ಹೈದರಬಾದ್:ಅಭಿಮಾನಿಗಳಿಂದ ಗಾನ ಗಂಧರ್ವ, ಗಾನ ಗಾರುಡಿಗ ಎಂದೆಲ್ಲಾ ಬಿರುದು ಪಡೆದಿದ್ದ ಹಿರಿಯ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ 2020ರ ಸೆಪ್ಟೆಂಬರ್ 25ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು. ಆದರೆ ಎಸ್ ಪಿಬಿಗೆ ಕೊನೆಗೂ ತನ್ನ ಆಸೆ ಈಡೇರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬುದು ಬಹಿರಂಗಗೊಂಡಿದೆ.
ಬಾಲು ಎಂದೇ ಚಿರಪರಿಚಿತರಾಗಿದ್ದ ಎಸ್ ಪಿಬಿಗೆ ಪೂರ್ವಜರ ಮನೆಯಾದ ನಲ್ಲೂರಿನಲ್ಲಿ ತಂದೆ ಸಾಂಬಮೂರ್ತಿ ಹಾಗೂ ತಾಯಿ ಶಕುಂತಲಮ್ಮ ಅವರ ಪ್ರತಿಮೆಯನ್ನು ಸ್ಥಾಪಿಸುವ ಇಚ್ಛೆ ಹೊಂದಿದ್ದರು. ಆ ಮನೆಯನ್ನು ಅವರು ವೇದ ಶಾಲೆ ನಡೆಸಲು ದಾನವಾಗಿ ನೀಡಿದ್ದರು.
ಅಷ್ಟೇ ಅಲ್ಲ ತನ್ನ ಸ್ವಂತ ಪ್ರತಿಮೆಯನ್ನು ಮನೆಯಲ್ಲಿ ಸ್ಥಾಪಿಸಬೇಕೆಂಬ ಆಸೆ ಹೊಂದಿದ್ದರು. ಅದಕ್ಕಾಗಿ ಎಸ್ ಪಿಬಿ ಖ್ಯಾತ ಶಿಲ್ಪಿ ರಾಜ್ ಕುಮಾರ್ ಅವರಿಗೆ ಪ್ರತಿಮೆ ಕೆತ್ತನೆ ಮಾಡಿಕೊಡುವಂತೆ ಹೇಳಿದ್ದರು. ಆದರೆ ಪೋಷಕರ ಹಾಗೂ ತನ್ನ ಪ್ರತಿಮೆಯನ್ನು ಇರಿಸಬೇಕೆಂಬ ಆವರ ಆಸೆ ಕೊನೆಗೂ ಈಡೇರಿಲ್ಲ. ಆ ಪ್ರತಿಮೆಗಳು ಅಂತಿಮ ರೂಪ ಪಡೆಯುವ ಮುನ್ನವೇ ಅವರು ಇಹಲೋಕ ತ್ಯಜಿಸಿರುವುದು ದುರಂತ ಎಂದು ವರದಿ ತಿಳಿಸಿದೆ.
ತಮ್ಮ ಪೂರ್ವಜರ ಮನೆಯಲ್ಲಿ ತಂದೆ-ತಾಯಿಯ ಪ್ರತಿಮೆಗಳನ್ನು ಸ್ಥಾಪಿಸುವುದನ್ನು ಕಣ್ಣಾರೆ ನೋಡಬೇಕೆಂಬ ಬಾಲಸುಬ್ರಹ್ಮಣ್ಯಂ ಅವರ ಆಸೆ ಕೈಗೂಡಲಿಲ್ಲ. ಅವರಿಗೆ ಆಗಸ್ಟ್ 5ರಂದು ಕೋವಿಡ್ 19 ಸೋಂಕು ಇದ್ದಿರುವುದು ದೃಢಪಟ್ಟ ನಂತರ ಆಸ್ಪತ್ರೆಯಲ್ಲಿಯೇ ದೀರ್ಘಾವಧಿ ಚಿಕಿತ್ಸೆ ಪಡೆಯುತ್ತಿದ್ದರೂ. ಆದರೂ ಚಿಕಿತ್ಸೆ, ಸಾವಿರಾರು ಜನರ ಹಾರೈಕೆ ಫಲಿಸದೇ ಅವರು ಇಹಲೋಕ ತ್ಯಜಿಸಿದ್ದರು.