ಸಕಲೇಶಪುರ: ಮಳೆಯ ಕೊರತೆ ನಡುವೆ 2023-24 ನೇ ಸಾಲಿನಲ್ಲಿ ತಾಲೂಕಿನ ರೈತರು ಭತ್ತ ಬಿತ್ತನೆ ಮಾಡಲು ಸಿದ್ಧತೆ ನಡೆಸುತಿದ್ದು ತಾಲೂಕಿನ ಹಲವೆಡೆ ಟ್ರ್ಯಾಕ್ಟರ್ ಹಾಗೂ ಎತ್ತುಗಳ ಮೂಲಕ ಭೂಮಿ ಹದಗೊಳಿಸುವ ಕೆಲಸವನ್ನು ರೈತರು ಮಾಡುತ್ತಿದ್ದಾರೆ.
ತಾಲೂಕಿನಲ್ಲಿ ಒಟ್ಟು ಅಂದಾಜು 4000 ಹೆಕ್ಟೇರ್ ವಿಸ್ತೀರ್ಣದಲ್ಲಿ ಭತ್ತದ ಬೆಳೆ ನಾಟಿ ಆಗುವ ಅಂದಾಜಿದೆ. ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ವತಿಯಿಂದ ರೈತರ ನೆರ ವಿಗೆ ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗಿದೆ.
ಮಳೆ ಬೆಳೆ ಪರಿಸ್ಥಿತಿ: 2023-24 ನೇ ಸಾಲಿನಲ್ಲಿ ಜನವರಿ 1 ರಿಂದ ಜೂನ್ 8 ರವರೆಗೆ ವಾಡಿಕೆ ಮಳೆ 268.2ಮಿ.ಮೀ ನಷ್ಟಿದ್ದು, ಈ ಅವಧಿಯಲ್ಲಿ ಪ್ರಸ್ತುತ ಸಾಲಿನಲ್ಲಿ 184.8 ಮಿ.ಮೀನಷ್ಟು ಮಾತ್ರ ಮಳೆಯಾಗಿದ್ದು, (ಶೇಕಡ 31 ರಷ್ಟು ಕೊರತೆಯಾಗಿರುತ್ತದೆ) ಒಟ್ಟಾರೆಯಾಗಿ ಇಲ್ಲಿಯವರೆಗೆ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುತ್ತದೆ. ಜೂನ್ ಮಾಹೆಯಲ್ಲಿ ವಾಡಿಕೆ ಮಳೆ ಜೂನ್ 1 ರಿಂದ 8 ನೇ ದಿನಾಂಕದ ವರೆಗೆ 60.3 ಮಿ.ಮೀ ಇದ್ದು ಪ್ರಸ್ತುತ 12.2 ಮಿ.ಮೀ ಮಾತ್ರ ಮಳೆಯಾಗಿದ್ದು ಶೇ.80ರಷ್ಟು ಕೊರತೆ ಆಗಿದೆ. ಭತ್ತದ ಸಸಿಮಡಿ ಸಿದ್ಧತೆ ಹಾಗೂ ನಾಟಿ ಕಾರ್ಯಕ್ಕೆ ಮಳೆ ಕೊರತೆಯಿಂದ ಹಿನ್ನಡೆ ಆಗಿರುತ್ತದೆ. ನೈಋತ್ಯ ಮುಂಗಾರು ಇದೀಗ ಕೇರಳ ಪ್ರವೇಶಿಸಿದ್ದು, ಮುಂದಿ ನ ಎರಡ್ಮೂರು ದಿನಗಳಲ್ಲಿ ಕರ್ನಾಟಕ ರಾಜ್ಯವನ್ನು ಪ್ರವೇಶಿಸುವ ಸಾಧ್ಯತೆಯಿದ್ದು, ಮುಂಗಾರಿನ ಪ್ರವೇಶದ ನಂತರ ಕೃಷಿ ಚಟುವಟಿಕೆಗಳು ಬಿರುಸುಗೊಳ್ಳುವ ಸಾಧ್ಯತೆ ಇರುತ್ತದೆ. ಈ ಬಾರಿ ವಾಡಿಕೆ ಮಳೆ ಆಗಲಿದೆಯೆಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಿತ್ತನೆ ಬೀಜ ವಿತರಣೆ: ತಾಲೂಕಿನ ರೈತ ಸಂಪರ್ಕ ಕೇಂದ್ರಗಳಿಗೆ (ಕಸಬಾ, ಬೆಳಗೋಡು, ಹಾನುಬಾಳು, ಹೆತ್ತೂರು, ಯಸಳೂರು) ಈ ಸಾಲಿನಲ್ಲಿ ಒಟ್ಟು 1328.25 ಕ್ವಿಂಟ ಲ್ ಭತ್ತದ ಬಿತ್ತನೆ ಬೀಜ (ಇಂಟಾನ್, ತುಂಗಾ ತಳಿ) ಸರಬರಾಜು ಆಗಿದ್ದು, 973.25 ಕ್ವಿಂಟ ಲ್ ಬಿತ್ತನೆ ಬೀಜವನ್ನು ರೈತರಿಗೆ ಸಹಾಯಧನ ದರದಲ್ಲಿ ವಿತರಣೆ ಮಾಡಲಾಗಿರುತ್ತದೆ. ಪ್ರಸ್ತುತ 355 ಕ್ವಿಂಟಲ್ ಬಿತ್ತನೆ ಬೀಜ ವಿವಿಧ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಲಭ್ಯವಿದ್ದು, ಬಿತ್ತನೆ ಬೀಜಕ್ಕೆ ಯಾವುದೇ ಕೊರತೆ ಇಲ್ಲ ಎಂದು ತಾಲೂಕು ಆಡ ಳಿತದ ಮೂಲ ಗಳಿಂದ ತಿಳಿದು ಬಂದಿದೆ.
ರಸಗೊಬ್ಬರ ಪೂರೈಕೆ: ತಾಲೂಕಿಗೆ ಈ ಮುಂಗಾರು ಹಂಗಾಮಿನಲ್ಲಿ ಸುಮಾರು 5121 ಮೆಟ್ರಿಕ್ ಟನ್ ನಷ್ಟು (ಯೂರಿಯ, ಪೋಟಾಶಿಯಂ, ಡಿಎಪಿ, ಕಾಂಪ್ಲೆಕ್ಸ್ ) ರಸಗೊಬ್ಬರ ಸರಬರಾಜು ಆಗಿದ್ದು, 2000 ಮೆಟ್ರಿಕ್ ಟನ್ ರಸಗೊಬ್ಬರ ರೈತರಿಗೆ ವಿತರಣೆ ಯಾಗಿರುತ್ತದೆ. ಪ್ರಸ್ತುತ ಖಾಸಗಿ ಮಾರಾಟಗಾರರ ಬಳಿ 2121 ಟನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕೇಂದ್ರ ಗಳಲ್ಲಿಗಳಲ್ಲಿ 1000 ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದೆ. ಕಾಂಪ್ಲೆಕ್ಸ್ ರಸಗೊಬ್ಬರ ಗಳನ್ನು ಡಿಎಪಿ ಮತ್ತು ಎಂಒಪಿ ರಸಗೊಬ್ಬರಗಳ ಬದಲಾಗಿ ಬಳಸಲು ಸಹಾಯಕ ಕೃಷಿ ನಿರ್ದೇಶಕರು, ರೈತರಲ್ಲಿ ಮನವಿ ಮಾಡಿದ್ದಾರೆ.
ತಾಲೂಕಿನಲ್ಲಿ ರೈತರಿಗೆ ಯಾವುದೆ ಗೊಂದಲವಿಲ್ಲದಂತೆ ಭತ್ತದ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಬೆಳೆಯುವ ಭತ್ತದ ಬೆಳಗೆ ಮಾತ್ರವಲ್ಲದೆ ಕಾಫಿ, ಮೆಣಸು, ಏಲಕ್ಕಿ ಸೇರಿದಂತೆ ಇತರ ಬೆಳೆಗಳಿಗೂ ಸಹ ಯಾವುದೆ ರೀತಿಯಲ್ಲಿ ಕೊರತೆ ಇಲ್ಲದಂತೆ ರಸಗೊಬ್ಬರ ದಾಸ್ತನಿರಿಸಲಾಗಿದೆ.
● ಚೆಲುವರಂಗಪ್ಪ, ಸಹಾಯಕ ಕೃಷಿ ನಿರ್ದೇಶಕರು
ತಾಲೂಕಿನಲ್ಲಿ ಯಾರಾದರು ರೈತರಿಗೆ ಭತ್ತದ ಬಿತ್ತನೆ ಬೀಜ ಅಥವಾ ರಸಗೊಬ್ಬರ ಕೊರತೆ ಕಂಡು ಬಂದರೆ ನೇರವಾಗಿ ನನ್ನನ್ನು ಸಂಪರ್ಕ ಮಾಡಲಿ, ರೈತರು ಆತಂಕಕ್ಕೆ ಒಳಗಾಗುವುದು ಬೇಡ
. ● ಸಿಮೆಂಟ್ ಮಂಜು, ಸಕಲೇಶಪುರ ಶಾಸಕ
ಮಲೆನಾಡಿನಲ್ಲಿ ತುಂಗಾ ತಳಿಯ ಭತ್ತವನ್ನು ಬೆಳೆಯಲು ಇತ್ತೀಚಿನ ದಿನಗಳಲ್ಲಿ ಆದ್ಯತೆ ನೀಡಲಾಗುತ್ತಿದೆ. ಏಕೆಂದರೆ ತುಂಗಾ ತಳಿಯು ರೋಗದಿಂದ ಮುಕ್ತವಾಗಿದ್ದು ಎಕರೆಗೆ 20 ರಿಂದ 25 ಕ್ವಿಂಟಲ್ ಭತ್ತ ಬೆಳೆಯಬಹುದಾಗಿದೆ. 25 ಕೆ.ಜಿ.ಯ ತುಂಗಾ ಬಿತ್ತನೆ ಬೀಜಕ್ಕೆ ಸೊಸೈಟಿಗಳಲ್ಲಿ 750ರೂ.ಗೆ ದೊರಕುತ್ತಿದ್ದು ಮಾರುಕಟ್ಟೆಯಲ್ಲಿ 2000 ರೂ.ದರವಿದೆ. ವಾಡಿಕೆಯಂತೆ ಜೂನ್ 10ರ ಒಳಗೆ ಭತ್ತದ ಸಸಿ ಮಡುವುಗಳನ್ನು ನಾಟಿ ಮಾಡಬೇಕಿತ್ತು. ಆದರೆ, ಮಳೆಯಿಲ್ಲದೆ ಕಾರಣ ಸಸಿ ಮಡುವುಗಳನ್ನು ನಾಟಿ ಮಾಡುವುದು ವಿಳಂಬವಾಗುತ್ತಿದೆ. ಇದರಿಂದ ಇಳುವರಿ ಕಡಿಮೆಯಾಗುವ ಸಾಧ್ಯತೆಯಿದೆ.
● ಲೋಹಿತ್ ಕೌಡಹಳ್ಳಿ, ಭತ್ತದ ಬೆಳೆಗಾರರ
– ಸುಧೀರ್ ಎಸ್.ಎಲ್