Advertisement

ಬಿತ್ತನೆ ಬೀಜಕ್ಕಾಗಿ 500 ರೈತರ ಸಾಲು; ಸಿಕ್ಕಿದ್ದು ಕೇವಲ 100 ಜನರಿಗೆ!

03:33 PM Jun 03, 2022 | Shwetha M |

ಸಾಗರ: ತಾಲೂಕಿನ ತಾಳಗುಪ್ಪ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಸಿಗದೆ ರೈತರು ಪರದಾಡುತ್ತಿದ್ದಾರೆ. ಮುಂಗಾರು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತುರ್ತು ಬಿತ್ತನೆ ಬೀಜದ ಅಗತ್ಯವಿದೆ. ಆದರೆ ತಾಳಗುಪ್ಪ ರೈತ ಸಂಪರ್ಕ ಕೇಂದ್ರದಲ್ಲಿ ಮಾತ್ರ ಬಿತ್ತನೆ ಬೀಜ ನೋ ಸ್ಟಾಕ್ ಎಂಬ ಮಾತು ಕೇಳಿ ಬರುತ್ತಿದ್ದು, ಇದರಿಂದಾಗಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ತಾಳಗುಪ್ಪ ಹೋಬಳಿಯಲ್ಲಿ ಅತಿಹೆಚ್ಚು ಭತ್ತ ಮತ್ತು ಮೆಕ್ಕೆಜೋಳ ಬೆಳೆಯಲಾಗುತ್ತಿದೆ. ಇಲ್ಲಿ 3 ಗುಂಟೆ ಜಮೀನಿನಿಂದ ಹಿಡಿದು 50 ಎಕರೆವರೆಗೂ ರೈತರು ಕೃಷಿ ಮಾಡುತ್ತಿದ್ದಾರೆ. ಪ್ರತಿವರ್ಷ ಈ ಸಮಯದಲ್ಲಿ ಬಿತ್ತನೆ ಬೀಜಕ್ಕಾಗಿ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಬರುವುದು ಮಾಮೂಲಿ. ಆದರೆ ಈ ಸಾಲಿನಲ್ಲಿ ಮಾತ್ರ ರೈತರಿಗೆ ಬಿತ್ತನೆ ಬೀಜ ಸರಿಯಾಗಿ ವಿತರಣೆಯಾಗಿಲ್ಲ.

ರೈತರು ಬಿತ್ತನೆ ಬೀಜಕ್ಕಾಗಿ ಶುಕ್ರವಾರ ಬೆಳಿಗ್ಗೆ 4 ಘಂಟೆಯಿಂದಲೇ ರೈತ ಸಂಪರ್ಕ ಕೇಂದ್ರದ ಎದುರು ಸರದಿ ಸಾಲಿನಲ್ಲಿ ನಿಂತಿದ್ದಾರೆ. 500ಕ್ಕೂ ಹೆಚ್ಚು ರೈತರು ಬಿತ್ತನೆ ಬೀಜಕ್ಕಾಗಿ ಸರದಿ ಸಾಲಿನಲ್ಲಿ ನಿಂತಿದ್ದರೆ, ಸಿಕ್ಕಿದ್ದು ಕೇವಲ 50 ರಿಂದ 100 ಜನ ರೈತರಿಗೆ ಮಾತ್ರ.

ಶುಕ್ರವಾರ ಬಿತ್ತನೆ ಬೀಜಕ್ಕಾಗಿ ರೈತರು ಮತ್ತು ಕೇಂದ್ರದ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ಸಂದರ್ಭದಲ್ಲಿ ಪೊಲೀಸರ ಮಧ್ಯಪ್ರವೇಶದಿಂದ ಗಲಾಟೆಯಾಗುವುದು ತಪ್ಪಿದೆ.

ಸರ್ಕಾರ ರೈತರಿಗೆ ಸಮರ್ಪಕ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಮಾಡುವುದಾಗಿ ಘೋಷಣೆ ಮಾಡಿದೆ. ಆದರೆ ಇಲಾಖೆಯ ಕೆಲವರ ನಿರ್ಲಕ್ಷ್ಯ ಧೋರಣೆಯಿಂದ ರೈತರು ಬಿತ್ತನೆ ಬೀಜಕ್ಕಾಗಿ ಹೋರಾಟ ಮಾಡುವ ದುಃಸ್ಥಿತಿ ನಿರ್ಮಾಣವಾಗಿದೆ.

Advertisement

ಇದನ್ನೂ ಓದಿ:ಕೇರಳ ಉಪಚುನಾವಣೆ: ಆಡಳಿತಾರೂಢ ಎಡಪಕ್ಷಕ್ಕೆ ತೀವ್ರ ಮುಖಭಂಗ, ಕಾಂಗ್ರೆಸ್ ಜಯಭೇರಿ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸೈದೂರು ಗ್ರಾಮದ ರೈತ ಬಲೀಂದ್ರಪ್ಪ, ಈಗಾಗಲೇ ಮುಂಗಾರುಮಳೆ ಪ್ರಾರಂಭಗೊಳ್ಳುತ್ತಿದ್ದು, ರೈತರಿಗೆ ತುರ್ತಾಗಿ ಬಿತ್ತನೆ ಬೀಜದ ಅಗತ್ಯವಿದೆ. ಆದರೆ ತಾಳಗುಪ್ಪ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಸಿಗುತ್ತಿಲ್ಲ. ಸರ್ಕಾರ ಎರಡು ತಿಂಗಳ ಮೊದಲೇ ರೈತರ ಮನೆಬಾಗಿಲಿಗೆ ಬಿತ್ತನೆ ಬೀಜ ತಲುಪಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನೋರ್ವ ರೈತ ಮಂಜು ಸುಳ್ಳೂರು ಮಾತನಾಡಿ, ಸರ್ಕಾರ ಸಕಾಲಕ್ಕೆ ರೈತರಿಗೆ ಬಿತ್ತನೆ ಬೀಜ ಪೂರೈಕೆ ಮಾಡಬೇಕು. ಇದರಿಂದ ರೈತರು ನಿಗದಿತ ಸಮಯಕ್ಕೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ. ತಾಳಗುಪ್ಪ ರೈತ ಸಂಪರ್ಕ ಕೇಂದ್ರಕ್ಕೆ ಬಿತ್ತನೆ ಬೀಜ ಪೂರೈಸುವ ನಿಟ್ಟಿನಲ್ಲಿ ತಕ್ಷಣ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next