Advertisement
ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೆ ಇನ್ ಅವರಿಗೂ ಕೋವಿಡ್-19 ಒಂದು ರೀತಿಯಲ್ಲಿ ವರವಾಗಿ ಪರಿಣಮಿಸಿದೆ. ಮೂನ್ ಕೈಗೊಂಡ ಕ್ರಮಗಳಿಗೆ ಜಾಗತಿಕವಾಗಿ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಸಹಜವಾಗಿಯೇ ಚುನಾವಣೆಯಲ್ಲಿ ಇದು ಮತಗಳಾಗಿ ಪರಿವರ್ತಿತವಾಗುವ ಸಾಧ್ಯತೆಗಳು ನಿಚ್ಚಳವಾಗಿ ಗೋಚರಿಸುತ್ತಿವೆ. ಹಲವು ದೇಶಗಳು ಕೋವಿಡ್ ಹತೋಟಿಗೆ ದಕ್ಷಿಣ ಕೊರಿಯಾದ ಸಲಹೆಗಳನ್ನು ಕೇಳುತ್ತಿವೆ.
ಮತದಾರರು ಮಾಸ್ಕ್ ಧರಿಸುವುದು ಕಡ್ಡಾಯವಾಗಿತ್ತು. ಟೆಂಪರೇಚರ್ ಟೆಸ್ಟ್ ಪಾಸ್ ಆಗುವ ತನಕ ಮತಗಟ್ಟೆಯೊಳಗೆ ಪ್ರವೇಶವಿರಲಿಲ್ಲ. ಸ್ಯಾನಿಟೈಸರ್‌ನಲ್ಲಿ ಕೈತೊಳೆದ ಬಳಿಕ ಪ್ಲಾಸ್ಟಿಕ್ ಗ್ಲೌಸ್ ಧರಿಸಿ ಮತ ಹಾಕಬೇಕಿತ್ತು. ಕ್ವಾರಂಟೈನ್‌ನಲ್ಲಿರುವವರಿಗೆ ಇ-ಮೈಲ್ ಮೂಲಕ ಮತದಾನ ಮಾಡಲು ಅವಕಾಶ ನೀಡಲಾಗಿತ್ತು. ವಿಶೇಷವೆಂದರೆ ಜನರು ಕೂಡ ಚುನಾವಣೆಗೆ ಸಂಪೂರ್ಣವಾಗಿ ಸಹಕರಿಸಿದ್ದಾರೆ. ಒಂದು ವಾರದ ಹಿಂದೆಯೇ ಮತದಾನ ಪ್ರಕ್ರಿಯೆ ಶುರುವಾಗಿತ್ತು. ಎ.13ರಂದು ಅಂತಿಮ ಸುತ್ತಿನ ಮತದಾನ ನಡೆಯಿತು. ಮತಗಟ್ಟೆಗಳಲ್ಲಿ ಲಾಕ್‌ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು.
Related Articles
Advertisement
ಈ ಚುನಾವಣೆಯ ಮುಖ್ಯ ವಿಷಯವೇ ಕೋವಿಡ್ ಆಗಿತ್ತು. ಸಾಮಾನ್ಯವಾಗಿ ಉದ್ಯೋಗ ಸೃಷ್ಟಿ, ಸಾರ್ವತ್ರಿಕ ಆರೋಗ್ಯ ಯೋಜನೆ, ಆರ್ಥಿಕತೆ ಈ ಮುಂತಾದ ವಿಷಯಗಳು ಪ್ರಚಾರದಲ್ಲಿ ಪ್ರಾಮುಖ್ಯ ಪಡೆಯುತ್ತಿದ್ದವು. ಆದರೆ ಈ ಸಲ ಎಲ್ಲ ಅಭ್ಯರ್ಥಿಗಳು ಕೋವಿಡ್-19ಗೆ ಮೊದಲ ಆದ್ಯತೆ ನೀಡಿದ್ದರು.
ದೊಡ್ಡ ರ್ಯಾಲಿಗಳ ಬದಲು ಚಿಕ್ಕ ಗುಂಪನ್ನುದ್ದೇಶಿಸಿ ಮಾತನಾಡುವ ಪ್ರಚಾರದ ಮೊರೆ ಹೋಗಲಾಯಿತು. ಹಸ್ತಲಾಘವ ಬಿಲುಕುಲ್ ಇರಲಿಲ್ಲ. ಇನ್ನು ಚಿಕ್ಕ ಮಕ್ಕಳನ್ನು ಎತ್ತಿಕೊಂಡು ಮುದ್ದಾಡುವುದು ದೂರವೇ ಉಳಿಯಿತು. ಹೀಗೆ ಹಲವು ಬದಲಾವಣೆಗಳನ್ನು ಈ ಚುನಾವಣೆ ಕಂಡಿತು.
ದಕ್ಷಿಣ ಕೊರಿಯಾ ಕೋವಿಡ್ ಗೆದ್ದದ್ದೇಗೆ?ಚೀನಕ್ಕೆ ಒತ್ತಿಕೊಂಡಿರುವ ದಕ್ಷಿಣ ಕೊರಿಯಾದಲ್ಲಿ ಆರಂಭದ ದಿನಗಳಲ್ಲಿ ಕೋವಿಡ್ ಭೀತಿ ದಟ್ಟವಾಗಿಯೇ ಇತ್ತು. ಆದರೆ ಸರಕಾರ ಸಕಾಲದಲ್ಲಿ ಕೈಗೊಂಡ ಕ್ರಮಗಳು ವೈರಾಣು ವ್ಯಾಪಕವಾಗಿ ಪ್ರಸರಣವಾಗುವುದನ್ನು ತಡೆಯಿತು. ಫೆಬ್ರವರಿಯಲ್ಲಿ ನಿತ್ಯ ಸರಾಸರಿ 900ರಂತೆ ಕೋವಿಡ್ ಸೋಂಕು ವರದಿಯಾಗುತ್ತಿತ್ತು. ಎಪ್ರಿಲ್‌ಗಾಗುವಾಗ ಈ ಸಂಖ್ಯೆ 50ಕ್ಕಿಳಿಯಿತು. ವ್ಯಾಪಕವಾದ ಪರೀಕ್ಷೆ, ಸೂಕ್ಷ್ಮ ಕಣ್ಗಾವಲು, ಸಾಮಾಜಿಕ ಅಂತರದ ಪಾಲನೆ, ವಿದೇಶಗಳಿಂದ ಬಂದವರಿಗೆ ಕಟ್ಟುನಿಟ್ಟಿನ ಕ್ವಾರಂಟೈನ್ ಈ ಮುಂತಾದ ಕ್ರಮಗಳಿಂದ ದಕ್ಷಿಣ ಕೊರಿಯಾ ಕೋವಿಡ್ ವಿರುದ್ಧ ಗೆಲುವು ಸಾಧಿಸಿತು. ಈ ಮಾದರಿಯನ್ನೀಗ ಇಡೀ ಜಗತ್ತು ಅನುಸರಿಸುತ್ತಿದೆ. ಸೋಮವಾರಕ್ಕಾಗುವಾಗ ದಕ್ಷಿಣ ಕೊರಿಯಾದಲ್ಲಿದ್ದದ್ದು 10,537 ಸೋಂಕಿನ ಪ್ರಕರಣಗಳು. ಇಷ್ಟರ ತನಕ 237 ಮಂದಿ ಸಾವಿಗೀಡಾಗಿದ್ದಾರೆ. ಸುಮಾರು 7000 ಮಂದಿ ಗುಣಮುಖರಾಗಿದ್ದಾರೆ.