ಸಂಡೂರು: ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು 21 ಸಾವಿರ ಹೆಕ್ಟೇರ್ ಬಿತ್ತನೆಯಾಗಿದೆ. 9300 ಹೆಕ್ಟೇರ್ ಮುಸುಕಿನ ಜೋಳ, 1798 ಹೆಕ್ಟೆರ್ ಜೋಳ, ತೋರಣಗಲ್ ಹೋಬಳಿಯಲ್ಲಿ 800 ಹೆಕ್ಟೇರ್ ಭತ್ತ, 400 ಹೆಕ್ಟೇರ್ ತೊಗರಿ ಬೇಳೆ, 2500 ಹೆಕ್ಟೇರ್ ಹತ್ತಿ, 24 ಹೆಕ್ಟೇರ್ ಎಳ್ಳು ಚೋರನೂರು ಭಾಗದಲ್ಲಿ ಬಿತ್ತನೆಯಾಗಿದೆ.
30 ಸಾವಿರ ಗುರಿ ಬಿತ್ತನೆಗೆ ಹೊಂದಿದ್ದು ಇನ್ನು 9000 ಸಾವಿರ ಹೆಕ್ಟೇರ್ ಬಿತ್ತನೆಯಾಗಬೇಕಾಗಿದೆ ಎಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ ತಿಳಿಸಿದರು. ಅವರು ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಅಧ್ಯಕ್ಷೆ ಫರ್ಜಾನ ಗೌಸ್ ಅಜಂ ಡಿ. ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾಹಿತಿ ನೀಡಿ ಮಾತನಾಡಿ, ತಾಲೂಕಿನಲ್ಲಿ ಬಿತ್ತನೆ ಬೀಜಕ್ಕೆ ಕೊರತೆ ಇಲ್ಲ. ಡಿಬಿಟಿ ಮುಖಾಂತರ ಎಕರೆ ಎಷ್ಟೇ ಇದ್ದರೂ ರೈತರ ಖಾತೆಗೆ ರೂ. 5000 ಹಾಕಲು ಆದೇಶ ಬಂದಿದೆ. 14184 ರೈತರು ಬೆಳೆದರ್ಶನಕ್ಕೆ
ಹೆಸರು ನೋಂದಾಯಿಸಿಕೊಂಡಿದ್ದಾರೆ. 5257 ರೈತರಿಗೆ ಡಿಬಿಟಿ ಮೂಲಕ ಅವರ ಖಾತೆಗೆ ಜಮಾ ಮಾಡಿದ್ದು, 6733 ರೈತರು ಆಧಾರ್ ಕಾರ್ಡ್‌ನ್ನು ನೋಂದಾಯಿಸಿಕೊಂಡಿಲ್ಲ ಎಂದು ಕಾರ್ಯನಿರ್ವಾಹಕ ಅಧಿಕಾರಿಗೆ ತಿಳಿಸಿದರು.ಮೀನುಗಾರಿಕೆ ಇಲಾಖೆ ಅಧಿಕಾರಿ ಬಸವನಗೌಡ ಪಾಟೀಲ್ ಮಾತನಾಡಿ, ಕೆರೆಗಳಲ್ಲಿ ನೀರು ತುಂಬಿದ್ದು, 7 ಲಕ್ಷ ರೂಪಾಯಿ ಕಾಮಗಾರಿ ನಡೆದಿದೆ. 15 ಕೆರೆಗಳ ಟೆಂಡರ್‌ನ್ನು ಕರೆಯಲಾಗಿದೆ ಎಂದರು.
ನಿರ್ಮಿತ ಕೇಂದ್ರದಲ್ಲಿ ಜಿಲ್ಲಾಮಟ್ಟದಿಂದ ಯಾವುದೇ ಕೆಲಸಗಳು ನಡೆದಿಲ್ಲ. ಶಾಸಕರು ಕಾಮಗಾರಿಗೆ ಚಾಲನೆ ನೀಡಿ 4 ತಿಂಗಳಾದರೂ ಕಾಮಗಾರಿ ಅಪೂರ್ಣವಾಗಿದೆ. ನಡೆದಿರುವ ಕಾಮಗಾರಿಗಳು ಸೋರಿಕೆಯಾಗಿವೆ. ಶಾಸಕರಿಗೆ ಪ್ರೋತ್ಸಾಹ ನೀಡಿ ಎಂದು ತಾಪಂ ಅಧಿಕಾರಿ ಇಒ ಗಮನ ಸೆಳೆದರು.
ಕ್ಷೇತ್ರ ಶಿಕ್ಷಣಾಧಿಕಾರಿ ಡಾ| ಐ.ಆರ್. ಅಕ್ಕಿ ಮಾತನಾಡಿ, ಏಪ್ರಿಲ್ 2ರಿಂದ ಶಿಕ್ಷಕರನ್ನು ಕೋವಿಡ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇವೆ. ಕೊಂಡಾಪುರ, ಕೋಡಾಲು, ಭುಜಂಗನಗರ ಗ್ರಾಮಗಳಲ್ಲಿ ವಠಾರ ಶಾಲೆ ಪ್ರಾರಂಭಿಸಿದ್ದೇವೆ. ವಿದ್ಯಾಗಮ ಎನ್ನುವ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗಾಗಿಯೇ ಪ್ರಾರಂಭಿಸಿದ್ದೇವೆ. ಚಂದನ ಟಿವಿಯಲ್ಲಿ 8,9.10ನೇ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಶಿಕ್ಷಣ ಪ್ರಾರಂಭವಾಗಿದೆ. 31-08-2020ರ ವರೆಗೆ ಶಾಲೆಗಳು ಪ್ರಾರಂಭವಾಗುವುದಿಲ್ಲ. ಸರ್ಕಾರದ ಆದೇಶದಂತೆ ಮುಂದಿನ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು. ಅಕ್ಷರದಾಸೋಹ ಅಧಿಕಾರಿ ತೇನಸಿಂಗ ನಾಯ್ಕ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವೆಂಕಟೇಶ, ಪಶು ಸಂಗೋಪನಾ ಅಧಿಕಾರಿ ಎಂ.ಬಿ. ಪಾಟೀಲ್, ನೀರಾವರಿ ಪಂಚಾಯತ್ ರಾಜ್ ಅಧಿಕಾರಿ ಅನಿಲ್‌ಕುಮಾರ ಇದ್ದರು.