ಹುಣಸೂರು: ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ತಾಲೂಕಿನ ಕಟ್ಟೆಮಳಲವಾಡಿಯಲ್ಲಿ ಆಯೋಜಿಸಿದ್ದ ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಎತ್ತೂಂದರ ಎರಡೂ ಕಾಲು ಮುರಿದ ಪರಿಣಾಮ ಸ್ಪರ್ಧೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಯಿತು.
ಗ್ರಾಮದ ಕೋಡಿ ಗಣಪತಿ ದೇವಸ್ಥಾನದ ಬಳಿ ಭಾನುವಾರ ಆಯೋಜಿಸಿದ್ದ, ಜೋಡೆತ್ತಿನ ಗಾಡಿ ಓಟದ ಸ್ಪರ್ಧೆಯ ಆರಂಭದಲ್ಲೇ ಪಿರಿಯಾಪಟ್ಟಣ ತಾಲೂಕಿನ ಹಾಲನಹಳ್ಳಿಯ ಎತ್ತುಗಳು ಗಾಡಿ ಸಮೇತ ಓಡುವಾಗ ದಿಕ್ಕುತಪ್ಪಿ ಮೂರು ತಡೆ ಕಂಬಕ್ಕೆ ಗುದ್ದಿದ ಪರಿಣಾಮ ಕಂಬಗಳು
ಹಾಗೂ ಚೇರೊಂದು ಮುರಿದು ಗಾಡಿ ಪೊದೆಯೊಳಕ್ಕೆ ಎಳೆದೊಯ್ದರೆ, ಹುಣಸೂರಿನ ಮಹದೇವರ ಎತ್ತುಗಳು ಆರಂಭದಲ್ಲಿಯೇ ದೇವಸ್ಥಾನದ ಪಕ್ಕದಲ್ಲಿನ ಹಳ್ಳಕ್ಕೆ ಎಳೆದೊಯ್ಯಿತು, ಗಾಡಿಯನ್ನು ಹಳ್ಳದಿಂದ ಜನರು ಮೇಲೆತ್ತಿದರು, ಗಾಡಿ ಮಾಲಿಕ ಮಹದೇವರಿಗೆ ಸಣ್ಣ-ಪುಟ್ಟಗಾಯವಾಗಿ ಬಚಾವಾದರು.
ಮುರಿದ ಎತ್ತಿನ ಎರಡು ಕಾಲುಗಳು: ಕೆ.ಆರ್.ನಗರ ತಾಲೂಕಿನ ಕೆಸ್ತೂರು ಗ್ರಾಮದ ಎಲೆ ಲೋಕೇಶರ ಜೋಡೆತ್ತಿನ ಗಾಡಿಯ ಓಟದ ಸಂದರ್ಭದಲ್ಲಿ ಎಡ ಭಾಗದ ಎತ್ತು ಮುಗ್ಗರಿಸಿ ಕೆಳಗೆ ಬಿದ್ದ ವೇಳೆ ಬಲ ಭಾಗದ ಎತ್ತು ಗಾಡಿಸಮೇತ ಬಿದ್ದ ಹೋರಿಯನ್ನೂ ಎಳೆದೊಯ್ದರಿಂದ ಬಿದ್ದ ಎತ್ತಿನ ಎರಡು ಮುಂಗಾಲು ಮುರಿದು ಹೋಗಿತ್ತು, ಈ ದೃಶ್ಯವಂತೂ ನೋಡುಗರ ಮನಕಲಕಿತು.
ಮಾಲಿಕ ಲೋಕೇಶ್‌ರಂತೂ ತನ್ನ ಕಣ್ಮುಂದೆಯೇ ತಮ್ಮ ಪ್ರೀತಿಯ ಎತ್ತಿನ ಕಾಲು ಮುರಿದು ರೋಧಿಸಿದ್ದನ್ನು ಕಂಡು ಕಣ್ಣೀರು ಸುರಿಸಿದರು. ತಕ್ಷಣವೇ ಎತ್ತಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಘಟನೆಯಿಂದ ಸ್ಪರ್ಧೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ 15 ಜೋಡೆತ್ತು ಗಾಡಿಗಳ ಪೈಕಿ ಅಂತಿಮ ಸ್ಪರ್ಧೆಗೆ ಆಯ್ಕೆಯಾಗಿದ್ದ 7 ಜೋಡಿ ಎತ್ತುಗಳಿಗೆ ಸಮಾಧಾನಕರ ಬಹುಮಾನ ಹಂಚಿ, ಗಾಯಗೊಂಡಿದ್ದ ಎತ್ತಿನ ಮಾಲಿಕರಿಗೆ ಆಯೋಜಕರು 5 ಸಾವಿರ ಹಾಗೂ ನೆರೆದಿದ್ದ ಪ್ರೇಕ್ಷಕರು ಸಹ ನೆರವು ನೀಡಿದರು. ಸ್ಪರ್ಧೆ ವೀಕ್ಷಿಸಲು ಸುತ್ತಮುತ್ತಲ ಗ್ರಾಮಸ್ಥರು ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದರು. ಗ್ರಾಮಾಂತರ ಠಾಣೆ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.