Advertisement

ದಕ್ಷಿಣ ರಾಜ್ಯಗಳ ಸಭೆ ಯಶಸ್ವಿ: ರಾಜನಾಥ ಸಿಂಗ್‌

06:00 AM Sep 19, 2018 | Team Udayavani |

ಬೆಂಗಳೂರು: ಆಂತರಿಕ ಭದ್ರತೆ ಹಾಗೂ ಅಭಿವೃದ್ಧಿ ವಿಚಾರಗಳ ಕುರಿತ ದಕ್ಷಿಣ ವಲಯ ಪರಿಷತ್‌ ಸಭೆ ಯಶಸ್ವಿಯಾಗಿದ್ದು, 27 ವಿಷಯಗಳಲ್ಲಿ 22 ವಿಷಯಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಹೇಳಿದರು. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಪುದುಚೇರಿ ಮತ್ತು ಅಂಡಮಾನ್‌ ನಿಕೋ ಬಾರ್‌ ದ್ವೀಪಗಳ ರಾಜ್ಯಗಳ ಪ್ರಮುಖರ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ರಾಜ್ಯಗಳಲ್ಲಿ ಪ್ರಮುಖವಾಗಿ ಮೀನುಗಾರರ ರಕ್ಷಣೆ ಕುರಿತು ಚರ್ಚಿಸಲಾಗಿದ್ದು, ಭಾರತದ ಮೀನುಗಾರರಿಗೆ ಶೇ.96ರಷ್ಟು ಬಯೋಮೆಟ್ರಿಕ್‌ ಕಾರ್ಡ್‌ ವಿತರಿಸಲಾಗಿದೆ. ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಸ್ಕಾಲರ್‌ ಶಿಪ್‌  ನೀಡುವಿಕೆಯಲ್ಲಿ ಏಕರೂಪತೆ ತರಲು ತೀರ್ಮಾನಿಸಲಾಯಿತು ಎಂದರು.

Advertisement

2016ರಲ್ಲಿ ತಮಿಳುನಾಡಿನಲ್ಲಿ ನಡೆದ ಸಭೆಯ ನಿರ್ಣಯಗಳ ಕಾರ್ಯ ಪ್ರಗತಿ ಕುರಿತು ಸಭೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ರಾಜ್ಯಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಕುರಿತು ಚರ್ಚಿಸಲಾಗಿದ್ದು, ರಾಜ್ಯಗಳ ಪೊಲೀಸ್‌ ವ್ಯವಸ್ಥೆ ಆಧುನೀಕರಣ ಕುರಿತಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಬಿಡುಗಡೆ ಮಾಡಿದ ಹಣವನ್ನು ಪೊಲಿಸ್‌ ವ್ಯವಸ್ಥೆ ಆಧುನೀಕರಣಕ್ಕೆ ಬಳಸಿಕೊಂಡ ವೆಚ್ಚದ ಪ್ರಮಾಣ ಪತ್ರ ಸಲ್ಲಿಸಿದರೆ, ಕೇಂದ್ರ ಹೆಚ್ಚಿನ ಅನುದಾನ ನೀಡಲಿದೆ ಎಂದು ಹೇಳಿದರು.

ಮಂಗಳವಾರದ ಸಭೆಯಲ್ಲಿ ಐದು ವಿಷಯಗಳನ್ನು ಇತ್ಯರ್ಥಗೊಳಿಸದೇ ಉಳಿಸಿಕೊಳ್ಳಲಾಗಿದ್ದು, ಪುದುಚೇರಿ ವಿಮಾನ ನಿಲ್ದಾಣ ಆರಂಭ ಮಾಡುವ ಕುರಿತು ತಮಿಳುನಾಡು ಹಾಗೂ ಪುದುಚೇರಿ ನಡುವೆ ಭೂ ವ್ಯಾಜ್ಯ ಗೊಂದಲ ಇರುವುದರಿಂದ ಪ್ರಕರಣ ಇತ್ಯರ್ಥಗೊಳಿಸಲು ಸಾಧ್ಯವಾಗಿಲ್ಲ ಎಂದರು. ಆಂಧ್ರ ಪ್ರದೇಶದ ಶೇಷಾಚಲಂ ಬೆಟ್ಟದಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ರಕ್ತ ಚಂದನ ಮಾರಾಟ ತಡೆಯುವ ಕುರಿತು ಸಂಪೂರ್ಣ ಮಾಹಿತಿ ಪಡೆಯಲು ಸಮಿತಿ ರಚಿಸಲಾಗಿದೆ. ಅದೇ ರೀತಿ ತಮಿಳು ನಾಡು ರಾಜಧಾನಿ ಚೆನ್ನೈಗೆ ತೆಲಗು-ಗಂಗಾ ಯೋಜನೆ ಅಡಿಯಲ್ಲಿ ಕುಡಿಯುವ ನೀರು ಬಿಡುವ ಕುರಿತಂತೆಯೂ ತಾಂತ್ರಿಕ ತಜ್ಞರ ಸಮಿತಿ ರಚಿಸಲಾಗಿದ್ದು, ಸಮಿತಿ ವರದಿ ನೀಡಿದ ನಂತರ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಅದರಂತೆ ಆಂಧ್ರಪ್ರದೇಶ ವಿಧಾನಸಭೆ ಸದಸ್ಯರ ಸಂಖ್ಯೆಯನ್ನು 175 ರಿಂದ 225 ಕ್ಕೆ ಹೆಚ್ಚಳ ಮಾಡುವ ಕುರಿತಂತೆ ಶೀಘ್ರವೇ ಸಂವಿಧಾನ ತಿದ್ದುಪಡಿ ತಂದು ನಿರ್ಣಯ ಕೈಗೊಳ್ಳಲು ನಿರ್ಧರಿಸಲಾಗಿದೆ. ಆಂಧ್ರ ಮತ್ತು ತಮಿಳುನಾಡು ಭಾಗದ ಪುಲಿಕಟ್‌ ಭಾಗದಲ್ಲಿ ಮೀನುಗಾರರಿಗೆ ಮೀನುಗಾರಿಕೆ 
ನಡೆಸುವ ಕುರಿತು ಎರಡೂ ರಾಜ್ಯಗಳು ಮಾತುಕತೆ ಮೂಲಕ ಚರ್ಚಿಸಿ ಬಗೆಹರಿಸಿಕೊಳ್ಳಲು ಅವಕಾಶ ಹಾಗೂ ಸಿಗಡಿ ಮೀನಿನಲ್ಲಿ ಆಂಟಿ ಬಯೋಟಿಕ್‌ ಅಂಶ ಪತ್ತೆಯಾಗಿರುವುದರಿಂದ ಅದನ್ನು ವಿದೇಶಕ್ಕೆ ರಪು¤ ಮಾಡಲು ಸೂಕ್ತ ನಿಯಮ ಜಾರಿಗೆ ತರುವ ಬಗ್ಗೆಯೂ ಸಭೆಯಲ್ಲಿ
ಚರ್ಚೆಯಾಗಿದ್ದು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಹೇಳಿದರು. ಇದೇ ವೇಳೆ, ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳುವುದು ರಾಜ್ಯ ಸರ್ಕಾರದ ಕರ್ತವ್ಯ. ವಿದೇಶಿ ಹಾಗೂ ಸ್ವದೇಶಿ ಪ್ರಜೆಗಳಿದ್ದಾರೆ ಎಂದು ತಿಳಿದುಕೊಳ್ಳು ವುದು ಅಗತ್ಯ ಎಂದು ಹೇಳಿದರು.

ವರದಿ ಆಧರಿಸಿ ಅನುದಾನ ಬಿಡುಗಡೆ 
ಕೇರಳ ಹಾಗೂ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಬಗ್ಗೆ ಕೇಂದ್ರ ತಂಡ ಪರಿಶೀಲನೆ ನಡೆಸಿ ವರದಿ ನೀಡಲಿದೆ. ಕೇಂದ್ರ ಅಗತ್ಯ ನೆರವು ನೀಡುವ ಭರವಸೆ ನೀಡಿದೆ. ಕೇಂದ್ರ ತಂಡದ ವರದಿ ಆಧರಿಸಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ರಾಜನಾಥ ಸಿಂಗ್‌ ಹೇಳಿದರು. ಇನ್ನು ಐಟಿ, ಇಡಿ ಹಾಗೂ ಸಿಬಿಐ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ ಅವರು, ಕೇಂದ್ರಿಯ ತನಿಖಾ ಸಂಸ್ಥೆಗಳು ತಮ್ಮ ಕಾರ್ಯ  ನಿರ್ವಹಿಸಲು ಸ್ವತಂತ್ರವಾಗಿದೆ. ಪ್ರತಿಪಕ್ಷ ಕಾಂಗ್ರೆಸ್‌ ಸುಮ್ಮನೇ ಆರೋಪ ಮಾಡುತ್ತಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next