ಹುಬ್ಬಳ್ಳಿ: ಜಿಲ್ಲೆಯಲ್ಲಿ ರಸಗೊಬ್ಬರ ದಾಸ್ತಾನು ಹಾಗೂ ಮೆಕ್ಕೆಜೋಳ ಬೆಳೆಗಾರರಿಗೆ ನಗದು ವರ್ಗಾವಣೆ ಕುರಿತು ಕೃಷಿ ಸಚಿವ ಬಿ.ಸಿ. ಪಾಟೀಲ ರವಿವಾರ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.
ಇಲ್ಲಿನ ಸರ್ಕ್ನೂಟ್ ಹೌಸ್‌ನಲ್ಲಿ ಸಭೆ ನಡೆಸಿ, ಜಿಲ್ಲೆಯಲ್ಲಿರುವ ರಸಗೊಬ್ಬರ ದಾಸ್ತಾನು ಹಾಗೂ ಮೆಕ್ಕೆಜೋಳ ಬೆಳೆದು ಹಾನಿಯಾದ ರೈತರಿಗೆ ಸರಕಾರದಿಂದ ಪರಿಹಾರ ಬಂದಿರುವ ಕುರಿತು ಮಾಹಿತಿ ಪಡೆದುಕೊಂಡರು. ಜಿಲ್ಲೆಯಲ್ಲಿ ಬೀಜ ಹಾಗೂ ರಸಗೊಬ್ಬರದ ಕೊರತೆಯಿಲ್ಲ. ಯೂರಿಯಾ ಗೊಬ್ಬರದ ಅಗತ್ಯವಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸೋಯಾಬೀನ್ ಬೆಳೆ ಹಾನಿಯ ಕುರಿತು ಜಿಯೋ ಟ್ಯಾಗ್ ಮೂಲಕ ಸರ್ವೇ ಮಾಡಿ ಆದಷ್ಟು ಬೇಗ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮೆಕ್ಕಜೋಳ ಬೆಳೆದ ರೈತರಿಗೆ ಸರಕಾರದಿಂದ ನೇರವಾಗಿ ಅವರ ಖಾತೆಗೆ ಪರಿಹಾರದ ಹಣ ಜಮೆಯಾಗಿದೆ. ಕೆಲ ತಾಂತ್ರಿಕ ತೊಂದರೆಗಳಿಂದ ಹಣ ದೊರೆಯದ ಪ್ರಕರಣಗಳನ್ನು ತಮ್ಮ ಗಮನಕ್ಕೆ ಬರುತ್ತಿದ್ದಂತೆ ಇತ್ಯರ್ಥಗೊಳಿಸಬೇಕು ಎಂದು ಸಚಿವರು ಅಧಿಕಾರಿಗಳು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಈಗಾಗಲೇ ಸುಮಾರು 17 ಸಾವಿರಕ್ಕೂ ಹೆಚ್ಚು ರೈತರಿಗೆ ಮೆಕ್ಕೆಜೋಳ ಬೆಳೆದ ರೈತರಿಗೆ ಹಣ ಅವರ ಖಾತೆಗಳಿಗೆ ಜಮೆಯಾಗಿದೆ. ಉಳಿದಂತೆ ಜಂಟಿ ಖಾತೆಗೆ ಸಂಬಂಧಿಸಿದಂತೆ ಯಾರ ಖಾತೆಗೆ ಪರಿಹಾರ ನೀಡಬೇಕು ಎನ್ನುವುದರ ಕುರಿತು ಕೆಲ ರೈತರು ದೃಢೀಕರಣ ದಾಖಲೆ ನೀಡಿಲ್ಲ. ಹೀಗಾಗಿ ಒಂದಿಷ್ಟು ರೈತರಿಗೆ ಖಾತೆಗೆ ಪರಿಹಾರ ಹಣ ಬಿಡುಗಡೆಯಾಗುವುದು ಬಾಕಿಯಿದೆ. ಅವುಗಳನ್ನು ಕೂಡ ಆದಷ್ಟು ಬೇಗ ಪರಿಹಾರ ಒದಗಿಸಲಾಗುವುದು ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.
ಅಧಿಕಾರಿ ತರಾಟೆಗೆ: ಮೆಕ್ಕೆಜೋಳ ಬೆಳೆದ ರೈತರಿಗೆ ಹಣ ನೀಡಿಕೆ ಕುರಿತಾಗಿ ರಾಜ್ಯಮಟ್ಟದ ಅಧಿಕಾರಿಯೊಬ್ಬರನ್ನು ಸಚಿವರು ಫೋನ್ ಮೂಲಕ ತರಾಟೆಗೆ ತೆಗೆದುಕೊಂಡರೆಂದು ಹೇಳಲಾಗುತ್ತಿದೆ. ಸಭೆ ನಡುವೆಯೇ ಅಧಿಕಾರಿಗೆ ಕರೆ ಮಾಡಿ ಮಾಹಿತಿ ಕೇಳಿದ್ದು, ಮಾಹಿತಿ ನೀಡದ ಕಾರಣಕ್ಕೆ ಇಲಾಖೆಯಲ್ಲಿ ನಿಮ್ಮ ಸರ್ವಾಧಿಕಾರ ಸರಿಯಲ್ಲ ಎಂದು ಗದರಿದರು ಎಂದು ಹೇಳಲಾಗುತ್ತಿದೆ.
ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಡಾ| ಯು.ಬಿ. ಬಣಕಾರ, ಧಾರವಾಡ ಕೃಷಿ ವಿವಿ ಕುಲಪತಿ ಡಾ| ಎಂ.ಬಿ. ಚೆಟ್ಟಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ವಿಜಾಪುರ, ಉಪ ನಿರ್ದೇಶಕರಾದ ಸ್ಮಿತಾ, ಮಂಜುನಾಥ, ಸಹಾಯಕ ನಿರ್ದೇಶಕರು ಹಾಗೂ ಇನ್ನಿತರರಿದ್ದರು.