Advertisement
ಇದೀಗ ಸವರಿನ್ ಗೋಲ್ಡ್ ಬಾಂಡ್(ಎಸ್‌ಜಿಬಿ) ಯೋಜನೆಯ 9ನೇ ಸರಣಿ ಡಿ. 28ರಂದು ಪ್ರಾರಂಭಗೊಳ್ಳಲಿದ್ದು, ಜ.1 2021ರ ವರೆಗೆ ಜಾರಿಯಲ್ಲಿರಲಿದೆ. ಆರ್‌ಬಿಐ ಈ ಯೋಜನೆಯಲ್ಲಿ ಹೂಡಿಕೆಗೆ ಅವಕಾಶ ಮಾಡಿಕೊಟ್ಟಿದ್ದು, ಬಾಂಡ್ ಬೆಲೆಯನ್ನು ಪ್ರತೀ ಗ್ರಾಂ.ಗೆ 5 ಸಾವಿರ ರೂ. ಎಂದು ನಿಗದಿ ಮಾಡಿದೆ. ಮಾರುಕಟ್ಟೆ ಧಾರಣೆ ಮೇಲೆ ಮೌಲ್ಯ ನಿರ್ಧಾರ ಆರ್‌ಬಿಐನ ಬಾಂಡ್ ಆಗಿರುವ ಎಸ್‌ಜಿಬಿ ಬಾಂಡ್ ಮೌಲ್ಯವನ್ನು ಚಿನ್ನದ ಮಾರುಕಟ್ಟೆಯ ಮೂಲಕ ಅಳೆಯಲಾಗುತ್ತದೆ. ಬಾಂಡ್ 5 ಗ್ರಾಂ. ಚಿನ್ನದ್ದಾಗಿದ್ದರೆ, 5 ಗ್ರಾಂ ಚಿನ್ನದ ಬೆಲೆ ಬಾಂಡ್ ಬೆಲೆಗೆ ಸಮನಾಗಿರುತ್ತದೆ. ಮೆಚ್ಯುರಿಟಿ ಬಳಿಕ ಹಣವನ್ನು ಹೂಡಿಕೆದಾರರ ಖಾತೆಗೆ ಜಮಾ ಮಾಡಲಾಗುತ್ತದೆ. ಈ ವೇಳೆ ಕಡೆಯ 3 ಕೆಲಸದ ದಿನಗಳ ಬೆಲೆಯನ್ನು ಮಾನ ದಂಡವನ್ನಾಗಿಟ್ಟುಕೊಂಡು ಅದರ ಸರಾಸರಿ ಬೆಲೆಯನ್ನು ಅನ್ವಯಿಸಿ ಬಾಂಡ್‌ನ ಮೌಲ್ಯವನ್ನು ನಿರ್ಧರಿಸಲಾಗುತ್ತದೆ. ಇನ್ನೂ ಆಧಾರ್ ಕಾರ್ಡ್, ಪಾನ್, ಪಾಸ್‌ಪೋರ್ಟ್, ವೋಟರ್ ಐಡಿ ಪೈಕಿ ಯಾವುದಾದರೂ ಒಂದನ್ನು ನೀಡಬಹುದು. ಅರ್ಜಿ ಸಲ್ಲಿಸುವ ಸಂದರ್ಭ ಪಾನ್ ಸಂಖ್ಯೆ ಕಡ್ಡಾಯ.
ಪ್ರಮುಖ ಅಂಚೆ ಕಚೇರಿ, ವಾಣಿಜ್ಯ ಬ್ಯಾಂಕ್‌ಗಳು, ಬಿಎಸ್‌ಇ, ಎನ್‌ಎಸ್‌ಇ ಮತ್ತು ನ್ಯಾಶನಲ್ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಶನ್‌ನಲ್ಲಿ ಎಸ್‌ಜಿಬಿಗಳನ್ನು ಖರೀದಿಸಬಹುದಾಗಿದ್ದು, ಓರ್ವ ವ್ಯಕ್ತಿಯು ಆರ್ಥಿಕ ವರ್ಷದಲ್ಲಿ ಕನಿಷ್ಠ 1 ಗ್ರಾಂ.ನಿಂದ ಗರಿಷ್ಠ 4 ಕೆ.ಜಿ.ವರೆಗಿನ ಚಿನ್ನದ ಬಾಂಡ್‌ಗಳನ್ನು ಖರೀದಿಸಬಹುದು. 8 ವರ್ಷಗಳ ಮೆಚ್ಯುರಿಟಿ ಸಮಯ ಹೊಂದಿದ್ದು, ಬಯಸಿದರೆ 5 ವರ್ಷಗಳಿಗೆ ಮುಕ್ತಾಯ ಗೊಳಿಸಬಹುದು. ಸವರಿನ್ ಗೋಲ್ಡ್ ಬಾಂಡ್ ಯೋಜನೆಯಡಿ ನಿಮ್ಮ ಹೂಡಿಕೆಯ ಮೊತ್ತಕ್ಕೆ ವಾರ್ಷಿಕ ಶೇ. 2.50ರ ಬಡ್ಡಿ ದರವೂ ಇದ್ದು, ತೆರಿಗೆ ವಿನಾಯಿತಿಯನ್ನೂ ಹೊಂದಿದೆ. ಬಡ್ಡಿಯನ್ನು 6 ತಿಂಗಳಿಗೆ ಒಮ್ಮೆ ಪಾವತಿಸಲಾಗುತ್ತದೆ.