ಸಿನಿಮಾ ಎನ್ನುವುದೇ ಒಂದು ಕಂಪ್ಲೀಟ್ ಮ್ಯಾಜಿಕ್. ಈ ಮ್ಯಾಜಿಕ್ ನಲ್ಲಿ ಲಾಜಿಕ್ ಹುಡುಕಬಾರದು. ಹಾಗೇನಾದರೂ ಹುಡುಕಿದರೂ ಅದು ಸಿನಿಮಾದಲ್ಲಿ ಸಿಗುವುದು ಕಷ್ಟ. ಹಾಗೆ ಸಿಕ್ಕರೂ ಅದನ್ನು ಸಿನಿಮಾದಲ್ಲಿ ಜೀರ್ಣಿಸಿಕೊಳ್ಳುವುದು ಇನ್ನೂ ಕಷ್ಟ! ಒಂದು ವೇಳೆ ಪ್ರೇಕ್ಷಕರು ಲಾಜಿಕ್ ಹುಡುಕಿದರೂ ಒಪ್ಪಬಹುದು. ಆದರೆ ಸಿನಿಮಾ ಮಾಡುವ ಹೀರೊನೇ ಎಲ್ಲದಕ್ಕೂ ಲಾಜಿಕ್ ಹುಡುಕಿದರೆ, ಸಿನಿಮಾದ ಕಥೆ, ಅದನ್ನು ಮಾಡುವವರ ಕಥೆ ಏನಾಗಬೇಡ? ಇಂಥದ್ದೊಂದು “ಲಾಜಿಕ್’ ಸ್ಟೋರಿಯನ್ನು ನೋಡುಗರಿಗೆ “ಕಿಕ್’ ಕೊಡುವಂತೆ ಮಾಡುವ ಸಿನಿಮಾ “ಸೌತ್ ಇಂಡಿಯನ್ ಹೀರೊ’
ಸಿನಿಮಾದೊಳಗೊಂದು ಸಿನಿಮಾ. ಅದರಲ್ಲೊಬ್ಬ ಸೂಪರ್‌ಸ್ಟಾರ್ ಹೀರೋ. ಅವನಿಗೊಬ್ಬಳು ಪ್ರೇಯಸಿ, ಅಲ್ಲೊಂದು ಲವ್‌ಸ್ಟೋರಿ. ನಡುವೆ ಅಭಿಮಾನಿಗಳ ಹುಚ್ಚಾಟ, ಸ್ಟಾರ್ ವಾರ್, ಪಟ್ಟಕ್ಕಾಗಿ ಪೈಪೋಟಿ… ಹೀಗೆ ಹತ್ತಾರು ಅಂಶಗಳನ್ನು ಇಟ್ಟುಕೊಂಡು ಎಲ್ಲೂ ಬೋರ್ ಹೊಡೆಸದಂತೆ ತೆರೆಮೇಲೆ “ಸೌತ್ ಇಂಡಿಯನ್ ಹೀರೊ’ ಕಟೌಟ್ ನಿಲ್ಲಿಸಿದ್ದಾರೆ ನಿರ್ದೇಶಕ ನರೇಶ್ ಕುಮಾರ್.
ಜನಸಾಮಾನ್ಯರು ಪ್ರತಿದಿನ ನೋಡುವ ಸ್ಟಾರ್ ನಟರ ಲೈಫ್ಸ್ಟೈಲ್, ಅವರ ಬದುಕಿನ ಕಾಣದ ಆಯಾಮಕ್ಕೆ ದೃಶ್ಯರೂಪ ನೀಡಿ ಮನಮುಟ್ಟುವಂತೆ ತೆರೆಮೇಲೆ ತಂದಿರುವುದು ಸಿನಿಮಾದ ಹೆಗ್ಗಳಿಕೆ. ಸೌತ್ ಇಂಡಿಯನ್ ಸಿನಿಮಾಗಳಲ್ಲಿರುವ ಲವ್, ಆ್ಯಕ್ಷನ್, ಕಾಮಿಡಿ, ರೊಮ್ಯಾನ್ಸ್, ಸೆಂಟಿಮೆಂಟ್ ಎಲ್ಲದರ ಝಲಕ್ “ಸೌತ್ ಇಂಡಿಯನ್ ಹೀರೊ’ ಸಿನಿಮಾದಲ್ಲೂ ಇದೆ.
ಸಿನಿಮಾರಂಗದಲ್ಲಿ ಸೂಪರ್ ಸ್ಟಾರ್ ಆಗುವ ನಟನೊಬ್ಬನ ಜೀವನ ಹೇಗಿರುತ್ತದೆ ಅವನ ಏಳು-ಬೀಳುಗಳು ಏನು ಎನ್ನುವುದೇ “ಸೌತ್ ಇಂಡಿಯನ್ ಹೀರೋ’ ಸಿನಿಮಾದ ಕಥೆಯ ಒಂದು ಎಳೆ. ಒಂದು ಸರಳ ಕಥೆಗೆ ಅಚ್ಚುಕಟ್ಟಾಗಿ ದೃಶ್ಯರೂಪ ಕೊಟ್ಟು, ವರ್ಣರಂಜಿತವಾಗಿ ಮಾಡಿರುವುದು ಚಿತ್ರಕಥೆ, ಸಂಭಾಷಣೆ, ಹಾಡುಗಳು ಮತ್ತು ಕಲಾವಿದರ ಅಭಿನಯ. ಯುವನಟ ಸಾರ್ಥಕ್ ಮೊದಲ ಪ್ರಯತ್ನದಲ್ಲೇ ತೆರೆಮೇಲೆ ಸೌತ್ ಇಂಡಿಯನ್ “ಹೀರೊ’ ಆಗುವ ಭರವಸೆ ಮೂಡಿಸುತ್ತಾರೆ. ಹಾವ-ಭಾವ, ವೇಷ-ಭೂಷಣ ಎಲ್ಲದರಲ್ಲೂ ಸಾರ್ಥಕ್ ಫುಲ್‌ಮಾರ್ಕ್ಸ್ ತೆಗೆದುಕೊಳ್ಳುತ್ತಾರೆ.
ಇನ್ನು ನವ ನಾಯಕಿಯರಾದ ಕಾಶಿಮಾ, ಊರ್ವಶಿ ಅವರದ್ದು ಕೂಡ ಅಂದಕ್ಕೊಪ್ಪುವ ಅಭಿನಯ ನೀಡಿ ಗಮನ ಸೆಳೆಯುತ್ತಾರೆ. ಒಟ್ಟಾರೆ ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಬೇಕೆನ್ನುವವರಿಗೆ ಖಂಡಿತವಾಗಿಯೂ “ಸೌತ್ ಇಂಡಿಯನ್ ಹೀರೊ’ ಪೈಸಾ ವಸೂಲ್ ಸಿನಿಮಾ ಎಂಬ ಖಾತ್ರಿ ಕೊಡಬಹುದು.
ಜಿ.ಎಸ್.ಕಾರ್ತಿಕ ಸುಧನ್