Advertisement

ರೌಡಿ ಶೀಟರ್‌ಗಳಿಗೆ ಎಸ್‌ಪಿ ಖಡಕ್‌ ಎಚ್ಚರಿಕೆ

02:42 PM Jun 24, 2022 | Team Udayavani |

ವಾಡಿ: ರೌಡಿ ಶೀಟರ್‌ಗಳು ಕ್ರೀಯಾಶೀಲ ವಾಗಿದ್ದರೆ ಜನರು ಭಯಭೀತರಾಗುತ್ತಾರೆ. ಇವರ ವಿರುದ್ಧ ದೂರು ಕೊಡಲು ಸಾರ್ವಜನಿಕರು ಹಿಂದೇಟು ಹಾಕುತ್ತಾರೆ. ಅಂತಹವರ ವಿರುದ್ಧ ಪೊಲೀಸ್‌ ಇಲಾಖೆ ದಿನದ 24 ತಾಸು ನಿಗಾವಹಿಸುತ್ತದೆ. ಮಟಕಾ ದಂಧೆ ಮತ್ತು ಗೂಂಡಾಗಿರಿಯಲ್ಲಿ ತೊಡಗಿಕೊಂಡರೆ ಹೆಡೆಮುರಿ ಕಟ್ಟುತ್ತೇವೆ. ಯಾವುದಕ್ಕೂ ಹುಷಾರಾಗಿರಿ ಎಂದು ಜಿಲ್ಲಾ ಪೊಲೀಸ್‌ ವರೀಷ್ಠಾಧಿಕಾರಿ ಇಶಾ ಪಂತ್‌ ಖಡಕ್‌ ಎಚ್ಚರಿಕೆ ನೀಡಿದರು.

Advertisement

ಪಟ್ಟಣದ ಪೊಲೀಸ್‌ ಠಾಣೆ ಮೈದಾನದಲ್ಲಿ ಗುರುವಾರ ರೌಡಿ ಶೀಟರ್‌ಗಳ ಪರೇಡ್‌ ನಡೆಸುವ ಮೂಲಕ ಪ್ರತಿಯೊಬ್ಬ ರೌಡಿಯ ದಿನಚರಿ ತಿಳಿದುಕೊಂಡು ಈ ಸಂದೇಶ ರವಾನಿಸಿದರು.

ಜಿಲ್ಲೆಯಲ್ಲಿ ಗೂಂಡಾ ಚಟುವಟಿಕೆ ಮತ್ತು ಕೋಮು ಗಲಭೆ ನಡೆಯಲು ನಾನು ಬಿಡುವುದಿಲ್ಲ. ಕ್ರಿಯಾಶೀಲ ರೌಡಿ ಶೀಟರ್‌ಗಳ ಮೇಲೆ ನಿರಂತರವಾಗಿ ನಿಗಾವಹಿಸುತ್ತೇವೆ. ಕರಾರು ಮುಗಿದ ಮೇಲೂ ಗೂಂಡಾಗಿರಿ ಪ್ರದರ್ಶಿಸಿದರೆ ಒಂದು ವರ್ಷ ಜಾಮೀನು ರಹಿತ ಜೈಲು ಶಿಕ್ಷೆ ಅನುಭವಿಸುವ ಜತೆಗೆ ಎರಡು ಲಕ್ಷ ರೂ. ದಂಡ ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. ಮಟಕಾ ಮತ್ತು ಗೂಂಡಾ ವರ್ತನೆ ಮೆರೆದರೆ ಗಡಿಪಾರು ಮಾಡುತ್ತೇವೆ. ಒಂದು ವರ್ಷ ಊರಿಗೆ ಸುಳಿಯಲು ಬಿಡುವುದಿಲ್ಲ. ಕೋಮುವಾದಿ ಗೂಂಡಾಗಳು, ಮಟಕಾ ದಂಧೆಕೋರರು ಹಾಗೂ ಇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುರುವವರು ಹುಷಾರಾಗಿರಿ, ಜನರಲ್ಲಿ ಭಯ ಹುಟ್ಟಿಸುವ ರೌಡಿಗಳ ಹೆಡೆಮುರಿಕಟ್ಟುತ್ತೇವೆ ಎಂದು ಗುಡುಗಿದರು.

ಡಿವೈಎಸ್‌ಪಿ ಉಮೇಶ ಚಿಕ್ಕಮಠ ಮಾತನಾಡಿ, ಹಬ್ಬಗಳು ಮತ್ತು ಚುನಾವಣೆಗಳು ಹತಿರ ಬರುತ್ತಿವೆ. ರೌಡಿ ಶೀಟರ್‌ ಪಟ್ಟಿಯಲ್ಲಿರುವವರು ಯಾವುದೇ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಭಾಗಿಯಾಗುವಂತಿಲ್ಲ. ಅವುಗಳ ಅಕ್ಕಪಕ್ಕದಲ್ಲೂ ನೀವು ಸುಳಿಯಬಾರದು. ವ್ಯಾಪಾರ ಅಥವಾ ಉದ್ಯೋಗದಲ್ಲಿ ತೊಡಗಿದರೆ ನಾವು ತೊಂದರೆ ಕೊಡುವುದಿಲ್ಲ. ಗಲಭೆ ಪ್ರಕರಣಗಳಲ್ಲಿ ಹೆಸರು ಕೇಳಿ ಬಂದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಿಪಿಐ ಪ್ರಕಾಶ ಯಾತನೂರ, ವಾಡಿ ಠಾಣೆಯ ಪಿಎಸ್‌ಐ ಮಹಾಂತೇಶ ಜಿ.ಪಾಟೀಲ, ಚಿತ್ತಾಪುರ ಠಾಣೆ ಪಿಎಸ್‌ಐ ಹಮೀದ್‌ ಪಟೇಲ್‌, ಕ್ರೈಂ ಪಿಎಸ್‌ಐ ಶಿವುಕಾಂತ ಕಮಲಾಪುರ ಹಾಗೂ ಸಿಬ್ಬಂದಿ ಇದ್ದರು.

Advertisement

ಚಿತ್ತಾಪುರ ಮತ್ತು ವಾಡಿ ಠಾಣಾ ವ್ಯಾಪ್ತಿಯ ಒಟ್ಟು 112 ಜನ ರೌಡಿ ಶೀಟರ್‌ ಗಳ ಪರೇಡ್‌ ಇದಾಗಿತ್ತು.ರೌಡಿ ಶೀಟರ್‌ ಪಟ್ಟಿಯಲ್ಲಿದ್ದು ಸಮಾಜದಲ್ಲಿ ಒಳ್ಳೆಯವರಾಗಿ ಬದಲಾದವರನ್ನು ಪೊಲೀಸ್‌ ಇಲಾಖೆ ಗುರುತಿಸುತ್ತದೆ. ಅಂತಹವರನ್ನು ಸನ್ನಡತೆಯಾಧಾರದ ಮೇಲೆ ರೌಡಿ ಶೀಟರ್‌ ಪಟ್ಟಿಯಿಂದ ತೆಗೆಯಲು ಅವಕಾಶವಿದೆ. ರೌಡಿ ವರ್ತನೆ ಬದಲಾದರೆ ಮಾತ್ರ ನಿಮ್ಮ ಬಗ್ಗೆ ಪರಿಶೀಲಿಸುತ್ತೇವೆ. ಕ್ರಿಮಿನಲ್‌ ಚಟುವಟಿಕೆಗಳನ್ನು ಕೈಬಿಟ್ಟು ಉದ್ಯೋಗದಲ್ಲಿ ತೊಡಗಿಕೊಳ್ಳುವ ಮೂಲಕ ಉತ್ತಮ ಪ್ರಜೆಯಾಗಿ ಬದುಕಲು ಚಿಂತಿಸಬೇಕು. ಇದಕ್ಕೆ ನಾವು ಸಹಕಾರ ನೀಡುತ್ತೇವೆ. ಬಾಲ ಬಿಚ್ಚಿದರೆ ಮಾತ್ರ ಪರಿಣಾಮ ನೆಟ್ಟಗಿರಲ್ಲ. -ಇಶಾ ಪಂತ್‌, ಎಸ್‌ಪಿ

Advertisement

Udayavani is now on Telegram. Click here to join our channel and stay updated with the latest news.

Next