ನರೇಗಲ್ಲ: ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಬುಧವಾರ ರಿಯಾಯ್ತಿದರದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಜಿಪಂ ಉಪಾಧ್ಯಕ್ಷೆ ಮಲ್ಲಮ್ಮ ಬಿಚ್ಚಾರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕೃಷಿ ಇಲಾಖೆಯಿಂದ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ವಿತರಿಸಬೇಕು ಎಂದರು. ರೋಣ ಕೃಷಿ ಇಲಾಖೆ ಅಧಿಕಾರಿ ರವೀಂದ್ರಗೌಡ ಪಾಟೀಲ ಮಾತನಾಡಿ, ಮುಂಗಾರು ಹಂಗಾಮಿಗೆ ರೈತರಿಗೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಗೆ ಇಲಾಖೆ ಸನ್ನದ್ಧವಾಗಿದೆ ಎಂದರು.
ನರೇಗಲ್ಲ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಜಗದೀಶ ಹಾದಿಮನಿ ಮಾತನಾಡಿ, ನರೇಗಲ್ಲ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 17 ಸಾವಿರ ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. 9,514 ಹೆಕ್ಟೇರ್ ಹೆಸರು, 54 ಹೆಕ್ಟೇರ್ ಹೈಬ್ರಿಡ್ ಜೋಳ, 192 ಹೆಕ್ಟೇರ್‌ನಲ್ಲಿ ಗೋವಿನಜೋಳ, ಸಜ್ಜಿ , 384 ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆ ಗುರಿ ಹೊಂದಲಾಗಿದೆ. ರೈತರು ಪಹಣಿ, ಆಧಾರ್ ಕಾಡ್‌ರ, ಬ್ಯಾಂಕ್ ಪಾಸ್ ಬುಕ್‌ನೊಂದಿಗೆ ಆಗಮಿಸಿ ಬಿತ್ತನೆ ಬೀಜ ಖರೀದಿಸಬೇಕು. ಸಾಮಾನ್ಯ ವರ್ಗದ ರೈತರಿಗೆ ಹೆಸರು 5 ಕೆಜಿಗೆ 362.5 ರೂ. ಎಸ್‌ಸಿ, ಎಸ್‌ಟಿ ವರ್ಗದವರಿಗೆ 5 ಕೆಜಿಗೆ 300 ರೂ., ಜೋಳ ಸಾಮಾನ್ಯ ಜನರಿಗೆ 3 ಕೆಜಿಗೆ 105 ರೂ. ಹಾಗೂ ಎಸ್‌ಸಿ,ಎಸ್‌ಟಿ ವರ್ಗದವರಿಗೆ 3 ಕೆಜಿಗೆ 60 ರೂ. ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗುವುದು. ರೈತರು ಇದರ ಪ್ರಯೋಜನ ಪಡೆಯಬೇಕು ಎಂದರು.
ಎಪಿಎಂಸಿ ಉಪಾಧ್ಯಕ್ಷ ನಿಂಗನಗೌಡ ಲಕ್ಕನಗೌಡ್ರ, ಜಿಪಂ ಸದಸ್ಯೆ ರೂಪಾ ಅಂಗಡಿ, ಅಂದಪ್ಪ ಬಿಚ್ಚಾರ, ಫಕೀರಪ್ಪ ಬಿ., ಬಸವರಾಜ ಹಡಪದ ಇತರರು ಇದ್ದರು.