಭಾಗದಲ್ಲಿ ಶಾಶ್ವತವಾಗಿ ಒಂದು ಸರಿಗೆಯಿಡುತ್ತಾರೆ.

ಬಾಯಿಯ ಕೆಲವು ಅಭ್ಯಾಸಗಳು ಮತ್ತು ಹಲ್ಲಿನ ಮಧ್ಯೆ ಜಾಗ ಚಿಕ್ಕ ಪ್ರಾಯದಲ್ಲಿ ಮಕ್ಕಳಲ್ಲಿ ಬೆರಳು ಚೀಪುವ ಅಭ್ಯಾಸ, ಅಥವಾ ನಾಲಿಗೆಯನ್ನು ಕೆಳಗಿನ ಅಥವಾ ಮೇಲಿನ ಹಲ್ಲಿಗೆ ಒತ್ತುವ ಅಭ್ಯಾಸ ಅಥವಾ ಬಾಯಿಯಿಂದ ಉಸಿರಾಡುವ ಅಭ್ಯಾಸ ಇದ್ದವರಲ್ಲಿ, ಅಭ್ಯಾಸವು ಬೆಳೆದಂತೆ ಮೇಲಿನ ಹಲ್ಲಿನ ಮಧ್ಯೆ ಜಾಗವು ಹೆಚ್ಚಾಗುವುದು. ಈ ಅಭ್ಯಾಸ ಇರುವುದನ್ನು ಚಿಕ್ಕ ಪ್ರಾಯದಲ್ಲೇ ಹದ್ದುಬಸ್ತಿಗೆ ಇಟ್ಟರೆ, ಅಥವಾ ದಂತ ವೈದ್ಯರಲ್ಲಿ ತೋರಿಸಿ ಚಿಕಿತ್ಸೆ ಮಾಡಿಕೊಂಡಲ್ಲಿ ಹಲ್ಲಿನ ಮಧೆೆÂ ಜಾಗ ಬರಲಾರದು. ಆದರೆ, ಈ ಅಭ್ಯಾಸವು ಪ್ರಾಯ ಬಂದಾಗಲೂ, ಮುಂದುವರಿದಲ್ಲಿ ಇದಕ್ಕೆ, ಈ ಅಭ್ಯಾಸ ಬಿಡಿಸುವ ಕೆಲವು ಸಾಧನಗಳ ಸಹಾಯದಿಂದ ಮಕ್ಕಳ ಹಲ್ಲು ರೋಗ ತಜ್ಞರು ಮತ್ತು ದಂತ ವಕ್ರ ಸರಿಪಡಿಸುವ ತಜ್ಞರು, ಚಿಕಿತ್ಸೆ ಮಾಡಿ ಸರಿಪಡಿಸುವರು.

Advertisement

ಈ ಎರಡು ಹಲ್ಲಿನ ಮಧ್ಯೆ ಇರುವ ಕೆಲವು ಬೇರೆ ದೈಹಿಕ ಅಡ್ಡಿಗಳಿಂದ – ಕೆಲವರಲ್ಲಿ ಎರಡು ಹಲ್ಲಿನ ಮಧ್ಯೆ, ಸಣ್ಣ ಹೆಚ್ಚುವರಿ ಹಲ್ಲುಗಳು ಬರುವುದರಿಂದ (Supernumery Teeth) /ಇರುವುದರಿಂದ ಎರಡು ಹಲ್ಲಿನ ಮಧ್ಯೆ ಬಾಚಿಹಲ್ಲು ಒಟ್ಟುಗೂಡಲಾಗದೇ ಹಲ್ಲಿನ ಮಧ್ಯೆ ಜಾಗ ಕಾಣಿಸಿಕೊಳ್ಳುವುದು.

ಹಲ್ಲು ಚಿಕ್ಕದು/ದವಡೆ ದೊಡ್ಡದು, ಅಥವಾ ದವಡೆ ಸರಿಯಾದ ಗಾತ್ರವಿದ್ದು ಹಲ್ಲು ಚಿಕ್ಕದಾಗಿರುವುದು…… ನಮಗೆ, ನಮ್ಮ ದೇಹದ ಇತರೇ ಅಂಗಗಳಂತೆ, ದವಡೆ/ಹಲ್ಲುಗಳು ನಮ್ಮ ತಂದೆ/ತಾಯಿಯವರಂತೆಯೇ ಬರುವುದು ಸಹಜ. ಕೆಲವೊಮ್ಮೆ ತಂದೆಯ ದವಡೆಯ ಗಾತ್ರ ಮತ್ತು ತಾಯಿಯ ಹಲ್ಲುಗಳು ಬಂದಲ್ಲಿ ದೊಡ್ಡ ದವಡೆಗೆ ಚಿಕ್ಕ ಹಲ್ಲುಗಳು ಕೂಡಿ ಹಲ್ಲಿನ ಮಧ್ಯೆ ಜಾಗ ಕಂಡುಬರುವುದು. ಇಲ್ಲದೇ ದವಡೆ ಸರಿಯಾದ ಗಾತ್ರವಿದ್ದರೂ, ಹಲ್ಲು ಚಿಕ್ಕದಾಗಿರುವುದರಿಂದ ಹಲ್ಲಿನ ಮಧ್ಯೆ ಜಾಗ ಕಾಣುವುದು, ಇದಲ್ಲದೆಯೂ, ಕೆಲವರಲ್ಲಿ ಎರಡನೇ ಬಾಚಿಹಲ್ಲುಗಳ ಆಕಾರದಲ್ಲಿ  (Peg Laterals)ಕಡಿಮೆ. ಹೆಚ್ಚಾಗಿ, ಹಲ್ಲಿನ ಮಧ್ಯೆ ಜಾಗ ಕಾಣುವುದು, ಇಂತಹ ಸಮಯದಲ್ಲಿ ವಕ್ರದಂತ ಸರಿಪಡಿಸುವ ತಜ್ಞರ ಸಹಾಯದಿಂದ ಇಲ್ಲವೇ, ಹಲ್ಲನ್ನು ಮಧ್ಯೆ ಇರುವ ಜಾಗವನ್ನು ಬೇರೆ ವಿಧಾನಗಳಿಂದ ತುಂಬಬಹುದು.

ಚಿಕಿತ್ಸೆಯೇನು ?
ಹಲ್ಲಿಗೆ ಸರಿಗೆ ಹಾಕಿ ಸರಿಪಡಿಸುವುದು:
ಇದೊಂದು ಸಾಮಾನ್ಯ ವಿಧಾನ ಮತ್ತು ಕೆಲವೊಮ್ಮೆ ಈ ಚಿಕಿತ್ಸೆಯಲ್ಲದೇ, ಬೇರೆ ಯಾವ ಚಿಕಿತ್ಸೆಯೂ ಇದಕ್ಕೆ ಸರಿಯಾಗಲಾರದು. ಮೇಲೆ ಹೇಳಿದಂತ ಹಲ್ಲನ್ನು ಸರಿಗೆ ಮುಖಾಂತರ ಸರಿಪಡಿಸಿ, ಮತ್ತು ಕೆಲವೊಮ್ಮೆ ಸ್ವಲ್ಪ ಜಾಗವನ್ನು ಹಲ್ಲಿನ ಬಣ್ಣದ ಸಿಮೆಂಟ್‌ಗಳಿಂದ ಅಥವಾ ಹಲ್ಲಿಗೆ ಭಾಗಶಃ ಅಥವಾ ಸಂಪೂರ್ಣ, ಹೂಡಿಕೆ ಹೂಡಿಸುವುದರಿಂದ ಜಾಗವನ್ನು ಸರಿಪಡಿಸಬಹುದು.

ಹಲ್ಲಿಗೆ ಸರಿಗೆ ಹಾಕದೆಯೆ ಈ ಜಾಗವನ್ನು  ಸರಿಪಡಿಸಬಹುದೇ?
ಹೌದು, ಹಲ್ಲಿಗೆ ಸರಿಗೆ ಹಾಕದೆಯೇ ಕೂಡ ಹಲ್ಲಿನ ಮಧ್ಯೆ ಕಾಣುವ ಜಾಗವನ್ನು ತುಂಬಬಹುದು.
ಹಲ್ಲಿನ ಮಧ್ಯೆ ಜಾಗ ತುಂಬಲು, ಮೊದಲು ಹಲ್ಲಿನ ಅಡ್ಡಬದಿಯನ್ನು ಸ್ವಲ್ಪವಾಗಿ ದೂರಗು (Rough) ಮಾಡಿಕೊಳ್ಳುತ್ತಾರೆ, ಅಥವಾ ಸ್ವಲ್ಪ ಭಾಗವನ್ನು ತೆಗೆದು, ಎರಡು ಹಲ್ಲುಗಳ ಬದಿಯಿಂದ ಹಲ್ಲಿನ ಬಣ್ಣದ ‘Compogite’ ಎಂಬ ಸಿಮೆಂಟನ್ನು ತುಂಬುತ್ತಾ ಬರುತ್ತಾರೆ ಮತ್ತು ಅದು ನೈಜವಾಗಿ, ಸಹಜವಾದ ಹಲ್ಲಿನಂತೆ ಕಾಣುತ್ತದೆ. ಇದರಿಂದಾಗಿ, ಹಲ್ಲನ್ನು ತುಂಬಿದ ಹಾಗೇ ಕಾಣುವುದಿಲ್ಲ. ಆದರೆ ಗಟ್ಟಿ ಪದಾರ್ಥ ತಿನ್ನುವಾಗ ಸ್ವಲ್ಪ ಇಚ್ಛೆಯಿಂದ ತಿಂದರಾಯಿತು.

ಇದಲ್ಲದೇ ಈ ಹಲ್ಲಿನ ಮಧ್ಯೆ ಇರುವ ಜಾಗವನ್ನು, ಹಲ್ಲಿಗೆ ““cap” ” ಅಥವಾ ““Crown”  ಹಾಕಿಯೂ ಅಥವಾ “Veneer” ಎಂದರೆ, ಕೇವಲ ಅರ್ಧ ಹಲ್ಲನ್ನು/ಹಲ್ಲಿನ ಮೇಲ್ಪದರವನ್ನು ಸ್ವಲ್ಪ ತೆಗೆದು ಇದರ ಸಹಾಯದಿಂದ ಹಲ್ಲಿಗೆ ಕವಚವನ್ನು ಕೊಡುವುದರಿಂದ ಹಲ್ಲಿನ ಮಧ್ಯೆ ಇರುವ ಜಾಗವನ್ನು ತುಂಬಿಸಬಹುದು. ಇದು ಅಂದವಾಗಿಯೂ ಕಾಣುತ್ತದೆ ಕೂಡ.

ಹೀಗೆ ಹಲ್ಲಿನ ಮಧ್ಯೆ ಜಾಗವಿದ್ದಲ್ಲಿ ಮನೆಯಲ್ಲಿ ಕುಳಿತುಕೊಂಡು ಬೇರೆಯವರ ವ್ಯಂಗ್ಯ ಕೇಳಿಕೊಳ್ಳುವುದಕ್ಕಿಂತ ಇದಕ್ಕೆ ತಕ್ಕ ದಂತ ಚಿಕಿತ್ಸೆಯನ್ನು ಮಾಡಿಕೊಳ್ಳಿ. ಇದು ಸುಂದರ ನಗುವಿಗೆ, ಮುಖಕ್ಕೆ ಕಾರಣವಾಗುವುದು.      

– ಡಾ| ಜಿ. ಸುಬ್ರಾಯ ಭಟ್‌, 
ಅಸೋಸಿಯೇಟ್‌ ಡೀನ್‌, ಪೀರಿಯೋಡಾಂಟಿಕ್ಸ್‌  ವಿಭಾಗ,
ಮಣಿಪಾಲ ವಿ.ವಿ.

Advertisement

Udayavani is now on Telegram. Click here to join our channel and stay updated with the latest news.

Next