Advertisement

ಖಾಸಗಿ ಸಂಸ್ಥೆಗಳಿಂದಲೂ ಬಾಹ್ಯಾಕಾಶ ಸಂಶೋಧನೆ

06:19 PM Sep 09, 2022 | Team Udayavani |

ಮೈಸೂರು: ಭೂಮಿ, ಆಕಾಶ ಮತ್ತು ಸಮುದ್ರದ ಮೇಲೆ ಅಧಿಪತ್ಯ ಸ್ಥಾಪಿಸಿರುವ ಮಾನವ ಈಗ ಬಾಹ್ಯಾಕಾಶದಲ್ಲೂ ತನ್ನ ಅಸ್ತಿತ್ವ ಸಾಧಿಸಲು ನಿರಂತರ ಪ್ರಯತ್ನ ನಡೆಸುತ್ತಿದ್ದಾನೆ ಎಂದು ಇಸ್ರೋ ನಿವೃತ್ತ ಅಧ್ಯಕ್ಷ ಎ.ಎಸ್‌. ಕಿರಣ್‌ ಕುಮಾರ್‌ ಅಭಿಪ್ರಾಯಪಟ್ಟರು.

Advertisement

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ರಾಜ್ಯ ಸಮಿತಿ, ಜಿಲ್ಲಾ ಸಮಿತಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಜಿಲ್ಲಾಡಳಿ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಕೆಎಸ್‌ಒಯು ಆವರಣದಲ್ಲಿನ ಘಟಿಕೋತ್ಸವ ಭವನದಲ್ಲಿ ಆಯೋಜಿಸಿರುವ ಸುಸ್ಥಿರ ಅಭಿವೃದ್ಧಿಗಾಗಿ ವಿಜ್ಞಾನ ಆಶಯದ 14ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಬಾಹ್ಯಕಾಶದಲ್ಲಿ ಮತ್ತಷ್ಟು ಸಾಧನೆಗೆ ಪ್ರಯತ್ನ: ಮನುಷ್ಯ ಮಿಕ್ಕೆಲ್ಲ ಜೀವಿಗಳಿಗಿಂತ ವಿಭಿನ್ನ. ಈ ಹಿಂದೆ ದೈಹಿಕ ಶ್ರಮ ಆಧಾರಿತ ಬದುಕು ನಡೆಸುತ್ತಿದ್ದ. ಕಾಲಾಂತರ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ ಜೀವನ ಸುಧಾರಿಸಿಕೊಂಡು ಅಗತ್ಯ ಸಾಧನ, ಸಲಕರಣೆ ಆವಿಷ್ಕರಿಸಿಕೊಂಡು ಸುಗಮ ಜೀವನ ನಡೆಸುತ್ತಿದ್ದಾನೆ. ಭೂಮಿ, ಆಕಾಶ ಹಾಗೂ ಸಮುದ್ರದ ಮೇಲೆ ಹಿಡಿತ ಸಾಧಿಸಿದ ಮನಷ್ಯನೀಗ ಬಾಹ್ಯಾಕಾಶದಲ್ಲಿ ವರ್ಷಗಟ್ಟಲೇ ಇರಬಲ್ಲ. ಜತೆಗೆ ಚಂದ್ರನ ಮೇಲೂ ಓಡಾಡಿ ಬಂದಿದ್ದಾನೆ. ಒಟ್ಟಾರೆ ಬಾಹ್ಯಕಾಶದಲ್ಲಿ ಮತ್ತಷ್ಟು ಸಾಧನೆಗೆ ನಿರಂತರ ಪ್ರಯತ್ನ ನಡೆಯುತ್ತಿದೆ ಎಂದರು.

ಬಾಹ್ಯಕಾಶದಲ್ಲಿ ತನ್ನ ಅಸ್ತಿತ್ವ ಸ್ಥಾಪಿಸಲು ಸರ್ಕಾರದ ಜತೆಗೆ ಅನೇಕ ಖಾಸಗಿ ಸಂಸ್ಥೆಗಳು ಮುಂದಾಗಿವೆ. ಕೆಲ ಖಾಸಗಿ ಸಂಸ್ಥೆಗಳು ಈಗಾಗಲೇ ಸ್ಪೇಸ್‌ ಟೂರಿಸಂ, ಸ್ಪೆಸ್‌ ಅಡ್ವೆಂಜರ್‌ ಮಾಡಲು ಮುಂದಾಗಿದ್ದಾರೆ. ಹಾಗೆಯೇ ಭೂಮಿಯಿಂದ ಹೊರಗೆ ಜೀವನ ನಡೆಸಬೇಕಾದರೆ ಏನು ಮಾಡಬೇಕು? ಬೇರೆ ಗ್ರಹದಲ್ಲಿ ಜೀವ ಉಳಿಯಬೇಕಾದರೆ ವಾತಾವರಣ ಅಧ್ಯಯನವನ್ನು ರೋಬಟ್‌ಗಳ ಮೂಲಕ ಮಾಹಿತಿ ಪಡೆಯಲಾಗುತ್ತಿದೆ ಎಂದು ವಿವರಿಸಿದರು.

ಕೃತಕ ಬುದ್ಧಿಮತ್ತೆಗೆ ಒತ್ತು: ಇಂದು ನಮ್ಮ ಆಲೋಚನೆಗೆ ಅನುಗುಣವಾಗಿ ಮಾರುಕಟ್ಟೆ ರೂಪಿಸಲಾಗುತ್ತಿದೆ. ಇದಕ್ಕಾಗಿ ಕೃತಕ ಬುದ್ಧಿ ಮತ್ತೆಗೆ ಒತ್ತು ನೀಡಲಾಗುತ್ತಿದೆ. ನಮ್ಮ ಆಲೋಚನೆಗಳನ್ನು ಅರೆಕ್ಷಣದಲ್ಲಿ ಅರಿತುಕೊಂಡು ಸೂಕ್ತ ಸಲಹೆ, ಮಾರ್ಗದರ್ಶನ ನೀಡುವ ತಂತ್ರಜ್ಞಾನ ಈಗಾಗಲೇ ಎಲ್ಲರೂ ನೋಡಿದ್ದಾರೆ. ಅದರಂತೆಯೇ ಮನುಷ್ಯನ ಹೃದಯ ಬಡಿತದ ವೇಗ, ನಾಡಿ ಮಿಡಿತವನ್ನು ಆಧರಿಸಿ ಮುಂದಾಗುವ ಅಪಾಯದ ಬಗ್ಗೆ ಸುಳಿವು ನೀಡಿ, ತೆಗೆದುಕೋಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ತಿಳಿಸುವ ಕೃತಕ ಬುದ್ಧಿಮತ್ತೆಯನ್ನು ಅಭಿವೃದ್ಧಿಪಡಿಸಲಾಗುವ ಮಟ್ಟಕ್ಕೆ ವಿಜ್ಞಾನ ಬೆಳೆದಿದೆ ಎಂದು ಹೇಳಿದರು.

Advertisement

ವೈಯಕ್ತಿಕ ಸ್ವಾರ್ಥಕ್ಕೆ ದುರುಪಯೋಗ: ಉಪಗ್ರಹ ಗಳಿಂದ ಭೂಮಿ ಮೇಲಿನ ಆಗು ಹೋಗುಗಳ ಬಗ್ಗೆ ತಿಳಿಯಲಾಗುತ್ತಿತ್ತು. ಆದರೆ, ಇವತ್ತಿನ ಹವಾಮಾನ ವೈಪರೀತ್ಯ, ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆ ಬಗ್ಗೆ ತಿಳಿಯುವುದು ಕಷ್ಟವಾಗುತ್ತಿದೆ. ಭಾರತ ಮಾತ್ರವಲ್ಲ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಇದೇ ಸಮಸ್ಯೆ ಎದುರಾಗಿದೆ ಎಂದರು.

ಇತ್ತೀಚೆಗೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ವೈಯಕ್ತಿಕ ಸ್ವಾರ್ಥಕ್ಕೆ ದುರುಪಯೋಗ ಪಡಿಸಲಾಗುತ್ತಿದೆ. ಇದರಿಂದಾಗುವ ಅನಾಹುತದ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಜತೆಗೆ ವಿಜ್ಞಾನದಿಂದ ಹೊಸ ಸಮಸ್ಯೆಗಳು ಬೆಳೆಯುತ್ತಿವೆ. ಈ ಸವಾಲು ಗಳನ್ನು ಎದುರಿಸಲು ಸಜ್ಜಾಗಬೇಕಿದೆ ಎಂದರು.

ವಿಜ್ಞಾನಿಗಳು ಮನಸ್ಸು ಮಾಡಬೇಕು: ವಿಧಾನ ಪರಿಷತ್‌ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ಜ್ಞಾನ ಯಾರ ಸ್ವತ್ತಲ್ಲ. ಅವಿರತವಾಗಿ ಪ್ರಯತ್ನಿಸುವವರ ಸ್ವತತ್ತಾಗುತ್ತದೆ. ಜ್ಞಾನವನ್ನು ಪಡೆದವರು ಜ್ಞಾನಿಗಳಾಗುತ್ತಾರೆ. ಸಾರಿಗೆ ಸಂಪರ್ಕ ಕ್ಷೇತ್ರದಲ್ಲಿ ಎತ್ತಿನ ಗಾಡಿಯಿಂದ ಸ್ಫುಟ್ನಿಕ್‌ವರೆಗೆ ನಾವು ತಲುಪಿದ್ದೇವೆ. ಭೂ ಲೋಕದಿಂದ ಚಂದ್ರ ಲೋಕಕ್ಕೆ ಹೋಗಿದ್ದೇವೆ.

ಆದರೆ ಸಾಮಾಜಿಕ ಪಿಡುಗುಗಳ ನಿರ್ಮೂಲನೆಯಾಗಿಲ್ಲ. ಅನಕ್ಷರತೆ, ಬಡತನ ಇದೆ. ಸಮಾಜದಲ್ಲಿ ಅಳವಾಗಿ ಬೇರು ಬಿಟ್ಟಿರುವ ಜಾತಿ ನಿರ್ಮೂಲನೆ ಅಸಾಧ್ಯವಾಗಿದೆ. ಈ ಪಿಡುಗನ್ನು ನಿವಾರಿಸುವ ಕಡೆ ವಿಜ್ಞಾನಿಗಳು ಮನಸ್ಸು ಮಾಡಬೇಕೆಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ. ಹೇಮಂತಕುಮಾರ್‌, ವಿಶ್ರಾಂತ ಕುಲಪತಿ ಡಾ.ಪಿ.ವೆಂಕಟರಾಮಯ್ಯ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಗೌರವ ಕಾರ್ಯದರ್ಶಿ ಸಿ.ಕೃಷ್ಣೇಗೌಡ, ಕೋಶಾಧ್ಯಕ್ಷ ಈ. ಬಸವರಾಜು, ಸಮ್ಮೇಳನದ ಸಂಚಾಲಕ ಎ.ಎನ್‌.ಮಹೇಶ್‌, ಸದಸ್ಯರಾದ ಡಾ.ರಾಮಚಂದ್ರ, ಮಹಾಲಿಂಗಪ್ಪ ಮಲ್ಲಾರ, ದಾನಿ ಬಾಬುರಾವ್‌, ಸಂಸ್ಥಾಪಕ ಸದಸ್ಯೆ ಶ್ರೀಮತಿ ಹರಿಪ್ರಸಾದ್‌, ಜಿಲ್ಲಾ ಸಮಿತಿ ಅಧ್ಯಕ್ಷ ಶೇಖರ್‌ ನಾಯಕ್‌, ಮೀನಾಕ್ಷಿ, ಕೃಷ್ಣಮೂರ್ತಿ ಅರಸ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next