Advertisement

ಬಿತ್ತನೆಯಾದರೂ ದೂರವಾಗದ ಆತಂಕ

04:46 PM Nov 05, 2018 | Team Udayavani |

ಬೆಳಗಾವಿ: ಮುಂಗಾರು-ಹಿಂಗಾರು ಮಳೆ ಅಭಾವ ಮತ್ತೊಮ್ಮೆ ಜಿಲ್ಲೆಯ ರೈತ ಸಮುದಾಯ ಬರಗಾಲದ ಆತಂಕದಿಂದ ಹೊರಬರದಂತೆ ಮಾಡಿವೆ. ಎರಡೂ ಮಳೆಗಳು ನಮ್ಮ ಕೈಹಿಡಿಯುತ್ತದೆ. ಒಳ್ಳೆಯ ಬೆಳೆ ಬರುತ್ತದೆ ಎಂಬ ಲೆಕ್ಕಾಚಾರಗಳು ತಪ್ಪಿರುವ ಬೆನ್ನಲ್ಲೇ ಮುಂದೇನು ಎಂಬ ಚಿಂತೆ ರೈತರಲ್ಲಿ ಕಾಣಿಸುತ್ತಿದೆ.

Advertisement

ಹಿಂಗಾರು ಮಳೆ ಅವಧಿಯಲ್ಲಿ ಈ ವೇಳೆಗೆ ಶೇ.50ಕ್ಕೂ ಅಧಿಕ ಪ್ರಮಾಣದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಳ್ಳಬೇಕಿತ್ತು. ಆದರೆ ಇದುವರೆಗೆ ಶೇ.46ರಷ್ಟು ಬಿತ್ತನೆಯಾಗಿದೆ. ಹಿಂಗಾರು ಆರಂಭದಲ್ಲಿ ಬಿತ್ತನೆ ಮಾಡಿದ ಬೆಳೆಗಳು ಸಹ ನೀರಿಲ್ಲದೆ ಕಮರುತ್ತಿರುವ ದೃಶ್ಯ ಬಹುತೇಕ ತಾಲೂಕುಗಳಲ್ಲಿ ಕಾಣುತ್ತಿದೆ. ಎಂದಿನಂತೆ ಮಳೆಗಾಗಿ ರೈತರ ಪ್ರಾರ್ಥನೆ ನಡೆದಿದೆ.

ಬಿತ್ತನೆ ಪ್ರದೇಶ: ಜಿಲ್ಲೆಯಲ್ಲಿ ಹಿಂಗಾರಿನಲ್ಲಿ 3.32 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಅಕ್ಟೋಬರ್‌ ಅಂತ್ಯದವರೆಗೆ 1,53,351 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿರುವುದು ರೈತರ ಜತೆ ಕೃಷಿ ಇಲಾಖೆಗೂ ಆಲೋಚನೆ ಮಾಡುವಂತೆ ಮಾಡಿದೆ. ಇದರಲ್ಲಿ ನೀರಾವರಿ ಆಧಾರಿತ ಕ್ಷೇತ್ರದಲ್ಲಿ ಕೇವಲ ಶೇ.13.2 ಬಿತ್ತನೆಯಾಗಿದ್ದರೆ ಶೇ.62.3 ಅಂದರೆ 1,38,955 ಹೆಕ್ಟೇರ್‌ ಮಳೆಯಾಧಾರಿತ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

ಮಳೆಯಾಗದೆ ಆತಂಕ: ಗೋಕಾಕ ಹಾಗೂ ರಾಯಬಾಗ ತಾಲೂಕುಗಳಲ್ಲಿ ಅತೀ ಕಡಿಮೆ ಅಂದರೆ ಶೇ. 9 ಹಾಗೂ ಶೇ. 105ರಷ್ಟು ಬಿತ್ತನೆಯಾಗಿದ್ದರೆ ಬೈಲಹೊಂಗಲ ತಾಲೂಕಿನಲ್ಲಿ ಅತೀ ಹೆಚ್ಚು ಅಂದರೆ ಶೇ.84 ರಷ್ಟು ಬಿತ್ತನೆ ಮಾಡಲಾಗಿದೆ. ರಾಮದುರ್ಗದಲ್ಲಿ ಶೇ.74.1 ಹಾಗೂ ಸವದತ್ತಿಯಲ್ಲಿ ಶೇ.48.9ರಷ್ಟು ಬಿತ್ತನೆಯಾಗಿ ಮಳೆ ಬಾರದೇ ಇರುವುದು ಆತಂಕಕ್ಕೆ ಕಾರಣವಾಗಿದೆ. ಕೃಷಿ ಇಲಾಖೆ ಮಾಹಿತಿ ಪ್ರಕಾರ ಅಕ್ಟೋಬರ್‌ ತಿಂಗಳಲ್ಲಿ ಮಳೆ ಕೊರತೆ ಇದೆ. ಜಿಲ್ಲೆಯ 35 ಹೋಬಳಿಗಳಲ್ಲೂ ಮಳೆ ಅಭಾವ ಕಂಡು ಬಂದಿದೆ. ಬಿತ್ತನೆ ಬೀಜ, ಗೊಬ್ಬರದ ಸಂಗ್ರಹ ಸಾಕಷ್ಟಿದ್ದರೂ ಅದನ್ನು ತೆಗೆದುಕೊಳ್ಳಲು ರೈತರು ಧೈರ್ಯ ಮಾಡುತ್ತಿಲ್ಲ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಮಾತು.

ಬೀಜ-ಗೊಬ್ಬರದ ಕೊರತೆ ಇಲ್ಲ: ಹಿಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ಕಡಲೆ, ಜೋಳ, ಗೋದಿ, ಗೋವಿನ ಜೋಳ ಬಿತ್ತನೆ ಕಾರ್ಯ ನಡೆಯಬೇಕು. ನಮ್ಮಲ್ಲಿ ಬೀಜ ಹಾಗೂ ಗೊಬ್ಬರದ ಕೊರತೆ ಇಲ್ಲ. ಆದರೆ ಮಳೆಯ ಅಗತ್ಯತೆ ಇದೆ. ಈಗ ಮಳೆ ಬಂದರೆ ಒಳ್ಳೆಯದು. ಏಕೆಂದರೆ ಬಿತ್ತನೆ ಮಾಡಿದ ಬೆಳೆಗಳು ಉಳಿದುಕೊಳ್ಳುತ್ತವೆ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಮೊಕಾಶಿ. ಹಿಂಗಾರು ಹಂಗಾಮಿನಲ್ಲಿ ಜೋಳ, ಗೋವಿನಜೋಳ, ಗೋದಿ, ಕಡಲೆಗೆ ಬಹಳ ಬೇಡಿಕೆ. ಜಿಲ್ಲೆಯಲ್ಲಿ 2,15,075 ಧಾನ್ಯಗಳ ಬಿತ್ತನೆ ಗುರಿ ಇದೆ. ಆದರೆ ಇದುವರೆಗೆ 92,013 ಹೆ. ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬೇಳೆಕಾಳುಗಳಲ್ಲಿ ಕಡಲೆ ಬೀಜ 99,000 ಹೆ. ಪ್ರದೇಶದಲ್ಲಿ ಬಿತ್ತನೆಯಾಗಬೇಕಿದ್ದು, ಇದುವರೆಗೆ 60,100 ಹೆ.ಬಿತ್ತನೆ ಕಾರ್ಯ ನಡೆದಿದೆ. ಆದರೆ ಮಳೆ ಕೊರತೆಯಿಂದ ಬಿತ್ತನೆ ಮಾಡಿದ ಎಲ್ಲ ಬೆಳೆಗಳು ಕೈಗೆ ಬರುವ ವಿಶ್ವಾಸ ರೈತರಲ್ಲಿ ಕಾಣುತ್ತಿಲ್ಲ.

Advertisement

ಬಿಗಡಾಯಿಸಿದ ರೈತರ ಪರಿಸ್ಥಿತಿ: ಸದಾ ಬರಗಾಲಕ್ಕೆ ತುತ್ತಾಗುವ ಸವದತ್ತಿ, ರಾಮದುರ್ಗ ತಾಲೂಕಿನಲ್ಲಿ ಈ ಬಾರಿಯೂ ಅದೇ ಸ್ಥಿತಿ ಮುಂದುವರಿದಿದೆ. ಮುಂಗಾರು ಹಂಗಾಮಿನಲ್ಲಿ ರಾಮದುರ್ಗ ತಾಲೂಕಿನಲ್ಲಿ 34,284, ಸವದತ್ತಿ ತಾಲೂಕಿನಲ್ಲಿ 18,359 ಹೆ. ಪ್ರದೇಶದಲ್ಲಿನ ಬೆಳೆಹಾನಿಯಾಗಿರುವುದು ರೈತರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.

ಮುಂಗಾರು ಹಂಗಾಮಿನ ಬೆಳೆ ಕೈಗೆ ಬರಲಿಲ್ಲ. ಹಿಂಗಾರಿಯಲ್ಲಿ ಒಂದಿಷ್ಟು ಬಿತ್ತನೆ ಮಾಡಿ ಹಣ ಮಾಡಿಕೊಳ್ಳಬೇಕೆಂದರೆ ಇಲ್ಲಿಯೂ ಮಳೆ ಕೈ ಕೊಟ್ಟಿದೆ. ಬಿತ್ತನೆ ಮಾಡಿದ ಬೆಳೆಗಳಿಗೆ ನೀರಿಲ್ಲ. ಹೊಸದಾಗಿ ಬಿತ್ತನೆ ಮಾಡಲು ಮಳೆ ಇಲ್ಲ. ಆದರೆ ಕೃಷಿಗಾಗಿ ಮಾಡಿದ ಸಾಲ ಮಾತ್ರ ಏರುತ್ತಲೇ ಇದೆ ಎಂದು ರಾಮದುರ್ಗ ತಾಲೂಕಿನ ರೈತ ಮಲ್ಲಿಕಾರ್ಜುನ ಹೊಸಮನಿ ಅಸಹಾಯಕತೆ ತೋರುತ್ತಾರೆ.

ಬೆಳೆಹಾನಿ
ಮುಂಗಾರು ಹಂಗಾಮಿನಲ್ಲಿ ಒಳ್ಳೆಯ ಮಳೆಬಿದ್ದು ಬಿತ್ತನೆ ಕಾರ್ಯ ಪೂರ್ಣ ಪ್ರಮಾಣದಲ್ಲಿ ನಡೆದಿದ್ದರೂ ನಂತರ ಮಳೆ ಕೊರತೆ ಉಂಟಾದ ಕಾರಣ ಆತಂಕ ಪಡುವ ರೀತಿಯಲ್ಲಿ ಬೆಳೆಹಾನಿಯಾಗಿದೆ. ಕೃಷಿ ಇಲಾಖೆ ಈಗಿನ ವರದಿಗಳ ಪ್ರಕಾರ ಜಿಲ್ಲೆಯಲ್ಲಿ 81,000 ಹೆಕ್ಟೇರ್‌ ಪ್ರದೇಶದ ಬೆಳೆ ಹಾನಿಯಾಗಿದೆ. ಅದರಲ್ಲಿ ಮೆಕ್ಕೆ ಜೋಳ, ದ್ವಿದಳ ಹಾಗೂ ಏಕದಳ ಧಾನ್ಯ ಅಧಿಕ ಪ್ರಮಾಣದಲ್ಲಿ ಹಾನಿಗೊಳಗಾಗಿದೆ. ಅಥಣಿ ತಾಲೂಕಿನಲ್ಲಿ 72,641 ಹೆ. ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದ್ದು ಸುಮಾರು 28 ಸಾವಿರ ಹೆ. ಪ್ರದೇಶದ ಬೆಳೆ ಹಾನಿಯಾಗಿದೆ. 

ಮುಂಗಾರಿನಲ್ಲಿ ಮಳೆಯ ಅಭಾವದಿಂದ ಬೆಳೆಹಾನಿಯಾಗಿದೆ. ಹಿಂಗಾರಿನಲ್ಲಿ ಬಿತ್ತನೆ ಕಾರ್ಯ ನಡೆದಿದ್ದರೂ ಮಳೆಯ ಅವಶ್ಯಕತೆ ತುಂಬ ಇದೆ. ರೈತರು ಆತಂಕಪಡುವ ಬದಲು ತಮ್ಮ ಬೆಳೆಗಳಿಗೆ ವಿಮಾ ಯೋಜನೆ ಅಳವಡಿಸಿ ಅದರಿಂದ ಮುಂದಾಗುವ ಅನಾಹುತ ತಪ್ಪಿಸಿಕೊಳ್ಳಬೇಕು. ಕಡ್ಡಾಯವಾಗಿ ಬೆಳೆವಿಮೆ ಮಾಡಿಸಿಕೊಂಡರೆ ಉತ್ತಮ.
. ಜಿಲಾನಿ ಮೊಕಾಶಿ,
  ಜಂಟಿ ನಿರ್ದೇಶಕರು, ಕೃಷಿ ಇಲಾಖೆ

„ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next