ಕೊಪ್ಪಳ: ಜಿಲ್ಲೆಯಲ್ಲಿ ಬಕ್ರೀದ್ ಸೇರಿದಂತೆ ಮುಂದೆ ಬರುವ ಹಬ್ಬಗಳಲ್ಲಿ ಶಾಂತಿ-ಸುವ್ಯವಸ್ಥೆ ಹಾಳಾಗದಂತೆ ಕಾನೂನು ಕಾಪಾಡುವ ದೃಷ್ಟಿಯಿಂದ ಎಸ್ಪಿ ಅರುಣಾಂಗ್ಷು ಗಿರಿ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ರೌಡಿ ಶೀಟರ್‌ಗಳ ಪರೇಡ್ ನಡೆಸಿ ಬಾಲ ಬಿಚ್ಚದಂತೆ ಖಡಕ್ ಎಚ್ಚರಿಕೆ ನೀಡಿದರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಬೆಳಗ್ಗೆಯಿಂದ ಕೊಪ್ಪಳ ಉಪ ವಿಭಾಗ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳ ಆಧಾರದ ಮೇಲೆ ಹೆಚ್ಚು ಕೇಸು ಹೊಂದಿದ ವ್ಯಕ್ತಿಗಳು ಹಾಗೂ ರೌಡಿ ಶೀಟರ್‌ಗಳನ್ನು ಎಸ್ಪಿ ಮುಂದೆ ಹಾಜರುಪಡಿಸಲಾಗಿತ್ತು.
ಹಲವರು ತಾವು ಯಾವುದೇ ಚಟುವಟಿಕೆಗಳಲ್ಲಿ ತೊಡಗಿಲ್ಲ. ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಹೇಳಿಕೊಂಡರು. ಯಾವುದೇ ಗಲಾಟೆ, ದೋಂಬಿಗೆ ಕಾರಣವಾದರೆ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳುವ ಕುರಿತು ಎಸ್ಪಿ ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಈ ವರೆಗೂ 951 ರೌಡಿಶೀಟರ್‌ಗಳಿದ್ದು, ಈ ಪೈಕಿ ಎಸ್ಪಿ ಮುಂದೆ 378 ಜನರು ಮಾತ್ರ ಹಾಜರಾಗಿದ್ದರು. ಉಳಿದವರು ಗೈರಾಗಿದ್ದರು. ಹಾಜರಾದ 378 ಜನರಲ್ಲಿ 10 ಜನರು ನ್ಯಾಯಾಂಗ ಬಂಧನದಲ್ಲಿದ್ದರು. ಪ್ರತಿ ವ್ಯಕ್ತಿಯ ಚಲನ-ವಲನ ಹಾಗೂ ಆತನ ನಿತ್ಯದ ಕಾರ್ಯ ಚಟುವಟಿಕೆ ವಿವರ ಪಡೆದ ಎಸ್ಪಿ ಪ್ರತಿಯೊಬ್ಬರಿಗೂ ಎಚ್ಚರಿಕೆ ನೀಡಿದರು.
ಗಡಿಪಾರಿಗೆ ಶಿಫಾರಸು: ಜಿಲ್ಲಾ ಪೊಲೀಸ್ ಇಲಾಖೆಯಿಂದ 37 ಜನರನ್ನು ಗಡಿಪಾರು ಮಾಡುವಂತೆ ಸಹಾಯಕ ಆಯುಕ್ತರಿಗೆ ಶಿಫಾರಸು ಮಾಡಲಾಗಿದೆ. ಎಸಿ ಹಂತದಲ್ಲಿ ವಿಚಾರಣೆ ಬಾಕಿಯಿದೆ. ಇನ್ನು 2019ರಲ್ಲಿ 8 ಜನರನ್ನು ಗಡಿಪಾರು ಮಾಡಲಾಗಿದ್ದರೆ, 2020ರಲ್ಲಿ 24 ಜನರು, 2021ರಲ್ಲಿ 13 ಜನರು ಹಾಗೂ 2022ರಲ್ಲಿ 6 ಜನರನ್ನು ಗಡಿಪಾರು ಮಾಡಲಾಗಿದೆ. ರವಿವಾರ ಎಸ್ಪಿ ಮುಂದೆ ಹಾಜರಾದ ರೌಡಿ ಶೀಟರ್ ಗಳಿಗೆ ಯಾವುದಾದರೂ ದೋಂಬಿ, ಗಲಾಟೆ, ಮಟ್ಕಾ, ಗ್ಯಾಂಬ್ಲಿಂಗ್ ಸೇರಿದಂತೆ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದರೆ ಅವರ ಮೇಲೆ ಮುಲಾಜಿಲ್ಲದೇ ರೌಡಿ ಶೀಟರ್ ಓಪನ್ ಮಾಡುವ ಎಚ್ಚರಿಕೆ ನೀಡಲಾಯಿತು. ಇನ್ನು ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ 54 ಜನರ ಮೇಲಿದ್ದ ರೌಡಿ ಶೀಟರ್ ಗಳನ್ನು ಓಪನ್ ಮಾಡಲಾಗಿದೆ. 2021ರಲ್ಲಿ 237 ಜನರ ಮೇಲೆ ರೌಡಿ ಶೀಟರ್ ತೆರವು ಮಾಡಲಾಗಿದೆ.
ಗಲಾಟೆ ಮಾಡದಂತೆ ಮುಚ್ಚಳಿಕೆ ಪತ್ರ: ಎಸ್ಪಿ ಮುಂದೆ ನಡೆದ ರೌಡಿ ಶೀಟರ್ ಪರೇಡ್‌ನಲ್ಲಿ ಗೈರು ಹಾಜರಾದವರನ್ನು ಆಯಾ ಠಾಣೆಗೆ ಹಾಜರಾಗಿ ಮಾಹಿತಿ ನೀಡುವಂತೆಯೂ ಸೂಚನೆ ನೀಡಲಾಯಿತು. ಅಲ್ಲದೇ, ಹಾಜರಾದ ಯಾವುದೇ ಹಬ್ಬ-ಹರಿದಿನಗಳಲ್ಲಿ ಯಾವುದೇ ಗಲಾಟೆ, ದೋಂಬಿ ಮಾಡದಂತೆ ಪೊಲೀಸ್ ಠಾಣೆಗೆ ಮುಚ್ಚಳಿಕೆ ಪತ್ರ ಬರೆದು ಕೊಡುವ ಎಚ್ಚರಿಕೆ ನೀಡಲಾಯಿತು. ಅಲ್ಲದೇ ಉತ್ತಮ ಜೀವನ ನಡೆಸುವಂತೆ ಸೂಚಿಸಲಾಯಿತು.
ಗಂಟುಮೂಟೆ ಕಟ್ಟುವಂತೆ ಎಚ್ಚರಿಕೆ
ಪರೇಡ್‌ನಲ್ಲಿ ಆಮ್ ಆದ್ಮಿ ಪಾರ್ಟಿ ತಾಲೂಕು ಅಧ್ಯಕ್ಷನೋರ್ವನ ಮೇಲೆಯೂ ರೌಡಿ ಶೀಟರ್ ಓಪನ್ ಆಗಿದ್ದು, ಆತನು ಎಸ್ಪಿ ಮುಂದೆ ಹಾಜರಾಗಿದ್ದ. ಈ ವೇಳೆ ನೀನು ಬಟ್ಟೆ ವ್ಯಾಪಾರ ಮಾಡ್ತೀನಿ ಅಂತೀಯಾ. ಆದರೆ ನಿನ್ನ ಮೇಲೆ 15 ಕೇಸ್ ದಾಖಲಾಗಿವೆ. ನೀನು ಬಟ್ಟೆ ವ್ಯಾಪಾರ ಮಾಡ್ತೀಯೋ ಅಥವಾ ಬೇರೆಲ್ಲ ಕೆಲಸ ಮಾಡ್ತಿಯೋ ಎಂದು ಎಸ್ಪಿ ಆಪ್ ಅಧ್ಯಕ್ಷನಿಗೆ ಖಡಕ್ ಪ್ರಶ್ನೆ ಮಾಡಿದರು. ನೀನು ಲಗೇಜ್ ಸಿದ್ಧ ಮಾಡಿಕೋ ಎನ್ನುವ ಸಂದೇಶ ನೀಡಿ ಗಡಿಪಾರು ಮಾಡುವ ಪರೋಕ್ಷ ಎಚ್ಚರಿಕೆಯನ್ನೂ ಎಸ್ಪಿ ನೀಡಿದರು.