ಶಿರಸಿ: ದಕ್ಷಿಣ ಭಾರತದ ಪ್ರಸಿದ್ದ ಜಾತ್ರೆಗಳಲ್ಲಿ ಒಂದಾದ ಕರ್ನಾಟಕದ ಶಕ್ತಿ ದೇವತೆ ಶಿರಸಿ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವದ ಮುಹೂರ್ತ ಶುಕ್ರವಾರ ನಿಗದಿಯಾಗಿದ್ದು, ಮಾ.15 ರಿಂದ 23 ರ ತನಕ ನಡೆಸಲಾಗುತ್ತಿದೆ.
ದೇವಾಲಯದಲ್ಲಿ ನಡೆದ ಧರ್ಮದರ್ಶಿ, ಬಾಬುದಾರರ, ಜನಪ್ರತಿನಿಧಿ, ಅಧಿಕಾರಿಗಳ ಸಭೆಯಲ್ಲಿ ದೇವಸ್ಥಾನದ ಪುರೋಹಿತ ವಿದ್ವಾನ್ ರಾಮಕೃಷ್ಣ ಭಟ್ಟ ಕೆರೇಕೈ ಜಾತ್ರಾ ಮಹೋತ್ಸದ ದಿನಾಂಕ ಪ್ರಕಟಿಸಿ ಸರ್ವರ ಸಹಕಾರ ಕೋರಿದರು.
ಜನವರಿ26 ರಿಂದ ದೇವಿ ಜಾತ್ರಾ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದೆ. ಫೆ.22 ಕ್ಕೆ ಮೊದಲ ಹೊರಬೀಡು, 25 ಕ್ಕೆ ಎರಡನೇ ಹೊರಬೀಡು, ಮಾ.1 ಕ್ಕೆಮೂರನೇ ಹೊರಬೀಡು, ಮಾ.4 ಕ್ಕೆ ಅಪರಾಹ್ನ ವೃಕ್ಷ ಪೂಜೆ, ಅದೇ ದಿನ ರಾತ್ರಿ ನಾಲ್ಕನೇ ಹೊರಬೀಡು, ಮಾ.8 ಕ್ಕೆಅಂಕೆಯ ಹೊರಬೀಡು, 9 ಕ್ಕೆ ಅಂಕೆ ಹಾಕುವದು ಹಾಗೂ ದೇವಿಯ ವಿಗ್ರಹ ವಿಸರ್ಜನೆ ಆಗಲಿದೆ.
ಮಾ 15 ರಂದು ಬೆಳಿಗ್ಗೆ ಅಪರಾಹ್ನ 12-21 ಕ್ಕೆ ರಥಕ್ಕೆ ಕಲಶೋಹಣ, ರಾತ್ರಿ ದೇವಾಲಯದ ಸಭಾ ಮಂಟಪದಲ್ಲಿ 11-18ಕ್ಕೆ ದೇವಿಯ ಕಲ್ಯಾಣ ಪ್ರತಿಷ್ಠೆ ನಡೆಯಲಿದೆ. 16ರ ಬೆಳಿಗ್ಗೆ 7-03ರ ಬಳಿಕ ರಥೋತ್ಸವ,8-36 ರನಂತರ ಶೋಭಾಯತ್ರೆ, 17 ರ ಬೆಳಿಗ್ಗೆ 5 ರಿಂದ ವಿವಿಧ ಹರಕೆ ಸೇವೆಗಳು ಆರಂಭವಾಗಲಿದೆ. 23 ರ ಬೆಳಿಗ್ಗೆ 9 ಕ್ಕೆ ಸೇವಾ ಸಲ್ಲಿಕೆ ಮುಗಿಯಲಿದ್ದು, 9:33 ರ ನಂತರ ದೇವಿ ಗದ್ದುಗೆಯಿಂದ ಏಳುವ ಕಾರ್ಯಕ್ರಮ. ಯುಗಾದಿ ಹಬ್ಬದಂದು ದೇವಿಯ ಪುನರ್ ಪ್ರತಿಷ್ಟೆ ಆಗಲಿದೆ.
ಸಭೆಯಲ್ಲಿ ಅಧ್ಯಕ್ಷ ಆರ್.ಜಿ.ನಾಯ್ಕ ಸೇರಿದಂತೆ ಇತರ ಧರ್ಮದರ್ಶಿಗಳು, ತಹಸೀಲ್ದಾರ ಎಂ.ಆರ್.ಕುಲಕರ್ಣಿ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಡಿವೈಎಸ್ಪಿ ರವಿ ನಾಯ್ಕ, ಬಾಬುದಾರರಾದ ಅಜಯ ನಾಡಿಗ, ಜಗದೀಶ ಗೌಡ ಇತರರು ಇದ್ದರು.