Advertisement

ಬೇಸಿಗೆಯಲ್ಲೂ ಸೋಯಾಬಿನ್‌ ಬೆಳೆ

11:46 AM Apr 26, 2022 | Team Udayavani |

ಆಳಂದ: ಮಳೆಗಾಲಕ್ಕೆ ಮಾತ್ರ ಸಿಮೀತ ಬೆಳೆ ಎಂದುಕೊಂಡಿದ್ದ ಸೋಯಾಬಿನ್‌ (ಎಣ್ಣೆಕಾಳು) ಬೆಳೆಯನ್ನು ತಾಲೂಕಿನ ಕೆಲವು ಭಾಗದ ರೈತರು ಬೇಸಿಗೆ ಹಂಗಾಮಿಗೂ ಪ್ರಯೋಗ ಮಾಡಿದ್ದು, ಕಾಯಿಕಟ್ಟಿ ಹೆಚ್ಚುವರಿ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.

Advertisement

ಆರಂಭದಲ್ಲಿ ವಿಜ್ಞಾನಿಗಳು ಅಥವಾ ಕೃಷಿ ಅಧಿಕಾರಿಗಳ ಸಲಹೆ- ಸೂಚನೆಗಳಿಲ್ಲದೇ ಮಹಾರಾಷ್ಟ್ರದಲ್ಲಿನ ರೈತರೊಬ್ಬರು ಬೇಸಿಗೆಯಲ್ಲಿ ನೀರಾವರಿ ಬೆಳೆಯಾಗಿ ಬೆಳೆದು ಅನುಸರಿಸಿದ ಮಾದರಿಯೇ ಈ ಭಾಗದ ಕೃಷಿಕರಿಗೆ ಪ್ರೇರಣಾದಾಯಕವಾಗಿದೆ.

ಮಹಾರಾಷ್ಟ್ರದ ಮುಚಳಂಬಾ ಗ್ರಾಮದಲ್ಲಿ ಬೇಸಿಗೆ ಹಂಗಾಮಿಗೆ ಈ ಬೆಳೆ ಬೆಳೆಯುವುದನ್ನು ನೋಡಿ ಎಲ್ಲರಿಗೂ ತಿಳಿಸಿದ್ದೆವು. ಇದನ್ನು ಕೆಲವರು ಅನುಸರಿಸಿ ಬೆಳೆಯಲು ಮುಂದಾಗಿದ್ದಾರೆ ಎಂದು ರುದ್ರವಾಡಿ ಗ್ರಾಮದ ಹಿರಿಯ ರೈತ ಚಂದ್ರಕಾಂತ ಖೋಬ್ರೆ ತಿಳಿಸಿದ್ದಾರೆ.

ತಾಲೂಕಿನ ತಡಕಲ್‌ ಗ್ರಾಮದ ಬಸವರಾಜ ಪವಾಡಶೆಟ್ಟಿ 1.20 ಎಕರೆ, ಸುಭಾಷ ಜಮಾದಾರ ಮೂರು ಎಕರೆ, ಶರಣಬಸಪ್ಪ ಜಮಾದಾರ ಎರಡು ಎಕರೆ, ರುದ್ರವಾಡಿ ಗ್ರಾಮದಲ್ಲಿ ಶ್ರೀಧರ ಕೊಟ್ಟರಕಿ ಎರಡು ಎಕರೆ, ಚಂದ್ರಕಾಂತ ಖೋಬ್ರೆ 1.20 ಎಕರೆ, ಉಮೇಶ ಬಳಬಟ್ಟಿ ಒಂದು ಎಕರೆ, ಬೆಳಮಗಿ ಗ್ರಾಮದ ಶರಣಬಸಪ್ಪ ಮುರುಡ ಏಳು ಎಕರೆ, ಚಂದ್ರಕಾಂತ ಮುರುಡ ಎರಡು ಎಕರೆ, ರಾಮಣ್ಣಾ ಮಾಲಾಜಿ ಎರಡು ಎಕರೆ ಬಿತ್ತನೆ ಮಾಡಿದ್ದಾರೆ. ಸೂರ್ಯಕಾಂತ ಮುರುಡ್‌ ಅವರ 1.20 ಎಕರೆ ಬೆಳೆ ರಾಶಿಯಾಗಿದೆ. ತಲಾ 60 ಕೆ.ಜೆಯುಳ್ಳ 22 ಪ್ಯಾಕೇಟ್‌ ರಾಶಿಯಾಗಿದೆ. ಖಂಡೇರಾವ್‌ ಡೋಲೆ 1.20 ಎಕರೆ, 19 ಪ್ಯಾಕೇಟ್‌ ಆಗಿದೆ. ಮುನ್ನೋಳಿಯಲ್ಲಿ ಬಾಬುರಾವ್‌ ಶ್ಯಾಂಭಾಯಿ ಸೇರಿದಂತೆ ಇನ್ನಿತರ ರೈತರು ಬೆಳೆ ಬೆಳೆದಿದ್ದಾರೆ. ಆಳಂದ ನಿವೃತ್ತ ಕಂದಾಯ ನಿರೀಕ್ಷಕ ಸೂರ್ಯಕಾಂತ ಘಸನೆ ಗುತ್ತಿಗೆ ಪಡೆದ ಹೊಲದಲ್ಲಿ ನಾಲ್ಕು ಎಕರೆ ಸೋಯಾಬಿನ್‌ ಬಿತ್ತನೆ ಕೈಗೊಂಡಿದ್ದಾರೆ. ಅಂಬಲಗಾ ರೈತ ಕೊಳ್ಳೆರೆ ಎನ್ನುವರು ಒಂದು ಎಕರೆ, ಹೀಗೆ ಹಲವಾರು ರೈತರು ಅಲ್ಲಲ್ಲಿ ಬಿತ್ತನೆ ಕೈಗೊಂಡು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ.

ಬೇಸಿಗೆಯಲ್ಲಿ ಸಾಧನೆ

Advertisement

ಎಣ್ಣೆ ಕಾಳು ಉತ್ಪಾದನೆಗೆ ಈ ಭಾಗದಲ್ಲಿ ಪ್ರಮುಖವಾಗಿದ್ದ ಪುಂಡಿ, ಸೂರ್ಯಕಾಂತಿ ಬೆಳೆ ಕೆಲವು ವರ್ಷಗಳಿಂದ ನೆಲಕ್ಕಿಚ್ಚಿದ ಮೇಲೆ ಹಂತ, ಹಂತವಾಗಿ ಕೃಷಿಕರ ಕೈಹಿಡಿದ ಸೋಯಾಬಿನ್‌ ಬೆಳೆ ಕಳೆದ ಮೂರ್‍ನಾಲ್ಕು ವರ್ಷಗಳಿಂದ ರೈತರಿಗೆ ವರವಾಗಿ ಪರಿಣಿಸಿದೆ. ಅಲ್ಲದೇ, ಇದರೊಂದಿಗೆ ಕುಸಬೆ ಬಿತ್ತನೆಯೂ ಚೇತರಿಸಿಕೊಂಡು ಅಧಿಕ ಪ್ರಮಾಣದಲ್ಲಿ ಬೆಳೆ ಕಾಣುವಂತಾಗಿದೆ. ಮಳೆಗಾಲಕ್ಕೆ ಸೀಮಿತವಾಗಿದ್ದ ಸೋಯಾಬಿನ್‌ ಬೆಳೆಯನ್ನು ಕಳೆದೆರಡು ವರ್ಷಗಳಿಂದಲೂ ಬೇಸಿಗೆಯಲ್ಲೂ ತಾಲೂಕಿನ ಕೆಲವು ರೈತರು ಬೆಳೆಯಲು ಮುಂದಾಗಿ ಯಶಸ್ಸು ಕಾಣುತ್ತಿರುವುದು ಮಾದರಿಯಾಗಿದೆ. ಮುಂಗಾರಿನ ಮಳೆಗಾಲದ ಜೂನ್‌, ಜುಲೈ ತಿಂಗಳಲ್ಲಿ ಸೋಯಾಬಿನ್‌ ಬೀತ್ತನೆ ಮಾಡಿ ಫಸಲು ಪಡೆದ ಬಳಿಕ ಹಿಂಗಾರಿನ ಅಥವಾ ಬೇಸಿಗೆ ಹಂಗಾಮಿನ ಜನವರಿ ತಿಂಗಳಲ್ಲೂ ಸೋಯಾಬಿನ್‌ ಬಿತ್ತನೆ ಮಾಡಿ ಅನೇಕರು ಯಶಸ್ಸು ಕಂಡಿದ್ದಾರೆ.

ಜನವರಿ ತಿಂಗಳಲ್ಲಿ ಬಿತ್ತನೆ ಮಾಡಿದರೆ ಉತ್ತಮ ಇಳುವರಿ ಬರುತ್ತದೆ. ಬೆಳೆಯೊಂದಕ್ಕೆ 100ರಿಂದ 120 ಕಾಯಿಗಳಿವೆ. 1.20 ಎಕರೆ ಸೋಯಾಬೀನ್‌ ಸಂಪೂರ್ಣ ಸಾವಯವ ಮಾಡಲಾಗಿದೆ. ಸುಮಾರು 15ರಿಂದ 20 ಬ್ಯಾಗ್‌ ಅಥವಾ 12 ಕ್ವಿಂಟಲ್‌ ಬೆಳೆ ನಿರೀಕ್ಷೆ ಮಾಡಲಾಗಿದೆ. 1.20 ಎಕರೆಯಲ್ಲಿ 40ಕೆಜಿ ಬೀಜ ಹಾಕಲಾಗಿದೆ. ಮನೆಯಲ್ಲಿ ರಾವೂರ ಸಂಶೋಧನಾ ಕೇಂದ್ರದ “ಕೊಲೆಸಂಗಮ’ ಬೀಜವಿದೆ. ಈ ಬಿತ್ತನೆ ಬೀಜದಿಂದ ಬೆಳೆ ತೆಗೆದು, ಆ ಬೆಳೆಯಿಂದ ಬೀಜ ಬಿತ್ತನೆ ಮಾಡಲಾಗುವುದು. ಮೂರು ಬಾರಿ ಬಿತ್ತನೆ ಮಾಡಬಹುದಾಗಿದೆ. -ಬಸವರಾಜ ಪವಾಡಶೆಟ್ಟಿ, ಹಿರಿಯ ಸಾವಯವ ರೈತ, ತಡಕಲ್‌

ಕಳೆದ ಸಾಲಿನ ಬೇಸಿಗೆಯಲ್ಲಿ ಪ್ರಾಯೋಗಿಕವಾಗಿ ಸೋಯಾಬಿನ್‌ ಬಿತ್ತನೆ ಕೈಗೊಂಡು ಉತ್ತಮ ಇಳುವರಿ ಪಡೆದ ಹಿನ್ನೆಲೆಯಲ್ಲಿ ಈ ಬಾರಿಯ ಜನವರಿ 14ರಂದು ಬಿತ್ತನೆ ಕೈಗೊಂಡಿದ್ದು, ಏ. 30ರೊಳಗೆ ಕಟಾವಾಗಲಿದೆ. ಹತ್ತು ದಿನಕ್ಕೊಮ್ಮೆ ನೀರು ಹಾಯಿಸಿದ್ದು, ಏಳು ಎಕರೆ ಬಿತ್ತನೆಯಾಗಿದೆ. ಬೇಸಿಗೆ ಬೆಳೆಗೆ ಪೈಪೋಟಿ ಕೊಡುವ ಬೆಳೆ ಸೋಯಾಬಿನ್‌ ಇಳುವರಿ ಉತ್ತಮವಾಗಿದ್ದು, ಬೆಲೆಯೂ ಅನುಕೂಲಕರವಾಗಿದೆ. ಬೇರೆ ಬೆಳೆಗೆ ಹೋಲಿಸಿದರೆ ಲಾಭದಾಯಕವಾಗಿದೆ. ಮುಂಗಾರಿನಲ್ಲೂ ಈ ಬೆಳೆ ಒಳ್ಳೆಯದು. ಆದರೆ ಬೇಸಿಗೆಯಲ್ಲಿ ಕೂಲಿಯಾಳು ಖಾಲಿ ಇರುತ್ತಾರೆ. ಕೊಂಚ ಕಡಿಮೆ ಖರ್ಚಿನಲ್ಲಿ ರಾಶಿಯಾಗುತ್ತದೆ. -ಶರಣಬಸಪ್ಪ ಮುರುಡ, ರೈತ, ಬೆಳಮಗಿ

ಬೇಸಿಗೆ ಹಂಗಾಮಿಗೆ ಸೋಯಾಬಿನ್‌ ಬಿತ್ತನೆಗೆ ಶಿಫಾರಸು ಮಾಡಿಲ್ಲ. ಬಿತ್ತನೆಯಾದ ಮಾಹಿತಿ ಇಲ್ಲ. ಈ ಕುರಿತು ಒಂದೆರಡು ದಿನಗಳಲ್ಲಿ ಮಾಹಿತಿ ನೀಡಲಾಗುವುದು. -ಶರಣಗೌಡ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ

ಮಹಾದೇವ ವಡಗಾಂವ

Advertisement

Udayavani is now on Telegram. Click here to join our channel and stay updated with the latest news.

Next