Advertisement

ಪುತ್ರಿಯನ್ನು ಅಂಗನವಾಡಿಗೆ ದಾಖಲಿಸಿ ಮಾದರಿಯಾದ ಎಸ್‌ಪಿ

11:07 AM Oct 17, 2019 | Team Udayavani |

ಮಡಿಕೇರಿ :ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸುಮನ್‌ ಡಿ.ಪನ್ನೇಕರ್‌ ಅವರು ತಮ್ಮ ಮಗುವನ್ನು ಸರಕಾರಿ ಅಂಗನವಾಡಿಗೆ ದಾಖಲಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

Advertisement

ಮಕ್ಕಳಿಗೆ ಶಿಕ್ಷಣ ನೀಡುವುದನ್ನು ಕೂಡ ಪ್ರತಿಷ್ಠೆಯನ್ನಾಗಿ ಪರಿಗಣಿಸುತ್ತಿರುವ ಇಂದಿನ ಪೋಷಕರು ಮಕ್ಕಳು ಜನಿಸುತ್ತಲೇ ಇಂಗ್ಲೀಷ್‌ ಪದ ಪ್ರಯೋಗಗಳನ್ನು ಆರಂಭಿಸುತ್ತಾರೆ. ಬೇಬಿ ಸಿಟ್ಟಿಂಗ್‌, ಎಲ್‌ಕೆಜಿ, ಯುಕೆಜಿ ತರಗತಿಗಳಿಗಾಗಿ ವರ್ಷಗಟ್ಟಲೆ ಕಾದು ಸೀಟು ಗಿಟ್ಟಿಸಿಕೊಳ್ಳುವ ರಿಸ್ಕ್ ಕೂಡ ಪೋಷಕರ ಮೇಲಿದೆ.

ಆದರೆ ಯಾವುದೇ ಪೈಪೋಟಿಗಳಿಲ್ಲದೆ ಸುಲಭ ಮಾರ್ಗ ತೋರುವ ಅಂಗನವಾಡಿಗಳು ಕಾಲ ಬುಡದಲ್ಲಿದ್ದರೂ ಅವುಗಳ ಬಗ್ಗೆ ಕನ್ನಡ ಪೋಷಕರಿಗೆ ತಾತ್ಸಾರವೇ ಹೆಚ್ಚು. ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳಂತೂ ತಮ್ಮ ಮಕ್ಕಳನ್ನು ಸರಕಾರಿ ಶಾಲೆಯ ಕಡೆಗೆ ತಿರುಗಿಯೂ ನೋಡದಂತೆ ಮಾಡುತ್ತಾರೆ ಎನ್ನುವ ಅಪವಾದವಿದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಕೊಡಗು ಎಸ್‌ಪಿ ಸುಮನ್‌ ಡಿ.ಪನ್ನೇಕರ್‌ ಅವರು ತಮ್ಮ ಎರಡೂವರೆ ವರ್ಷದ ಪುತ್ರಿ ಖುಷಿಯನ್ನು ಫೀ.ಮಾ.ಕಾರ್ಯಪ್ಪ ಕಾಲೇಜು ಸಮೀಪದ ಅಂಗನವಾಡಿಗೆ ದಾಖಲಿಸಿದ್ದಾರೆ.

ಮಕ್ಕಳಿಗೆ ಬಾಲ್ಯದಿಂದಲೇ ನೈತಿಕತೆ ಮತ್ತು ಮೌಲ್ಯಗಳ ಪಾಠ ಅಗತ್ಯವೆನ್ನುವ ಕಾರಣಕ್ಕಾಗಿ “”ಖುಷಿ”ಗೆ ಅಂಗನವಾಡಿ ಮೂಲಕವೇ ಮೊದಲ ಪಾಠ ಆರಂಭಿಸುತ್ತಿರುವುದಾಗಿ ಎಸ್‌ಪಿ ತಿಳಿಸಿದ್ದಾರೆ. ಸ್ಥಳೀಯ ಅಂಗನವಾಡಿ ವ್ಯವಸ್ಥೆ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಂಗನವಾಡಿಯ ಇತರ ಮಕ್ಕಳು “”ಖುಷಿ”ಯೊಂದಿಗೆ ಖುಷಿ, ಖುಷಿಯಾಗಿ ದಿನ ಕಳೆಯುತ್ತಿರುವುದು ವಿಶೇಷ.

Advertisement
Advertisement

Udayavani is now on Telegram. Click here to join our channel and stay updated with the latest news.

Next