ಕಾಠ್ಮಂಡು: ಭಾರತೀಯ ಕ್ರೀಡಾಪಟುಗಳು ಸೌತ್ ಏಶ್ಯನ್ ಗೇಮ್ಸ್ ನಲ್ಲಿ ಶ್ರೇಷ್ಠ ನಿರ್ವಹಣೆ ನೀಡಿ ಗಮನ ಸೆಳೆದಿದ್ದಾರೆ. ಒಟ್ಟಾರೆ 312 ಪದಕ ಗೆಲ್ಲುವ ಮೂಲಕ ಸತತ 13ನೇ ಬಾರಿ ಪದಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಸಾಧನೆ ಮಾಡಿದೆ. 10 ದಿನಗಳ ಈ ಬಹುಸ್ಪರ್ಧೆಗಳ ಕೂಟದಲ್ಲಿ ಭಾರತ 174 ಚಿನ್ನ, 93 ಬೆಳ್ಳಿ ಮತ್ತು 45 ಕಂಚಿನ ಪದಕ ಜಯಿಸಿದ್ದು 2016ರಲ್ಲಿ ಗುವಾಹಾಟಿ ಮತ್ತು ಶಿಲ್ಲಾಂಗ್‌ನಲ್ಲಿ ನಡೆದ ಗೇಮ್ಸ್ ಸಾಧನೆಯನ್ನು ಹಿಂದಿಕ್ಕಿದೆ. 2016ರಲ್ಲಿ ಭಾರತ 189 ಚಿನ್ನ ಸಹಿತ 309 ಪದಕ ಜಯಿಸಿತ್ತು. ಚಿನ್ನದ ಲೆಕ್ಕದಲ್ಲಿ ಭಾರತ ಈ ಬಾರಿ ಕಡಿಮೆ ಸಾಧನೆ ಮಾಡಿದೆ.
ಆತಿಥೇಯ ನೇಪಾಲ 51 ಚಿನ್ನ ಸಹಿತ 206 ಪದಕ ಗೆದ್ದು ದ್ವಿತೀಯ ಸ್ಥಾನದಲ್ಲಿದ್ದರೆ ಶ್ರೀಲಂಕಾ ಮೂರನೇ ಸ್ಥಾನ ಪಡೆದಿದೆ.
ಕಿನ್ನಿಗೋಳಿ ಮೂಲದ ಅಪೇಕ್ಷಾಗೆ 2 ಚಿನ್ನ
ಸ್ಪರ್ಧೆಯ ಅಂತಿಮ ದಿನ ಭಾರತ 15 ಚಿನ್ನ ಸಹಿತ 18 ಪದಕ ಪಡೆದಿದೆ. ಈಜು ಸ್ಪರ್ಧೆಯಲ್ಲಿ ಭಾರತದ ಅಪೇಕ್ಷಾ ಫೆರ್ನಾಂಡಿಸ್ ತಲಾ ಎರಡು ಚಿನ್ನ ಮತ್ತು ಬೆಳ್ಳಿ ಗೆದ್ದಿದ್ದಾರೆ. ಕಿನ್ನಿಗೋಳಿ ಮೂಲದ ಅಪೇಕ್ಷಾ 200 ಮೀ. ಬ್ರೆಸ್ಟ್ ಸ್ಟ್ರೋಕ್ ಮತ್ತು 200 ಮೀ. ಬಟರ್‌ಫ್ಲೈನಲ್ಲಿ ಚಿನ್ನ ಗೆದ್ದಿದ್ದರೆ 100 ಮೀ. ಬಟರ್‌ಫ್ಲೈ ಮತ್ತು 400 ಮೀ. ವೈಯಕ್ತಿಕ ಮೆಡ್ಲೆಯಲ್ಲಿ ಬೆಳ್ಳಿ ಜಯಿಸಿದ್ದಾರೆ.