ಚೆನ್ನೈ:ಗಾನ ಗಾರುಡಿಗ, ನಟ ಎಸ್ ಪಿ ಬಾಲಸುಬ್ರಹ್ಮಣ್ಯಂ (74) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ತಿರುವಳ್ಳೂರು ಜಿಲ್ಲೆಯ ತಾಮರೈಪಾಕಂನಲ್ಲಿರುವ ರೆಡ್ ಹಿಲ್ಸ್ ಫಾರಂ ಹೌಸ್ ನಲ್ಲಿ ಶನಿವಾರ (ಸೆಪ್ಟೆಂಬರ್ 26, 2020) ನಡೆಯಿತು. ಈ ಸಂದರ್ಭದಲ್ಲಿ ಗಾಳಿಯಲ್ಲಿ 72 ಕುಶಾಲ ತೋಪು ಸಿಡಿಸಿ ಪೊಲೀಸರು ಅಂತಿಮ ಗೌರವ ಸಲ್ಲಿಸಿದ್ದರು.
ಚೆನ್ನೈನ ಆಸ್ಪತ್ರೆಯಲ್ಲಿ ಸತತ 52 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದ ಗಾನ ಗಾರುಡಿಗ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಶುಕ್ರವಾರ ಮಧ್ಯಾಹ್ನ 1.04ಕ್ಕೆ ಶ್ವಾಸಕೋಶ ಸ್ತಂಭನಕ್ಕೊಳಗಾಗಿ ಇಹಲೋಕ ತ್ಯಜಿಸಿದ್ದರು.
ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಪತ್ನಿ ಸಾವಿತ್ರಿ, ಪುತ್ರಿ ಪಲ್ಲವಿ ಹಾಗೂ ಪುತ್ರ ಎಸ್ ಪಿ ಚರಣ್ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅಂತ್ಯಸಂಸ್ಕಾರದ ವೇಳೆ ನಟ ವಿಜಯ್, ನಿರ್ದೇಶಕ ಭಾರತೀರಾಜ್, ಎಐಎಡಿಎಂಕೆ ಮುಖಂಡ ಡಿ.ಜಯಕುಮಾರ್, ಆಂಧ್ರಪ್ರದೇಶ ಮಂತ್ರಿ ಅನಿಲ್ ಕುಮಾರ್ ಯಾದವ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.