ದೋಹಾ: ನೆಚ್ಚಿನ ತಂಡವಾದ ಪೋರ್ಚುಗಲ್ ಶುಕ್ರವಾರದ ತನ್ನ ಅಂತಿಮ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 1-2 ಅಂತರದ ಆಘಾತಕಾರಿ ಸೋಲನುಭವಿಸಿದೆ. ಆದರೆ ಈ ಎರಡು ತಂಡಗಳೇ ನಾಕೌಟ್ ತಲುಪಿವೆ. ಪೋರ್ಚುಗಲ್ ಸರ್ವಾಧಿಕ 6 ಅಂಕ ಗಳಿಸಿದರೆ, ದಕ್ಷಿಣ ಕೊರಿಯಾ 4 ಅಂಕದೊಂದಿಗೆ ದ್ವಿತೀಯ ಸ್ಥಾನಿಯಾಯಿತು.
ಇನ್ನೊಂದು ಪಂದ್ಯದಲ್ಲಿ ಘಾನಾವನ್ನು ಮಣಿಸಿದ ಉರುಗ್ವೆ ಕೂಡ 4 ಅಂಕ ಗಳಿಸಿದರೂ ಗೋಲು ವ್ಯತ್ಯಾಸದಲ್ಲಿ ಅದು ದಕ್ಷಿಣ ಕೊರಿಯಾಗಿಂತ ಹಿಂದುಳಿದು ಹೊರಬಿತ್ತು. ಘಾನಾ 4ನೇ ಸ್ಥಾನಕ್ಕೆ ಕುಸಿಯಿತು.
5ನೇ ನಿಮಿಷದಲ್ಲಿ ರಿಕಾರ್ಡೊ ಹೋರ್ಟ ಪೋರ್ಚುಗಲ್ಗೆ ಮುನ್ನಡೆ ತಂದಿತ್ತರು. 27ನೇ ನಿಮಿಷದಲ್ಲಿ ಕಿಮ್ ಯಂಗ್ ಪಂದ್ಯವನ್ನು ಸಮಬಲಕ್ಕೆ ತಂದರು. 90+ 1ನೇ ನಿಮಿಷದಲ್ಲಿ ಹ್ವಾಂಗ್ ಹೀ ಚಾನ್ ಅಮೋಘ ಗೋಲ್ ಸಿಡಿಸಿ ಕೊರಿಯಾಕ್ಕೆ ಸ್ಮರಣೀಯ ಗೆಲುವನ್ನು ತಂದಿತ್ತರು.