Advertisement

World Cup; ಬಾಂಗ್ಲಾ ಮೇಲೆ ಸವಾರಿ: ದಕ್ಷಿಣ ಆಫ್ರಿಕಾ ಮತ್ತೊಂದು ಬೃಹತ್‌ ಗೆಲುವು

10:58 PM Oct 24, 2023 | Team Udayavani |

ಮುಂಬಯಿ: ದಕ್ಷಿಣ ಆಫ್ರಿಕಾ ಮತ್ತೊಂದು ಬೃಹತ್‌ ಗೆಲುವಿನೊಂದಿಗೆ ವಿಶ್ವಕಪ್‌ ಅಭಿಯಾನ ಮುಂದುವರಿಸಿದೆ. ಮಂಗಳವಾರ ವಾಂಖೇಡೆಯಲ್ಲಿ ನಡೆದ ಮುಖಾಮುಖಿಯಲ್ಲಿ ಅದು ಬಾಂಗ್ಲಾದೇಶದ ಮೇಲೆ ಸವಾರಿ ಮಾಡಿ 149 ರನ್ನುಗಳ ಜಯಭೇರಿ ಮೊಳಗಿಸಿತು.

Advertisement

ಕ್ವಿಂಟನ್‌ ಡಿ ಕಾಕ್‌ ಅವರ 3ನೇ ಶತಕ ಮತ್ತು ಹೆನ್ರಿಕ್‌ ಕ್ಲಾಸೆನ್‌ ಸಿಡಿಲಬ್ಬರ ಬ್ಯಾಟಿಂಗ್‌ ಸಾಹಸದಿಂದ ದಕ್ಷಿಣ ಆಫ್ರಿಕಾ 5 ವಿಕೆಟ್‌ ನಷ್ಟಕ್ಕೆ 382 ರನ್‌ ಪೇರಿಸಿದರೆ, ಬಾಂಗ್ಲಾದೇಶ 46.4 ಓವರ್‌ಗಳಲ್ಲಿ 233 ರನ್‌ ಮಾಡಿ ಶರಣಾಯಿತು.

ಇದು 5 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಸಾಧಿಸಿದ 4ನೇ ಗೆಲುವು. ಬಾಂಗ್ಲಾ ಇಷ್ಟೇ ಪಂದ್ಯಗಳಲ್ಲಿ 4ನೇ ಸೋಲನುಭವಿಸಿತು. ಚೇಸಿಂಗ್‌ ವೇಳೆ ಬ್ಯಾಟಿಂಗ್‌ ಹೋರಾಟ ತೋರಿದ್ದು ಮಹಮದುಲ್ಲ ಮಾತ್ರ. ಅವರು ಅಮೋಘ ಶತಕವೊಂದನ್ನು ಬಾರಿಸಿ ಸೋಲಿನಲ್ಲೂ ಗೌರವ ತಂದಿತ್ತರು. ಎಸೆತಕ್ಕೊಂದರಂತೆ 111 ರನ್‌ ಬಾರಿಸಿ ಮಿಂಚಿದರು (11 ಬೌಂಡರಿ, 4 ಸಿಕ್ಸರ್‌).

ಡಿ ಕಾಕ್‌, ಕ್ಲಾಸೆನ್‌ ಅಬ್ಬರ
ಕ್ವಿಂಟನ್‌ ಡಿ ಕಾಕ್‌ ಅಬ್ಬರಿಸಿದರೆ ಕ್ವಿಂಟಾಲ್‌ಗ‌ಟ್ಟಲೆ ರನ್‌ ಹರಿದು ಬರಲಿದೆ ಎಂಬುದಕ್ಕೆ ಮತ್ತೂಮ್ಮೆ ಅತ್ಯುತ್ತಮ ನಿದರ್ಶನ ಲಭಿಸಿತು. ಇಲ್ಲಿ ಡಿ ಕಾಕ್‌ 174 ರನ್‌ ಬಾರಿಸಿದರೆ, ದಕ್ಷಿಣ ಆಫ್ರಿಕಾ ಮತ್ತೂಮ್ಮೆ 350 ರನ್‌ ಗಡಿ ದಾಟಿ ಮುನ್ನುಗ್ಗಿತು.

ನಾಯಕ ಟೆಂಬ ಬವುಮ ಗೈರಲ್ಲಿ ಕಣಕ್ಕಿಳಿದ ದಕ್ಷಿಣ ಆಫ್ರಿಕಾವನ್ನು ಐಡನ್‌ ಮಾರ್ಕ್‌ರಮ್‌ ಮುನ್ನಡೆಸಿದರು. ಆದರೆ ಹರಿಣಗಳ ಆರಂಭ ತೀರಾ ಕಳಪೆ ಆಗಿತ್ತು. ರೀಝ ಹೆಂಡ್ರಿಕ್ಸ್‌ (12) ಮತ್ತು ರಸ್ಸಿ ವಾನ್‌ ಡರ್‌ ಡುಸೆನ್‌ (1) ಬೇಗನೇ ಪೆವಿಲಿಯನ್‌ ಸೇರಿದರು. ಕ್ವಿಂಟನ್‌ ಡಿ ಕಾಕ್‌, ಐಡನ್‌ ಮಾರ್ಕ್‌ರಮ್‌, ಹೆನ್ರಿಕ್‌ ಕ್ಲಾಸೆನ್‌ ಮತ್ತು ಡೇವಿಡ್‌ ಮಿಲ್ಲರ್‌ ಸಿಡಿದು ನಿಲ್ಲುವುದರೊಂದಿಗೆ ದಕ್ಷಿಣ ಆಫ್ರಿಕಾ ಭರ್ಜರಿ ಓಟ ಬೆಳೆಸಿತು. ಆದರೆ ಡಿ ಕಾಕ್‌ಗೆ ದ್ವಿಶತಕ ತಪ್ಪಿತು, ಕ್ಲಾಸೆನ್‌ಗೆ ಸತತ 2ನೇ ಶತಕ ಮಿಸ್‌ ಆಯಿತು.

Advertisement

150ನೇ ಏಕದಿನ ಪಂದ್ಯ ಆಡಲಿಳಿದಿದ್ದ ಡಿ ಕಾಕ್‌ 46ನೇ ಓವರ್‌ ತನಕ ಬಾಂಗ್ಲಾ ಬೌಲಿಂಗ್‌ ದಾಳಿಯನ್ನು ಪುಡಿಗಟ್ಟುತ್ತ ಸಾಗಿದರು. ಈ ಕೂಟದಲ್ಲಿ 3ನೇ ಶತಕ ಬಾರಿಸಿ ಪ್ರಚಂಡ ಬ್ಯಾಟಿಂಗ್‌ ಫಾರ್ಮ್ ತೆರೆದಿರಿಸಿದರು. ತಮ್ಮ ಜೀವನಶ್ರೇಷ್ಠ ಸಾಧನೆಗಿಂತ (178) ನಾಲ್ಕು ರನ್ನುಗಳಿಂದ ಹಿಂದುಳಿದರು.

ಡಿ ಕಾಕ್‌ ಅಬ್ಬರ ಕಂಡಾಗ ದ್ವಿಶತಕದ ಸಾಧ್ಯತೆಯೊಂದು ಗರಿಗೆದರಿತ್ತು. ಆದರೆ ಈ ಅದೃಷ್ಟ ಒಲಿಯದೇ ಹೋಯಿತು. 140 ಎಸೆತ ಎದುರಿಸಿದ ಡಿ ಕಾಕ್‌ 15 ಬೌಂಡರಿ, 7 ಸಿಕ್ಸರ್‌ ಸಿಡಿಸಿ 174 ರನ್ನುಗಳ ಸೊಗಸಾದ ಇನ್ನಿಂಗ್ಸ್‌ ಕಟ್ಟಿದರು. ಇದಕ್ಕೂ ಮೊದಲು ಇದೇ ಕೂಟದಲ್ಲಿ ಶ್ರೀಲಂಕಾ ವಿರುದ್ಧ 100 ರನ್‌, ಆಸ್ಟ್ರೇಲಿಯ ವಿರುದ್ಧ 109 ರನ್‌ ಬಾರಿಸಿದ್ದರು.

ಉಸ್ತುವಾರಿ ನಾಯಕ ಮಾರ್ಕ್‌ರಮ್‌ ಕೂಡ ಸೊಗಸಾದ ಆಟವಾಡಿ 69 ಎಸೆತಗಳಿಂದ 60 ರನ್‌ ಹೊಡೆದರು (7 ಬೌಂಡರಿ). ಡಿ ಕಾಕ್‌-ಮಾರ್ಕ್‌ ರಮ್‌ ಜತೆಯಾಟದಲ್ಲಿ 3ನೇ ವಿಕೆಟಿಗೆ 131 ರನ್‌ ಹರಿದು ಬಂತು.
ಹೆನ್ರಿಕ್‌ ಕ್ಲಾಸೆನ್‌ ಮತ್ತೂಮ್ಮೆ ಸ್ಫೋಟಕ ಬ್ಯಾಟಿಂಗ್‌ ಮೂಲಕ ಎದುರಾಳಿಗೆ ಭೀತಿಯೊಡ್ಡಿದರು. ಸತತ 2ನೇ ಶತಕದ ಅವಕಾಶವನ್ನು ಸ್ವಲ್ಪದರಲ್ಲೇ ಕಳೆದುಕೊಂಡರು. ಇಂಗ್ಲೆಂಡ್‌ ವಿರುದ್ಧ ಇದೇ ಅಂಗಳದಲ್ಲಿ 109 ರನ್‌ ಬಾರಿಸಿದ್ದ ಕ್ಲಾಸೆನ್‌, ಈ ಮುಖಾಮುಖೀಯಲ್ಲಿ 49 ಎಸೆತಗಳಿಂದ 90 ರನ್‌ ಬಾರಿಸಿದರು. ಸಿಡಿಸಿದ್ದು 2 ಬೌಂಡರಿ ಹಾಗೂ 8 ಸಿಕ್ಸರ್‌. ಕೊನೆಯಲ್ಲಿ ಡೇವಿಡ್‌ ಮಿಲ್ಲರ್‌ ಕೂಡ ಸ್ಫೋಟಿಸಿದರು. ಕೇವಲ 15 ಎಸೆತಗಳಿಂದ 34 ರನ್‌ ಬಂತು.

ಬಾಂಗ್ಲಾ ದೇಶದ ಮಧ್ಯಮ ಕ್ರಮಾಂಕದ ಆಟಗಾರ ಮಹಮ್ಮದುಲ್ಲಾ ಶತಕ ಸಿಡಿಸಿ ಸಂಭ್ರಮಿಸಿದರು. 111 ರನ್ ಗಳಿಸಿ ಔಟಾದರು.

ಸ್ಕೋರ್‌ ಪಟ್ಟಿ
ದಕ್ಷಿಣ ಆಫ್ರಿಕಾ
ಕ್ವಿಂಟನ್‌ ಡಿ ಕಾಕ್‌ ಸಿ ನಾಸುಮ್‌ ಬಿ ಮಹ್ಮದ್‌ 174
ರೀಝ ಹೆಂಡ್ರಿಕ್ಸ್‌ ಬಿ ಶೊರೀಫ‌ುಲ್‌ 12
ಡುಸೆನ್‌ ಎಲ್‌ಬಿಡಬ್ಲ್ಯು ಮೆಹಿದಿ ಬಿ ಮಿರಾಜ್‌ 1
ಐಡನ್‌ ಮಾರ್ಕ್‌ರಮ್‌ ಸಿ ದಾಸ್‌ ಬಿ ಶಕಿಬ್‌ 60
ಹೆನ್ರಿಕ್‌ ಕ್ಲಾಸೆನ್‌ ಸಿ ಮಹ್ಮದುಲ್ಲ ಬಿ ಮಹ್ಮದ್‌ 90
ಡೇವಿಡ್‌ ಮಿಲ್ಲರ್‌ ಔಟಾಗದೆ 34
ಮಾರ್ಕೊ ಜಾನ್ಸೆನ್‌ ಔಟಾಗದೆ 1
ಇತರ 10
ಒಟ್ಟು (50 ಓವರ್‌ಗಳಲ್ಲಿ 5 ವಿಕೆಟಿಗೆ) 382
ವಿಕೆಟ್‌ ಪತನ: 1-33, 2-30, 3-167, 4-309, 5-374.
ಬೌಲಿಂಗ್‌: ಮುಸ್ತಫಿಜುರ್‌ ರೆಹಮಾನ್‌ 9-0-76-0
ಮೆಹಿದಿ ಹಸನ್‌ ಮಿರಾಜ್‌ 9-0-44-1
ಶೊರೀಫ‌ುಲ್‌ ಇಸ್ಲಾಮ್‌ 9-0-76-1
ಶಕಿಬ್‌ ಅಲ್‌ ಹಸನ್‌ 9-0-69-1
ಹಸನ್‌ ಮಹ್ಮದ್‌ 6-0-67-2
ನಾಸುಮ್‌ ಅಹ್ಮದ್‌ 5-0-27-0
ಮಹಮದುಲ್ಲ 3-0-20-0

ಬಾಂಗ್ಲಾದೇಶ
ತಾಂಜಿದ್‌ ಹಸನ್‌ ಸಿ ಕ್ಲಾಸೆನ್‌ ಬಿ ಜಾನ್ಸೆನ್‌ 12
ಲಿಟನ್‌ ದಾಸ್‌ ಎಲ್‌ಬಿಡಬ್ಲ್ಯು ರಬಾಡ 22
ನಜ್ಮುಲ್‌ ಹುಸೇನ್‌ ಸಿ ಕ್ಲಾಸೆನ್‌ ಬಿ ಜಾನ್ಸೆನ್‌ 0
ಶಕಿಬ್‌ ಅಲ್‌ ಹಸನ್‌ ಸಿ ಕ್ಲಾಸೆನ್‌ ಬಿ ವಿಲಿಯಮ್ಸ್‌ 1
ಮುಶ್ಫಿಕರ್‌ ರಹೀಂ ಸಿ ಫೆಲುಕ್ವಾಯೊ ಬಿ ಕೋಟಿj 8
ಮಹಮದುಲ್ಲ ಸಿ ಜಾನ್ಸೆನ್‌ ಬಿ ಕೋಟಿj 111
ಮಿರಾಜ್‌ ಸಿ ಫೆಲುಕ್ವಾಯೊ ಬಿ ಮಹಾರಾಜ್‌ 11
ನಾಸುಮ್‌ ಅಹ್ಮದ್‌ ಸಿ ಮತ್ತು ಬಿ ಕೋಟಿj 19
ಹಸನ್‌ ಮಹ್ಮದ್‌ ಸಿ ಕೋಟಿj ಬಿ ರಬಾಡ 15
ಮುಸ್ತಫಿಜುರ್‌ ಸಿ ಮಿಲ್ಲರ್‌ ಬಿ ವಿಲಿಯಮ್ಸ್‌ 11
ಶೊರೀಫ‌ುಲ್‌ ಇಸ್ಲಾಮ್‌ ಔಟಾಗದೆ 6
ಇತರ 17
ಒಟ್ಟು (46.4 ಓವರ್‌ಗಳಲ್ಲಿ ಆಲೌಟ್‌) 233
ವಿಕೆಟ್‌ ಪತನ: 1-30, 2-30, 3-31, 4-52, 5-58, 6-81, 7-122, 8-159, 9-227.
ಬೌಲಿಂಗ್‌: ಮಾರ್ಕೊ ಜಾನ್ಸೆನ್‌ 8-0-39-2
ಲಿಝಾಡ್‌ ವಿಲಿಯಮ್ಸ್‌ 8.4-1-56-2
ಗೆರಾಲ್ಡ್‌ ಕೋಟಿj 10-0-62-3
ಕಾಗಿಸೊ ರಬಾಡ 10-1-42-2
ಕೇಶವ್‌ ಮಹಾರಾಜ್‌ 10-0-32-1
ಪಂದ್ಯಶ್ರೇಷ್ಠ: ಕ್ವಿಂಟನ್‌ ಡಿ ಕಾಕ್‌

 

Advertisement

Udayavani is now on Telegram. Click here to join our channel and stay updated with the latest news.

Next