Advertisement

ಸೌತೆ ಕೀ ಬಾತ್‌ 

12:30 AM Feb 11, 2019 | |

ತರಕಾರಿಯಿಂದ ಲಾಭ ಬೇಕು ಅನ್ನುವವರು ಮಂಗಳೂರು ಸೌತೆಯನ್ನು ಬೆಳೆಯಿರಿ. ಹೆಚ್ಚು ಖರ್ಚು ಬೇಡದ, ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ಕೊಡುವ ಬೆಳೆ ಇದು.  

Advertisement

ಇತರೆ ತರಕಾರಿಗೆ ಹೋಲಿಸಿದರೆ ಸಾಂಬಾರು ಸೌತೆ ಬೆಳೆಯುವುದು ಸಲೀಸು. ಇದಕ್ಕೆ ಕಂಬ ನೆಡಬೇಕಿಲ್ಲ, ದಾರದ ಆಶ್ರಯ ಬೇಕಿಲ್ಲ. ಈ ಸೌತೆ ಬಳ್ಳಿ ನೆಲದಲ್ಲೇಹಬ್ಬುತ್ತಾ ಸುಮಾರು ಒಂದು ಒಂದೂವರೆ ಕೆ.ಜಿ ತೂಗುವ ಕಾಯಿಗಳನ್ನು ನೀಡುತ್ತವೆ.  ಇದು ಎಂಟು-ಹತ್ತು ಕೊಯ್ಲು ಬರುವ ಬಳ್ಳಿ, ಆದ್ದರಿಂದ ಇದಕ್ಕೆ ಅಧಿಕ ಪೋಷಕಾಂಶಗಳು ಬೇಕು. ಬರೀ ರಾಸಾಯನಿಕ ಗೊಬ್ಬರದಿಂದ ಪೋಷಕಾಂಶ ಕೊಟ್ಟರೆ, ಇಳುವರಿ ಕಮ್ಮಿಯಾಗಿ, ಸೈಜ್‌ ಚಿಕ್ಕದಾಗಿ, ರುಚಿ ಕೂಡ ಇರುವುದಿಲ್ಲ.

ಹಾಗಂತ ಬಳ್ಳಿ ಹಾಕುವ ಮೊದಲೇ ಇಡೀ ಹೊಲಕ್ಕೆ ಟನ್‌ ಗಟ್ಟಲೇ ಕೊಟ್ಟಿಗೆ ಗೊಬ್ಬರ ಹಾಕುವುದು ಬೇಡ. ಇದು ಬಹಳ ಅಂತರವಿಟ್ಟು ಬೆಳೆಯುವ ಬೆಳೆಯಾದ್ದರಿಂದ ಜಮೀನಿನ ತುಂಬ ಕೊಟ್ಟಿಗೆ ಗೊಬ್ಬರ ಹಾಕುವ ಬದಲು ಬಳ್ಳಿಯ ಬುಡಗಳಿಗಷ್ಟೇ ಕೊಡಬಹುದು.

ಬೇಸಾಯ ಪದ್ಧತಿ 
ಎರಡುಮೂರು ಸಲ ಉಳುಮೆ ಮಾಡಿ, ಹದ ಮಾಡಿದ ಜಮೀನಿನಲ್ಲಿ ಆರರಿಂದ ಎಂಟು ಅಡಿಗೆ ಒಂದೊಂದು ಸಾಲು ಬಿಟ್ಟುಕೊಳ್ಳಿ. ಆ ಸಾಲಿನಲ್ಲಿ ಸುಮಾರು ಮೂರು ಅಡಿಗೆ ಒಂದರಂತೆ ಗುರುತು ಮಾಡಿಕೊಂಡು ಅಲ್ಲಿ ಚಿಕ್ಕ ಚಿಕ್ಕ ಗುಣಿ ಮಾಡುತ್ತಾ, ಎರಡು ಬೊಗಸೆಯಷ್ಟು ಉತ್ಕೃಷ್ಟ ಕೊಟ್ಟಿಗೆ ಗೊಬ್ಬರ ಹಾಕಿ ಮೇಲೆ ಮಣ್ಣು ಮುಚ್ಚಿ. ಎಂಟತ್ತು ದಿನ ಬಿಟ್ಟು ಆ ಗುಣಿಗಳಲ್ಲಿ ನಾಲ್ಕು ಬೀಜ ಹಾಕಿ ನೀರು ಕೊಡಿ. 

1) ಮಂಗಳೂರು ಸೌತೆ 2) ಎಳವನ್‌ 3 ) ಸುನಾಮಿ ಇವು ಮೂರೂ ಬೇರೆ ಬೇರೆ ಥರ ಬರುತ್ತವಾದರೂ ಬೆಳೆಯುವ ರೀತಿ ಒಂದೇ.

Advertisement

ಈ ಮೂರೂ ಸೌತೆಗಳು ಬಿತ್ತನೆ ಮಾಡಿದ ಐವತ್ತು ದಿನದಿಂದಲೇ ಕಾಯಿ ಕೊಡಲು ಶುರು ಮಾಡುತ್ತವೆ. 

ನಿರ್ವಹಣೆ 
ಬಿತ್ತಿ ಹದಿನೈದು ದಿನದ ನಂತರ ಸದೃಢವಾಗಿರುವ ಎರಡು ಅಥವಾ ಮೂರು ಸಸಿ ಬಿಟ್ಟು ಉಳಿದಿದ್ದು ಕಿತ್ತು ಹಾಕಿ. ಕಸ ತಗೆದು ಸ್ವಚ್ಚಗೊಳಿಸಿ. ನಾಲ್ಕೈದು ದಿನಕ್ಕೊಮ್ಮೆ ತಪ್ಪದೇ ನೀರು ಕೊಡಿ.  ಮಾಮೂಲಾಗಿ ಒಂದು ಎಕರೆ ಸೌತೆ ಬಳ್ಳಿಗೆ 25 ಕೆ.ಜಿ ಯೂರಿಯಾ, 20 ಕೆ.ಜಿ ಡಿಎಪಿ, 30 ಕೆ.ಜಿ ಪೊಟ್ಯಾಷ್‌ ರಾಸಾಯನಿಕ ಗೊಬ್ಬರ ಬೇಕು. ಆದರೆ, ಅಷ್ಟನ್ನೂ ಒಂದೇ ಸಲ ಬೇಡ. ಪ್ರತಿ ಇಪ್ಪತ್ತು ದಿನಕ್ಕೊಮ್ಮೆ ಇಷ್ಟಿಷ್ಟೇ ರಾಸಾಯನಿಕ ಗೊಬ್ಬರ ಕೊಡುತ್ತಿರಿ. ಜೊತೆಗೆ ತಿಂಗಳ ನಂತರ ಒಮ್ಮೆ ಹಾಗೂ ಎರಡು ತಿಂಗಳಾದಾಗ ಮತ್ತೂಮ್ಮೆ ಕುರ್ಚಿಗೆಯ ಸಹಾಯದಿಂದ ಬಳ್ಳಿಯ ಎರಡು ಬದಿ ತಗ್ಗು ಮಾಡಿ ಎರೆಹುಳು ಗೊಬ್ಬರ ಕೊಡಿ. ಎರೆಹುಳು ಗೊಬ್ಬರದಲ್ಲಿ ಸ್ವಲ್ಪ ಬೇವಿನ ಹಿಂಡಿ ಮಿಕ್ಸ್‌ ಮಾಡಿ.  ಎಕರೆಗೆ ಸುಮಾರು ಆರು ಸಾವಿರ ಸಸಿ ನಾಟಿ ಮಾಡಬಹುದು.  ಒಂದು ಕಾಯಿ ಅರ್ಧ ದಿಂದ ಒಂದೂ ಕಾಲು ಕೆ.ಜಿಯಷ್ಟು ತೂಗುತ್ತದೆ. ಇಂಥ ಕಾಯಿಗಳು ಒಂದು ಬಳ್ಳಿಗೆ ನಾಲ್ಕರಿಂದ ಐದು ಸಿಗುತ್ತವೆ.

ಎಳವನ್‌ ತಳಿಯಾದರೆ ಒಂದು ಎಕರೆಗೆ ಅಂದಾಜು ಮೂರೂವರೆ ಸಾವಿರ ಸೌತೆ ಸಸಿ ನಾಟಿ ಮಾಡಬಹುದು. ಒಂದು ಕಾಯಿ 2- 3 ಕೆ.ಜಿ ತೂಗಬಲ್ಲವು. ಒಂದು ಬಳ್ಳಿಗೆ ಎರಡರಿಂದ ಮೂರು ಕಾಯಿ ಸಿಕ್ಕೇಸಿಗುತ್ತದೆ. 

ಸುನಾಮಿ ತಳಿಯಾದರೆ, ಎಕರೆಗೆ ನಾಲ್ಕರಿಂದ ನಾಲ್ಕೂವರೆ ಸಾವಿರ ಬೇಕು. ಕಾಯಿಗಳು ಒಂದೂವರೆಯಿಂದ ಎರಡು ಕೆ.ಜಿ ಇರುತ್ತವೆ. ಒಂದು ಬಳ್ಳಿ ನಾಲ್ಕೈದು ಕಾಯಿ ಬಿಡುತ್ತದೆ.  ಖರ್ಚು ಎಕರೆಗೆ ಸುಮಾರು ಇಪ್ಪತ್ತರಿಂದ ಇಪ್ಪತೈದು ಸಾವಿರ ಅಷ್ಟೇ ಖರ್ಚಾಗಿರುತ್ತದೆ. ಕಾಯಿಗಳು ಹತ್ತು ರೂ. ಕೆ.ಜಿ ಯಂತೆ ಮಾರಾಟವಾದರೆ ಅಂದಾಜು ಒಂದೂ ಕಾಲು ಲಕ್ಷ ಲಾಭ ಗ್ಯಾರಂಟಿ. 

– ಎಸ್‌.ಕೆ. ಪಾಟೀಲ್‌

Advertisement

Udayavani is now on Telegram. Click here to join our channel and stay updated with the latest news.

Next