ಬಸ್ರೂರು: ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಷ್ಟಬಂಧ ಪ್ರತಿಷ್ಠಾ ಮಹೋತ್ಸವ ಹಾಗೂ ಬ್ರಹ್ಮಕಲಶಾಭಿಷೇಕ ಫೆ.13 ರಿಂದ ಫೆ.15ರವರಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಅವರು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಪುಷ್ಪ ಪವಾಡ ಖ್ಯಾತಿಯ ಸೌಕೂರು ಶ್ರೀ ದುರ್ಗಾಪರಮೇಶ್ವರೀ ದೇವರಲ್ಲಿ ದಿವ್ಯ ಶಕ್ತಿಯಿದೆ. ಭಕ್ತಿ ಮತ್ತು ಶ್ರದ್ಧೆಯಿಂದ ಆರಾಧಿಸುವವರಿಗೆ ಶ್ರೀ ದೇವರು ಆಶೀರ್ವದಿಸುತ್ತಾರೆ. ಸುದೀರ್ಘ ಇತಿಹಾಸ ಹೊಂದಿರುವ ಶ್ರೀ ದೇಗುಲದಲ್ಲಿ 12 ವರ್ಷಗಳ ನಂತರ ಈಗ ಅಷ್ಟಬಂಧ ಪ್ರತಿಷ್ಠಾ ಮಹೋತ್ಸವ ಹಾಗೂ ಬ್ರಹ್ಮಕಲಶಾಭೀಷೇಕ ಕಾರ್ಯಕ್ರಮ ನಡೆಯುತ್ತಿದ್ದು ಇಲ್ಲಿ ನಂಬಿದ ಭಕ್ತರ ಆರಾಧನೆಯೇ ಮುಖ್ಯವಾಗಿದ್ದು ಕಾರ್ಯಕ್ರಮ ಶ್ರೀ ದೇವರ ಆಶೀರ್ವಾದದಿಂದ ಯಶಸ್ವಿಯಾಗಲಿ ಎಂದು ಹಾರೈಸಿದರು.
ಅಧ್ಯಕ್ಷತೆಯನ್ನು ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಕಿಶನ್ ಹೆಗ್ಡೆ ಅವರು ವಹಿಸಿದ್ದು ಅಷ್ಟಬಂಧ ಪ್ರತಿಷ್ಠಾ ಮಹೋತ್ಸವ ಹಾಗೂ ಬ್ರಹ್ಮಕಲಶಾಭೀಷೇಕ ಕಾರ್ಯಕ್ರಮದಲ್ಲಿ ಭಕ್ತರ, ದಾನಿಗಳ, ಊರ-ಪರವೂರವರ ಸಹಕಾರ ಅಗತ್ಯವಾಗಿದೆ. ಶ್ರೀಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಧಾರ್ಮಿಕ ಪರಿಷತ್‌ನ ಸದಸ್ಯ ವಾಸುದೇವ ಯಡಿಯಾಳ್, ಮಾಜಿ ಮೊಕ್ತೇಸರ ಬಿಜ್ರಿ ರಾಜೀವ ಶೆಟ್ಟಿ, ಎಚ್.ಅಶೋಕ ಕುಮಾರ್ ಶೆಟ್ಟಿ, ಕಾವ್ರಾಡಿ ಜಿ.ಪಂ. ಸದಸ್ಯೆ ಜ್ಯೋತಿ ಎಂ., ಕಾವ್ರಾಡಿ ಗ್ರಾ.ಪಂಚಾಯತ್ ಅಧ್ಯಕ್ಷೆ ಗೌರಿ ಆರ್. ಶ್ರೀಯಾನ್, ಪಿ.ಬಿ.ಆರ್.ಹೆಗ್ಡೆ, ಗುಲ್ವಾಡಿ ರಾಮ್‌ಸನ್ ಟೆ„ಲ್ಸ್‌ನ ಆಡಳಿತ ನಿರ್ದೇಶಕ ಡಾ| ಬಾಲಕೃಷ್ಣ ಭಂಡಾರಿ ಮೊದಲಾದವರು ಉಪಸ್ಥಿತರಿದ್ದು ಶುಭಕೋರಿದರು.
ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಶ್ಚಂದ್ರ ಶೆಟ್ಟಿ ಸ್ವಾಗತಿಸಿದರು. ಬೇಳೂರು ವಿಷ್ಣುಮೂರ್ತಿ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಮೊಗವೀರ ವಂದಿಸಿದರು.