ಸಿಯೋಲ್/ದಕ್ಷಿಣ ಕೊರಿಯಾ: ದಕ್ಷಿಣ ಕೊರಿಯಾದ ವಿರೋಧ ಪಕ್ಷದ ನಾಯಕ ಲೀ ಜೇ ಮ್ಯೂಂಗ್ ಪತ್ರಕರ್ತರ ಜತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಕುತ್ತಿಗೆಗೆ ಚೂರಿಯಿಂದ ಇರಿದ ಘಟನೆ ಬಂದರು ನಗರಿ ಬೂಸಾನ್ ನಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:Viral Video: ಲಾಟರಿಯಲ್ಲಿ ಮಿಲಿಯನ್ ಡಾಲರ್ ಗೆದ್ದ ಬಳಿಕ ವೇದಿಕೆಯಲ್ಲೇ ಕುಸಿದ ಮಹಿಳೆ
ನೂತನ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ ನಂತರ ಲೀ ಅಪಾರ ಪ್ರಮಾಣದ ಪತ್ರಕರ್ತರ ಜತೆ ಮಾತನಾಡುತ್ತ ನಡೆದುಕೊಂಡು ಹೋಗುತ್ತಿದ್ದು, ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಏಕಾಏಕಿ ಲೀ ಕುತ್ತಿಗೆಗೆ ಚೂರಿಯಿಂದ ಇರಿದ ದೃಶ್ಯವನ್ನು ದಕ್ಷಿಣ ಕೊರಿಯಾ ಟಿವಿ ಚಾನೆಲ್ ಗಳು ಪ್ರಸಾರ ಮಾಡಿರುವುದಾಗಿ ವರದಿ ವಿವರಿಸಿದೆ.
ಕುತ್ತಿಗೆಗೆ ಚೂರಿಯಿಂದ ಇರಿದ ಪರಿಣಾಮ ಲೀ (59ವರ್ಷ) ಕುಸಿದು ಬಿದ್ದಿದ್ದು, ಜನರು ಅವರ ಬಳಿ ತೆರಳಿ ನೆರವು ನೀಡಲು ಮುಂದಾಗಿದ್ದರು. ವ್ಯಕ್ತಿಯೊಬ್ಬರು ಲೀ ಅವರ ಗಾಯಗೊಂಡ ಕುತ್ತಿಗೆಯ ಭಾಗವನ್ನು ಕರ್ಚಿಫ್ ನಿಂದ ಒತ್ತಿ ಹಿಡಿದಿರುವುದು ದೃಶ್ಯದಲ್ಲಿ ಸೆರೆಯಾಗಿದೆ.
ಪತ್ರಕರ್ತರ ಜತೆ ಮಾತನಾಡುತ್ತ ತನ್ನ ಕಾರಿನತ್ತ ಲೀ ಅವರು ತೆರಳುತ್ತಿದ್ದಾಗ, ದಾಳಿಕೋರ ಆಟೋಗ್ರಾಫ್ ನೀಡುವಂತೆ ಕೇಳಿದ್ದ, ಆಗ ಆತ ಕುತ್ತಿಗೆಗೆ ಚೂರಿಯಿಂದ ಇರಿದಿದ್ದ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಸ್ಥಳೀಯ ಟಿವಿ ಚಾನೆಲ್ ವೈಟಿಎನ್ ಗೆ ತಿಳಿಸಿದ್ದಾರೆ.